ನಮ್ಮತ್ತಿಗೆ ಬಂದಿದ್ರು, ಊಟದ ಹೊತ್ತಿಗೇ ಬಂದಿಳಿದರು. ನನ್ನ ಅಡುಗೆಯಲ್ಲಿ ವಿಶೇಷವೇನೂ ಇರಲಿಲ್ಲವಾಗಿ, ಬೇಗನೆ ಹಿತ್ತಿಲಿಗೆ ಹೋಗಿ ಅಂಬಟೆಮರದ ಅಕ್ಕಪಕ್ಕ ಹುಡುಕಿ, ಚೆನ್ನಾಗಿಯೇ ಇದ್ದ ನಾಲ್ಕು ಹಣ್ಣಾದ ಅಂಬಟೆಗಳನ್ನು ಹೆಕ್ಕಿ ತಂದು ದಿಢೀರನೆ ಅಂಬಟೆ ಗೊಜ್ಜು + ಸಾರು ತಯಾರಿಸಿಯೇ ಬಿಟ್ಟೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಅಂಬಟೆಯ ಆತಿಥ್ಯದಿಂದ ಸುಪ್ರೀತರಾದ ನಮ್ಮತ್ತಿಗೆ " ಅಂಬಟೆ ಉಪ್ಪಿನಕಾಯಿ ಹಾಕಿಲ್ಲವೇ " ಕೇಳಿದ್ರು.
" ಇನ್ನೂ ಹಾಕಿಲ್ಲ, ಇದು ಈಗ ಹಣ್ಣಾಯ್ತಲ್ಲ, ಮೊದಲೇ ಹಾಕಬೇಕಿತ್ತು, ಮರದಿಂದ ಕೊಯ್ದು ಕೊಡಲು ಯಾರಾದ್ರೂ ಬೇಕಲ್ಲ " ಗೊಣಗಿದೆ.
" ಅಂಬಟೆಮರ ಹತ್ತಲು ಯಾರೂ ಒಪ್ಪುವುದಿಲ್ಲ, ತುಂಬಾ ಮೆತ್ತಗಿನ ಮರ ಅದು " ಅಂದರು ಅತ್ತಿಗೆ. " ಹೌದೂ, ತೋಟದಲ್ಲಿ ಇನ್ನೂ ಇದೆಯಲ್ಲ ಅಂಬಟೆಮರಗಳು..... ಅಲ್ಲಿ ಹೋಗಿ ನೋಡಿದ್ದೀಯಾ " ತನಿಖೆ ಸುರು ಆಯ್ತು.
" ಇಲ್ಲಾಪ್ಪ, ಅಲ್ಲಿ ಇಲ್ಲಿ ಹೋಗಿ ನಾನ್ಯಾಕೆ ನೋಡಲಿ, ಮನೆ ಬಾಗಿಲಲ್ಲೇ ಇರೂವಾಗ "
" ಹಾಗಿದ್ರೆ ತೋಟದಲ್ಲಿ ಇದ್ಯಾ ಅಂತ ನಾನೇ ನೋಡ್ಕಂಡ್ಬರ್ತೇನೆ .... ದೋಟಿ, ಕೊಕ್ಕೆ ಎಲ್ಲಿದೆ ? " ಕೇಳುತ್ತಾ ಅತ್ತಿಗೆ ಉದ್ದನೆಯ ಕೋಲು ಸಂಪಾದಿಸಿ, ಕೈಲೊಂದು ಪ್ಲಾಸ್ಟಿಕ್ ಚೀಲದೊಂದಿಗೆ ತೋಟಕ್ಕೆ ಹೋದರು.
ಬರುತ್ತಾ ಚೀಲ ತುಂಬಾ ಅಂಬಟೆಕಾಯಿಗಳು ಬಂದುವು. " ಇದು ನಿಂಗೆ ಹೇಗೂ ಬೇಡ ತಾನೇ, ನಾನೇ ಉಪ್ಪಿನಕಾಯಿ ಹಾಕಿಕೊಳ್ಳುತ್ತೇನೆ " ಮಾರನೇದಿನ ಪುತ್ತೂರಿಗೆ ಹೋಗುವ ಏಳು ಗಂಟೆಯ ಬಸ್ಸಿನಲ್ಲಿ ಅಂಬಟೆಗಳೂ ಹೋದುವು.
ಇನ್ನೊಮ್ಮೆ ಭೇಟಿ ಆದಾಗ, " ಅದೆಂಥ ಕರ್ಮದ ಅಂಬಟೆಕಾಯಿ.... ಎಲ್ಲ ಕೈಪ್ಪೆ ( ಕಹಿ ) ಆಯ್ತಲ್ಲ, ಅಷ್ಟೂ ಸಾಸಿವೆ, ಮೆಣಸು ಅರೆದು ಮಾಡಿದ ಉಪ್ಪಿನಕಾಯಿ ದಂಡ ಆಯ್ತು, ತೆಂಗಿನಮರದ ಬುಡಕ್ಕೆ ಚೆಲ್ಲಿದ್ದು ಗೊತ್ತಾ " ಅನ್ನೋದೇ ನಮ್ಮತ್ತಿಗೆ.
" ಮೆಂತ್ಯ ಹಾಕಿದ್ದು ಜಾಸ್ತಿ ಆಯ್ತೋ ಏನೋ " ಅಂದೆ ಮೆಲ್ಲಗೆ.
" ಏನೂ ಅಲ್ಲ, ಮಾಮೂಲಿಯಾಗಿ ಮಾಡಿದ್ದು, ಆ ಅಂಬಟೆಯೇ ಕಹಿ, ಬರೀ ಸಿಪ್ಪೆ ಗೊರಟು "
" ಹೌದೇ, ಅಂಬಟೆಯಲ್ಲೂ ಕಹಿ ಜಾತಿ ಇದೆಯಾ ? " ಆವಾಗ ನನಗೂ ಗೊತ್ತಿರಲಿಲ್ಲ.
<><><> <><><>
‘Spondias pinnata’ (spondias mangifera) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಅಂಬಟೆ, ತಮಿಳಿನಲ್ಲಿ ಪುಳಿಚ್ಚ ಕ್ಕಾಯ್ ಅನಿಸಿಕೊಂಡಿದೆ ಹಾಗೂ Anacardiaceae ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸಿಹಿ ವರ್ಗವೂ ಇದೆ, ಜನಸಾಮಾನ್ಯರ ಬಾಯಿಯಲ್ಲಿ ಕಸಿ ಅಂಬಟೆಯಾಗಿರುವ ಈ ಪ್ರಬೇಧ ವೈಜ್ಞಾನಿಕವಾಗಿ spondias dulcis’ ಆಗಿರುತ್ತದೆ. ಹಿಂದೂ ಪಂಚಾಂಗ ರೀತ್ಯಾ 27 ನಕ್ಷತ್ರಗಳಿವೆಯಷ್ಟೆ, ನಕ್ಷತ್ರ ಪ್ರಕರಣದಲ್ಲಿ ಒಂದೊಂದು ವೃಕ್ಷವನ್ನು ಒಂದೊಂದು ನಕ್ಷತ್ರದೊಂದಿಗೆ ಸಮೀಕರಿಸಿರುವುದನ್ನು ಕಾಣಬಹುದು. ಇಂತಹ ವೃಕ್ಷಗಳ ಪಟ್ಟಿಯಲ್ಲಿ ಅಂಬಟೆಯೂ ಇದೆ. ಸಿಹಿ ಅಂಬಟೆಯನ್ನು ಸಂಸ್ಕೃತದಲ್ಲಿ ಮಧುರಾಮ್ಲಕ, ಅಂಬಸ್ಟ, ಆಮ್ರೋಥಕ ಎಂದು ವರ್ಣಿಸಲಾಗಿದೆ, ಅಲ್ಲಿಗೆ ಅಂಬಟೆ ಮರವೂ ಭಾರತ ಮೂಲದ ಸಸ್ಯವರ್ಗಗಳಲ್ಲೊಂದು ಎಂದಾಯಿತು. ಆಂಗ್ಲ ಭಾಷೆಯಲ್ಲಿ Indian hog plum ಎಂದೇ ಇದಕ್ಕೆ ಹೆಸರು.
ಎಲೆ ಹಾಗೂ ಕಾಂಡದ ತೊಗಟೆ ಸುವಾಸನಾಭರಿತವಾಗಿದ್ದು ಇದರ ರಸಸಾರವು ಕನರು ( ಚೊಗರು ) ಗುಣ ಹೊಂದಿದೆ ಹಾಗೂ ತೊಗಟೆಯ ಕಷಾಯ ಅತಿಸಾರ ವ್ಯಾಧಿಯಲ್ಲಿ ಬಳಕೆಯಲ್ಲಿದೆ. ಸ್ತ್ರೀಯರಲ್ಲಿ ಸಾಮಾನ್ಯವಾಗಿರುವ ಬಿಳಿಸೆರಗಿನ ದೋಷಕ್ಕೆ ಎಲೆಗಳ ಕಷಾಯ ಔಷಧಿ. ಸಂಧಿವಾತದಿಂದ ಬಳಲುತ್ತಿರುವವರಿಗೆ ಎಳೆಯ ಅಂಬಟೆಕಾಯಿಗಳ ಸೇವನೆ ಗುಣಕಾರಿ ಹಾಗೂ ರಕ್ತಗುಣಾಭಿವೃದ್ಧಿಕಾರಕ. ಆಯುರ್ವೇದದಲ್ಲಿ ಇದರ ಎಲೆ, ಬೇರು, ತೊಗಟೆಗಳನ್ನು ವ್ಯಾಧಿ ನಿವಾರಕವಾಗಿ ಇನ್ನಿತರ ನಾರುಬೇರುಗಳ ಸಂಯೋಜನೆಯೊಂದಿಗೆ ಬಳಸಲಾಗುತ್ತಿದೆ.
ಪ್ರತಿ 100ಗ್ರಾಂ ಖಾದ್ಯಯೋಗ್ಯವಾದ ಅಂಬಟೆಯ ತಿರುಳಿನಲ್ಲಿ ಪ್ರತಿಶತ 46.0 k ಕ್ಯಾಲೋರಿಗಳಷ್ಟು ಶಕ್ತಿ, ಪ್ರೊಟೀನ್ .2 ಗ್ರಾಂ, ಕೊಬ್ಬು .1 ಗ್ರಾಂ, ಕಾರ್ಬೋಹೈಡ್ರೇಟ್ಸ್ 12.4 ಗ್ರಾಂ, ಕ್ಯಾಲ್ಸಿಯಂ 56.0 ಮಿ.ಗ್ರಾಂ, ಫಾಸ್ಫರಸ್ 67.0 ಮಿ.ಗ್ರಾಂ, ಕಬ್ಬಿಣ .3 ಮಿ.ಗ್ರಾಂ, ವಿಟಮಿನ್ ಸಿ 36.0 ಮಿ.ಗ್ರಾಂ ಹಾಗೂ ಅಲ್ಪ ಪ್ರಮಾಣದಲ್ಲಿ ಕೆರೋಟಿನ್, ಥಯಾಮಿನ್, ರಿಬೋಫ್ಲವಿನ್ ಗಳು ಅಡಕವಾಗಿವೆ.
ಶರತ್ಕಾಲದಲ್ಲಿ ಎಲೆಗಳನ್ನೆಲ್ಲ ಉದುರಿಸಿ ಬೋಳಾಗಿ ನಿಲ್ಲುವ ಈ ಮರ, ವಸಂತ ಮಾಸ ಬಂದೊಡನೆ ಹೂಗೊಂಚಲುಗಳಿಂದ ತುಂಬಿ ಬಿಡುತ್ತದೆ. ಹೂವರಳಿದ ಬೆನ್ನಿಗೇ ಎಲೆಗಳೂ ತಾನಾಗಿಯೇ ಮೂಡಿ ಹಚ್ಚಹಸಿರಿನಲ್ಲಿ ಕಂಗೊಳಿಸುವ ಹೊತ್ತಿಗೆ ಹೂಗಳು ಮಿಡಿಕಾಯಿಗಳಾಗಿರುತ್ತವೆ. ಇನ್ನೂ ಗೊರಟು ಕಟ್ಟಿಲ್ಲದ ನೆಲ್ಲಿಕಾಯಿ ಗಾತ್ರದ ಮಿಡಿಗಳನ್ನು ಮಾವಿನಮಿಡಿಯ ತರಹ ಉಪ್ಪಿನಕಾಯಿ ಹಾಕಬಹುದು.
ಅಂಬಟೆ ಮಿಡಿ ಎಂದೊಡನೆ ಒಂದು ಹಳೆಯ ಸಂಗತಿ ನೆನಪಿಗೆ ಬಂದಿತು. ಅದೇನಾಯ್ತೂಂದ್ರೆ ಮಾವಿನಮಿಡಿ ಉಪ್ಪಿನಕಾಯಿ ಹಾಕಿ ಆಗಿತ್ತು. ಯಥಾಪ್ರಕಾರ ಅಂಬಟೆ ಹೂ ಬಿಟ್ಟಿತು, ಎಲೆಗಳೂ ತುಂಬಿದ ಮರದ ಒಂದು ಗೆಲ್ಲು ಮಳೆಗಾಲದ ಆರಂಭದ ದಿನಗಳಲ್ಲಿ ಗಾಳಿಯ ಹೊಡೆತಕ್ಕೆ ಬಿತ್ತು. ಆಗ ಜಾನುವಾರುಗಳೂ ಇದ್ದಿದ್ದರಿಂದ " ಈ ಸೊಪ್ಪು ಕತ್ತರಿಸಿ ಹಟ್ಟಿಗೆ ಹಾಕು " ಎಂದು ಕೆಲಸದಾಕೆ ಕಲ್ಯಾಣಿಗೆ ಹೇಳಿ ಬಿಟ್ಟು ಮನೆಯೊಳಗಿನ ಕೆಲಸಕಾರ್ಯಗಳಿಗೆ ಹೋದೆ. ಅವಳೂ ಪರಮಾನಂದದಿಂದ ಸೊಪ್ಪು ಕತ್ತರಿಸಲಾರಂಭಿಸಿದಳು. ಯಾಕೋ ನನ್ನ ಬಿಡುವಾದಾಗ ಬಂದು ನೊಡಿದ್ರೆ ಅಂಬಟೆ ಮಿಡಿಗಳನ್ನು ಸಂಗ್ರಹಿಸುವ ಕಾಯಕದಲ್ಲಿ ಅವಳು ನಿರತಳಾಗಿದ್ದಳು. " ಹಟ್ಟಿಗೆ ಸೊಪ್ಪು ಹಾಕಿ ಆಯ್ತೇ " ಕೇಳುತ್ತಾ ಬಂದಾಗ ಅವಳು " ಈ ಅಂಬಟೆಕಾಯಿ ನಿಮಗೆ ಬೇಡ ಅಲ್ವೇ ಅಕ್ಕಾ, ಮಾವಿನಮಿಡಿ ಹಾಕಾಗಿದೆ, ಇದು ಕಂಡಾಬಟ್ಟೆ ಉಷ್ಣ... ನಾನು ಕೊಂಡ್ಹೋಗ್ಲಾ " ಅಂದಳು.
" ಸ್ವಲ್ಪ ನಂಗೂ ಇರಲಿ, ಈ ಮಿಡಿ ಹೇಗೇಂತ ನೋಡಿದ ಹಾಗೂ ಆಯ್ತು " ಅಂತಂದು ಅವಳ ಮಿಡಿ ಸಂಗ್ರಹವನ್ನು ಅಡುಗೆಮನೆಗೆ ಸಾಗಿಸಿದೆ. ಹೇಗೂ ಮಾವಿನ ಮಿಡಿಗೆ ಮಾಡಿದ್ದ ಮಸಾಲೆ ಮಿಕ್ಕಿದ್ದು ಇತ್ತು. ಅದನ್ನೇ ಬೆರೆಸಿ ಅಂಬಟೆ ಉಪ್ಪಿನಕಾಯಿ ತಯಾರಾಯಿತು.
ಗಾಜಿನ ಭರಣಿಯಲ್ಲಿ 100 ಅಂಬಟೆಮಿಡಿಗಳನ್ನು 3 ಕಪ್ ಹರಳುಪ್ಪು ಬೆರೆಸಿ ಇಟ್ಟು 2 -3 ದಿನ ಆಗುತ್ತಲೇ ಒಣ ಸೌಟಿನಲ್ಲಿ ಕೈಯಾಡಿಸಿ.
ವಾರದೊಳಗೆ ಈ ಮಿಡಿಯೂ ಮಾವಿನ ಮಿಡಿಯಂತೆ ಉಪ್ಪೆಳೆದು ಹಸಿರು ಬಣ್ಣದಿಂದ ಮಾಸಲು ವರ್ಣಕ್ಕೆ ತಿರುಗಿತೇ, ಈ ಹಂತದಲ್ಲಿ ಮಸಾಲೆ ಅರೆದು ಹಾಕಿರಿ.
3 ಕಪ್ ಸಾಸಿವೆ ಹುಡಿ
1 ಕಪ್ ಮೆಣಸಿನ ಹುಡಿ
2 ಟೀ ಸ್ಪೂನ್ ಅರಸಿನ
ಇಂಗು ಸುವಾಸನೆಗೆ ತಕ್ಕಷ್ಟು
1 ಕಪ್ ಪುಡಿಯುಪ್ಪು
ಮಿಡಿಗಳನ್ನು ಉಪ್ಪಿನಿಂದ ತೆಗೆದು ಬಟ್ಟೆಯಲ್ಲಿ ಅಥವಾ ಬುಟ್ಟಿಯಲ್ಲಿ ಹರಡಿ ಇಡಿ.
ಭರಣಿಯ ಉಪ್ಪುನೀರನ್ನು ಜಾಲರಿಯಲ್ಲಿ ಸೋಸಿ ಇಟ್ಟುಕೊಳ್ಳಿ.
ಸಾಸಿವೆ ಹುಡಿಯನ್ನು ಈ ಉಪ್ಪುನೀರಿನಲ್ಲಿ ಮಿಕ್ಸೀ ಉಪಯೋಗಿಸಿ ಅರೆಯಿರಿ.
ಜಾರ್ ಶುಭ್ರವಾಗಿಯೂ, ತೇವರಹಿತವೂ ಆಗಿರಬೇಕು. ನುಣ್ಣಗಾದ ಸಾಸಿವೆಗೆ ಮೆಣಸಿನ ಹುಡಿ, ಅರಶಿನ ಸೇರಿಸಿ ಇನ್ನೊಮ್ಮೆ ಅರೆದಾಗ ಉಪ್ಪಿನಕಾಯಿ ಮಸಾಲೆ ಸಿದ್ಧ.
ಬಟ್ಟೆಯಲ್ಲಿ ಹರಡಿದ ಅಂಬಟೆಮಿಡಿಗಳನ್ನು ಪರಿಶೀಲಿಸಿ, ( ಕೆಟ್ಟು ಹೋದ ಮಿಡಿಗಳು ಬೇಡ, ತುಂಬಾ ಮೆತ್ತಗಾಗಿದ್ದೂ ಬೇಡ ) ಭರಣಿಗೆ ಹಾಕಿ ಮೇಲಿನಿಂದ ಮಾಡಿಟ್ಟ ಮಸಾಲೆಯನ್ನು ಸೌಟಿನಲ್ಲಿ ಎರೆಯುತ್ತಾ ಬನ್ನಿ. ಮಸಾಲೆ ಇಡ್ಲಿ ಹಿಟ್ಟಿನ ದಪ್ಪ ಇರಬೇಕು. ಮರದ ಸೌಟಿನಲ್ಲಿ ಒತ್ತಿ ಒತ್ತಿ ತುಂಬಿಸಿ. ಮೇಲೆ ಒಂದು ಸೌಟು ಪುಡಿಯುಪ್ಪು ಹರಡಿ, ತೆಳ್ಳಗಿನ ಪ್ಲಾಸ್ಟಿಕ್ ಹಾಳೆ ಮುಚ್ಚಿ ( ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿ ತೆಳ್ಳಗಿನ ಬಟ್ಟೆ ಮುಚ್ಚುವ ಪದ್ಧತಿ ಇತ್ತು ) ಭರಣಿಯ ಬಾಯಿ ಬಿಗಿದು ಇಟ್ಟುಕೊಳ್ಳಿ. ಇದನ್ನು ಕೂಡಲೇ ಉಪಯೋಗಿಸಬಹುದು. ಮಿಡಿಯನ್ನು ಎರಡು ಅಥವಾ ಮೂರು ತುಂಡು ಮಾಡಿಕೊಂಡರಾಯಿತು. ಮಾವಿನ ಮಿಡಿಗೂ ಇದೇ ವಿಧಾನ. ಆದರೆ ಇದನ್ನು ಮಾವಿನ ಮಿಡಿಯಂತೆ ಧೀರ್ಘಕಾಲ ಇಟ್ಟುಕೊಳ್ಳಲು ಬರುವುದಿಲ್ಲ, ಹೆಚ್ಚೆಂದರೆ ಒಂದು ತಿಂಗಳಿಗೆ ಚೆನ್ನಾಗಿರುತ್ತದೆ.
ಬಲಿತ ಅಂಬಟೆ ನಾರು ಹಾಗೂ ಗೊರಟು ಕಟ್ಟಿರುತ್ತದೆ, ಇದನ್ನೂ ಉಪ್ಪಿನಕಾಯಿ ಹಾಕಲು ಸಾಧ್ಯವಿದೆ. ಅಂಬಟೆಯ ಮಾಂಸಲ ಭಾಗವನ್ನು ನಾರಿರುವ ಗೊರಟಿನ ಅಂಶವೂ ಬರುವಂತೆ ಕತ್ತಿಯಲ್ಲಿ ಕತ್ತರಿಸಿ. ಪುಡಿಯುಪ್ಪು ಬೆರೆಸಿ. ಹಿಂದೆ ಹೇಳಿದ ವಿಧಾನದಲ್ಲಿ ಮಸಾಲೆ ಹಾಕಿದರಾಯಿತು.
ಮಸಾಲೆ ಅರೆಯಲು ಉಪ್ಪು ನೀರು ಮಾಡುವ ವಿಧಾನ:
1 ಕಪ್ ಹರಳುಪ್ಪು
3 ಕಪ್ ನೀರು
ಚೆನ್ನಾಗಿ ಕುದಿಸಿ, ತಣಿದ ನಂತರ ಉಪಯೋಗಿಸಿ.
ಅಂಬಟೆಯನ್ನು ಗುಂಡುಕಲ್ಲಿನಲ್ಲಿ ಜಜ್ಜಿಕೊಂಡು ಗೊರಟು ಬೇರ್ಪಡಿಸಬಹುದು. ಉಪ್ಪು ಬೆರೆಸಿಟ್ಟು ಹಬೆಯಲ್ಲಿ ಕುದಿಸಿ, ಹುರಿದ ಮಸಾಲೆ ಉಪ್ಪಿನಕಾಯಿ ಹುಡಿ ಹಾಕುವ ರೂಢಿಯೂ ಇದೆ. ಮಾರ್ಕೆಟ್ ನಲ್ಲಿ ತರಹೇವಾರಿ ಹುಡಿಗಳು ಸಿಗುತ್ತವೆ, ಬೇಕಿದ್ದರೆ ಸಾಸಿವೆ ಹುರಿದು ಹುಡಿ ಮಾಡಿ ಸೇರಿಸಿದರಾಯಿತು.
ಜೂನ್ ತಿಂಗಳಲ್ಲಿ ಆರಂಭವಾಗುವ ಅಂಬಟೆ ಬೆಳೆ, ಡಿಸೆಂಬರ್ ಅಂತ್ಯದವರೆಗೆ ವಿಧ ವಿಧವಾದ ಹಂತಗಳಲ್ಲಿ ಲಭ್ಯ. ಅಡುಗೆಯಲ್ಲಿ ವೈವಿಧ್ಯವನ್ನು ತರಲು ಸಹಕಾರಿ.
ಅಂಬಟೆ ಚಟ್ನಿ:
ಕತ್ತರಿಸಿದ ಅಂಬಟೆ ಚೂರುಗಳು
ಒಂದೆಲಗದ ಎಲೆಗಳು
ತೆಂಗಿನತುರಿ, ಹಸಿಮೆಣಸು
ರುಚೆಗೆ ಉಪ್ಪು
ಎಲ್ಲವನ್ನೂ ಅರೆದು ಒಗ್ಗರಣೆ ಕೊಟ್ಟರಾಯಿತು.
ಅಂಬಟೆ ತೊಕ್ಕು:
1 ಕಪ್ ಅಂಬಟೆ ಚೂರುಗಳು
2 ಚಮಚ ಸಾಸಿವೆ, 4-5 ಒಣಮೆಣಸು, ಇಂಗು ಸ್ವಲ್ಪ ಹುರಿಯಿರಿ, ಹುಡಿ ಮಾಡಿ.
ಅಂಬಟೆ ಚೂರುಗಳನ್ನೂ ಅರೆದು ಇಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿಗಿಟ್ಟು, ಅರೆದ ಅಂಬಟೆ, ಮಸಾಲೆ ಹಾಗೂ 3 ಚಮಚ ಪುಡಿಯುಪ್ಪು ಹಾಕಿ ಸೌಟಿನಲ್ಲಿ ಮಿಶ್ರಗೊಳಿಸಿ, ಎರಡು ನಿಮಿಷ ಬಿಟ್ಟು ಕೆಳಗಿಳಿಸಿ. ಆರಿದ ನಂತರ ಜಾಡಿಯಲ್ಲಿ ತುಂಬಿಸಿಟ್ಟು ಉಪಯೋಗಿಸಿ.
ಹಣ್ಣಂಬಟೆಯ ಸಾರು:
ಬೇಕಿದ್ದಷ್ಟು ಹಣ್ಣಂಬಟೆಗಳು
ಬೆಲ್ಲ, ಉಪ್ಪು ಹಾಗೂ ಒಗ್ಗರಣೆ ಸಾಮಗ್ರಿಗಳು
ಅಂಬಟೆಗಳನ್ನು ಚೆನ್ನಾಗಿ ತೊಳೆದು, ತೊಟ್ಟು ಹಾಗೂ ತುದಿ ಕತ್ತರಿಸಿ.
ಅವಶ್ಯಕತೆಯಿದ್ದಷ್ಟು ನೀರೆರೆದು, ಉಪ್ಪು ಬೆಲ್ಲದೊಂದಿಗೆ ಕುದಿಸಿ.
ಇಂಗು ಹಾಗೂ ಬೇವಿನ ಒಗ್ಗರಣೆ ಕೊಡಿ
Posted via DraftCraft app
ಟಿಪ್ಪಣಿ: 30/11/2015 ರಂದು ಮುಂದುವರಿಸಿ ಬರೆದದ್ದು.
ಯಥಾಪ್ರಕಾರ ಅಂಬಟೆ ಬಲಿತು ಬೀಳಲು ಪ್ರಾರಂಭವಾಗಿದೆ. ಚೆನ್ನಪ್ಪನೇನೋ ಕೊಯ್ದು ಕೊಡಲು ಸಿದ್ಧನಿದ್ದಾನೆ. ನಾನು ಹೂಂಗುಟ್ಟಿಲ್ಲ ಅಷ್ಟೇ. ದಿನಾ ಬಿದ್ದು ಸಿಗುವಾಗ, ಒಂದೇ ಬಾರಿ ಕೊಯ್ದು ಹಾಕಿದ್ದರಲ್ಲಿ ಲಾಭವೇನು? ಅಡುಗೆಯ ಆನಂದವನ್ನು ಹೆಚ್ಚಿಸುವ ಅಂಬಟೆಯನ್ನು ಕಳೆದುಕೊಳ್ಳಲು ನಾನು ಸಿದ್ಧಳಿಲ್ಲ.
ಅಂಗಳದಲ್ಲಿ ಬದನೆಯ ಸಾಲು, ಹಿತ್ತಲಲ್ಲಿ ಹರಿವೆ ದಂಟು ಇರಲು, ಮರದಿಂದ ಅಂಬಟೆ ಉದುರುತ್ತಿರಲು, ಏನು ಈ ದಿನದ ಕೊದ್ದೆಲು ಎಂಬ ಚಿಂತೆಯಿಲ್ಲದಿರಲು.... ಬಂದಿದೆ ನೋಡಿ ಅಂಬಟೆ ಕೊದ್ದೆಲ್
" ಹೌದಾ, ಅಂಬಟೆ ಕೊದ್ದೆಲ್ ಹೇಗೆ ಮಾಡಿದ್ದೂ ?"
ಬದನೇಕಾಯಿಯನ್ನು ಸಮಗಾತ್ರದಲ್ಲಿ ಕತ್ತರಿಸಿ ನೀರಿನಲ್ಲಿ ಹಾಕಿಡುವುದು.
ಹರಿವೇ ದಂಟನ್ನು ಕತ್ತರಿಸಿ, ಸೊಪ್ಪು ಚೆನ್ನಾಗಿದ್ದರೆ ಮಾತ್ರ ಉಪಯೋಗಿಸಿ.
2-3 ಅಂಬಟೆಗಳನ್ನು ಚೆನ್ನಾಗಿ ತೊಳೆದು ಚೂರಿಯಲ್ಲಿ ಗೀರು ಹಾಕಿಡುವುದು, ಸಾಧ್ಯವಿದ್ದರೆ ತುಂಡು ಮಾಡಬಹುದು.
ಒಂದು ಹಿಡಿ ತೊಗರಿಬೇಳೆ ಬೇಯಿಸುವುದು.
ತರಕಾರಿಗಳಿಗೆ ಉಪ್ಪು ಕೂಡಿ ಬೇಯಿಸುವುದು.
ಒಂದು ಕಡಿ ಅಥವಾ ಇದ್ದ ಹಾಗೆ, ತೆಂಗಿನತುರಿ.
4-6 ಒಣಮೆಣಸು, ಖಾರ ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳುವುದು.
2 ದೊಡ್ಡ ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
ತಲಾ ಒಂದು ಚಿಕ್ಕ ಚಮಚ ಜೀರಿಗೆ, ಮೆಂತೆ
ಕಡ್ಲೆಕಾಳಿನಷ್ಟು ಇಂಗು
ಮಸಾಲಾ ಸಾಮಗ್ರಿಗಳನ್ನು ಎಣ್ಣೆಪಸೆಯಲ್ಲಿ ಹುರಿಯುವುದು, ಒಂದೆಸಳು ಕರಿಬೇವು ಬೀಳಲಿ.
ಆಯ್ತೇ, ಈಗ ಕಾಯಿತುರಿಯೊಂದಿಗೆ ಅರೆಯಿರಿ, ಅರೆಯುವಾಗ ಅಗತ್ಯವೆನಿಸಿದರೆ ಹುಣಸೇಹುಳಿ ಹಾಕಬಹುದು, ಬೆಂದಾಗ ಅಂಬಟೆಯೂ ಹುಳಿಯಾಗುತ್ತದೆ, ಹಾಗಾಗಿ ಈ ಹೊತ್ತು ಹುಣಸೇಹುಳಿ ಬೇಡ.
ಬೆಂದ ಬೇಳೆ, ತರಕಾರಿಗಳಿಗೆ ತೆಂಗಿನಕಾಯಿ ಅರಪ್ಪು ಕೂಡಿಸಿ, ರುಚಿಗೆ ಉಪ್ಪು, ಬೆಲ್ಲದೊಂದಿಗೆ ಕುದಿಸುವುದು, ಒಗ್ಗರಣೆ ಮರೆಯಲಿಕ್ಕುಂಟೇ....