ಹಾಲು ಉಳಿದಿತ್ತು, ಮೊಸರು ಮಾಡಿ ಇಟ್ಕೊಂಡೆ. ನಾವಿಬ್ಬರೂ ಆರೋಗ್ಯ ಸೂತ್ರದನ್ವಯ ಮೊಸರು ತಿನ್ನುವುದಕ್ಕಿಲ್ಲ. ಮಕ್ಕಳೆಲ್ಲ ಇದ್ದಾಗ ಮೊಸರಿನ ವಹಿವಾಟು.
“ಮೊಸರು ಏನ್ಮಾಡ್ತೀರಾ ? “
“ತುಂಬ ದಿನ ಆಯ್ತು ಇಡ್ಲಿ ತಿನ್ನದೆ, ರವಾ ಇಡ್ಲಿ ಮಾಡೋಣ. “
ಮೊಸರು ಅತಿಯಾಗಿ ಹಾಕದೆ ಟೊಮ್ಯಾಟೋ ರಸ ಹಾಕುವ ಅಂದಾಜು ಮಾಡಲಾಯಿತು. ಇದೀಗ ಹೊಸರುಚಿಯೊಂದು ಬರಲಿದೆ.
ಮಲಗುವ ಮುನ್ನ ಒಂದು ದೊಡ್ಡ ಲೋಟ ಬಾಂಬೆ ರವಾ ಹುರಿಯಲಾಯಿತು. ಇನ್ನೇನಿದ್ದರೂ ನಾಳೆಗೆ.
ಮುಂಜಾನೆ ಮೊಸರು ಆಗಿದೆಯೋ ಎಂದು ನೋಡುವುದು. ಆಗದೇ ಇದ್ದಲ್ಲಿ ಇಡ್ಲಿಯ ಆಸೆ ಬಿಟ್ಟು ರವಾ ಉಪ್ಪಿಟ್ಟು ಒಗ್ಗರಿಸುವುದು. ಮೊಸರು ಸರಿಯಾದ ಹದದಲ್ಲಿ ಆಗಿದೆ, ಇನ್ನು ಚಿಂತೆಯಿಲ್ಲ.
ಎರಡು ಟೊಮ್ಯಾಟೋ ಕತ್ತರಿಸಿ, ಮಿಕ್ಸಿಯಲ್ಲಿ ತಿರುಗಿಸಿ ರಸ ತೆಗೆದಿರಿಸಿ, ಗಟ್ಟಿ ಚೂರುಗಳನ್ನು ಬೇರ್ಪಡಿಸುವುದು.
ಶುಂಠಿ ಕೊಚ್ಚಲು, ಹಸಿಮೆಣಸಿನ ಕೊಚ್ಚಲು, ಕೊತ್ತಂಬರಿ ಸೊಪ್ಪಿನ ಕೊಚ್ಚಲು ಸಿದ್ಧ ಪಡಿಸುವುದು.
ಬೇವಿನ ಸೊಪ್ಪು ಕೂಡಿದ ಒಗ್ಗರಣೆ ಚಟಪಟ ಎಂದಿತು.
ಒಂದು ಲೋಟ ಮೊಸರು ಅಳೆದು ತಪಲೆಗೆ ಎರೆದು, ಒಗ್ಗರಣೆಯನ್ನು ಮೊಸರಿನೊಂದಿಗೆ ಹೊಂದಿಸುವುದು.
ಹುರಿದ ಬಾಂಬೇ ರವಾ ಬೆರೆಸಿ,
ಎಲ್ಲ ವಿಧದ ಕೊಚ್ಚಲುಗಳನ್ನು ಕೂಡಿಸಿ,
ತರುವಾಯ ಟೊಮ್ಯಾಟೋ ರಸ ಎರೆದು,
ರುಚಿಗೆ ತಕ್ಕಷ್ಟು ಪುಡಿಯುಪ್ಪು ಮತ್ತು ಚಿಟಿಕೆ ಸೋಡಾ ಹುಡಿ ಬೀಳುವಲ್ಲಿಗೆ ಇಡ್ಲಿ ಹಿಟ್ಟು ತಯಾರ್.
ಇಡ್ಲಿ ಆಯ್ತು, ಸೂಕ್ತ ಚಟ್ಣಿಯೊಂದಿಗೆ, ಘಮಘಮಿಸುವ ತುಪ್ಪದೊಂದಿಗೆ ಮುಂಜಾನೆಯ ಶುಭಾರಂಭ ಆಯ್ತೂ ಅನ್ನಿ.
0 comments:
Post a Comment