ಪ್ರತಿದಿನವೂ ಅಕ್ಕಿಯಿಂದಲೇ ತಿಂಡಿಗಳನ್ನು ಮಾಡುತ್ತಿರಬಾರದು, ವೈವಿಧ್ಯತೆ ಇರಬೇಕು, ತಿನ್ನುವವರು " ದಿನಾ ಮಾಡಿದ್ದನ್ನೇ ಮಾಡ್ತೀಯ " ಎಂದು ಹೇಳುವಂತಿರಬಾರದು. ಅದಕ್ನುಗುಣವಾಗಿಯೋ ಎಂಬಂತೆ ನಮ್ಮ ಹಿರಿಯರು ತಮ್ಮ ಧಾರ್ಮಿಕ ವಿಧಿವಿಧಾನಗಳಲ್ಲಿ ಹಲವಾರು ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ.. ವ್ರತ, ಉಪವಾಸ ಇತ್ಯಾದಿಗಳ ಆಚರಣೆಯಲ್ಲಿ ಮುಂಜಾನೆ ಅಕ್ಕಿಯನ್ನು ಬಳಸಿ ತಿಂಡಿತಿನಿಸು ತಯಾರಿಸುವಂತಿಲ್ಲ. ಆ ಹೊತ್ತು ಗೋಧಿಗೆ ಪ್ರಾಶಸ್ತ್ಯ. ಗೋಧಿಯ ಯಾವುದೇ ರೂಪಾಂತರವೂ ಆದೀತು. ಗೋಧಿಕಾಳುಗಳ ದೋಸೆ, ಗೋಧಿ ಕಡಿಯ ಪಾಯಸ, ಗೋಧಿ ರವೆಯ ಉಪ್ಪಿಟ್ಟು ಅಥವಾ ಇಡ್ಲಿ, ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.
ಇಡ್ಲಿಗಳಲ್ಲಿ ನೂರಾರು ವಿಧ. ಈ ದಿನ ಸಜ್ಜಿಗೆ ಇಡ್ಲಿ ಮಾಡೋಣ. ಸಜ್ಜಿಗೆಯಲ್ಲೂ ಬೇರೆ ಬೇರೆ ನಮೂನೆಗಳು, ಮಾಮೂಲಿ ಸಜ್ಜಿಗೆ ಉಪ್ಪಿಟ್ಟು ಮಾಡಲಿಕ್ಕೆ ನಾನು ಕೊಳ್ಳುವುದು ಮೀಡಿಯಂ ರವಾ ಅಂತ ಬರೆದಿರುವ ಪ್ಯಾಕೆಟ್ಟು.
" ಸಜ್ಜಿಗೆ ಅಂದ್ರೇನ್ರೀ... ?"
ಅಕ್ಕಿ ರವೆಯಿಂದ ಉಪ್ಪಿಟ್ಟೂ, ಇಡ್ಲಿ ಮಾಡ್ತೀವಲ್ಲ, ಅದೇ ಥರ ಗೋಧಿ ರವೆ ಕೂಡಾ ಮಾರುಕಟ್ಟೆಯಲ್ಲಿ ಸಿಗುತ್ತದೆ, ಇದನ್ನೇ ನಮ್ಮ ಕರಾವಳಿ ಕನ್ನಡಿಗರು ಸಜ್ಜಿಗೆ ಅನ್ನೂದು. ಸಜ್ಜಿಗೆಯಲ್ಲೂ ದೊಡ್ಡ ಸಜ್ಜಿಗೆ, ಬಾಂಬೇ ಸಜ್ಜಿಗೆ, ಗೋಧಿನುಚ್ಚು ಅಥವಾ ಗೋಧಿಕಡಿ ಹೀಗೆಲ್ಲ ವೈವಿಧ್ಯಗಳಿವೆ. ಈಗ ನಾವು ಮಧ್ಯಮ ಗಾತ್ರದ ಸಜ್ಜಿಗೆಯನ್ನು ಆಯ್ದುಕೊಂಡಿದ್ದೇವೆ.
ಈ ಇಡ್ಲಿಗೆ ಏನೇನು ಬೇಕು ?
ಒಂದು ಕುಡ್ತೆ ಉದ್ದು,
ಎರಡೂವರೆ ಕುಡ್ತೆ ಸಜ್ಜಿಗೆ.
" ಕುಡ್ತೆ ಅಂದ್ರೇನ್ರೀ...?"
ಕುಡ್ತೆ ಅಂದ್ರೆ ಒಂದು ಅಳತೆಯ ಪ್ರಮಾಣ, ಪಾವು, ಸೇರು, ಕಳಸಿಗೆ, ಮುಡಿ... ಈ ಥರ ಕುಡ್ತೆಯ ಅಳತೆ ಪುಟ್ಟ ಗಾತ್ರದ ಒಂದು ಲೋಟ ಅಂತಿಟ್ಕೊಳ್ಳಿ. ಮಾಮೂಲಿಯಾಗಿ ಒಂದು ಕಪ್ಪು ಸಜ್ಜಿಗೆ, ಇನ್ನೊಂದು ಕಪ್ಪು ಉದ್ದೂ ಅಂತ ಬರೆಯೋ ಬದಲು ಅಚ್ಚಗನ್ನಡದಲ್ಲಿ ಬರೆದಿದ್ದೇನೆ ಅಷ್ಟೇ.
ಆಯ್ತಾ, ಈಗ ಉದ್ದು ನೆನೆ ಹಾಕಿಟ್ಟಿರಿ. ಅರ್ಧ ಘಂಟೆ ಬಿಟ್ಟು ತೊಳೆದು ಅರೆಯಿರಿ. ಅರೆದ ಹಿಟ್ಟನ್ನು ತಪಲೆಗೆ ವರ್ಗಾಯಿಸಿ. ಸಜ್ಜಿಗೆಯನ್ನೂ ನೀರು ಕೂಡಿಸಿ, ( ಹುರಿಯುವ ಅಗತ್ಯವಿಲ್ಲ ) ಉದ್ದಿನ ಹಿಟ್ಟಿನೊಂದಿಗೆ ಬೆರೆಸುವುದು. ರುಚಿಕಟ್ಟಲು ಉಪ್ಪುಹಾಕಿ ಮುಚ್ಚಿಟ್ಟು, ಹುದುಗು ಬರಲು ಎಂಟು ಘಂಟೆಗಳ ಕಾಲ ಬಿಡಬೇಕಾದ್ದು ಕಡ್ಡಾಯ.
ಚೆನ್ನಾಗಿ ಹುದುಗಿದಂಥ ಹಿಟ್ಟು ದೊರೆಯಿತೇ, ಇಡ್ಲಿ ಪಾತ್ರೆ ಯಾ ಅಟ್ಟಿನಳಗೆ ಒಲೆಗೇರಲಿ. ನೀರು ಕುದಿಯಲಿ, ಒಂದೊಂದೇ ಸೌಟು ಹಿಟ್ಟನ್ನು ಇಡ್ಲಿ ಬಟ್ಟಲುಗಳೊಳಗೆ ತುಂಬಿಸಿ, ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ ಬೇಯಿಸಿ, ಬೇಗನೇ ಮಾಡಬಹುದಾದ ತಿನಿಸು ಇದಾಗಿದೆ. ತೆಂಗಿನ ಚಟ್ಣಿಯೊಂದಿಗೆ ಸವಿಯಿರಿ.
ಸಜ್ಜಿಗೆ ಇಡ್ಲಿಗೆ ಸೂಕ್ತವಾದ ಚಟ್ಣಿ ಯಾವುದು?
ಚಟ್ಣಿಯಲ್ಲಿ ನೀರುಳ್ಳಿ, ಬೆಳ್ಳುಳ್ಳಿಗಳ ಬಳಕೆ ಸಾಮಾನ್ಯ. ಆದರೆ ವ್ರತ ಪೂಜಾದಿಗಳ ಎಡೆಯಲ್ಲಿ ನೀರುಳ್ಳಿ, ಬೆಳ್ಳುಳ್ಳಿಗಳನ್ನು ಯಾವುದೇ ಅಡುಗೆಯಲ್ಲಿ ಬಳಸುವಂತಿಲ್ಲ. ಸಾಂಬಾರ್ ಮಾಡುವುದಿದ್ದರೂ ನೀರುಳ್ಳಿ ಯಾ ಬೆಳ್ಳುಳ್ಳಿ ಹಾಕುವಂತಿಲ್ಲ.
ಶುಂಠಿ, ಮಾವಿನಕಾೖ ಯಾ ಮಾವಿನಶುಂಠಿ, ಹಸಿಮೆಣಸು ಯಾ ಒಣಮೆಣಸಿನೊಂದಿಗೆ ತೆಂಗಿನತುರಿ ಅರೆದು ತಯಾರಿಸಿದ ಚಟ್ಣಿ ಶ್ರೇಷ್ಠ. ಅರೆಯುವಾಗ ಕೊತ್ತಂಬ್ರಿ ಸೊಪ್ಪು ಧಾರಾಳವಾಗಿ ಹಾಕಿದಲ್ಲಿ ಚಟ್ಣಿಯ ರುಚಿ ಹಾಗೂ ಪರಿಮಳ ಇಮ್ಮಡಿಸುವುದು, ಕೊನೆಯದಾಗಿ ಒಗ್ಗರಣೆ ಮರೆಯುವಂತಿಲ್ಲ, ಕರಿಬೇವು ಬಿಡುವಂತಿಲ್ಲ.
ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ 'ಉತ್ಥಾನ'ದ ಆಗಸ್ಟ್ , 2015 ರ ಸಂಚಿಕೆಯಲ್ಲಿ ಪ್ರಕಟಿತ.
0 comments:
Post a Comment