" ಮಧು ಬರ್ತಿದಾನಂತೆ "
" ಯಾಕಂತೆ, ಮೊನ್ನೆ ಬಂದು ಹೋಗಿದ್ದಲ್ಲವೇ, ಈಗೆಂತ ಅರ್ಜೆಂಟು ?"
" ಅದೇ ಕೆಮ್ಮು, ಶೀತ, ತಲೆನೋವು ಅಂತಿದ್ನಲ್ಲ ನಿನ್ನೆ, ನೀನು ಕೇಳಿಲ್ವಾ "
" ಸರಿ ಹೋಯ್ತು, ಒಂದು ಕಫ್ ಸಿರಪ್ ಬಾಟಲ್ ತಂದಿಟ್ಕೊಳ್ಳಲು ಹೇಳ್ಬೇಕಾಗಿತ್ತು "
ಆ ಹೊತ್ತಿಗೆ Viber apps ಫೋನ್ ಮೊಳಗಿತು. " ನಾನು ಹೊರಟಾಯ್ತು, ಬಸ್ ಹತ್ತಿ ಆಯ್ತು... ಮಲಗೂದಿಕ್ಕೆ ರೆಡೀ ಮಾಡಿಡು. ಕಹಿಬೇವಿನಸೊಪ್ಪು ಹಾಸಿಗೆ ಮೇಲೆ ಹಾಕಿಟ್ಟಿರು "
" ಓ, ನಿನ್ನ ಫ್ರೆಂಡ್ ಗೆ ಬಂದಿದ್ದು ನಿಂಗೂ ಬಂತಾ, ಏನ್ ಕರ್ಮ, ಎಲ್ಲಾ ವ್ಯಾಕ್ಸೀನ್, ಡ್ರಾಪ್ಸ್ ಚಿಕ್ಕೋನಿದ್ದಾಗ ಕೊಡ್ಸಿದ್ದು ವ್ಯರ್ಥ ಆದಂಗಾಯ್ತು..... ಬರುವಾಗ ಬೇಕಾಗಿರುವ ಔಷಧಿಗಳನ್ನೂ ಹಿಡ್ಕೊಂಡೇ ಬಾ "
" ಅದೆಲ್ಲ ಇದೇ, ನೀನು ಕಹಿಬೇವಿನಸೊಪ್ಪು ರೆಡೀ ಮಾಡಿಡು "
" ಇಲ್ಲಿರೋ ಕಹಿಬೇವಿನ ಮರ ಸತ್ಹೋಗಿದೆ, ನೀನು ಬೆಂಗ್ಳೂರಿಂದ ಬರ್ತಾ ಇದೀಯಲ್ಲ, ಅದನ್ನೂ ಹಿಡ್ಕೋ "
" ನಂಗೆ ಜ್ವರ ಬರ್ತಾ ಇದೆ.... ಎಲ್ಲೀಂತ ಹುಡುಕಲೀ, ಅದೆಲ್ಲ ನೀನೇ ನೋಡ್ಕೋ "
ನಮ್ಮವರ ಬಳಿ ಕಹಿಬೇವಿನ ವಿಚಾರ ತೆಗೆದ ಕೂಡಲೇ " ಅದ್ಯಾಕೆ ಅಷ್ಟು ಚಿಂತೆ ಮಾಡ್ತೀಯ, ತೋಟದಲ್ಲಿ ಬೇಕಾದಷ್ಟು ಬೇವಿನಸೊಪ್ಪು ಇದೆಯಲ್ಲ "
" ಇಲ್ಲಿರೂದು ಕರಿಬೇವು, ಈಗ ಬೇಕಾಗಿರೂದು ಕಹಿಬೇವು "
" ಅದೆಲ್ಲ ನಂಗೊತ್ತಿಲ್ಲ " ಅಂತಂದು ಇವರು ಅಲ್ಲಿಂದೆದ್ದು ಹೋದರು.
ರಾತ್ರಿಯಾಗ್ಬೇಕಾದ್ರೇ ಮಗ ಮನೆಗೆ ಬಂದ. ಇವರೇ ಪುತ್ತೂರುವರೆಗೆ ಬೈಕು ಓಡಿಸಿ ಕರಕೊಂಡು ಬಂದರು.
" ಈಗ ಊಟ ಮಾಡಿ ಮಲಗೂದು, ಕಹಿಬೇವು ಎಲ್ಲಿದೆ ?"
" ನಾಳೆ ತರಿಸುವಾ, ಈಗ ನೀನು ತಂದಿರೋ ಕ್ರೀಮು ಹಚ್ಚೋಣ " ಅವನಿಗೆ ಪ್ರಿಯವಾದ ಕುಚ್ಚುಲಕ್ಕಿ ಗಂಜಿಯೂಟ ದೊರೆಯಿತು.
ಮಾರನೇ ದಿನ ಖಾದರ್ ಬಂದ, " ಕಹಿಬೇವಿನ ಸೊಪ್ಪು ಓಽಽಽಽ ಅಲ್ಲಿದೆ, ನಾನೇ ತಂದ್ಕೊಡ್ತೇನೆ ಅಕ್ಕಾ " ಅಂದ.
ಇನ್ನೂ ಹಲವಾರು ಕಡೆ ಫೋನಾಯಿಸಿದಾಗ ನಮ್ಮ ಉಷಕ್ಕನ ಮನೆಯಲ್ಲಿದೆ ಎಂದು ಖಾತ್ರಿ ಪಡಿಸಿಕೊಂಡಾಯ್ತು, ಬೈಕು ಅಲ್ಲಿಗೆ ಓಡಿತು. ಉಷಕ್ಕ ಮಾಡಬೇಕಾದ ಪಥ್ಯಗಳನ್ನೆಲ್ಲ ಹೇಳಿಕೊಟ್ಟು, ವಾರಕ್ಕಾಗುವಷ್ಟು ಕಹಿಬೇವಿನೆಲೆಗಳೊಂದಿಗೆ ನಮ್ಮವರು ಅರ್ಧ ಘಂಟೆಯೊಳಗೆ ಮನೆ ತಲಪಿದರು.
ಚಿಕನ್ ಪಾಕ್ಸ್ ಆದಾಗ ಏನೇನು ಪಥ್ಯ ಮಾಡಬೇಕು ?
ಉದ್ದು ಹಾಕಿದ ತಿಂಡಿ ಬೇಡ.
ಎಣ್ಣೆಯಲ್ಲಿ ಕರಿದದ್ದು ವರ್ಜ್ಯ.
ಅನ್ನದೊಂದಿಗೆ ಬೋಳುಹುಳಿ, ಬದನೆಯಂತಹ ನಂಜು ತರಕಾರಿ ಬೇಡ, ಪುನರ್ಪುಳಿ ಸಾರು ಬಹಳ ಒಳ್ಳೆಯದು. ಒಗ್ಗರಣೆ ಹಾಕುವಂತಿಲ್ಲ.
ಪಚ್ಚೆಹಸ್ರು ತಂಪು, ಮೊಳಕೆ ಬರಿಸಿ, ಬೇಯಿಸಿ ತಿನ್ನಬಹುದು.
ಕಹಿಬೇವಿನ ಕಷಾಯ ಚೆನ್ನಾಗಿ ಆರಿದ ನಂತರ ಕುಡಿಯತಕ್ಕದ್ದು.
ಎಳನೀರು ದಿನವೂ ಕುಡಿಯಬೇಕು.
ಕಹಿಬೇವಿನೊಂದಿಗೆ ಪಲ್ಲಿಸೊಪ್ಪು, ಹಸಿಅರಸಿನ ಅರೆದು ಮೈಗೆ ಲೇಪಿಸಬೇಕು, ಅರ್ಧಘಂಟೆ ಬಿಟ್ಟು ಸ್ನಾನ, ಸಾಬೂನು ಹಾಕಲೇಬಾರದು.
ಮಲಗುವಾಗ ಹಾಸಿಗೆ ಮೇಲೆ ಕಹಿಬೇವಿನೆಲೆಗಳನ್ನು ಹರಡಿ ಮಲಗತಕ್ಕದ್ದು.
ಪಲ್ಲಿ ಸೊಪ್ಪು ಅಂದ್ರೆ ಗೊತ್ತಿತ್ತು, ನಾವೂ ಚಿಕ್ಕವರಿದ್ದಾಗ ಈ ಔಷಧೀ ಪ್ರಯೋಗಕ್ಕೆ ಒಳಗಾದವರೇ ಅಲ್ಲವೇ, ಆದರೆ ಎಲ್ಲೀಂತ ಹುಡುಕಲೀ ಎಂಬ ಸಮಸ್ಯೆ ಎದುರಾಯಿತು. ಪಲ್ಲಿ ಸೊಪ್ಪು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಇರುತ್ತದೆ. ಗಿಡದ ಪರಿಚಯ ಇದ್ದರಾಯಿತು.
ನಮ್ಮವರಂತೂ ನನ್ಗೊತ್ತಿಲ್ಲ ಅಂದ್ಬಿಟ್ಟು ಟೀವಿ ರಾಜಕಾರಣದಲ್ಲಿ ಮಗ್ನರಾದರು. ನೋಡಿಯೇ ಬಿಡೋಣ ಅಂದ್ಕೊಂಡು ಕತ್ತಿಯೊಂದಿಗೆ ತಪಾಸಣೆ ಪ್ರಾರಂಭಿಸಿದೆ. ಯಾವುದೋ ಒಂದು ಉರುಟುರುಟು ಎಲೆಗಳ ಗಿಡ ಕಣ್ಣಿಗೆ ಬಿತ್ತು. " ಇದೇ ಆಗಿರಬಹುದು " ಅಂದುಕೊಳ್ಳುತ್ತ ಕೈಯಲ್ಲಿ ಹಿಡಿಸುವಷ್ಟು ಕತ್ತರಿಸಿ ತಂದೆ.
" ಈ ಸೊಪ್ಪು ಹೌದೇ "
" ನಂಗೇನು ಗೊತ್ತು? ಫೇಸ್ ಬುಕ್ ಗೆ ಒಂದು ಫೋಟೋ ಹಾಕಿ ಕೇಳು, ಹೇಳ್ತಾರೆ "
ಫೋಟೋ ತೆಗೆದು, ಗಿಡ ಗುರುತಿಸಿ ಅಂತ ಕಾಯ್ತಾ ಕೂತ್ಕೊಳ್ಳುವ ಹೊತ್ತು ಇದಲ್ಲ. ನೇರವಾಗಿ ಖಾದರ್ ತಾಯಿಗೆ ಫೊನ್ ಹೋಯಿತು. ಅವರೂ ನಾನೇ ಬರ್ತೇನೆ ಅಂದ್ಬಿಟ್ಟು ಐದೇ ನಿಮಿಷದಲ್ಲಿ ಪಲ್ಲಿ ಸೊಪ್ಪಿನ ಗೆಲ್ಲು ಹಿಡಿದೇ ಬಂದರು. ತೋಟದಿಂದ ತಂದ ಸೊಪ್ಪನ್ನು ಆಚೆ ಎಸೆದೆ.
" ಇದು ಪಲ್ಲಿಸೊಪ್ಪು, ನಮ್ಮ ಮನೆ ಬಾಗಿಲಲ್ಲೇ ಇದೆ ಈ ಗಿಡ " ಅಂದರು ಖಾದರ್ ತಾಯಿ ಮರಿಯಮ್ಮ.
" ಇದನ್ನು ಅರೆದು ರಸ ಕುಡಿಯಲೂ ಕೊಡಿ, ಒಳಗೆ ಕೂಡಾ ಬೊಕ್ಕೆ ಬಿದ್ದಿರ್ತದೆ. ಹಸೀ ಅರಸಿನ ಉಂಟಾ?"
" ಅಲ್ಲೊಂದು ಗಿಡ ಇದೇ, ಅದನ್ನು ಮಣ್ಣಿನಿಂದ ಮೇಲೆ ತೆಗೀ ಬೇಕಲ್ಲ "
" ಹಂಗಿದ್ರೆ ಅರಸಿನ ನಾನೇ ತಂದು ಕೊಡ್ತೇನೆ "
ಮಾರನೆ ದಿನ ವರ್ತನೆ ಹಾಲಿನೊಂದಿಗೆ ಮರಿಯಮ್ಮ ಇನ್ನಷ್ಟು ಪಲ್ಲಿಸೊಪ್ಪು ಹಾಗೂ ಹಸೀ ಅರಸಿನ ಕಳಿಸಿದ್ರು.
ಅಂತೂ ಎಲ್ಲ ಸಾಮಗ್ರಿಗಳು ಲಭ್ಯವಾದವು. ಇನ್ನೇನಿದ್ದರೂ ದಿನಕ್ಕೆರಡು ಬಾರಿ ಅರೆದು, ಮೈಗೆ ಲೇಪಿಸಿ, ಇದೇ ರಸವನ್ನು ಗುಳ್ಕ್ ಎಂದು ಕುಡಿಯಲು ಮಗ ಸನ್ನದ್ಧನಾದ. ಬಚ್ಚಲುಮನೆಯಲ್ಲಿ ಬೆನ್ನಿಗೆ ಲೇಪಿಸುತ್ತಿದ್ದಂತೆ " ಆಹಾ, ಏನು ತಂಪೂ ..." ಅನ್ನಲಾರಂಭಿಸಿದವನಿಗೆ " ಹಂಗಿದ್ರೆ ತಲೆಗೂ ಹಾಕ್ತೇನೆ, ತಲೆಯಲ್ಲಿ ಎಷ್ಟು ಬೊಕ್ಕೆ ಬಿದ್ದಿದೇಂತ ಯಾರಿಗೆ ಕಾಣ್ಸುತ್ತೆ..." ಅನ್ನುತ್ತಾ ತಲೆಗೂ ಅರೆದ ಸೊಪ್ಪಿನ ಮುದ್ದೆ ಎರೆದೆ.
" ಅಮ್ಮ, ತಲೆಗೆ ನಾನೇ ಹಾಕಿಕೊಳ್ಳುತ್ತೇನೆ "
" ಸರಿ ಹಾಗಿದ್ರೆ, ಚೆನ್ನಾಗಿ ಹಾಕಿಕೋ, ಅರ್ಧ ಘಂಟೆ ಬಿಟ್ಟು ಸ್ನಾನ ಮಾಡು. ಬಿಸಿ ನೀರು ಬೇಡ, ಸಾಬೂನು ಹಾಕಲೇ ಬೇಡ "
ಹೀಗೆ ಸ್ನಾನ ಮಾಡುವ ಕ್ರಿಯೆ ನಿರಂತರ 7 - 8 ದಿನ ನಡೆಯಿತು. ಮೊದಲ ದಿನ ತಲೆಗೆ ಸೊಪ್ಪಿನ ರಸ ಹಾಕಿದ್ದರಲ್ಲಿ " ತಲೆವೇದನೆ ಹೋಯ್ತಮ್ಮಾ " ಅಂದ. " ಹೌದ! ಅಷ್ಟು ಪವರ್ ಇದೆಯಾ ಈ ಪಲ್ಲಿಸೊಪ್ಪಿಗೆ..." ನಂಗೂ ಆಶ್ಚರ್ಯ. ಸಾಮಾನ್ಯವಾಗಿ ಚಿಕ್ಕಮಕ್ಕಳಿಗೆ ಬರುವ ಚಿಕನ್ ಪಾಕ್ಸ್ ನ ವೇದನೆ, ಸಂಕಟಗಳನ್ನು ಪುಟಾಣಿಗಳು ಹೇಳಲು ತಿಳಿದಿರುವುದಿಲ್ಲ. ಅಳು ಹಾಗೂ ಮೊಂಡುತನ ಮಾತ್ರ ಪ್ರದರ್ಶಿಸಬಲ್ಲವರಾಗಿರುತ್ತಾರೆ. ಯವಕನಾದ ಮಗ ಕಹಿಬೇವು ಹಾಗೂ ಪಲ್ಲಿಸೊಪ್ಪುಗಳ ಕಾರ್ಯಕ್ಷಮತೆಯನ್ನು ಅರ್ಥೈಸಿಕೊಂಡು ವ್ಯವಹರಿಸಿದ, ಹಾಗೂ ವಾರದೊಳಗೆ ರೋಗಮುಕ್ತನಾಗಿ ಬೆಂಗಳೂರಿಗೆ ಹೋದ.
ಇಲ್ಲಿ ಬರೆಯಬೇಕಾಗಿರುವ ಮತ್ತೊಂದು ವಿಚಾರವಿದೆ. ತಲೆಕೂದಲು ಉದುರುವ ಸಮಸ್ಯೆಯನ್ನು ಈ ಹಿಂದೆ ನನ್ನ ಬಳಿ ಹೇಳಿಕೊಂಡಿದ್ದವನು ಈಗ ಆ ಸಮಸ್ಯೆಯಿಂದಲೂ ಮುಕ್ತಿ ಪಡೆದಿದ್ದಾನೆ. ವಾರವಿಡೀ ಹರ್ಬಲ್ ಶಾಂಪೂ ಥರ ಮಿಂದಿದ್ದೂ ಕಾರಣವಿರಬಹುದು. ಈ ಮಾತು ಅವನಿಂದಲೇ ಬಂತು, " ಚಿಕನ್ ಪಾಕ್ಸ್ ಬಂದಿದ್ದು ಒಳ್ಳೇದೇ ಆಯಿತು "
ಪಲ್ಲಿ ಸೊಪ್ಪು Breynia vitis, Indian snowberry, Mountain Coffee Bush
ಮಲಯಾಳಂ Kattuniruri, Chuvannaniruri, Pavalapulla, Pavilapoola
ತಮಿಳು Sithuruvum, Manipullaanthi, Seppulaa
Posted via DraftCraft app