ಹಲಸಿನ ಸೋಂಟೆ ಮಾಡಿದ್ದೂ ಆಯ್ತು, ಡಬ್ಬದಲ್ಲಿ ಭದ್ರವಾಗಿ ಮುಚ್ಚಿಟ್ಟೂ ಆಯಿತು. ಇನ್ನಷ್ಟು ಹಲಸಿನ ಸೊಳೆಗಳು ನಮ್ಮನ್ಯಾರೂ ಕೇಳೋರಿಲ್ವೇ ಅಂತಿದ್ದ ಹಾಗೇ ಮುಂಜಾನೆಯ ದೋಸೆಹಿಟ್ಟು ಹಲಸಿನ ಸೊಳೆಗಳಿಂದಲೇ ತಯಾರಾಯಿತು.
ಕೇವಲ ಹಲಸಿನ ಸೊಳೆಗಳನ್ನಷ್ಟೇ ಅರೆದು ದೋಸೆ ತಯಾರಿಸಬಹುದಾದ ಗುಣಮಟ್ಟದ ಹಲಸಿನ ಜಾತಿಗಳೂ ಇವೆ. ನಿಸರ್ಗವನ್ನು ಇಂಚಿಂಚಾಗಿ ಕಳೆದುಕೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಲಸಿನಲ್ಲಿರುವ ಜಾತಿ ವೈವಿಧ್ಯಗಳನ್ನು ಉಳಿಸುವ ಪ್ರಯತ್ನ ಆಗಬೇಕಾಗಿದೆ.
ಈಗ ಮೂರು ಪಾವು ಬೆಳ್ತಿಗೆ ಅಕ್ಕಿ ನೆನೆ ಹಾಕಿಟ್ಟಿರಿ.
ಹಲಸಿನ ಸೊಳೆಗಳನ್ನು ಆಯ್ದು ಇಟ್ಟಿದ್ದೀರಾ, ಮಿಕ್ಸಿಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ತುರುಕಿ ಅರೆಯಿರಿ, ಹುಡಿಹುಡಿ ಆಯ್ತೇ,
ಮೂರು ಕಪ್ ಅಕ್ಕಿಗೆ ಈ ಥರ ಮೂರು ಬಾರಿ ಹುಡಿ ಮಾಡಿಟ್ಟ ಹಲಸಿನ ಸೊಳೆಗಳು - ಇದು ಅಳತೆ.
ರುಚಿಗೆ ತಕ್ಕಷ್ಟು ಉಪ್ಪು.
ಅಕ್ಕಿಯನ್ನು ಚೆನ್ನಾಗಿ ತೊಳೆದು ಅವಶ್ಯವಾದ ನೀರಿನೊಂದಿಗೆ ನುಣ್ಣಗೆ ಅರೆದು, ಹಲಸಿನ ಹಿಟ್ಟನ್ನೂ ಹಾಕಿಕೊಂಡು ಇನ್ನೊಮ್ಮೆ ಅರೆದು ತೆಗೆಯಿರಿ. ಮಿಕ್ಸೀಯಲ್ಲಿ ಒಂದೇ ಬಾರಿ ಹಾಕಿ ಅರೆಯಲು ಸಾಧ್ಯವಾಗದು. ನೀರು ಸಿಕ್ಕಾಪಟ್ಟೆ ಕೂಡಿಸದಿರಿ, ಹಿಟ್ಟು ದಪ್ಪಗಾಗಿ ಇಡ್ಲಿ ಹಿಟ್ಟಿನ ಸಾಂದ್ರತೆ ಬಂದಿರಬೇಕು.
ಈ ಹಿಟ್ಟು ಹುಳಿ ಬರುವಂತಿಲ್ಲ, ತಣ್ಣಗಿನ ಜಾಗದಲ್ಲಿ ಇಟ್ಟುಕೊಳ್ಳಿ. ಸಂಜೆ ಅರೆದಿಟ್ಟೀರಾದರೆ ರಾತ್ರಿ ದೋಸೆ ತಿನ್ನಬಹುದು,
ಕಾಯಿಸೊಳೆ ದೋಸೆಗೆ ಜೇನು ಕೂಡಿ ತಿನ್ನಲು ಸೊಗಸು. ಜೇನು ಇಲ್ಲವಾದರೆ ಬೆಲ್ಲದ ದ್ರಾವಣವೂ ಆದೀತು. ಬೆಲ್ಲದ ದ್ರಾವಣವನ್ನು ನಮ್ಮೂರ ಕಡೆ 'ರವೇ' ಅನ್ನೋ ವಾಡಿಕೆಯಿದೆ. ನನ್ನ ಮಗಳಂತೂ ಅದೇನೇ ತಿಂಡಿಯಿರಲಿ, ಈ ರವೆ ಇಲ್ಲದೆ ತಿನ್ನುವವಳಲ್ಲ.
" ಆಯ್ತೂ, ಬೆಲ್ಲದ ದ್ರಾವಣ ( ರವೆ ) ಮಾಡೋದು ಹೇಗೇ ?"
ಬೆಲ್ಲದ ಹುಡಿ ಒಂದು ಲೋಟ ಇದೆ, ಅರ್ಧ ಲೋಟ ನೀರು ಕೂಡಿ, ಕುದಿಸಿ. ಬೆಲ್ಲ ಕರಗಿ ಕುದಿದು ಜೇನಿನಂತಹ ದ್ರವ ಆಗುವ ತನಕ ಒಲೆಯಲ್ಲಿಟ್ಟಿರಿ. ಆರಿದ ನಂತರ ಜಾಡಿಯಲ್ಲಿ ತುಂಬಿಸಿ ಬೇಕಿದ್ದಾಗ ತಿಂಡಿಯ ತಟ್ಟೆಗೆ ಎರೆದುಕೊಂಡು ತಿನ್ನುವುದು. ಜೇನಿನಂತೆ ದೀರ್ಘ ಬಾಳ್ವಿಕೆ ಇದಕ್ಕಿಲ್ಲ, ಒಂದೆರಡು ದಿನ ಉಪಯೋಗಿಸಬಹುದಷ್ಟೇ, ನಿಯಮಿತವಾದ ಉಪಯೋಗ ಇದ್ದಲ್ಲಿ ಮಾತ್ರ ಮಾಡಿಟ್ಕೊಳ್ಳಬಹುದು, ಇಲ್ಲಾಂದ್ರೆ ದಂಡವಾದೀತು.
ಹಲಸಿನ ಕಾಯಿ ದೋಸೆಯನ್ನು 'ಕಾಯಿಸೊಳೆ ದೋಸೆ' ಎಂದೇ ಹೇಳುವ ವಾಡಿಕೆ ನಮ್ಮದು. ಉದ್ದಿನ ದೋಸೆಯನ್ನು ತೆಳ್ಳಗೆ ಕಾಗದದ ಹಾಗೆ ಎರೆದು ತಿನ್ನಲಾಗುವಂತೆ ಇದನ್ನೂ ಎರೆದರೆ ರುಚಿಕರವಾಗಿರುತ್ತದೆ. ತವಾ ಅಥವಾ ಕಾವಲಿ ಬೆಚ್ಚಗಾಯಿತೇ, ಎಣ್ಣೆ ಸವರೋದು ಬೇಡ, ಹಾಗೇನೇ ಎರೆದು ಹರಡಿದರಾಯಿತು. ಗರಿಗರಿಯಾದಾಗ ತಾನಾಗಿಯೇ ಎದ್ದು ಬರುವ ಕಾಯಿಸೊಳೆ ದೋಸೆಯನ್ನು ತಿನ್ನಲು ಚಟ್ಣಿ ಕೂಡಾ ಇರಲಿ. ಬಿಸಿ ಬಿಸಿ ಫಿಲ್ಟರ್ ಕಾಫಿ ಹೀರುತ್ತಾ, ತೆಂಗಿನ ಚಟ್ಣಿಯೊಂದಿಗೆ, ಜೇನುತುಪ್ಪ, ಮೊಸರು ಇತ್ಯಾದಿಗಳನ್ನೂ ಕೂಡಿ ಸವಿಯಿರಿ.
ಗಮನಿಸಿ, ಹಲಸಿನ ಸೊಳೆಗಳು ಜಾಸ್ತಿ ಹಾಕಿದ್ದೀರಾ, ದೋಸೆ ಮೆತ್ತಗಾದೀತು, ಕಾವಲಿಯಿಂದ ಎಬ್ಬಿಸಲೂ ಕಷ್ಟವಾದೀತು. ಅಕ್ಕಿ ಹೆಚ್ಚಾದ್ರೂ ದೋಸೆ ಒಣಕಲಿನಂತಾದೀತು. ಸಾಧ್ಯವಿದ್ದಷ್ಟು ಸಮಾನ ಅಳತೆಯಲ್ಲಿ ದೋಸೆಹಿಟ್ಟು ತಯಾರಾದರೆ ಉತ್ತಮ.
0 comments:
Post a Comment