ಮತ್ತೊಂದು ಸಂಕ್ರಾಂತಿ ಬಂದಿದೆ. ನಾಗಬನದಲ್ಲಿಯೂ ಪೂಜಾ ಸಂಭ್ರಮ. ಶಂಖ ಜಾಗಟೆಗಳ ನಿನಾದ, ಪುರೋಹಿತರ ಮಂತ್ರಘೋಷ. ಹೂವು ಹಣ್ಣುಗಳೊಂದಿಗೆ ಹೊದಳು, ಎಲೆ ಅಡಿಕೆ, ಬೆಲ್ಲ ಪ್ರಸಾದ ಬಂದಿದೆ. ಹೊದಳು ಮಾತ್ರವಲ್ಲದೆ ಅವಲಕ್ಕಿಯೂ ಬೆರೆತಿತ್ತು, ಪ್ರತ್ಯೇಕಿಸಲು ಬಾರದು. ಭರ್ತಿ ಒಂದು ಸೇರು ಇತ್ತು. ಮಕ್ಕಳೆಲ್ಲ ಮನೆಯಲ್ಲಿ ಇರುತ್ತಿದ್ದರೆ ಕಜ್ಜಾಯ ಮಾಡಿ ತಿನ್ನಬಹುದಿತ್ತು.
ಅವಲಕ್ಕಿ ಹೊದಳು ಮಿಶ್ರಣವನ್ನು ಗರಿ ಗರಿ ಇರುವಾಗಲೇ ಡಬ್ಬದಲ್ಲಿ ತೆಗೆದಿರಿಸಲಾಯಿತು. ಅರ್ಧದಷ್ಟು ದೋಸೆಗಿರಲಿ, ಉಳಿದದ್ದು ಇನ್ನೊಮ್ಮೆ ನೋಡಿಕೊಳ್ಳೋಣ.
ಹೇಗೆ ದೋಸೆ ಹಿಟ್ಟು ಮಾಡಿದ್ದೂ?
ದೋಸೆ ಅಕ್ಕಿ 2 ಲೋಟ
ಅನ್ನ 1 ಸೌಟು
ಅವಲಕ್ಕಿ+ಹೊದಳು 2 ಲೋಟ, ಅರೆಯುವ ಮೊದಲು ತುಸು ನೀರು ಎರೆದು ಮೆತ್ತಗಾಗಿ ಇರಬೇಕು.
ರುಚಿಗೆ ಉಪ್ಪು
ರಾತ್ರಿ ಹಿಟ್ಟು ಮಾಡಿಟ್ಟು ಬೆಳಗ್ಗೆ ದೋಸೆ ಎರೆಯುವುದು.
ಹಿಟ್ಟು ನೀರಾಗಬಾರದು, ದೋಸೆ ಹಿಟ್ಟಿನ ಸಾಂದ್ರತೆ ಇರಬೇಕು.
ಪೇಪರ್ ತರಹ ದೋಸೆ ಎದ್ದು ಬರುತ್ತದೆ.