ಕಾಲಿಪ್ಲವರ್ ಇನ್ನಿತರ ತರಕಾರಿಗಳೊಂದಿಗೆ ಬಂದಿದೆ, ಬೋಂಡಾ ಬಜ್ಜಿ ಪೋಡಿ ಮಾಡುವಂತಹ ಕಾಲಿಪ್ಲವರ್ ದಿನ ನಿತ್ಯದ ಉಪಯೋಗಕ್ಕಾಗಿ ತರುವುದು ಕಮ್ಮಿ ಎಂದೇ ಹೇಳಬೇಕು. ಸೊಪ್ಪು ದಂಟು ಬಿಡಿಸಿ ಕೇವಲ ಹೂವನ್ನು ಮಾತ್ರ ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿಟ್ಟು, ಅರ್ಧ ಗಂಟೆ ಬಿಟ್ಟು, ಅಡುಗೆಗೆ ಬಳಕೆ ಮಾಡಬೇಕಾಗಿದೆ, ಇದೆಲ್ಲ ನನಗೆ ಹಿಡಿಸದು. ಆದರೂ ಮುತುವರ್ಜಿಯಿಂದ ಹುಳುಹುಪ್ಪಟೆಗಳೇನಾದರೂ ಇವೆಯೋ ಎಂದೂ ನೋಡಬೇಕಾಗುತ್ತದೆ. ಅಂತೂ ಕತ್ತರಿಸಿ ಇಟ್ಟು ಆಯ್ತು. ಇನ್ನೀಗ ಬಾಣಲೆ ಇಡುವ ಸಮಯ ಬಂತೇ, ಛೆ, ಛೇ.. ಮಧ್ಯಾಹ್ನದ ಊಟಕ್ಕೊಂದು ವ್ಯಂಜನ ಆಗಬೇಕಿದೆ.
ಎಣ್ಣೆಯಲ್ಲಿ ಕರಿದ ತಿಂಡಿತಿನಿಸು ನಾವಿಬ್ಬರೇ ಇರುವಾಗ ಮಾಡಲಿಕ್ಕಿಲ್ಲ, ಅದೆಲ್ಲ ಮಕ್ಕಳು ಬೆಂಗಳೂರಿನಿಂದ ಬಂದಿರುವಾಗ ಮಾತ್ರ ಮಾಡುವಂತಹುದು. ಕೇವಲ ಕಾಲಿಪ್ಲವರ್ ಸಾಕೇ, ಸ್ವಲ್ಪ ಬೀನ್ಸ್, ಕ್ಯಾರೆಟ್ ಇರಲಿ.
ಹಸಿರು ಬಟಾಣಿಯೂ ಇರಲಿ. ಬೇಯಲಿಕ್ಕಾಗಿ ಬಟಾಣಿಗೆ ಕುದಿ ನೀರು ಎರೆದು ಮುಚ್ಚಿ ಇರಿಸಲಾಯಿತು.
ಇದೀಗ ಕಾಯಿ ತುರಿಯುವ ಸಮಯ, ಅರ್ಧ ಕಡಿ ಕಾಯಿತುರಿ ಇರಲಿ.
ಕಾಯಿಯೊಂದಿಗೆ ಒಂದು ಹಸಿಮೆಣಸು ಕೂಡಿ ನುಣ್ಣಗೆ ಅರೆಯಲಾಯಿತು.
ಬಟಾಣಿಯನ್ನು ಮೊದಲು ಕುಕ್ಕರಿನಲ್ಲಿ ಬೇಯಿಸಿ, ತದನಂತರ ಕಾಲಿಪ್ಲವರ್ ಹಾಗೂ ಬೀನ್ಸ್ ಬೇಯಿಸತಕ್ಕದ್ದು. ರುಚಿಯ ಉಪ್ಪು ಬೇಯುವಾಗಲೇ ಹಾಕಬೇಕು.
ಕಾಯಿ ಅರಪ್ಪನ್ನು ಬೆಂದ ನಂತರ ಹಾಕಿ, ಅರ್ಧ ಲೋಟ ದಪ್ಪ ಮಜ್ಜಿಗೆ ಅಥವಾ ಮೊಸರು ಎರೆದು ಕುದಿಸಿ.
ಸಿಹಿ ಬೇಕಿದ್ದರೆ ಸ್ವಲ್ಪ ಬೆಲ್ಲ ಹಾಕಬಹುದು.
ದಪ್ಪ ಸಾಂದ್ರತೆಯ ಈ ರಸಂ ನಮ್ಮ ಮನ ಗೆದ್ದಿತು.
ಒಗ್ಗರಣೆ ಇಲ್ಲದಿದ್ದರೂ ನಡೆದೀತು, ಒಂದೆಸಳು ಕರಿಬೇವು ಇರಲಿ.
ಈ ನಳಪಾಕಕ್ಕೆ ಕೇರಳೀಯರ ವೆಜಿಟಬಲ್ ಸ್ಟ್ಯೂ ಸ್ಪೂರ್ತಿ ನೀಡಿದೆ.
ನಾಲ್ಕೈದು ಬಾರಿ ಈ ಅಡುಗೆ ವಿನ್ಯಾಸವನ್ನು ಮಾಡಿ ನೋಡಿದ್ದೇನೆ. ಬಟಾಣಿ ಕಾಳು ಹಾಕದೆಯೂ ಮಾಡಬಹುದು, ಕೇವಲ ಕಾಲಿಪ್ಲವರ್ ಮಾತ್ರ ಹಾಕಿಯೂ ಚೆನ್ನಾಗಿರುತ್ತದೆ. ಬೇಗನೆ ಬೇಯುವ ಹೂ ಇದಾಗಿರುವುದರಿಂದ ಅಡುಗೆಯೂ ಜಟ್ ಪಟ್ ಆಗಿ ಬಿಡುತ್ತದೆ.
0 comments:
Post a Comment