Pages

Ads 468x60px

Sunday 21 October 2012

ಕಿಸ್ಕಾರವೆಂಬ Ixora ......ಹೂವಿನ ಹಾರ




                     





ತಟ್ಟೆಯಲ್ಲಿ ದೋಸೆ ಯಾರನ್ನೋ ಕಾಯುತ್ತಿದೆ , ನಮ್ಮತ್ತೆ ವಾಕಿಂಗ್ ಹೋದೋರು ಇನ್ನೂ ಬಂದಿರಲಿಲ್ಲ . ಒಟ್ಟಿಗೇ ಮಾತನಾಡಿಕೊಂಡು ತಿಂಡಿ ತಿನ್ನೋಣ ಅಂದ್ರೆ ಬರೋದು ಕಾಣಿಸ್ತಾನೇ ಇಲ್ಲ .

" ಮುಂಜಾನೆಯ ಚಳಿಗೇ ಎದ್ದು ಯಾಕೆ ಹೋಗ್ತೀರಾ ? "
" ಹೊರಗಿನ ಶುದ್ಧ ಗಾಳಿ ಒಳ್ಳೇದು "
" ಇಲ್ಲೇ ಮನೆಯಂಗಳದಲ್ಲಿ ಅಡ್ಡಾಡಿದರೆ ಸಾಲದೇ ? "

ವಯಸ್ಸಾದವರು ನನ್ನ ಮಾತೆಲ್ಲಿ ಕೇಳ್ತಾರೆ , ಅವರ ಹಟವೇ ಅವರಿಗೆ . ಇವತ್ತೂ ಹಾಗೇ ಬೆಳಗೆದ್ದು ಹೋದೋರು ಇನ್ನೂ ನಾಪತ್ತೆ . ಹಾಲು ಬಿಸಿ ಮಾಡಲಿಟ್ಟು , ಕುದಿದ ನೊರೆ ಹಾಲಿಗೆ ಸಕ್ಕರೆ ಹಾಕಿ , ಕಾಫಿ ಡಿಕಾಕ್ಷನ್ ಸೇರಿಸುತ್ತ ಇದ್ದ ಹಾಗೆ ಅತ್ತೆ ಬಂದ್ರು .

" ಕಾಫಿ ರೆಡಿ ಆಯ್ತಾ , ನಾನು ಬಂದೆ ನೋಡು "
" ಆಯ್ತು , ಎಲ್ಲೆಲ್ಲ ಹೋಗಿದ್ರಿ ? "
ಇವತ್ತು ಹೋಗಿದ್ದು ಬಾಯಾರು ದೇವಸ್ಥಾನದವರೇಗೆ .....ಅಲ್ಲೊಂದು ಮನೆ ಸಿಕ್ತು , ಮನೆ ಮುಂದೆ ನಾಯಿ ...."
" ಏನು ಬೌ ಬೌ ಹೇಳ್ತ ..."
" ಅದಲ್ಲ , ಯಾರೇ ಮುಂದುಗಡೆ ಬಂದ್ರೂ ನಮಸ್ಕಾರ ಮಾಡುತ್ತೆ , ನೀನೂ ಬಾ , ಸಂಜೆ ತಿರ್ಗಾ ಹೋಗೋಣ "
" ಹ್ಞೂಂ , ಈಗ ಕಾಫೀ ಕುಡೀರಿ "
ತಿಂಡಿ ತಿಂದು ಎಂದಿನಂತೆ ಟೀವಿ ಮುಂದೆ ಆಸೀನರಾದರು ನಮ್ಮತ್ತೆ , ಭಗವದ್ಗೀತೆ ಪ್ರವಚನ ಇವತ್ತು ಎಲ್ಲೀತನಕ ಬಂತು ಎಂದು ಅವಲೋಕಿಸುತ್ತಾ .
" ಹ್ಞಾ , ಊಟಕ್ಕೆ ಏನಡುಗೆ ಮಾಡೋದು ಅಂತಿದೀಯ ನೋಡು , ವಾಕಿಂಗ್ ಮಾಡ್ತಾ ಕೇಪುಳ ಹೂ ತಂದಿದ್ದೇನೆ "
ಅದನ್ನ ಏನು ಮಾಡೋಣಾ ಅಂತೀರಾ ? " ಪ್ಲಾಸ್ಟಿಕ್ ಚೀಲ ತುಂಬಾ ಹೂ ಕಿತ್ತು ತಂದಿದ್ದರು .
" ಎಲ್ಲಾ ಹೂ ಹಾಕಿ ಬಿಡಬೇಡ , ನಾಳೆಗೂ ಇಟ್ಟಿರು , ತೊಟ್ಟು ತಗೆದು ನಾನೇ ಆಯ್ದು ಕೊಡ್ತೇನೆ " ಅಂದವರೇ ಅಂದಿನ ಅಗತ್ಯಕ್ಕೆ ಬೇಕಾದ ಕೇಪುಳ ಹೂಗಳನ್ನು ಆಯ್ದು ಇಟ್ಟರು .
" ಇದಕ್ಕೆ ನಾಲ್ಕು ಜೀರಿಗೆ , ಒಂದಿಷ್ಟು ಕಾಯಿತುರಿ ಹಾಕಿ ....."
" ಅಷ್ಟೇನಾ , ಮಾಡುವಾ "
" ಹುಳಿ ಮಜ್ಜಿಗೆ ಬೇಡ , ಇವತ್ತಿಂದು ಇಲ್ವೇ , ಮೊಸರು ಹಾಕು ಆಯ್ತಾ "
" ಒಂದು ಗಾಂಧಾರಿ ಮೆಣಸು ಹಾಕ್ಲಾ "
" ಅದು ಬೇಡ , ಕೇಪುಳ ಹೂ ಶರೀರಕ್ಕೆ ತಂಪು...ತಂಪು.... ಚಿಗುರೆಲೆಯೂ ತಂಬ್ಳಿ ಮಾಡ್ಬೌದು , ಎಲ್ಲ ಗಿಡಗಂಟಿಗಳ ಎಳೆಯ ಚಿಗುರು ಹಾಕಿ ತಂಬುಳಿ.... ಆಗ್ತದೆ " ಅತ್ತೆ ಹೇಳ್ತಾನೇ ಹೋದರು , ಗೀತಾ ಪ್ರವಚನದಂತೆ .

  


ಕಿಸ್ಕಾರದ ತಂಬುಳಿ ಮತ್ತು ಕಷಾಯ ತಯಾರಿಯ ಕುಸರಿ ಕಲೆ ಹಳೆಯ ತಲೆಮಾರಿನವರಿಗೆ ಚೆನ್ನಾಗಿಯೇ ತಿಳಿದಿದೆ . ಕೇಪುಳ ಎಂದು ಆಡುಮಾತಿನಲ್ಲಿ ಹೇಳುವ ಈ ಸಸ್ಯಕ್ಕೆ ಕಿಸ್ಕಾರ , ಆಂಗ್ಲ ನುಡಿಯಲ್ಲಿ jungle flame , Ixora , ಮಲಯಾಳಂನಲ್ಲಿ ചെത്തി ( chethi ) ಎಂದೂ ಹೆಸರಿದೆ , ಸಸ್ಯಶಾಸ್ತ್ರೀಯವಾಗಿ Ixora coccinea , ಹಾಗೂ Rubiaceae ಕುಟುಂಬಕ್ಕೆ ಸೇರಿದೆ . ನಿಸರ್ಗದಲ್ಲಿ ಸಹಜವಾಗಿ ದೊರೆಯುವ ಇಂತಹ ಸಸ್ಯಗಳನ್ನು ಕಾಟ್ ಕಿಸ್ಕಾರ , ಕಾಟ್ ಮಾವು , ಕಾಟ್ ಗುಲಾಬಿ ಇತ್ಯಾದಿಯಾಗಿ ಹೆಸರಿಸುವ ರೂಢಿ ನಮ್ಮಲ್ಲಿದೆ , ಅರ್ಥಾತ್ ಇವೆಲ್ಲ ಕಾಟ್ ( ಕಾಡು ) ಸಸ್ಯಗಳು . ಕಿಸ್ಕಾರದಲ್ಲಿ ಕೆಂಪು ಕೆಂಪಾದ ಹಣ್ಣುಗಳು ಹೂವರಳಿದ ತರುವಾಯ ಕಾಣಿಸಿಕೊಳ್ಳುತ್ತವೆ . ಕಾಫೀ ಹಣ್ಣುಗಳಂತಹ ಈ ಹಣ್ಣುಗಳನ್ನು ಗ್ರಾಮೀಣ ಪರಿಸರದ ಮಕ್ಕಳು ಗುಡ್ಡ , ಗದ್ದೆ ಬದುಗಳಲ್ಲಿ ಸಂಗ್ರಹಿಸಿ ತಿಂದವರೇ . ಈ ಹಣ್ಣುಗಳ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದಾಗಿದೆ . ಈ ಸಸ್ಯ ಪ್ರವರ್ಗದಲ್ಲಿ ಸುಮಾರು 500 ಕ್ಕೂ ಹೆಚ್ಚು ಜಾತಿಗಳಿವೆ . ಈಗ ಎಲ್ಲಿ ನೋಡಿದರೂ ಗುಡ್ಡ ಕಾಡುಗಳನ್ನು ಕಡಿದು ವಾಣಿಜ್ಯ ಬೆಳೆಗಳನ್ನು ಬೆಳೆಯುವ ನೆಪದಲ್ಲಿ ವನ್ಯಸಸ್ಯಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ .




ಹೂ , ಎಲೆ , ಬೇರುಗಳು ವೈದ್ಯಕೀಯ ಗುಣಧರ್ಮವನ್ನು ಹೊಂದಿವೆ .
ಹೂಗಳು ಅತಿಸಾರ , ರಕ್ತಭೇದಿ ಖಾಯಿಲೆಗಳಿಗೆ ಔಷಧಿ . (diarrhea and dysentery )
ಹೂಗಳನ್ನು ಸಂಗ್ರಹಿಸಿ , ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಅಗತ್ಯ ಬಿದ್ದಾಗ ನೀರು ಅಥವಾ ಹಾಲಿನಲ್ಲಿ ಬೆರೆಸಿ ಸೇವನೆ .

ಚರ್ಮದ ಮೇಲ್ಭಾಗದ ಗಾಯ , ಕಜ್ಜಿ , ಹುಣ್ಣುಗಳು ಇದರ ಬೇರಿನ ಕಷಾಯ ಸೇವನೆಯಿಂದ ಬೇಗನೆ ವಾಸಿಯಾಗುತ್ತವೆ . ಬೇರನ್ನು ಕುಚ್ಚಲಕ್ಕಿ ತೊಳೆದ ನೀರಿನಲ್ಲಿ ಅರೆದು ಲೇಪ ಹಾಕುವುದು ಇನ್ನೊಂದು ವಿಧಾನ . ಇದೊಂದು ಆಂಟಿ ಸೆಪ್ಟಿಕ್ ಎಂದು ವೈಜ್ಞಾನಿಕ ಸಂಶೋಧನೆಗಳು ಧೃಢಪಡಿಸಿವೆ .

ಇದರ ಹಸಿ ಬೇರನ್ನು ಸ್ವಲ್ಪ ಜಜ್ಜಿ ತೆಂಗಿನೆಣ್ಣೆಯಲ್ಲಿ ಹಾಕಿಟ್ಟು , ಬಿಸಿಲಿನಲ್ಲಿ ಒಂದೆರಡು ದಿನ ಇಟ್ಟು ಕೆಂಪೆಣ್ಣೆ ತಯಾರಿಸುವ ಕ್ರಮವಿದೆ . ಕುದಿಸುವುದೇನೂ ಬೇಡ , ತೆಂಗಿನೆಣ್ಣೆ ತಾನಾಗಿಯೇ ಕೆಂವರ್ಣಕ್ಕೆ ತಿರುಗುತ್ತದೆ . ಜಾಡಿಯಲ್ಲಿ ತುಂಬಿಸಿಟ್ಟು , ಎಳೆಯ ಕಂದಮ್ಮಗಳಿಗೆ ಈ ಎಣ್ಣೆ ಹಚ್ಚಿ ಬಿಟ್ಟು , ಬಿಸಿ ನೀರ ಸ್ನಾನ ಮಾಡಿಸುವ ಪರಿಪಾಠ ಹಿಂದಿನಿಂದಲೂ ಇದೆ . ನನ್ನ ಇಬ್ಬರು ಮಕ್ಕಳೂ ಈ ಕೆಂಪೆಣ್ಣೆ ಸ್ನಾನ ಮಾಡಿದವರೇ . ಮನೆಕಲಸಗಿತ್ತಿ ಕಲ್ಯಾಣಿಯೇ ಬಹಳ ಮುತುವರ್ಜಿಯಿಂದ ಎಣ್ಣೆ ಮಾಡಿಟ್ಟುಕೊಂಡು ಸ್ನಾನ ಮಾಡಿಸುತ್ತಿದುದನ್ನು ಮರೆಯಲುಂಟೇ ?

ಸ್ತ್ರೀಯರಲ್ಲಿ ಮಾಸಿಕ ಋತುಸ್ರಾವದಲ್ಲಿ ಏರುಪೇರುಗಳುಂಟಾಗಿ ಕೆಲವೊಮ್ಮೆ ಆಸ್ಪತ್ರೆ ಮೆಟ್ಟಲೇರುವುದಿದೆ . ಇಂತಹ ಪರಿಸ್ಥಿತಿ ಎದುರಾದಲ್ಲಿ ಕಿಸ್ಕಾರದ ಬೇರಿನ ಕಷಾಯ ಸೇವನೆಯಿಂದ ಗುಣಮುಖರಾಗಬಹುದಾಗಿದೆ .

ಸಾಕಿದ ಹಸುವಿಗೆ ಗರ್ಭ ನಿಲ್ಲದೇ ತೊಂದರೆಯಾಗುತ್ತಿದೆಯಾದಲ್ಲಿ ಅದಕ್ಕೂ ಕಿಸ್ಕಾರದ ಬೇರು ಔಷಧಿ . ನಿಯಮಿತವಾಗಿ ಕಲಗಚ್ಚಿನೊಂದಿಗೆ ಬೇರಿನ ಕಷಾಯ ಕುಡಿಸಿ .

ಎಲೆಗಳ ಕಷಾಯ ಡಯಾಬಿಟೀಸ್ ರೋಗಿಗಳಿಗೆ ಉತ್ತಮ . ಬ್ಲಡ್ ಶುಗರ್ ನಿಯಂತ್ರಣ .

ಕ್ಯಾನ್ಸರ್ ಎಂಬ ಖಾಯಿಲೆಗೆ ಬಲಿಯಾಗುತ್ತಿರುವವರು ದಿನ ಹೋದಂತೆ ಅಧಿಕವಾಗುತ್ತಿದ್ದಾರೆ . ಇದಕ್ಕೇನು ಕಾರಣವೋ ಗೊತ್ತಿಲ್ಲ . ಆದರೆ ಕಿಸ್ಕಾರದಲ್ಲಿ ಕ್ಯಾನ್ಸರ್ ಪ್ರತಿಬಂಧಕ ಗುಣಗಳಿರುವುದನ್ನು ವೈದ್ಯಕೀಯ ಸಂಶೋಧನೆಗಳು ದೃಢಪಡಿಸಿವೆ .



ಸಾಮಾನ್ಯವಾಗಿ ದೇವತಾರ್ಚನೆಯಲ್ಲಿ ಕಿಸ್ಕಾರ ಹೂ ಇರಲೇಬೇಕು . ನವರಾತ್ರಿಯ ಸಂಭ್ರಮಾಚರಣೆಯಲ್ಲಿ , ದುರ್ಗಾಮಾತೆಯ ಪೂಜಾವಿಧಿಗಳಲ್ಲಿ ಈ ಹೂವಿಗೇ ಅಗ್ರಸ್ಥಾನ . ಎಪ್ಪತ್ತರ ದಶಕದ ಒಂದು ಮಲಯಾಳಂ ಸಿನಿಮಾ ಹಾಡು ಆರ೦ಭವಾಗುವುದೇ ಈ ಹೂವಿನ ಹೆಸರಿನೊಂದಿಗೆ ....‘"Chethi, mandaram, tulasi...." ( "ചെത്തി മന്ദാരം തുളസി ......" ) ಎವರ್ ಗ್ರೀನ್ ಹಾಡು , ಈಗಲೂ ಚಲಾವಣೆಯಲ್ಲಿದೆ .

ಹೂತೋಟಗಳಲ್ಲಿ , ಉದ್ಯಾನವನಗಳಲ್ಲಿ ಕಾಣಸಿಗುವ ಕಿಸ್ಕಾರ ಹೈಬ್ರಿಡ್ ತಳಿ . ವಿಧ ವಿಧವಾದ ವರ್ಣಗಳಲ್ಲಿ ಲಭ್ಯ . ಕತ್ತರಿಸಿದ ಗೆಲ್ಲುಗಳ ತುಂಡುಗಳಿಂದ ಹೊಸ ಸಸ್ಯವನ್ನು ಸುಲಭವಾಗಿ ಬೆಳಸಬಹುದು . ಫಲವತ್ತಾದ ಆಮ್ಲೀಯ ಮಣ್ಣಿನಲ್ಲಿ ಸೊಗಸಾಗಿ ಬೆಳೆಯುತ್ತದೆ . ಬಿಸಿಲೂ ಅವಶ್ಯಕ , ಸದಾಕಾಲ ಹೂಗಳಿಂದ ತುಂಬಿರುತ್ತದೆ . ತೋಟಗಳಲ್ಲಿ ತಡೆಬೇಲಿಯಾಗಿ ಈ ಗಿಡಗಳನ್ನು ನೆಟ್ಟು ಬೆಳೆಸಿದರೆ ತೋಟವೇ ಶೃಂಗಾರದಿಂದ ಲಕಲಕಿಸುವುದು . ಎತ್ತರವಾಗಿ 8 - 10 ಅಡಿ ಬೆಳೆಯುವ ಈ ಅಲಂಕಾರಿಕ ಕಸಿ ಗಿಡಗಳಿಗೆ ವೈದ್ಯಕೀಯ ಮಹತ್ವ ಕೊಡಲು ಬರುವುದಿಲ್ಲ .

Posted via DraftCraft app




ಟಿಪ್ಪಣಿ:   7/ 4/ 2016 ರಂದು ಹೊಸ ಚಿತ್ರಗಳೊಂದಿಗೆ ನವೀಕರಿಸಲಾಗಿದೆ ಹಾಗೂ ವಿಸ್ತರಿಸಿ ಬರೆದಿದ್ದೇನೆ.

ದಾಹಶಾಮಕ ಕಿಸ್ಕಾರ

ಮುಂಜಾನೆಯ ಒಂದು ಹಂತದ ಕೆಲಸ ಮುಗಿದಾಗ,  ಏನೋ ಒಂದು ಫೊಟೋ ಕ್ಲಿಕ್ಕಿಸುವ ಮಹದಾಲೋಚನೆಯಿಂದ ಮನೆಯಿಂದ ಹೊರಗಿಳಿದಾಯ್ತು.  ಮಟ ಬೇಸಿಗೆಯಲ್ವೇ,  ಕಳೆಹುಲ್ಲುಗಳು ಕೂಡಾ ಒಣಗಿದ್ದುವು,   " ಆಹ!  ಅಲ್ಲೊಂದು ಕಿಸ್ಕಾರದ ಹೂಗಳ ಪರಿವಾರ ಅರಳಿದೆ! "   ಸರಿ,  ಇದೇ ಲಾಯಕ್ಕು ಅಂದ್ಬಿಟ್ಟು ಫೊಟೋ ತೆಗೆದಿದ್ದಾಯ್ತು.

ಬೇಸಿಗೆಯ ದಿನಗಳಲ್ಲಿ ಕಿಸ್ಕಾರದಷ್ಟು ತಂಪು ನೀಡುವ ಸಸ್ಯ ಇನ್ನೊಂದಿಲ್ಲ.   ರಣಬಿಸಿಲಲ್ಲಿ ಗುಡ್ಡಗಾಡು ತಿರುಗಾಟವೇ,  ಬಾಯಾರಿದಾಗ ಈ ಕೇಪುಳ ಹೂಗಳನ್ನು ಆರಿಸಿ ತಿಂದು ದಾಹ ನಿವಾರಿಸಿಕೊಳ್ಳಬಹುದಾಗಿದೆ.   ಇದನ್ನೂ ಗೌರತ್ತೆಯೇ ಹೇಳಿದ್ದು,  ಯಾಕೋ ನೆನಪಾಯ್ತು.   ಈಗೀಗ ತೋಟದ ಕೆಲಸಗಾರರೂ  " ಅಕ್ಕ,  ಬಾಟಲ್ ಕೊಡಿ, ನೀರು ತುಂಬಿಸಲಿಕ್ಕೇ..." ಅನ್ನುವವರಾಗಿದ್ದಾರೆ.   ತೋಟದಲ್ಲಿ ಕೆರೆಯಿದೆ,   ಸುರಂಗದಿಂದ ಹರಿದು ಬರುವ ನೀರಿದೆ,   ಬೊಗಸೆಯೊಡ್ಡಿ ನೀರು ಕುಡಿವ ಆನಂದವನ್ನೇ ಎಲ್ಲರೂ ಮರೆತಂತಿದೆ.    ಎಲ್ಲರೂ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ನೀರು ಒಯ್ಯುವವರೇ,   ಖಾಲಿ ಬಾಟಲ್ ಗಳನ್ನು ಅತ್ತ ಇತ್ತ ಎಸೆದು ಪರಿಸರವನ್ನು ಹಾಳುಗೆಡವಲು ಮಾತ್ರ ತಿಳಿದಿರುವ  ನಮಗೆ ಹಿಂದಿನವರ ಜೀವನಶೈಲಿಯ ಒಳಗುಟ್ಟುಗಳು ಹೇಗೆ ತಾನೇ ಗೊತ್ತಿರುತ್ತೆ ಅಲ್ವ ?


  
   

ರಣ ಬೇಸಿಗೆಯಲ್ಲೂ ಹಚ್ಚ ಹಸಿರು,
ನೀರೆರೆದು ಸಲಹಿದವರ್ಯಾರೋ,
ಕಣ್ಸೆಳೆವ ವರ್ಣವೈಖರಿ....
ಇನ್ನೂ ಓದಿಲ್ಲವೇ, 
ಇದು ದಾಹಶಾಮಕ ಕಿಸ್ಕಾರ.

Sunday 14 October 2012

" ಅಮ್ಮಂಗೊಂದು ಫೇಸ್ ಬುಕ್ ಮಾಡ್ಕೊಡೇ ......."





 ಗ್ರಾಮೀಣ  ಪ್ರದೇಶದಲ್ಲಿರುವ  ನಮ್ಮ  ಮಕ್ಕಳು  ಆಧುನಿಕ  ವಿಜ್ಞಾನವೆನಿಸಿದ  ಕಂಪ್ಯೂಟರ್  ಶಿಕ್ಷಣದಿಂದ  ವಂಚಿತರಾಗಬಾರದು  ಎಂಬ  ಸದುದ್ಧೇಶದಿಂದ  ಮಗನಿಗೆ  ಗಾಯತ್ರೀ  ಮಂತ್ರೋಪದೇಶವಾದ  ಮುಹೂರ್ತದಲ್ಲಿ   ಮನೆಗೆ  ಕಂಪ್ಯೂಟರ್  ಬಂದಿತು .    ಹನ್ನೊಂದರಿಂದ  ಹದಿಮೂರು  ವಯಸ್ಸಿನ  ಬಾಲಕರಿಗೆ  ಉಪನಯನ  ಸಂಸ್ಕಾರದ  ವಾಡಿಕೆಯ  ಕ್ರಮದಂತೆ  ನಾವೂ  ಬಂಧು ಬಳಗವನ್ನೆಲ್ಲ  ಆಹ್ವಾನಿಸಿ  ಗೌಜಿಯ  ಸಮಾರಂಭ  ನಡೆಸಿದೆವು .    ಆಗ  ಬಂದಿದ್ದು  ಡೆಸ್ಕ್ ಟಾಪ್ .     ನಮ್ಮೆಜಮಾನ್ರೂ  ಅದಕ್ಕೆ  ತಕ್ಕಂತೆ  ತಯಾರಿ  ನಡೆಸಲು  ಪ್ರಾರಂಭಿಸಿದ್ದರು .   ಇನ್ನಿತರ  ಟೀವಿ ,  ವೀಡಿಯೋ  ರಿಪೇರಿ  ಉದ್ಯೋಗಗಳನ್ನು  ಮೂಲೆಗಿರಿಸಿ  ಸದಾಕಾಲ  ಕಂಪ್ಯೂಟರ್ ಜ್ಞಾನಕ್ಕೆ  ಸಂಬಂಧಿಸಿದ  ಪುಸ್ತಕಗಳನ್ನು  ಓದುತ್ತಾ .....

ಆಗ  ಇಲ್ಲಿ  ಅಂರ್ಜಾಲ  ಸಂಪರ್ಕವೂ  ಇರಲಿಲ್ಲ .   ಮಕ್ಕಳು  ಬಹು ಬೇಗನೆ  ಈ  ಯಂತ್ರದ  ಮುಂದೆ  ಕುಳಿತು  ಗೇಮ್ಸ್ ಗಳನ್ನು  ಆಡಲು  ಕಲಿತರು .   " ನೀನೂ  ಕಲೀ "  ಎಂದು  ನನ್ನನ್ನೂ  ಹುರಿದುಂಬಿಸಿದರು .   " ಈ  ಆಟಗಳು ಯಾರಿಗ್ಬೇಕು "  ಸುಮ್ಮನಿದ್ದೆ .  ಅವನೋ  ಮಹಾ  ಪ್ರಚಂಡ ,  ಮಗುವಾಗಿದ್ದಾಗಲೇ  ವೀಡಿಯೋ  ಗೇಮ್ಸ್  ಆಡ್ತಿದ್ದ .   ಈಗ  ಕಂಪ್ಯೂಟರ್ ಗೇಮ್ಸ್  ಹೆಚ್ಚುವರಿ  ಸೇರ್ಪಡೆಯಾಯ್ತು .

 ನನ್ನ  ಪ್ರಥಮ  ಹವ್ಯಾಸವಾಗಿದ್ದ  ಚಿತ್ರಕಲೆಯನ್ನು  ಅರಿತಿದ್ದ  ಅವನು   " ಅಮ್ಮಾ ,  ಚಿತ್ರ  ಮಾಡಲೂ  ಬರುತ್ತೆ  ಇದರಲ್ಲಿ "   ಆಸೆ  ಹುಟ್ಟು ಹಾಕಿದ .

" ಹೌದೇ "  ಅನ್ನುತ್ತಾ  ಪ್ರಯತ್ನಿಸಿದೆ .   ಚಿತ್ರಗಳೇನೋ  ಚೆನ್ನಾಗಿ  ಮೂಡಿ ಬಂದವು .   ಆದರೆ  ಮಾಡಿದ  ಚಿತ್ರಗಳು  ಕೆಲವೇ  ದಿನಗಳಲ್ಲಿ  ಎಲ್ಲಿಗೋ  ಅಂತರ್ಧಾನವಾಗುತ್ತಿದ್ದವು .   

" ಅಷ್ಟು  ಚೆನ್ನಾಗಿ  ' ಸಿಂಡ್ರೆಲಾ '  ಚಿತ್ರ  ಬಿಡಿಸಿದ್ದೆನಲ್ಲ ,  ಇವತ್ತು  ನೋಡಿದ್ರೆ  ಆ  ಹುಡುಗಿ  ಎಲ್ಲೋ  ಓಡಿ  ಹೋಗಿದ್ದಾಳೆ ,  ಛೆ ..ಛೆ "  ನನ್ನ  ತೊಳಲಾಟ  ಈ  ಮಕ್ಕಳಿಗೆಲ್ಲಿ  ಅರ್ಥವಾಗಬೇಕು ?

ಆಸಕ್ತಿಯೇ  ಹೋಯಿತು .   ನನಗಾಗಿ  ಹಾಡುಗಳನ್ನು  ತುಂಬಿಸಿ  ಕೊಟ್ಟ ,  ಆಯ್ತು ,  " ಕೇಳಿದ  ಹಾಡುಗಳನ್ನೇ  ಪುನಃ  ಪುನಃ  ಎಷ್ಟೂಂತ  ಕೇಳಲೀ ,  ಬೇರೆ  ಕೆಲ್ಸ  ಇಲ್ವೇ " 

ಅಲ್ಲಾಂದ್ರೂ  ನಾನೂ  ಕಂಪ್ಯೂಟರ್  ಹವ್ಯಾಸಿಯಾಗಿ  ಅಲ್ಲೇ  ಕುಳಿತಿದ್ದರೆ  ಮಕ್ಕಳೂ  " ಅಮ್ಮನಿಗೆ  ಹೇಳಿ ಕೊಡುವ ಆಟ "  ಶುರು  ಮಾಡ್ಬಿಟ್ಟು ಶಾಲಾ ಪಠ್ಯಗಳ  ಓದುವಿಕೆ  ಕುಂಠಿತವಾಗಿ  ಕಲಿಯುವುದರಲ್ಲಿ  ಹಿಂದೆ  ಬೀಳುತ್ತಾರೇನೋ ಎಂಬ  ಭಯವೂ  ಉಂಟಾಗಿ   ' ಕಂಪ್ಯೂಟರ್ ಸಹವಾಸವೇ ಬೇಡ ' ಅಂದ್ಕೊಂಡು  ದೂರ  ಸರಿದೆ .

                                         <><><>                   <><><>

ಒಂದೆರಡು  ವರ್ಷಗಳಲ್ಲಿ  ಅಂತರ್ಜಾಲ  ಸೌಲಭ್ಯವೂ  ಬಂದಿತು .   ಎಷ್ಟಾದರೂ  ಇದು  ಕೇರಳ  ರಾಜ್ಯವಲ್ಲವೇ ,   ' ಮನೆ ಮನೆಗೂ  ಕಂಪ್ಯೂಟರ್ ಸಾಕ್ಷರತೆ ' ಯ  ಅಭಿಯಾನ  ಆರಂಭವಾಗಿತ್ತು .    ಶಾಲೆ ,   ಸರ್ಕಾರೀ  ಕಛೇರಿಗಳಿಗೆ  ಕಂಪ್ಯೂಟರ್  ಯಂತ್ರ  ಬಂದಿತ್ತು .   ನಾನು  ಆಗಾಗ  ಭೇಟಿ  ನೀಡುತ್ತಿದ್ದ  ' ಹೆದ್ದಾರಿ  ಶಾಲಾ ಮಿತ್ರ ಮಂಡಲ' ದ   ಲೈಬ್ರರಿ  ಕೊಠಡಿಯಲ್ಲಿ  ಶಾಲೆಗೆಂದು  ಬಂದಿದ್ದ  ಕಂಪ್ಯೂಟರ್  ಯಂತ್ರವನ್ನು ಇಟ್ಟುಕೊಂಡಿದ್ದರು .  

ಆಗ್ಗಿಂದಾಗ್ಗೆ  ಭೇಟಿ  ನೀಡುತ್ತ  ಇದ್ದ  ಈ  ಲೈಬ್ರರಿಗೆ  ಒಂದು  ದಿನ  ಹೊಸ  ಪುಸ್ತಕಗಳೇನಾದರೂ  ಇದ್ದರೆ  ತರೋಣವೆಂದು  ಹೋಗಿದ್ದೆ .   ಲೈಬ್ರೇರಿಯನ್  ಆಚಾರ್  ಮೇಸ್ಟ್ರು  ದಿನ ಪತ್ರಿಕೆ  ಓದ್ತಾ  ಇದ್ದರು .      ಅವರನ್ನ  ಮಾತಿಗೆಳೆದೆ .

" ಕಂಪ್ಯೂಟರು  ಬಂತಲ್ಲ "

" ಬಂದಿದೆ ,  ನಾವು  ಟೀಚರ್ಸ್  ಮೂದಲು ಕಲಿತು  ಆಗ್ಲಿ ,   ಆ ಮೇಲೆ  ಈ  ಮಕ್ಕಳಿಗೆ  ಹೇಳಿ ಕೊಡೋಣಾ "

ಕಂಪ್ಯೂಟರನ್ನು  ಇಟ್ಟುಕೊಂಡಿದ್ದಂತಹ  ಕೊಠಡಿಗೆ  ಇಣುಕಿದೆ .    ಇಬ್ಬರು  ಅಧ್ಯಾಪಕರು  ಅದರ  ಮುಂದೆ  ನಿಂತು  ಗಹನವಾಗಿ  ಅವಲೋಕಿಸುತ್ತಿದ್ದಂತೆ ,   ಲೈಬ್ರರಿ ಬುಕ್ಸ್ ಗಳೊಂದಿಗೆ  ಮನೆಯ ಕಡೆ ನಡೆದೆ .

ನಮ್ಮ  ನೆರೆಯಲ್ಲಿ  ಒಂದು  ಚೆಕ್ ಪೋಸ್ಟ್  ಆಫೀಸ್  ಇದೆ .   ಅಲ್ಲಿಗೆ  ಬಾರದಿರುತ್ತದೆಯೆ ,   ನಮ್ಮವರು  ಅಲ್ಲಿದ್ದ  ಮಲಯಾಳೀ  ಉದ್ಯೋಗಸ್ಥರೊಂದಿಗೆ  ಪಟ್ಟಾಂಗ  ಮಾಡಿ  ಬಂದ್ರು .   "  ಸರ್ಕಾರ  ಕೊಟ್ಟಿದೆ ,   ಯಾಕೆ  ಬಂದಿದೇ  ಅಂತಾನೂ  ಗೊತ್ತಿಲ್ಲ ,   ಇಟ್ಕೊಂಡು  ಏನು ಮಾಡೋದು  ಅಂತಾನೂ ಗೊತ್ತಿಲ್ವಂತೆ "

ಅಂತರ್ಜಾಲ  ಸೌಲಭ್ಯ  ಬಂದೊಡನೆ   ಸ್ವಲ್ಪ  ಚುರುಕಾದೆ .   ದೂರದ  ದುಬೈಯಲ್ಲಿರುವ  ಬಾಲ್ಯ ಗೆಳತಿಯ  ನೆನಪಾಯ್ತು .   ಅವಳ  ಅಮ್ಮಂಗೆ  ಫೋನಾಯಿಸಿ  ಇ ಮೇಲ್ ಅಡ್ರೆಸ್  ಪಡೆದೆ .   ಮಕ್ಕಳ  ಸಹಾಯದಿಂದ  ಮೇಲ್ ಕಳ್ಸಿ ,  ಅವಳಿಂದ   ಉತ್ತರವೂ  ಬಂತು .   ಮನೆ ಸುದ್ದಿ ,  ಮಕ್ಕಳ  ಚಟುವಟಿಕೆಗಳ ವಿವರಣೆ  ಇತ್ಯಾದಿಯಿಂದ  ತೊಡಗಿ  ಅಡುಗೆಮನೆ  ವಹಿವಾಟಿನವರೆಗೆ  ಮೇಲ್  ಓಡಾಡುತ್ತ  ಇತ್ತು .   ಕಿವಿಗೆ  ಹೆಡ್ ಫೋನ್  ತಗಲಿಸಿ  ನೇರ  ಮಾತುಕತೆಯೂ  ಆಯಿತು .     ' ಮೆಕ್ಸಿಕನ್ ರೈಸ್ '  ಮಾಡುವ  ವಿಧಾನವನ್ನು  ಬರೆದು  ಕಳಿಸಿದ್ದೇ  ಕೊನೆಯದು .   ಅಂರ್ಜಾಲ  ಸಂಪರ್ಕ  ತಾತ್ಕಾಲಿಕವಾಗಿದ್ದುದರಿಂದ  ಮಾತುಕತೆ  ನಿಂತು ಹೋಯಿತು .    ಅವಳು  ಆ ತಿಂಡಿಯನ್ನು  ಮಾಡಿದಳೋ  ಬಿಟ್ಟಳೋ  ಒಂದೂ  ತಿಳಿಯಲಿಲ್ಲ .   ಅಲ್ಲಿಗೆ  ಪುನಃ  ಕಂಪ್ಯೂಟರ್  ಸಹವಾಸ  ಕಡಿಯಿತು .

ಮಕ್ಕಳ  ಶಿಕ್ಷಣದ  ಪ್ರಗತಿಗೆ  ಪೂರಕವಾಗಿರಲಿ  ಎಂದು  ತಂದ  ಕಂಪ್ಯೂಟರ್  ಡೆಸ್ಕ್ ಟಾಪ್ ನಿಂದ  ಲ್ಯಾಪ್ ಟಾಪ್ ಗೆ  ಜಿಗಿಯಿತು .    ಲ್ಯಾಪ್ ಟಾಪ್ ನ  ಹೊಸ ಹೊಸ  ಅವತರಣಿಕೆಗಳು  ಮಾರ್ಕೇಟ್ ಗೆ  ಲಗ್ಗೆಯಿಡುತ್ತಿದ್ದಂತೆ  ನಮ್ಮ ಮನೆಗೂ  ಅದೆಲ್ಲಿಂದಲೋ  ಓಡಿ  ಬರ್ತಿದ್ವು .    ಗಳಿಗೆಗೊಂದು  ಥರ  ಬಣ್ಣ  ಬದಲಾಯಿಸುವ  ಗೋಸುಂಬೆಯಂತಹ  ಈ  ಯಂತ್ರಗಳನ್ನು  ನೋಡಿಯೇ  ನಾನು  ಸುಸ್ತು .   ವಾರಕ್ಕೊಮ್ಮೆ  ಮಗಳು  ತರುತ್ತಿದ್ದ  ಲೈಬ್ರರಿ  ಪುಸ್ತಕಗಳು ,  ' ಸುಧಾ '   ಖಾಯಂ ಸಂಗಾತಿಗಳಾಗಿಉಳಿದುವು .

" ಲ್ಯಾಪ್ ಟಾಪ್ ಗಿಂತ  ಹೆಚ್ಚಿನದು  ಬರ್ತಾ  ಇದೆ ,  ನೋಡ್ತಿರು .."  ನಮ್ಮವರು  ಆಗಾಗ  ಅನ್ತಿದ್ರು .   ಅದೂ  ಒಂದು  ದಿನ  ಬಂದಿತು .   ಅಮೇರಿಕೆಯಲ್ಲಿದ್ದ  ಶ್ಯಾಮ್  ಊರಿಗೆ  ಬರುವವನಿದ್ದ .  ಬರೋವಾಗ  ಐ - ಪ್ಯಾಡ್  ಕೊಂಡು  ತರಲು  ನಮ್ಮವರು  ಹೇಳಿದ್ದರು .   ಅವನೂ ತಂದೇ  ಬಿಟ್ಟ .   ಚಿನ್ನದ  ಅಲ್ಲಲ್ಲ ,   ವಜ್ರಾಭರಣದಂತೆ  ಅದನ್ನು  ಜೋಪಾನ  ಮಾಡುತ್ತಿದ್ದನ್ನು  ನೋಡಿದ್ರೆ ,  ಸಮಾನಮನಸ್ಕ  ಸ್ನೇಹಿತರಿಗೆ  ತೋರಿಸಿ ,  ವೈಶಿಷ್ಟ್ಯಗಳ  ವರ್ಣನೆ ಮಾಡುತ್ತಾ ಇರಬೇಕಾದರೆ ,  ನಾವ್ಯಾರೂ  ಮುಟ್ಟೋ  ಹಾಗೇ  ಇರ್ಲಿಲ್ಲ .   ಪುಟ್ಟ  ಮಕ್ಕಳ  ಸ್ಲೇಟಿನಂತಹ  ಈ  ಸಾಧನವನ್ನು  ಕರಗತ  ಮಾಡಿಕೊಳ್ಳಲು  ನಮ್ಮೆಜಮಾನ್ರು  ಹಾಗೂ  ಗಿರೀಶ್ ಆ  ಸಮಯದಲ್ಲಿ  ತುಂಬಾ  ಶ್ರಮ ಪಟ್ಟಿದ್ದಾರೆ .   ಸ್ವಯಂ ಸಾಧನೆಯಿಂದಲೇ  ತುದಿಬೆರಳಿನಿಂದ  ಅಂತರ್ಜಾಲದಲ್ಲಿ  ವಿಹರಿಸುತ್ತಿದುದನ್ನು  ನೋಡುತ್ತಲೇ ಬಂದೆ .   ಮಕ್ಕಳೂ  ಪಾದರಸ ವೇಗದಲ್ಲಿ  ಅಪ್ಪನನ್ನೂ  ಮೀರಿಸಿದರು .

                                      <><><>                       <><><>

" ರಜಾ.....ರಜಾ .. "  ಮಗಳು  ಕುಣಿಯುತ್ತ  ಮನೆಗೆ  ಬಂದಳು .

" ಪರೀಕ್ಷೆಗೆ  ಓದು "

" ಪರೀಕ್ಷೆಗೆ  ಇನ್ನೂ  ಎರಡು  ತಿಂಗಳಿದೆ ,   ಒಂದೊಂದು  ಪರೀಕ್ಷೆಗೂ  ವಾರಗಟ್ಳೆ  ಗ್ಯಾಪ್ ಇದೆಯಮ್ಮ ,  ಈಗಲೇ  ಓದಿದ್ರೆ  ಮರ್ತು ಹೋಗುತ್ತೆ "

ಮೂರು  ಬಸ್ಸು  ಬದಲಾಯಿಸಿ  ದಿನಾ  ಮಂಗಳೂರಿಗೆ  ಹೋಗಿ ಬಂದು ಮಾಡ್ತಿದ್ದಳು ,  ಹೀಗೆ  ಹೇಳೂದು  ಸಹಜವೇ .   ನಾಲ್ಕು ದಿನ  ವಿಶ್ರಾಂತಿ  ಪಡೆಯಲಿ  ಅಂತ  ಕೆಲವು  ದಿನ  ಸುಮ್ಮನಿದ್ದೆ .  ಇವಳ  ಎಕ್ಸಾಮ್  ಮುಗಿದು ,  ರಿಸಲ್ಟ್  ಬಂದು ,  ಅವಳ  ಆಯ್ಕೆಯ ವೃತ್ತಿಪರ ಕೋರ್ಸ್ ಆರಂಭ  ಆಗುವಷ್ಟರಲ್ಲಿ  ಇನ್ನೊಂದಾರು  ತಿಂಗಳಾದರೂ  ಆದೀತು ,  ಅಷ್ಟು ದಿನಗಳೂ  ನನ್ನ  ಪತ್ರಿಕೆಗಳು ಖೋತಾ .

ಕೆಲವು  ದಿನ  ಸುಮ್ಮನಿದ್ದೆ .   " ರಜಾ ಮಜಾ  ಅಂತ  ಮನೇಲೇ  ಇದ್ದೀಯಲ್ಲ ,  ಲೈಬ್ರರಿ  ಬುಕ್ಸ್  ಆದ್ರೂ  ತಂದ್ಕೊಡು "    ಅವಳು  ಕ್ಯಾರೇ  ಅನ್ನಲಿಲ್ಲ .   ನಮ್ಮವರೂ  " ಏನು  ಬೇಕಾದ್ರೂ  ಕಂಪ್ಯೂಟರ್ ನಲ್ಲಿ  ಓದಬಹುದು "  ಎಂದು  ಛೇಡಿಸಿದರು .

ಸಿಟ್ಟು  ಬಂದು  ಬಿಟ್ಟಿತು .   " ಹೌದೇ ,  ನಾನೂ  ಓದ್ತೀನಿ "  ಮಗಳ  ಮುಖ  ನೋಡಿದೆ .   ಅವಳೂ  ವಿಧಿಯಿಲ್ಲದೆ " ಹೀಗ್ಹೀಗೆ  ಮಾಡು "  ಎಂದು  ಬೆರಳನ್ನು  ಅತ್ತ ಇತ್ತ   ಐ - ಪ್ಯಾಡ್  ಮೇಲೆ  ಆಡಿಸಿ  ತೋರಿಸಿದಳು .    ಅಂತೂ  ಓದಲು  ಸಾಧನ  ದೊರೆಯಿತು .   ನೆಮ್ಮದಿ  ಸಿಕ್ಕಿತು .

ಮಗನೂ  ಬಂದ .   ಅವನದ್ದೂ  ಇಂಜಿನಿಯರಿಂಗ್  ಪರೀಕ್ಷೆ  ಮುಗಿದಿತ್ತು .  " ಅತ್ರಿ  ಬುಕ್ ಸೆಂಟರಿಂದ  ನಾನು ಹೇಳಿದ  ಪುಸ್ತಕ   ತಂದಿದ್ದೀಯಾ "  ನನ್ನ  ತನಿಖೆ .   " ಹೋಗಮ್ಮ ,  ಮನೆಗೆ  ಬಂದ ಕೂಡ್ಲೇ  ಶುರುವಾಯ್ತು  ನಿಂದು "  ರೇಗಾಡಿದ .

ನನ್ನ  ಪಾಡಿಗೆ  ಐ - ಪ್ಯಾಡ್  ಹಿಡಿದು ಕನ್ನಡಕ  ಮೂಗಿಗೇರಿಸಿ  ಓದುತ್ತಾ ಮಗ್ನಳಾಗಿದ್ದುದು  ಒಂದು  ದಿನ  ಮಗನ  ದೃಷ್ಟಿಗೆ ಬಿತ್ತು .   ಏನ್ ಮಾಡ್ತಿದಾಳೆ  ಅಂದ್ಕೊಂಡು  ಬಗ್ಗಿ ನೋಡಿದ .

" ಅಮ್ಮಂಗೊಂದು  ಫೇಸ್ ಬುಕ್  ಮಾಡ್ಕೊಡೇ "  ತಂಗಿಗೆ  ಆಜ್ಞಾಪಿಸಿದ . 

  ಅವಳು  ಆ  ಕೂಡಲೇ  ನನ್ನ ಕೈಲಿದ್ದ  ಐ - ಪ್ಯಾಡ್ ಅನ್ನು  ಕಿತ್ತುಕೊಂಡು  ತಟಪಟನೆ  ಬೆರಳಾಡಿಸುತ್ತಾ ,  ನನ್ನ  ಜಾತಕವನ್ನೂ  ಬರೆದು ಸಿದ್ಧ ಪಡಿಸಿ  ಕೊಟ್ಟೂ  ಆಯ್ತು .

ಮುಂದೇನಾಯ್ತಂತೆ ,
ನೀರಿಗಿಳಿದ ಮೀನಿನಂತೆ ,
ರೆಕ್ಕೆ ಬಲಿತ  ಹಕ್ಕಿಯಂತೆ,
ಕಾಲಿಗೆರಡು  ಚಕ್ರ  ಬಂದಂತೆ.....


Photo by : Vishnu Vijay

Posted via DraftCraft app

Saturday 6 October 2012

ಮುಳ್ಳುಸೌತೆಯ ರಸದೌತಣ



ಅಷ್ಟಮೀ  ಚೌತೀ  ಹಬ್ಬಗಳು  ಮುಗಿದಿವೆ.   ನವರಾತ್ರೀ ದಿನಗಳು  ಬರಲಿವೆ.    ದೀಪಾವಳಿಯೂ  ಬರಲಿದೆ.   ಈ  ಹೊತ್ತಿಗೆ  ಮನೆಯಂಗಳದ  ಮಳೆಗಾಲದ  ಇನ್ನಿತರ  ತರಕಾರಿಗಳು ಖಾಲಿಯಾಗಿಬಿಡುತ್ತವೆ.  ಆದರೆ  ಅಂಗಳದ  ಬದಿಯಲ್ಲಿ  ನಾಟಿ  ಮಾಡಿದ್ದಂತಹ  ಮುಳ್ಳುಸೌತೆ ಬಳ್ಳಿಗಳು  ಸೊಗಸಾಗಿ  ಬೆಳೆದು,   ಹುಲುಸಾಗಿ  ಚಪ್ಪರದಲ್ಲಿ  ಏರಿ  ಫಲ  ನೀಡಲು ಆರಂಭಿಸುತ್ತ  ಇವೆಯಲ್ಲ !   ಗೃಹಿಣಿಯಾದವಳು  ಈ  ತರಕಾರಿಯನ್ನು  ತನ್ನ  ದಾಸ್ತಾನು ಕೋಣೆಯಲ್ಲಿ  ಭದ್ರವಾಗಿ  ಇರಿಸಿಕೊಳ್ಳುತ್ತಾಳೆ.   ಒಂದು  ಮುಳ್ಳುಸೌತೆ  ಏನಿಲ್ಲವೆಂದರೂ  ನಾಲ್ಕರಿಂದ  ಐದು  ಕಿಲೋ  ಆದರೂ ಇರುತ್ತದೆ.    ತಿಂಡಿಯ  ಹೊತ್ತಿಗೆ  ದೋಸೆಯಿಂದ  ಪ್ರಾರಂಭವಾದರೆ,  ಊಟದ  ಟೇಬಲ್  ಮೇಲೆ  ಸಲಾಡ್,  ಸಳ್ಳಿ,  ಗೊಜ್ಜು  ಇನ್ನು  ಏನೇನೋ  ಐಟಂಗಳು  ಸಿದ್ಧವಾಗಲಿವೆ.   ಹಾಗಾಗಿ ಮುಳ್ಳುಸೌತೆ  ಚಪ್ಪರದ  ಕಾಳಜಿ  ವಹಿಸುವುದು  ಅನಿವಾರ್ಯ. 

  ಮನೆಮಂದಿಯನ್ನು  ನಂಬುವಂತಿಲ್ಲ.   ಆಚೆ ಈಚೆ  ಹೋಗುವ  ಕೆಲಸದಾಕೆ  ಕಲ್ಯಾಣಿಯನ್ನೂ  ನಂಬುವಂತಿಲ್ಲ.

   " ನಿನ್ನೆ  ಇದ್ದ  ಮುಳ್ಳುಸೌತೆ ಮಿಡಿ  ಕಾಣಿಸ್ತಾ  ಇಲ್ಲ,  ಏನಾಯ್ತು "  ಕೇಳುವಂತಿಲ್ಲ.

" ರಾತ್ರಿ  ಹೊತ್ತಿಗೆ  ನರಿ  ಕೊಂಡ್ಹೋಗಿರಬೇಕು "  ಅನ್ನೋ  ಸಿದ್ಧ  ಉತ್ತರ  ಅವಳಿಂದ  ಬಂದೇ ಬರುತ್ತದೆ.   ಅದೆಲ್ಲ  ಇರಲೀ,





2  ಕಪ್  ಬೆಳ್ತಿಗೆ  ಅಕ್ಕಿ  ನೆನೆ  ಹಾಕಿ.   ಎಳೆ  ಮುಳ್ಳುಸೌತೆಯಾದರೆ  ಸಿಪ್ಪೆ  ತೆಗೆಯದೇ  ತುರಿದು  ಇಟ್ಟುಕೊಳ್ಳಿ.   ಬಲಿತದ್ದಾದರೆ  ಸಿಪ್ಪೆ  ಹಾಗೂ  ಬೀಜಗಳನ್ನು  ತೆಗೆದು  ತುರಿಯಿರಿ.    ಮುಳ್ಳುಸೌತೆ ತುರಿ  ಹಾಗೂ  ಅಕ್ಕಿಯನ್ನು  ನುಣ್ಣಗೆ  ಅರೆಯಿರಿ.   ಬೇರೆ  ನೀರು  ಹಾಕಬೇಕಾದ  ಅವಶ್ಯಕತೆಯಿಲ್ಲ.   ಹುಳಿ  ಬರಬೇಕಾಗಿಲ್ಲ.   ಕಾವಲಿಯಲ್ಲಿ  ನೀರುದೋಸೆಯಂತೆ  ಎರೆದರಾಯಿತು.   ಘಮಘಮಿಸುವ ದೋಸೆ  ಸಿದ್ಧ. 

  ದೋಸೆ  ತಯಾರಿಸಿ  ಮಿಕ್ಕುಳಿದ  ಹಿಟ್ಟಿಗೆ  ಬೆಲ್ಲ  ಪುಡಿ  ಮಾಡಿ  ಹಾಕಿಡಿ.   ಸಂಜೆಯ ವೇಳೆ  ಸಿಹಿ ದೋಸೆ  ತಯಾರಿಸಿ.

2  ಕಪ್  ಅಕ್ಕಿ,   1  ಚಮಚ  ಮಂತ್ಯ,   ಅರ್ಧ ಕಪ್  ಉದ್ದಿನಬೇಳೆ  ನೆನೆಸಿಟ್ಟು  2  ಕಪ್  ಮುಳ್ಳುಸೌತೆ ತುರಿ  ಸೇರಿಸಿ  ಸಂಜೆ ವೇಳೆ  ದೋಸೆ ಹಿಟ್ಟು  ಮಾಡಿಟ್ಟುಕೊಳ್ಳಿ.   ರುಚಿಗೆ  ಉಪ್ಪು  ಹಾಕಿ  ಮುಚ್ಚಿ  ಇಡಿ.   ಮಾರನೇ ದಿನ  ಉದ್ದಿನ ದೋಸೆಯಂತೆ  ಎರೆಯಿರಿ. 

ಗುಳಿಯಪ್ಪ  ( ಪಡ್ಡು )   ಹೀಗೆ  ಮಾಡಿಕೊಳ್ಳಿ,   ಮೇಲೆ  ಹೇಳಿದಂತೆ  ಹಿಟ್ಟು  ತಯಾರಿಸಿ.   ಸಿಹಿ ಸಿಹಿಯಾಗುವಷ್ಟು  ಬೆಲ್ಲ  ಪುಡಿ  ಹಾಕಿ  ಒಲೆಯ  ಮೇಲಿಡಿ.   ಇಡ್ಲಿ  ಹಿಟ್ಟಿನ  ಹದಕ್ಕೆ  ಬಂದೊಡನೆ  ಕೆಳಗಿಳಿಸಿ.   ಅಪ್ಪದ   ಕಾವಲಿಯನ್ನು  ಉರಿಯಲ್ಲಿಟ್ಟು  ಎಲ್ಲಾ  ಗುಳಿಗಳಿಗೂ  ತುಪ್ಪ  ಎರೆಯಿರಿ.  ಬಿಸಿಯಾಗುತ್ತಿದ್ದಂತೆ  ಚಿಕ್ಕ ಸೌಟಿನಲ್ಲಿ  ಗುಳಿ  ಮುಳುಗುವಷ್ಟು  ಹಿಟ್ಟನ್ನು  ಎರೆದು  ಸಣ್ಣ  ಉರಿಯಲ್ಲಿ  ಮುಚ್ಚಿ  ಬೇಯಿಸಿ.  ತುಪ್ಪದ  ಶಾಖದಲ್ಲಿ  ಬೆಂದಂತೆ  ಚಮಚದಿಂದ  ಎಬ್ಬಿಸಿ  ಕವುಚಿ ಹಾಕಿ.  ಹಿಗೆ  ಎರಡೂ  ಬದಿ  ಕೆಂಪಗಾದ  ಅಪ್ಪಗಳನ್ನು  ತಗೆದಿರಿಸಿ.

ಕಡುಬು  ಮಾಡೋಣ,   ಮುಂಜಾನೆಯ  ತಿಂಡಿಯ  ಹೊತ್ತಿಗೆ  ಹತ್ತರಿಂದ  ಹದಿನೈದು  ಮಂದಿಯಾದರೂ  ಇದ್ದರೆ  ಹೀಗೆ   ' ಮುಳ್ಳುಸೌತೆ  ಕೊಟ್ಟಗೆ '   ಮಾಡುವ  ರೂಢಿ  ಇದೆ.   ಇದಕ್ಕೆ  ಬೆಳ್ತಿಗೆ  ಅಕ್ಕಿ ತರಿಯನ್ನು  ಮುಳ್ಳುಸೌತೆ ತುರಿಯೊಂದಿಗೆ  ಬೆರೆಸಿ,  ಬಾಡಿಸಿದ  ಬಾಳೆಲೆಯಲ್ಲಿ  ಎರೆದು  ಹಬೆಪಾತ್ರೆಯಲ್ಲಿ  ನೀರು  ಕುದಿಯುತ್ತಿದ್ದಂತೆ  ಇಟ್ಟು  ಬೇಯಿಸಬೇಕು.    ಇದಕ್ಕೂ  ಬೆಲ್ಲ,  ತೆಂಗಿನತುರಿ, ಏಲಕ್ಕಿ  ಕೂಡಾ  ಹಾಕಿದರೆ  ಹೆಚ್ಚು  ಚೆನ್ನಾಗಿರುತ್ತದೆ.    ಬಾಳೆಲೆ  ಸಿಗದಿದ್ದರೆ  ಬೇಡ,  ಇಡ್ಲಿ  ಮಾಡಿ.   2  ಕಪ್  ಅಕ್ಕಿತರಿಗೆ   2  ಬಟ್ಟಲು ತುರಿ ಹಾಕಿದ್ರೆ  ಸಾಕು.    ದೀಪಾವಳಿಗೆ  ಗೋಪೂಜೆ  ಮಾಡ್ತೀವಲ್ಲ,  ಆಗ  ಮನೆಯ  ಮುದ್ದಿನ  ಹಸುಗಳಿಗೆ  ಕುಂಕುಮದ  ತಿಲಕವಿಟ್ಟು,  ಹೂಮಾಲೆ  ತೊಡಿಸಿ,  ಆರತಿ  ಬೆಳಗಿ,   ಮುಳ್ಳುಸೌತೆ  ಕೊಟ್ಟಿಗೆ  ತಿನ್ನಿಸುವ  ಸಂಪ್ರದಾಯವಿದೆ.




ಮುಳ್ಳುಸೌತೆ  ಪಾಯಸ :


ಯಾವುದೇ  ಪಾಯಸವಾಗಲೀ,   ತೆಂಗಿನಕಾಯಿ  ಹಾಲು  ಅವಶ್ಯ.   ಮೊದಲು  ಕಾಯಿಹಾಲು ಮಾಡಿಕೊಳ್ಳಿ.   " ಹೇಗೇ ..."  ಅಂತೀರಾ,   ಮಿಕ್ಸೀಯ ಜಾರಿನೊಳಗೆ ಕಾಯಿತುರಿ  ತುಂಬಿಸಿ  ಅವಶ್ಯವಿದ್ದಷ್ಟು  ನೀರು  ಎರೆದು  ಕಡೆದು  ತೆಗೆಯಿರಿ,  ನುಣ್ಣಗಾಗಬೇಕೆಂದೇನೂ  ಇಲ್ಲ.   ಶುಭ್ರವಾದ  ಬಟ್ಟೆಯಲ್ಲಿ  ಜಾಲಿಸಿ,  ಹಿಂಡಿ  ಹಾಲು  ತೆಗೆದಿರಿಸಿ.   ಇದು  ದಪ್ಪ  ಹಾಲು.   ಅದೇ  ಕಾಯಿ ಚರಟಕ್ಕೆ  ಇನ್ನೊಮ್ಮೆ  ನೀರು  ಎರೆದು  ಪುನಃ  ಕಾಯಿಹಾಲು  ತೆಗೆಯಿರಿ.  ಇದು  ತೆಳ್ಳಗಿನ  ಹಾಲು. 

  ಒಂದು ಹದ ಗಾತ್ರದ  ಮುಳ್ಳುಸೌತೆ  ತುರಿಯನ್ನು  ಈ  ತೆಳ್ಳಗಿನ  ಕಾಯಿಹಾಲಿನಲ್ಲಿ  ಬೇಯಿಸಿ.   
ಒಂದು  ಚಿಕ್ಕ  ಬಟ್ಟಲು ಅಕ್ಕಿ ಹಿಟ್ಟು  ಹಾಕಿ ಪುನಃ  ಬೇಯಿಸಿ,  ಗಂಟು ಕಟ್ಟದಂತೆ ನೋಡಿಕೊಳ್ಳಿ.  ಕುದಿಯುತ್ತಿದ್ದಂತೆ   ದಪ್ಪವಾದೊಡನೆ  ಸಿಹಿಯಾಗುವಷ್ಟು  ಬೆಲ್ಲ  ಹಾಕಿ.

ಬೆಲ್ಲ  ಕರಗಿ  ಕುದಿಯಲು ಸುರುವಾಯಿತೇ,  ಈಗ  ದಪ್ಪ ಕಾಯಿಹಾಲು  ಎರೆದು  ಏಲಕ್ಕಿ ಪುಡಿ  ಉದುರಿಸಿ.
ಒಂದು  ಕುದಿ ಬಂದ ಕೂಡಲೇ  ಕೆಳಗಿಳಿಸಿ.   ಸವಿ ಸವಿ  ಪಾಯಸ  ಸಿದ್ಧ.
ನವರಾತ್ರಿಯ  ದಿನಗಳಲ್ಲಿ   ಈ ಪಾಯಸಕ್ಕೆ  ಆದ್ಯತೆ.  ನೆಂಟರಿಷ್ಟರು  ಬಂದರು  ಅಂತಿಟ್ಕೊಳ್ಳಿ,  ದುಬಾರಿ ಕ್ರಯದ  ಬೇಳೆಕಾಳುಗಳ  ಪಾಯಸ  ಮಾಡಬೇಕಾಗಿಲ್ಲ,  ಇದು  ಬೇಗನೇ  ಆಗುವಂಥಾದ್ದು.  ಶರೀರಕ್ಕೂ  ಹಿತ.

ಟೀವಿ  ಅಡುಗೆ  ಕಾ೧್ಯಕ್ರಮಗಳಲ್ಲಿ  ಪಾಯಸ  ಮಾಡೋರು  ಪ್ಯಾಕೆಟ್  ಹಾಲು  ಹಾಕುವುದನ್ನು  ನೋಡಿದ್ದೇನೆ.   ತೆಂಗಿನಕಾಯಿ ಹಾಲಿನಿಂದ  ಮಾಡಿದ  ಪಾಯಸದ  ರುಚಿಗೆ  ಯಾವುದೂ  ಸಾಟಿಯಿಲ್ಲ.




ಇನ್ನು  ಊಟದ  ಜತೆಗಿನ  ವ್ಯಂಜನಗಳು,   ಇವುಗಳನ್ನು  ಕುದಿಸುವ  ಅವಶ್ಯಕತೆಯಿಲ್ಲ.   ಧಿಡೀರನೆ  ಮಾಡುವಂತಹವು.   ಎಳೆ  ಮುಳ್ಳುಸೌತೆಯನ್ನು  ಸಣ್ಣಗೆ ಹಚ್ಚಿ  ಅಥವಾ  ತುರಿದು  ಹಸಿಮೆಣಸು,  ಶುಂಠಿ,  ಉಪ್ಪು  ಬೆರೆಸಿದರಾಯಿತು.  ಇದು  ' ಸಳ್ಳಿ '.    ಇದಕ್ಕೆ  ಮೊಸರು  ಬೆರೆಸಿ  ಒಗ್ಗರಣೆ  ಕೊಟ್ಟಲ್ಲಿ  ' ಗೊಜ್ಜು '.    ಬೇಕಿದ್ರೆ  ತೆಂಗಿನತುರಿ  ರುಬ್ಬಿ  ಹಾಕಬಹುದು.  ತೆಂಗಿನತುರಿಯೊಂದಿಗೆ  ಸಾಸಿವೆ  ರುಬ್ಬಿ ಹಾಕುವುದು ಮತ್ತೊಂದು  ವೈವಿಧ್ಯ.  ತೆಂಗಿನತುರಿಯೊಂದಿಗೆ ಸಾಸಿವೆ,  ಅರಸಿನಹುಡಿ,  ಮೆಣಸಿನಹುಡಿ  ರುಬ್ಬಿದ  ಮಸಾಲೆ   ಹಾಕಿದ್ರೆ  'ಉಪ್ಪಿನಕಾಯಿ  ಗೊಜ್ಜು '  ಆಗಿ ಹೋಯಿತು.   ಎಳೆ ಮುಳ್ಳುಸೌತೆ,  ಟೊಮೇಟೋ,  ಶುಂಠಿ,  ಹಸಿಮೆಣಸು,  ಕ್ಯಾರೆಟ್ ಇತ್ಯಾದಿಗಳ ಮಿಶ್ರಣ  ' ಸಲಾಡ್ ',   ಸಣ್ಣಗೆ ಹಚ್ಚಿಕೊಂಡು  ಉಪ್ಪು  ಬೆರೆಸಿ  ತುಪ್ಪದಲ್ಲಿ  ಒಗ್ಗರಣೆ  ಕೊಟ್ಟು ಬಿಡಿ.   ಮುಳ್ಳುಸೌತೆ  ತಿರುಳನ್ನು  ಬಿಸುಡಬೇಕಾಗಿಲ್ಲ.   ತೆಂಗಿನತುರಿ,  ಸಾಸಿವೆ, ಹಸಿಮೆಣಸು,  ಉಪ್ಪಿನೊಂದಿಗೆ  ರುಬ್ಬಿ  ದೊಡ್ಡ ಸೌಟು  ಸಿಹಿ ಮಜ್ಜಿಗೆ  ಎರೆದು ಒಗ್ಗರಣೆ  ಕೊಟ್ಟು ಬಿಡಿ.   ಇದು ನಮ್ಮೂರಿನ  ಆಡು ಭಾಷೆಯ  ' ಕೊಂಡಾಟ '.    ಇವನ್ನೆಲ್ಲ  ಊಟದ  ಹೊತ್ತಿಗೆ  ಅಗತ್ಯವಿದ್ದಷ್ಟೇ  ಮಾಡಿದರೆ  ಸಾಕು.    ಸಾಂಬಾರು,  ಮಜ್ಜಿಗೆ ಹುಳಿ,   ಬೋಳು ಹುಳಿ,  ಪಲ್ಯ  ವಗೈರೆಗಳನ್ನು  ಮಾಡಬಹುದು.   ಆದರೂ  ಊಟದ  ಜತೆ  ವ್ಯಂಜನವಾಗಿ  ಹಸಿಯಾಗಿಯೇ ಬಳಕೆ  ರೂಢಿಯಲ್ಲಿದೆ.



ಈ  ಬಳ್ಳಿ  ತರಕಾರಿ,  ಅಪ್ಪಟ  ಭಾರತೀಯ  ಸಸ್ಯ.   ವೈಜ್ಞಾನಿಕವಾಗಿ  Cucumis sativus   ಎಂದು  ಹೆಸರಿಸಿಕೊಂಡಿದೆ.   ನೂರಕ್ಕೆ  ಶೇಕಡಾ  ತೊಂಬತ್ತರಷ್ಟು  ನೀರಿನಂಶವಿರುವ  ತರಕಾರಿ,   ಬಿರು ಬೇಸಿಗೆಯಲ್ಲಿ  ಶರೀರಕ್ಕೆ  ತಂಪು ತಂಪು ...   ಚರ್ಮದ  ಕಾಂತಿ  ವರ್ಧಕ,  ಕಣ್ಣುಗಳ  ಹೂಳಪು  ರಕ್ಷಕ.

ಒಂದು  ನೈಸರ್ಗಿಕ  ಆಂಟಿ ಓಕ್ಸಿಡೆಂಟ್,  ವಿಜ್ಞಾನಿಗಳ  ಅಭಿಮತದಂತೆ  ಹೃದಯರೋಗಗಳು,  ಕ್ಯಾನ್ಸರ್ ಹಾಗೂ  ವಯಸ್ಸಾದಂತೆ  ಚರ್ಮ  ಸುಕ್ಕುಗಟ್ಟುವುದನ್ನು   ತಡೆಗಟ್ಟುವಲ್ಲಿ  ಈ  ಆಂಟಿ ಓಕ್ಸಿಡೆಂಟ್ ಗಳು  ಮಹತ್ವದ  ಪಾತ್ರ  ವಹಿಸಿವೆ.    ವಿಟಾಮಿನ್ C ,  ಬಿಟಾ - ಕೆರೋಟಿನ್ ಹಾಗೂ  ಮ್ಯಾಂಗನೀಸ್  ಇದರಲ್ಲಿ  ಹೇರಳವಾಗಿರುವುದೇ  ಮುಖ್ಯ  ಕಾರಣ.



  ಚೆನ್ನಾಗಿ  ಬಲಿತ  ಕಾಯಿಗಳನ್ನು  ಸಂಗ್ರಹಿಸಿ  ದಾಸ್ತಾನು  ಮಾಡಿಕೊಳ್ಳಬಹುದು.  ಗ್ರಾಮೀಣ  ಪ್ರದೇಶಗಳಲ್ಲಿ  ಈ  ಪದ್ಧತಿ  ಹಿಂದಿನಿಂದಲೂ  ನಡೆದುಕೊಂಡು  ಬಂದಿದೆ.  ದೊಡ್ಡ  ಜಾತಿ, ಚಿಕ್ಕದು,  ಕೆಂಪು ತಿರುಳಿನದು, ನಮ್ಮೂರಿನ  ಆಡುನುಡಿಯಲ್ಲಿ  ' ಚಕ್ಕರ್ಪೆ ' ಯಾಗಿರುವ  ಮುಳ್ಳುಸೌತೆಯಲ್ಲಿ  ಬೇರೆ ಬೇರೆ  ವೆರೈಟಿಗಳಿವೆ.   ಈಗ  ಮಾರುಕಟ್ಟೆಯಲ್ಲಿ  ವರ್ಷವಿಡೀ  ಸಿಗುವುದಾದರೂ  ನಾವು  ಮನೆಯಲ್ಲಿ  ನೆಟ್ಟು  ಮಾಡಿದ  ಫಲದ  ರುಚಿ  ಅದಕ್ಕಿಲ್ಲ,  ಸಂಗ್ರಹಿಸಿ  ಇಡಲೂ  ಆಗುವುದಿಲ್ಲ,  ಕೊಂಡು  ತಂದ  ದಿನವೇ  ಕೆಟ್ಟೂ ಹೋಗಿರುತ್ತದೆ.   ಹಿಂದಿನಂತೆ  ಗ್ರಾಮೀಣ  ಪ್ರದೇಶಗಳಲ್ಲಿ  ತರಕಾರೀ ಕೃಷಿ  ಈಗ  ನಡೆಯುತ್ತಿಲ್ಲ.   ಕೃಷಿ  ಕಾರ್ಮಿಕರ  ಅಲಭ್ಯತೆ,  ಕೃಷ್ಯುತ್ಪನ್ನಗಳಿಗೆ  ಸೂಕ್ತ ದರ  ಸಿಗದಿರುವುದು,  ಯುವ ಜನಾಂಗ  ಕೃಷಿಯಲ್ಲಿ  ನಿರಾಸಕ್ತಿ  ತಾಳಿರುವುದು,    ಫಲವತ್ತಾದ  ಕೃಷಿಭೂಮಿ  ಇನ್ನಿತರ  ವಾಣಿಜ್ಯ  ಉದ್ದೇಶಗಳಿಗೆ  ಬಳಕೆ,  ಹೀಗೇ  ಏನೇನೋ  ಕಾರಣಗಳು ...


ಫೋಟೋ  ಕೃಪೆ :  ಶಂಕರನಾರಾಯಣ ಭಟ್.

Posted via DraftCraft app