Pages

Ads 468x60px

Sunday 19 December 2021

ಓಟ್ಸ್ ಗಂಜಿ

 ಕಳೆದೆರಡು ವರ್ಷಗಳಿಂದ ಓಟ್ಸ್ ನನ್ನ ಅಡುಗೆಮನೆಯಲ್ಲಿ ಸ್ಥಿರವಾಗಿದೆ.  ಮಧು ಇದನ್ನು ನನಗೆ ಪರಿಚಯ ಮಾಡಿಕೊಟ್ಟ.     “ಬೆಳಗ್ಗೆ ಹೇಗೂ ದೋಸೆಪುನಃ ದೋಸೆ ತಟ್ಟೆಯನ್ನೇ ತಂದಿಡಬೇಡ. "

ಮತ್ತೇನು ಮಾಡ್ಲಿ? "

"ಓಟ್ಸ್ ಮಾಡು..  ತುಂಬ ಸುಲಭ ಚಹಾ ನೀರು ಕುದಿಸುತ್ತಿರುವಾಗಲೇ ಓಟ್ಸ್ ಮಾಡಿ ಆಗುತ್ತದೆ.."

"ಹೌದಲ್ವ.. "

 ಅವನಿಗೆ ತಿಳಿದಂತಹ ಒಂದು ಅಡುಗೆ ನನಗೂ ತಿಳಿಯಿತು.

 ಓಟ್ಸ್ ಅನ್ನು ನಮ್ಮ ಅಕ್ಕಿ ಗೋಧಿಗಳಂತೆ ಹೇಗೂ ಬಳಸಬಹುದು ಎಂದು ನನಗೂ ನೋಡ ನೋಡುತ್ತಲೇ ತಿಳಿದು ಬಿಟ್ಟಿತು ದೋಸೆಗೂ ಆದೀತು ಇಡ್ಲಿಗೂ ಆದೀತು ಮನಸ್ಸಿದ್ದರೆ ಪಾಯಸವನ್ನೂ ಮಾಡಿ ಸವಿಯಲಡ್ಡಿಯಿಲ್ಲ.


ಈಗ ಓಟ್ಸ್ ಗಂಜಿ ( porridge ) ಮಾಡೋಣ.


ಒಂದು ಲೋಟ ಓಟ್ಸ್ ,  ಲೋಟ ನೀರು ಎರೆದು ಕುದಿಸಿರಿ.

ರುಚಿಗೆ ಉಪ್ಪುಹಿತವಾದ ರುಚಿಗಾಗಿ ಸ್ವಲ್ಪ ಬೆಲ್ಲ ಹಾಕತಕ್ಕದ್ಜು ಮೂರು ನಾಲ್ಕು ನಿಮಿಷಗಳಲ್ಲಿ ಓಟ್ಸ್ ಬೆಂದಿರುತ್ತದೆ.

ಕದಳಿ ಬಾಳೆಹಣ್ಣು ,  ಏಳೆಂಟು ಖರ್ಜೂರ ಚಿಕ್ಕ ಗಾತ್ರದಲ್ಲಿ ಹೆಚ್ಚಿ ಓಟ್ಸ್ ಬೆಂದ ನಂತರ ಹಾಕಿರಿ ಓಟ್ಸ್ ಬೇಗನೆ ಬೇಯುತ್ತೆ ಕುಕ್ಕರ್ ಬೇಡ.

ಸೌಟಾಡಿಸಿ.

ಒಂದು ಲೋಟ ಕುದಿಸಿದ ಹಾಲು ಎರೆಯಿರಿ ಒಂದು ಚಮಚ ತಾಜಾ ತುಪ್ಪ ಎರೆಯುವಲ್ಲಿಗೆ ಸಮೃದ್ಧ ಆಹಾರ ನಮ್ಮದಾಯಿತು.

ಬಿಸಿ ಇರುವಾಗಲೇ ಸವಿಯಿರಿ.


 ಗಂಜಿಯನ್ನು ನಮ್ಮ ಆಸಕ್ತಿಗನುಸಾರ ಬದಲಾಯಿಸಲೂ ಅಡ್ಡಿಯಿಲ್ಲ.

ಹಣ್ಣುಗಳ ಬದಲು ತರಕಾರಿ ಹೆಚ್ಚಿ ಹಾಕಬಹುದು ಎಳೆಯ ಮುಳ್ಳುಸೌತೆ ಚೆನ್ನಾಗಿರುತ್ತದೆ.

ತುಪ್ಪ ಬೇಡದಿದ್ದರೆ ಹಾಕಬೇಕಿಲ್ಲ.

ಎಲ್ಲ ವಯೋಮಾನದವರಿಗೂ ಹಿತವಾದ ಆಹಾರ ಓಟ್ಸ್.




Monday 13 December 2021

ಕರಿ ಕೆಸು - ಗಸಿ



ವಿಪರೀತ ಮಳೆಯಾದುದರಿಂದಲೋ ಏನೋ ನನ್ನ ಕರಿಕೆಸು ಅಗಲವಾಗಿ ಹರಡಿ ಬೆಳೆದಿದೆ.   ಪತ್ರೊಡೆ ಮಾಡಿ ತಿನ್ನಬೇಕಾದ್ರೂ ಮನೆಯೊಳಗೆ ಸಾಕಷ್ಟು ಜನರಿರಬೇಕು ಕೆಸುವಿನ ಒಂದು ಎಲೆ ದಂಟು ಸಹಿತವಾಗಿ ಚೂರಿಯಲ್ಲಿ ಕತ್ತರಿಸಲ್ಪಟ್ಟು ಅಡುಗೆಮನೆಗೆಬಂದಿತು.  


ಎಲೆ ಚಿಕ್ಕದಾಗಿ ಕತ್ತರಿಸಲ್ಪಟ್ಟಿತು.

ದಂಟು ನಾರು ಬಿಡಿಸಲ್ಪಟ್ಟು ಹೋಳುಗಳಾಗಿ ತಪಲೆ ತುಂಬಿತು.

ಅರ್ಧ ಪಾವು ಅಲಸಂದೆಕಾಳು ಬಿಸಿ ನೀರಿನಲ್ಲಿ ನೆನೆದು ಹಿಗ್ಗುತ್ತಲಿದೆ.

ಮೊದಲಿಗೆ ಅಲಸಂದೆಕಾಳು ಬೇಯಲಿ ಕುಕ್ಕರಿನಲ್ಲಿ 3 ಸೀಟಿ ಸಾಕು.

ನಂತರ ಅದೇ ಕುಕ್ಕರಿನಲ್ಲಿ ಕೆಸುವಿನೆಲೆ ದಂಟಿನ ಹೋಳುಗಳು ಬೇಯಲಿ ಉಪ್ಪು ಚಿಟಿಕೆ ಅರಸಿಣ ಹಾಗೂ ಹುಣಸೆ ರಸ ಬೇಯುವಾಗಲೇ ಹಾಕಿರಿ.

ಖಾರದ ಬಾಬ್ತು ಎರಡು ಹಸಿಮೆಣಸು ಬೇಕಿದ್ದರೆ ಸಿಗಿದು ಹಾಕಿರಿ.

ಒಂದು ಸೀಟಿ ಹಾಕಿದಾಗ ಬೆಂದಿತೆಂದು ತಿಳಿಯಿರಿ.


 ಹೊತ್ತಿನಲ್ಲಿ ಒಂದು ದೊಡ್ಡ ನೀರುಳ್ಳಿ ಚಿಕ್ಕದಾಗಿ ಹೆಚ್ಚಲ್ಪಟ್ಟಿತು.   ಒಂದು ಬೆಳ್ಳುಳ್ಳಿ ಗೆಡ್ಡೆಯೂ ಬಿಡಿಸಲ್ಪಟ್ಟಿತು.

ಒಂದು ತುಂಡು ಶುಂಠಿ ಚೂರುಗಳಾಯಿತು.

ತೋಟದಿಂದ ಕರಿಬೇವು ಬಂದಿದೆ.

ಇನ್ನೇನಾಗಬೇಕು?

ಬಾಣಲೆಯಲ್ಲಿ ಒಗ್ಗರಣೆಗಿಟ್ಟುಸಾಸಿವೆಯೊಂದಿಗೆ ಬೆಳ್ಳುಳ್ಳಿ ಕೆಂಪಗಾಗಲಿ,

ತದನಂತರ ಶುಂಠಿನೀರುಳ್ಳಿ ಹಾಕಿರಿನೀರುಳ್ಳಿ ಬಾಡಲಿ.

ಕುಕ್ಕರ್ ಸಾಮಗ್ರಿಗಳನ್ನು ಬಾಣಲೆಗೆ ಸುರಿಯಿರಿ.

ರುಚಿಗೆ ಏನೇನು ಕಡಿಮೆಯಾಗಿದೆಯೆಂದು ನೋಡಿ ಅಗತ್ಯವಿದ್ದರೆ ಉಪ್ಪು ಹಾಕುವುದು ಸಿಹಿ ಇಷ್ಟಪಡುವವರಿಗೆ ಬೆಲ್ಲವನ್ನೂಹಾಕಿದರಾಯಿತು ಅಲಸಂದೆಕಾಳುಸೊಪ್ಪುದಂಟಿನ ಹೋಳುಗಳು ತುಂಬಿದ  ಪದಾರ್ಥ ದಪ್ಪ ಗಸಿಯಂತೆ ಎದ್ದು ಬಂದಿತು.




Wednesday 8 December 2021

ತುಂಟಿಯ ಚಪ್ಪಲಿ


ಅಡುಗೆ ಬರೆದೂ ಬರೆದೂ ಸಾಕಾಗ್ಬಿಟ್ಟಿದೆ.

ಬೆಂಗಳೂರಿಗೆ ಹೋಗಿದ್ದೆನಲ್ಲ ಅಲ್ಲಿ ಸಾಕಷ್ಟು ವಿರಾಮದ ವೇಳೆ ಸೊಸೆಯ ಸಂಗ್ರಹದಲ್ಲಿ ಸುಧಾ ಮೂರ್ತಿ ಬರೆದಂತಹ ಕತೆಗಳು ಸಿಕ್ಕವು.   ನಮ್ಮ ಮನೆಯ ನಾಯಿ ಕತೆಯನ್ನೇ ಬರೆದಂತಿದೆಯಲ್ಲ ಎಂದು  ಚಿತ್ರಕಥಾಮಾಲಿಕೆಯ ಎರಡು ಸಂಪುಟಗಳನ್ನು ಓದಿ ಆನಂದ ಪಟ್ಟಿದ್ದಾಯ್ತು.


ಬೆಂಗಳೂರಿಗೆ ಬಂದ್ಮೇಲೆ ಒಂದು ಶಾಪಿಂಗ್ ಮಾಡದಿದ್ರೆ ಹೇಗೆ? "

ಮಗ ಸೊಸೆಯೊಂದಿಗೆ ಹೊರಟೆವು ನನ್ನ ವ್ಯಾನಿಟಿ ಬ್ಯಾಗ್ ತುಂಬ ಹಳತಾಯಿತು..  ಶ್ರೀದೇವಿ ಕಾಲೇಜ್ ಓದುತ್ತಿದ್ದಾಗ ತಂದ್ಕೊಟ್ಟಿದ್ದು ಈಗ ಅವಳೂ ಗಂಡನಮನೆ ಅಂತ ಇದೇ ಬೆಂಗಳೂರಿನ ಇನ್ನೊಂದು ತುದಿಯಲ್ಲಿ ಇದಾಳೆ ಅಂದ್ರೆ ವರ್ಷ ಎಷ್ಟಾಯ್ತು ನನ್ನ ವ್ಯಾನಿಟಿಗೆ ಹಳೇ ಚೋಕು ಅಂತ್ಹೇಳಿ ಕಸದ ಬುಟ್ಟಿಗೆ ಹಾಕಲಿಕ್ಕೆ ಯೋಗ್ಯ ಇರಲಿ.


ಹೊಸ ವ್ಯಾನಿಟಿ ಕೈಗೆ ಬಂತು.   ಅಮ್ಮ ನಿನ್ನ ಕಾಲಿನ ಚಪ್ಪಲಿ ನೋಡು..  ಪಟ್ಟೇ ಸೀರೆ ಉಟ್ಟು ಹೊರಡುವಾಗ ಎಂತಹ ಚಪ್ಪಲಿ ಇರಬೇಕು ಗೊತ್ತಾ... "  ಅಂದ್ಬಿಟ್ಟು ಚಪ್ಪಲಿಗಳಿದ್ದ ಕಡೆ ಹೋದೆವು.


ಚಪ್ಪಲಿ ಆಯ್ದೂ ಆಯ್ದೂಕಾಲಿಗೆ ಸರಿ ಹೋಗುತ್ತೋ ಇಲ್ವೊ ಎಂದು ಧರಿಸಿ ಅತ್ತ ಇತ್ತ ನಡೆದು..  ಕೊನೆಗೂ ಸರ್ವಾನುಮತದಿಂದ ಒಂದು ಚಪ್ಪಲಿ ಕೊಂಡಿದ್ದಾಯ್ತು.

ಅಮ್ಮಇದರ ರೇಟ್ ಎಷ್ಟು ಗೊತ್ತಾ.. " ಮಗ ಉಸುರಿದ.

ಹಂಗಿದ್ರೆ ಬೇಡ..  "

"ಇದೇ ಇರಲಿ ಗ್ರ್ಯಾಂಡ್ ಆಗಿ ಮನೆಯಿಂದ ಹೊರಡುವಾಗ ಹಾಕಲಿಕ್ಕೆ ಇಟ್ಕೋ.. "

ಸರಿ ಹಾಗೇ ಮಾಡೋಣ. "


ಒಂದು ಮುಂಜಾನೆ ಬೆಂಗಳೂರಿನಿಂದ ಊರಿಗೆ ಹೊರಟೆವು ಮಗ ಜತೆಗಿದ್ದ ಮನೆಯಲ್ಲಿ ಒಂಟೆಯಾಗಿದ್ದ ತುಂಟಿಯ ನೆನಪು,           ಪಾಪ... ಏನ್ಮಾಡ್ತಾ ಇದೆಯೋ.. "


ಮುಸ್ಸಂಜೆ ಹೊತ್ತಿಗೆ ಮನೆ ತಲ್ಪಿದೆವು ಕಾರು ರೊಯ್ ರೊಯ್ ಎಂದು ಕೆಳಗಿಳಿಯುತ್ತಿರಬೇಕಾದ್ರೇ ತುಂಟಿ ದೇವಸ್ಥಾನದ ಕಡೆಯಿಂದ ಜಿಗಿ ಜಿಗಿಯುತ್ತ ಬಂದಿತು.


ನಾನುನನ್ನ ವ್ಯಾನಿಟಿ ಬ್ಯಾಗ್ ಹೊಸ ಚಪ್ಪಲಿಯೊಂದಿಗೆ ತುಂಟಿಯ ತುಂಟಾಟದಿಂದ ಬಿಡಿಸಿಕೊಳ್ಳುತ್ತ ಹೇಗೋ ಒಳ ಸೇರಿದೆ

ವಾರವಾಗಿತ್ತಲ್ಲ ಮನೆ ಬಿಟ್ಟು ಕಸ ಹೊಡೆಯದೆ ಆಗುತ್ತಾ ಮೊದಲು ದೇಹ ಶುದ್ಧಿ,   ಬಿಸಿನೀರ ಸ್ನಾನ..  ಬಟ್ಟೆಗಳೆಲ್ಲ ಮುಗ್ಗುಲುವಾಸನೆ..  ಎಲ್ಲರ ಮನೆಯಲ್ಲೂ ಇದ್ದಿದ್ದೇ ಅನ್ನಿ.


ಅಂತೂ ಆರಾಮ ಅನ್ನಿಸ ಬೇಕಾದರೆ ನಾಲ್ಕು ದಿನ ಬೇಕಾಯ್ತು ದೇವಸ್ಥಾನದಲ್ಲಿ ಸಂಕ್ರಾಂತಿಯ ಗೌಜಿ ಬೇರೆ ಮುಂಜಾನೆಯಿಂದ ರಾತ್ರಿ ತನಕ ಪೂಜಾದಿಗಳಲ್ಲಿ ಪಾಲ್ಗೊಳ್ಳಲು ನಾಲ್ಕು ಬಾರಿ ಹೋಗಿ ಬಂದು ಆಯಿತು ದೇವಸ್ಥಾನಕ್ಕೆ ಹಳೆ ಚಪ್ಪಲಿ ಹಾಕಿದ್ದು ಆದ್ರೂ ಹೊಸ ಚಪ್ಪಲಿಯ ಜತೆಗಳು ಕಾಣಿಸದಿದ್ದುದು ಗಮನಕ್ಕೆ ಬಂದಿತ್ತು ಇದ್ದೀತು ಕಪಾಟಿನ ಹಿಂದೆ ಮಧು ರಪ ರಪ ಎಂದು ಕಸ ಹೊಡೆಯುವ ಅಬ್ಬರಕ್ಕೆ ಮೂಲೆಗೆ ತಳ್ಳಲ್ಪಟ್ಟಿದೆ ಎಂದು ಅಂದ್ಕೊಂಡೆನಾದರೂ ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ಚಪ್ಪಲಿ ಚಿಂತೆ ತುಂಬಿಕೊಂಡಿತು.   ದಾರಿಯುದ್ದಕ್ಕೂ ಅಲ್ಲಲ್ಲಿ ಇರಿಸಲಾಗಿದ್ದ ಚಪ್ಪಲಿಗಳ ಮೇಲೆ ಕಣ್ಣು...

ರಾತ್ರಿಯ ಭೋಜನಾನಂತರ ಮನೆಗೆ ಬಂದು ನನ್ನ ಕಾಲಿನಲ್ಲಿದ್ದ ಹಳೆಯ ಚಪ್ಲಿಯನ್ನು ತೆಗೆದಿರಿಸುವಾಗ ಬೆಂಗಳೂರಿನ ಹೊಸ ಚಪ್ಪಲಿಯ ಒಂದು ಕಾಲು ಕಾಣಿಸಲಿಲ್ಲ ಎಲ್ಲೋ ಕಪಾಟಿನ ಹಿಂಭಾಗಕ್ಕೆ ಹೋಗಿದೆಮಲಗುವ ಸಮಯವೂ ಆಗಿತ್ತು...



ಮಾರನೇ ದಿನ ಬಿಡುವಾದಾಗ ಕಪಾಟಿನ ತಳ ಭಾಗಕ್ಕೆ ಮೊಬೈಲ್ ಟಾರ್ಚ್ ಬಿಟ್ಟು ನೋಡಲಾಗಿ ಚಪ್ಪಲಿ ಕಾಣಲಿಲ್ಲ ಉದ್ದನೆಯ ಹಿಡಿಸೂಡಿ ಹಾಕಿ ತಡಕಾಡಿದರೂ ಇಲ್ಲ ಅಂತೂ ಚಪ್ಪಲಿಯಿಲ್ಲ ಎಂದು ಖಾತ್ರಿ.


ಬೆಂಗಳೂರಿಗೆ ಫೋನ್ ಹೋಯ್ತು ಇದ್ದೀತಮ್ಮ ಮನೆಯೊಳಗೇ ನೀನು ಹೊರಗೆ ಹೋಗುವಾಗ ಹಾಕಿಲ್ಲ ತಾನೇ.. "

ಹೊರಗೆ ಯಾಕೆ ಹೋಗ್ಲಿ ಜಡಿ ಮಳೆ ಸುರೀತಿದೆ..."


ಚಪ್ಪಲಿಯ ಜೊತೆ ಸಿಗುವ ತನಕ ಜೋಪಾನವಾಗಿರಲಿ ಎಂದು ಇದ್ದ ಒಂದು ಚಪ್ಪಲಿಯನ್ನು  ಮಗಳು ಚಪ್ಪಲಿ ಇಟ್ಟಲ್ಲಿ ಇರಿಸಿ ಸುಮ್ಮನಾಗ ಬೇಕಾಯ್ತು.


ನಾಲ್ಕೈದು ದಿನ ಹೋಯಿತು ಸಂಜೆಯ ಹೊತ್ತು ನಮ್ಮ ತುಂಟಿಯೊಂದಿಗೆ ಕಾಲ ಕಳೆಯಬೇಡವೇ..  ಕೈಯಲ್ಲಿ ಚಪಾತಿ ಹಿಡಿದು ಹೊರಟಾಗ ರೂಮಿನೊಳಗಿಂದ ತುಂಟಿ ಹೊರ ಬರುತ್ತಿದೆ ಬಾಯಲ್ಲಿ ನನ್ನ ಚಪ್ಪಲಿ!

ಎಲ ಗದರಿದಾಗ ಬಾಯಲ್ಲಿದ್ದ ಚಪ್ಪಲಿ ಕೆಳ ಹಾಕಿ ಹೊರಗೋಡಿದಳು ತುಂಟಿ.


ಚಪ್ಪಲಿ ಕೈಯಲ್ಲೆತ್ತಿ ಒಳ ಹೋಗಿ ನೋಡಿದಾಗ ತೆಗೆದಿರಿಸಿದ ಚಪ್ಪಲಿಯನ್ನೇ ಹುಡುಕಿ ತೆಗೆದಿದೆ!


ಮಧೂ ಚಪ್ಪಲಿ ಕಾಣೆಯಾಗಿದ್ದು ನಮ್ಮ ತುಂಟಿಯ ಕಿತಾಪತಿ.. " ಎಂದು ವರದಿ ಹೋಯಿತು  "ಇನ್ನೇನ್ಮಾಡೂದು ಹೋಯ್ತಲ್ಲ ಬಂಗಾರದಂತಹ ಮೆಟ್ಟು..."


ನಮ್ಮವರಿಗೂ ಮೆಟ್ಟಿನ ಬೆಲೆ ತಿಳಿದಿರಲಿಲ್ಲ.   ಮಾರನೇ ದಿನ ತೋಟದ ಕಾರ್ಮಿಕರಿಗೆ ಚಪ್ಪಲಿಯನ್ನು ತೋಟದಲ್ಲಿ ಹುಡುಕಲು ಹೇಳಲಾಯಿತು ತುಂಟಿಯ ಓಡಾಟವೆಲ್ಲ ದೇವಸ್ಥಾನದ ಆಸುಪಾಸಿನಲ್ಲಿ ದೇಗುಲದ ಆವರಣದಲ್ಲಿರುವ ದೈವಗಳಿಗೆ ದೀಪ ಬೆಳಗಲು ಸಂಜೆ ಕನ್ಯಾನದಿಂದ ಬರುವ ಶ್ರೀಧರ ಶೆಟ್ಟಿ ಅವನಿಗೂ ಚಪ್ಪಲಿ ವಿಷಯ ತಿಳಿಸಿದ್ದೂ ಆಯ್ತು.


ಅವರೆಲ್ಲರೂ ಚಪ್ಪಲಿ ಹುಡುಕಿದರೋ ಬಿಟ್ಟರೋ ತಿಳಿಯದು.   ಮಗನಂತೂ ಭರವಸೆ ನೀಡಿದ ಅಂತಹುದೇ ಚಪ್ಪಲಿ ಇನ್ನೊಂದು ತೆಗೆದ್ರಾಯ್ತು ಅಮ್ಮ ಇರುವ ಚಪ್ಪಲೀದು ಒಂದು ಫೋಟೊ ಕಳಿಸು. "


ಸರಿಪಟ ತೆಗೆಯಲು ಕಾಸು ಖರ್ಚಿಲ್ಲ ಕೂಡಲೇ ಚಪ್ಪಲಿಯ ಎರಡೂ ಬದಿಯ ಫೋಟೊ ಹೋಯ್ತು.

ನೀನು ಕಳಿಸಿದ ಚಿತ್ರದಲ್ಲಿ ಸೈಜ್ ನಂಬರ್ ಬಂದಿಲ್ಲ ನಂಬರ್ ಕಾಣುವ ಹಾಗೆ ಇನ್ನೊಂದು ಫೋಟೊ ತೆಗಿ.."


ಹಾಳಾದ್ದು ನನಗೆ ಅದರಲ್ಲಿ ನಂಬರ್ ಪಟ್ಟಿ ಕಾಣದಾಯಿತು ಸುಮ್ಮನೇ ಮೆಟ್ಟು ಕಾಣದಾಗಿದೆ ಎಂದು ಹೇಳಿಕೊಂಡು ಬಂದಿದ್ದು ಅಂತ ಅನ್ನಿಸ ತೊಡಗಿತು.    ಅಮ್ಮ ಚಪ್ಪಲಿಯೊಳಗೆ ಕಾಲು ಹಾಕ್ತೀಯಲ್ಲ ಅದರ ಒಳ ಬದಿ ನೋಡು ಸರಿಯಾಗಿ.. "


ಒಳ ಬದಿಯನ್ನು ಹಾಗೂ ಹೀಗೂ ತಿರುಗಿಸಿದಾಗ ಅಂಕಿಗಳು ಕಂಡವು.   ಹೇಗೋ ಕೆಮರಾ ಫೋಕಸ್ ಆಗುವಂತೆ ಬಿಡಿಸಿ ಅಂಕಿಗಳು ಕಾಣುವಂತೆ ಫೋಟೊ ಬಂದಿತು.    ಉಸ್... ಇನ್ನೇನು ಬೇಕಿದ್ರೂ ಮಾಡ್ಕೋ.. "


ಮುಂದಿನ ಸೋಮವಾರ ನಿನ್ನ ಚಪ್ಪಲಿ ಮನೆಗೆ ಬರುತ್ತೆ... ಜಾಗ್ರತೆಯಾಗಿ ತೆಗೆದಿಟ್ಕೊ..."