ನಮ್ಮ ನೆರೆಯಲ್ಲಿಯೇ ಇರುವ ತಲೆಂಗಳದ ಅತ್ತಿಗೆ ಮನೆಗೆ ಹೋಗಿದ್ದೆವು. ನಾವೂ ಹೋಗುತ್ತಿರುತ್ತೇವೆ, ಅವರೂ ಬರುತ್ತಿರುತ್ತಾರೆ, ಇದರಲ್ಲೇನೂ ಹೊಸತಿಲ್ಲ ಬಿಡಿ. ಮನೆಗೆ ಹೋಗಿದ್ವಲ್ಲ, ಆಸರಿಗೆ ಕುಡಿದಾಯ್ತು, ದೇವರಕೋಣೆಯೊಳಗೆ ಶ್ರಾದ್ಧಾದಿ ಕ್ರಿಯೆಗಳು ಆಗುತ್ತಾ ಇದ್ದಂತೆ, ಸುಧರಿಕೆ ಮಾಡುವುದಿದೆಯೋ ಎಂದು ಒಮ್ಮೆ ಅವಲೋಕಿಸಿ, ಮನೆಯ ಹೊರ ಅಂಗಳಕ್ಕೆ ಇಳಿದಾಯ್ತು.
ಅಂಗಳದ ಕಾಟಂಗೋಟಿ ಹುಲ್ಲುಸಸ್ಯಗಳನ್ನೆಲ್ಲ ಕಿತ್ತು ಅಡಿಕೆ ಒಣಗಲು ಹರಡುವ ಅಂಗಳ ಸಿದ್ಧವಾಗಿದೆ. ಒಂದು ಮೂಲೆಯಲ್ಲಿ ಹರಿವೇ ಕಳ, ಬಣ್ಣಬಣ್ಣದ ಹರಿವೆಗಳಿಂದ ಕಂಗೊಳಿಸುತ್ತಿದೆ. ಮನೆಯ ಒಂದು ಪಕ್ಕ ಮೇಲ್ನೋಟಕ್ಕೆ ಗೋಡೆಯಂತೆ ಕಾಣಿಸುವ ಪ್ರಾಕೃತಿಕ ಮುರಕಲ್ಲಿನ ದರೆ, ವೀಳ್ಯದೆಲೆಯ ಬಳ್ಳಿ ಈ ಗೋಡೆಯೇರಿ ಆಕಾಶವೇರಲು ಸಿದ್ಧವಾಗಿದೆ. ಅದರ ಪಕ್ಕದಲ್ಲೇ ನೆಟ್ಟು ನಾಲ್ಕು ದಿನವಾಗಿರಬಹುದಾದ ಬಸಳೇ ಬಳ್ಳಿ, ಅದರಾಚೆಗೆ ತೊಂಡೆ ಬಳ್ಳಿ ಮೇಲೆ ಹೋಗಿ ಹಬ್ಬಿದೆ. ಓಹ್, ಇಲ್ಲೊಂದು ಕಲ್ಲಿನ ಗೂಡು ಇದೆ.... ಮೊದಲೇ ಇದೆ, ನಾನೇನೂ ಹೊಸತಾಗಿ ಕಂಡಿದ್ದಲ್ಲ. ಆದರೆ ಕಂಡದ್ದು ಕ್ಯಾಮರಾ ಕಣ್ಣು .....
ಇದೇನು ಆದಿಮಾನವನ ಗುಹೆಯೇ, ಅರೇಬಿಯನ್ ನೈಟ್ಸ್ ಕಥೆಯ ಆಲೀಬಾಬಾ ನಲ್ವತ್ತು ಕಳ್ಳರ ಗುಹೆಯೇ ಎಂದು ಹುಬ್ಬೇರಿಸಬೇಕಾಗಿಲ್ಲ. ನಮ್ಮ ಪೂರ್ವಿಕರು ನಿರ್ಮಿಸಿಕೊಂಡಂತಹ ಒಂದು ದಾಸ್ತಾನು ಉಗ್ರಾಣ ಎಂದೇ ಹೇಳಬಹುದು. ಮನೆಯ ಹೊರಾಂಗಣದಲ್ಲೇ ಇಡಬೇಕಾಗಿರುವ ನಿತ್ಯೂಪಯೋಗಿ ವಸ್ತುಗಳಿರುತ್ತವೆ. ಉಪ್ಪು ಅವುಗಳಲ್ಲಿ ಒಂದು. ಆ ಕಾಲದಲ್ಲಿ ಅಯೋಡೈಸ್ಡ್ ಉಪ್ಪು, ಟೇಬಲ್ ಸಾಲ್ಟ್ ಇತ್ಯಾದಿ ವರ್ಗೀಕರಣ ಇರಲಿಲ್ಲ ಕಣ್ರೀ, ಏಕಮೇವ ಕಲ್ಲುಪ್ಪು ಅಥವಾ ಹರಳುಪ್ಪು, ಇದ್ಯಾವುದೂ ಬೇಡ ಬಿಡಿ, ಗಾಂಧೀತಾತನ ಉಪ್ಪು ಅಂದ್ರೆ ಎಲ್ಲರಿಗೂ ಅರ್ಥವಾದೀತು. ದಿನನಿತ್ಯ ಶಾಪಿಂಗ್ ಮಾಡುವ ಕಾಲ ಅದಲ್ಲ. ಎಲ್ಲಿಗೇ ಹೋಗಬೇಕಾಗಿದ್ದರೂ ಕಾಲುನಡಿಗೆಯ ಪಯಣ, ತಲೆಹೊರೆಯ ಸಾಗಾಟ. ಎತ್ತಿನಗಾಡಿ ಇದ್ದಂತಹ ಮನೆಗಳೂ ಇದ್ದವು, ಅಂತಹ ಮನೆಯೊಡೆಯ ಬಹು ಧನಿಕನೆಂದೇ ಲೆಕ್ಕ. ಒಮ್ಮೆ ತಂದ ಮಾಲು ಕನಿಷ್ಠ ಆರು ತಿಂಗಳಾದರೂ ಇಟ್ಟುಕೊಳ್ಳುವ ವ್ಯವಸ್ಥೆ ಇರಬೇಕು. ಮಳೆಗಾಲದಲ್ಲಿ ತಿರುಗಾಟ ಹೇಗೂ ಸಾಧ್ಯವಾಗುವುದಿಲ್ಲ.
ಉಪ್ಪು ಮನೆಯ ಅಡುಗೆಕಾರ್ಯಗಳಿಗೆ ಮಾತ್ರವಲ್ಲ, ಜಾನುವಾರುಗಳ ಕಲಗಚ್ಚು ಸಿದ್ಧಪಡಿಸಲೂ ಬೇಕಾಗುವಂತಹುದು. ನೆಂಟರು ಹೀಗೆ ಬಂದು ಹಾಗೆ ಹೋಗೋ ಕಾಲವಲ್ಲ, ಬಂದೋರು ಕಾಲ್ನಡೆಯಲ್ಲೇ ಬಂದಿರುತ್ತಾರೆ, ಮರು ಪ್ರಯಾಣ ಮಾಡಬೇಕಾದರೂ ಒಂದೆರಡು ತಿಂಗಳು ಇದ್ದೇ ಹೋಗುವವರು. ಬಂಧುಬಳಗದ, ತೋಟ, ಗದ್ದೆಯ ಕಾರ್ಮಿಕ ವರ್ಗದವರಿಗೂ ಊಟೋಪಚಾರದ ವ್ಯವಸ್ಥೆ, ಕೆಲಸದಾಳುಗಳು ನೀರುಮಜ್ಜಿಗೆ ಕುಡಿಯಬೇಕಾದರೂ ಉಪ್ಪು, ತೆಂಗಿನಮರಗಳಿಗೂ ವರ್ಷಕ್ಕೂಮ್ಮೆ ಉಪ್ಪು ಹಾಕುವದಿರುತ್ತದೆ. ದೊಡ್ಡ ಪ್ರಮಾಣದ ಉಪ್ಪಿನ ದಾಸ್ತಾನು ಇಡಲು ಅಷ್ಟೇ ಗಾತ್ರದ ಮಣ್ಣಿನ ಪೀಪಾಯಿಗಳೂ, ಭರಣಿಗಳೂ ಇರುತ್ತವೆ. ಮಳೆಗಾಲದ ಅಡುಗೆಗೆಂದೇ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ, ನಮ್ಮ ತುಳುವರ ಉಪ್ಪಡ್ ಪಚ್ಚಿಲ್, ಉಪ್ಪಿನಲ್ಲಿ ಹಾಕಿಟ್ಟ ಕಾಟ್ ಮಾವಿನಕಾಯಿ, ನೀರ್ ಕುಕ್ಕು ಇಂಥವುಗಳನ್ನು ಮಣ್ಣಿನ ಮಂಡಗೆಯಲ್ಲಿ ಹಾಕಿಡುವ ಪದ್ಧತಿ. ಈ ದಾಸ್ತಾನು ಸಾಮಗ್ರಿಗಳಿಗೆ ಒಂದು ಪ್ರತ್ಯೇಕ ಜಾಗ ಇರಲೇಬೇಕು. ಈ ಗುಹಾಭವನದೊಳಗೆ ಗಾಳಿ, ಬಿಸಿಲು ಹೋಗುವಂತಿಲ್ಲ, ದಾಸ್ತಾನು ಸಾಮಗ್ರಿಗಳು ಹಾಳಾಗುವ ಪ್ರಮೇಯವೇ ಇಲ್ಲ. ಮಣ್ಣಿನ ಪೀಪಾಯಿಗಳನ್ನು ದಕ್ಷಿಣ ಕನ್ನಡಿಗರ ಆಡುನುಡಿಯಲ್ಲಿ ಮಣ್ಣಿನ ಮಂಡಗೆ ಎಂದೇ ಹೇಳುವ ವಾಡಿಕೆ. ಉಪ್ಪಿನ ಸೊಳೆ ಹಾಕಿಟ್ಟಲ್ಲಿ ಅದು ಸೊಳೆ ಮಂಡಗೆ ಆಯಿತು. ಇಂತಹ ಉಪ್ಪು ಸೊಳೆ ಮಂಡಗೆ, ನೀರು ಮಾವಿನಕಾಯಿ ಮಂಡಗೆಗಳು ಈ ಕಲ್ಲಿನ ಗುಹೆಯೊಳಗೆ ಭದ್ರ.
ಇಷ್ಟೆಲ್ಲಾ ವಿವರಣೆ ಕೊಡ್ತಾ ಇದೀನಲ್ಲ, ಅಂದ ಹಾಗೆ ಈ ಕಲ್ಲಿನ ಗುಹೆ ಇರುವುದು ಕಾಸರಗೋಡಿನ ಬಾಯಾರು ಗ್ರಾಮದಲ್ಲಿರುವ ತಲೆಂಗಳ ರಾಮಕೃಷ್ಣ ಭಟ್ಟರ ಮನೆಯಲ್ಲಿ. ರಾಮಕೃಷ್ಣ ಭಟ್ಟರ ಪೂರ್ವಿಕರೇ ಇದರ ನಿರ್ಮಾತೃಗಳು. ಅಂದಿನ ಹಿರಿಯರ ವಾಸ್ತು ತಾಂತ್ರಿಕತೆಗೆ ಇದೊಂದು ಸ್ಮಾರಕದಂತಿದೆ. ಈಗ ಈ ಮನೆಯಲ್ಲಿ ರಾಮಕೃಷ್ಣ ಭಟ್ಟರ ಪುತ್ರ ಅನಂತಕೃಷ್ಣ ತನ್ನ ಪುಟ್ಟ ಸಂಸಾರದೊಂದಿಗೆ ವಾಸವಾಗಿದ್ದಾನೆ.
Posted via DraftCraft app
0 comments:
Post a Comment