" ಅಮ್ಮ, ನಾಳೆ ಬರ್ತಾ ಇದೇನೆ, ನಿಂಗೇನು ತರ್ಲಿ "
"ಏನೂ ಆದೀತು, ಏನಾದ್ರೂ ತಾ "
ಇದು ಅಮ್ಮ ಮಗನ Skype ಸಂಭಾಷಣೆ.
ಬೆಳ್ಳಂಬೆಳಗ್ಗೆ ಏಳು ಗಂಟೆಯಾಗ್ಬೇಕಿದ್ರೆ ಬೆಂಗಳೂರಿನಿಂದ ಮಗನ ಆಗಮನವಾಯಿತು. ಅವನಿಗಿಷ್ಟವಾದ ಅವಲಕ್ಕಿ ಸಜ್ಜಿಗೆ ಮಾಡ್ತಾ ಇರಬೇಕಾದ್ರೇ ಬಂದ್ಬಿಟ್ಟ.
" ಈಗ ಸುಸ್ತಾಗಿದೆ, ತಿಂಡಿ ಹತ್ತು ಗಂಟೆಗೆ ಸಾಕು " ಅಂದವನೇ ರೂಮಿಗೆ ಹೋದ.
ಮದ್ಯಾಹ್ನದ ಊಟವಾಗುತ್ತಲೇ " ಅಮ್ಮ, ನಿಂಗೆ ಅಂತಾನೇ ತಂದಿದ್ದು ನೋಡಿಲ್ಲಿ, ಇದು ಹರ್ಬಲ್ ಟೀ ಗೊತ್ತಾಯ್ತಾ, ಹಾಲು ಹಾಕೂದೇನೂ ಬೇಡ "
"ಹಾಲಿಲ್ಲದೆ ಟೀ ಕುಡಿಯೂದು ಹೇಗೇ ?"
" ಕುಡ್ದು ನೋಡು, ಆವಾಗ ಗೊತ್ತಾಗುತ್ತೆ, ಇದು ಲೈಮ್ ಟೀ, ಸಕ್ರೆ ಹಾಕ್ಬೇಕು. ಇದು ನೋಡು, ಗ್ರೀನ್ ಟೀ, ಇದಕ್ಕೆ ಸಕ್ರೆ ಬೇಡ " ಅನ್ನುತ್ತಿದ್ದಂತೆ ಪುಟ್ಟ ಪುಟ್ಟ ಚಹಾ ಪೊಟ್ಟಣಗಳು ನನ್ನೆದುರು ಗಿರಗಿರನೆ ಬಿದ್ದವು.
ಮಾರನೇ ದಿನ ಅವನಿಗಾಗಿ ಪ್ಯಾಕ್ ಮಾಡಿಟ್ಟ ತುಪ್ಪ, ಸೌತೆ ಉಪ್ಪಿನಕಾಯಿ, ಕರಿಬೇವಿನ ಚಟ್ನಿಹುಡಿ ಬ್ಯಾಗಿಗೇರಿಸಿ ಹೊರಟೂ ಬಿಟ್ಟ.
ಬೆಂಗಳೂರು ತಲಪಿದ ಮೇಲೆ ಎಂದಿನಂತೆ ನೆಟ್ ಸಂಭಾಷಣೆ ಮುಂದುವರಿಯದಿರುತ್ತದೆಯೇ, " ಟೀ ಮಾಡಿ ಕುಡಿದ್ಯಾ "
" ಹೂಂ, ಕುಡಿದಾಯ್ತು, ಸಕ್ರೆ ಹಾಕದೇ ಹಾಗೇ ಕುಡಿದ್ವಿ, ಒಂಥರಾ ಲಿಂಬೆ ಪರಿಮಳ ಬರ್ತಿತ್ತು ನೋಡು "
" ಲೈಮ್ ಟೀಗೆ ಸಕ್ರೆ ಹಾಕದೇ ಕುಡಿದ್ಯಾ, ನನ್ ಕರ್ಮ, ಅಪ್ಪಾನೂ ಕುಡಿದ್ರಾ ... ಎಷ್ಟು ಸರ್ತಿ ಹೇಳೂದು, " ಲೈಮ್ ಟೀಗೆ ಸಕ್ರೆ ಹಾಕೂ, ಗ್ರೀನ್ ಟೀಗೆ ಬೇಡಾಂತ... ಹಾಲು ಹಾಕ್ಬೇಡ ಆಯ್ತಾ "
" ಹ್ಞಾಂ, ಸರಿ. ನಾಳೆ ಹಾಗೆ ಮಾಡಿದ್ರಾಯ್ತು "
ಅಂತೂ ಲೈಮ್ ಟೀ ಪ್ಯಾಕೆಟ್ಟುಗಳು ಮುಗಿದಾಗ ಜ್ಞಾನೋದಯವಾಯಿತು. ಲಿಂಬೆ ಸುವಾಸನೆ ಬರಲು ಈ ಚಹಾಪುಡಿಗೆ ಏನು ಹಾಕಿರ್ತಾರೋ ಗೊತ್ತಿಲ್ಲ, ಪ್ರಯೋಗ ನಡೆಯಿತು, ಒಂದಿನ ತುಳಸಿ, ಮಾರನೇ ದಿನ ಸಾಂಬ್ರಾಣಿ, ಮನೆಯಂಗಳದಲ್ಲೇ ಸುಗಂಧಭರಿತ ಸಸ್ಯಗಳು ಇರಬೇಕಾದರೆ..... ಆಹ! ಅದ್ಭುತ ರುಚಿಯ ಚಹಾ.
ಚಹಾ ಮಾಮೂಲು ಹುಡಿಯಲ್ಲಿ ಕುದಿಸಿ ಇಟ್ಟಾಯ್ತೇ, ಸಕ್ಕರೆ ಹಾಕಿ ಲಿಂಬೆರಸ ಎರೆದು ಕುಡಿದು ನೋಡಿ. ಬಿಸಿ ಬಿಸಿಯಾಗಿಯೂ ಚೆನ್ನ, ತಣ್ಣಗಾದರೂ ಚೆನ್ನ. ಹಾಲು ಬೇಡ.
ಕೆಮ್ಮು, ಶೀತ ಕಾಡುವಾಗ ಶುಂಠಿ, ಕಾಳುಮೆಣಸಿನ ಚಹಾ ಕುಡಿಯುವ ವಾಡಿಕೆ ಇದೆ. ಜೀರಿಗೆ ಹಾಕಿದ್ರೆ ಜೀರಾ ಟೀ ಆಯ್ತು. ಯಾಲಕ್ಕಿ ಹಾಕಿದ ಚಹಾ ರುಚಿ ಕುಡಿದವರಿಗೆ ಗೊತ್ತು. ಈ ಚಹಾಗಳಿಗೆ ಹಾಲು, ಸಕ್ಕರೆ ಬೆರೆಸಿಯೇ ಕುಡಿದರೆ ಚೆನ್ನಾಗಿರುತ್ತದೆ. ಯಾವುದೇ ಚಹಾ ಮಾಡುವುದಿದ್ದರೂ ಚಹಾಪುಡಿ ಹಾಕ್ಬಿಟ್ಟು ಗಳಗಳನೆ ಕುದಿಸಬಾರದು. ಅದರಲ್ಲಿರುವ ಆಂಟಿಓಕ್ಸಿಡೆಂಟ್ ಗುಣಗಳು ನಾಶವಾಗುವುದಲ್ಲದೆ ಕೆಟ್ಟ ವಾಸನೆಯ ಚಹಾ ನಿರರ್ಥಕ ಪೇಯವಾದೀತು.
ವರ್ಷಗಳ ಹಿಂದೆ ವೆನಿಲ್ಲಾ ಬೆಳೆ ನಮ್ಮ ಊರಿನ ಅಡಿಕೆ ತೋಟಗಳಲ್ಲಿ ಸಾಮಾನ್ಯವಾಗಿತ್ತು. ಈಗ ಯಾರೂ ಅದನ್ನು ಕೇಳೋರಿಲ್ಲ. ನನ್ನ ಬಳಿಯೂ ಯಾರೋ ಉಚಿತವಾಗಿ ಕೊಟ್ಟಿದ್ದ ವೆನಿಲ್ಲಾ ಕೋಡುಗಳು ಸಾಕಷ್ಟಿವೆ. ನಾಳೆ ವೆನಿಲ್ಲಾ ಚಹಾ ಕುಡಿಯೋಣ ಬನ್ನಿ...
Posted via DraftCraft app
0 comments:
Post a Comment