Pages

Ads 468x60px

Saturday, 28 February 2026

ನಂಬಿಕೆ ಮತ್ತು ವಿಜ್ಞಾನ




ತಂಬುಳಿ ಬಂದಿದೆ,

ಉರಗೆ (ಒಂದೆಲಗ) ಯನ್ನು ಬೇಯಿಸಿ ತಿನ್ನಬಾರದು, ರಾತ್ರಿ ಹೊತ್ತೂ ಈ ತಂಬುಳಿ ಸೇವಿಸುವಂತಿಲ್ಲ,  ಹಿಂದಿನವರ ಹೇಳಿಕೆ. 

ಇದರ ಒಳಾರ್ಥವೇನು?


ಹಿಂದಿನವರ ಮಾತುಗಳಲ್ಲಿ ಕೇವಲ ನಂಬಿಕೆಗಳಷ್ಟೇ ಅಲ್ಲ, ಅದರ ಹಿಂದೆ ಬಹಳಷ್ಟು ವೈಜ್ಞಾನಿಕ ಹಾಗೂ ಆಯುರ್ವೇದದ ಸತ್ಯಗಳಿರುತ್ತವೆ.


ಒಂದೆಲಗವನ್ನು ಬೇಯಿಸುವಂತಿಲ್ಲ. ಒಂದೆಲಗದಲ್ಲಿರುವ ಔಷಧೀಯ ಗುಣಗಳು (ಮುಖ್ಯವಾಗಿ ಸ್ಮರಣಶಕ್ತಿ ಹೆಚ್ಚಿಸುವ ಅಂಶಗಳು), ವಿಟಮಿನ್ ಸಿ ಮತ್ತು ಸೂಕ್ಷ್ಮವಾದ ಪೋಷಕಾಂಶಗಳು  ಅತಿ ಹೆಚ್ಚು ತಾಪಮಾನಕ್ಕೆ ಗುರಿಯಾದಾಗ ಆವಿಯಾಗಿ ಅಥವಾ ನಾಶವಾಗಿ ಹೋಗುತ್ತವೆ. 


ಹಸಿ ಸೇವನೆಯೇ ಉತ್ತಮ. ಬೇಯಿಸುವುದರಿಂದ ಅದರ ಮೂಲ ಸತ್ವ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಅದನ್ನು ಹಸಿಯಾಗಿ ರುಬ್ಬಿ, ಮಜ್ಜಿಗೆ ಬೆರೆಸಿ ತಂಬುಳಿ ಮಾಡುವುದು ಅಥವಾ ಹಸಿ ಚಟ್ನಿ ಮಾಡುವುದು ರೂಢಿ. ಇದರಿಂದ ಅದರ ಶೇಕಡಾ ನೂರರಷ್ಟು ಲಾಭ ದೇಹಕ್ಕೆ ಸಿಗುತ್ತದೆ.


ರಾತ್ರಿ ಹೊತ್ತು ತಂಬುಳಿ ಸೇವಿಸುವಂತಿಲ್ಲ.  ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ,ತಂಬುಳಿಯನ್ನು ಮಜ್ಜಿಗೆ ಅಥವಾ ಮೊಸರು ಬಳಸಿ ಮಾಡಲಾಗುತ್ತದೆ. ಆಯುರ್ವೇದದ ಪ್ರಕಾರ, ಸೂರ್ಯಾಸ್ತದ ನಂತರ (ರಾತ್ರಿ ಹೊತ್ತು) ಮಜ್ಜಿಗೆ ಅಥವಾ ಮೊಸರು ಸೇವಿಸುವುದರಿಂದ ಶ್ವಾಸಕೋಶದಲ್ಲಿ ಕಫ ಶೇಖರಣೆಯಾಗುತ್ತದೆ. ಇದರಿಂದ ಶೀತ, ಕೆಮ್ಮು ಮತ್ತು ಗಂಟಲು ನೋವು ಬರುವ ಸಾಧ್ಯತೆ ಹೆಚ್ಚು. 

ಒಂದೆಲಗ ಮೂಲತಃ   ತಂಪುಗುಣವನ್ನು ಹೊಂದಿರುವ ಸೊಪ್ಪು. ಇದು ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ. ರಾತ್ರಿಯ ತಂಪಾದ ವಾತಾವರಣದಲ್ಲಿ, ತಂಪು ಗುಣದ ಒಂದೆಲಗ ಮತ್ತು ಮಜ್ಜಿಗೆಯ ಮಿಶ್ರಣವನ್ನು ತಿಂದರೆ ದೇಹದ ಜೀರ್ಣಕ್ರಿಯೆ (ಅಗ್ನಿ) ನಿಧಾನವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯ.   .


ಹಿಂದಿನವರು ಪ್ರಕೃತಿ, ವಾತಾವರಣ ಮತ್ತು ನಮ್ಮ ದೇಹದ ಜೈವಿಕ ಗಡಿಯಾರಕ್ಕೆ (Biological clock) ತಕ್ಕಂತೆ ಯಾವ ಆಹಾರವನ್ನು, ಯಾವ ರೂಪದಲ್ಲಿ, ಯಾವ ಸಮಯದಲ್ಲಿ ತಿನ್ನಬೇಕು ಎಂದು ಬಹಳ ವೈಜ್ಞಾನಿಕವಾಗಿ ನಿಯಮಗಳನ್ನು ಮಾಡಿದ್ದರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.









 

Sunday, 8 February 2026

ಚಕೋತಾ ರಸರುಚಿ




ತೋಟದಿಂದ ತಾಜಾ ಚಕೋತ ಬಂದಿದೆ.  ರಂಗಣ್ಣ ಕೊಯ್ದು ತಂದಿಟ್ಟದ್ದು.

ಸಿಪ್ಪೆ ಬಿಡಿಸಿ, ಎಸಳುಗಳನ್ನು ಬೇರ್ಪಡಿಸಿ ತಿನ್ನುವುದು ಸಾಮಾನ್ಯ ವಿಧಾನ.  

ನಮ್ಮದು ಹೊಸರುಚಿ ಆಗಬೇಡವೇ,  ಮಾಡೋಣ ಕೋಸಂಬರಿ.  ಹೇಗೇ?


ಚಕೋತಾ ಎಸಳು ಬಿಡಿಸಿ, 

ರುಚಿಗೆ ತಕ್ಕಷ್ಟು ಉಪ್ಪು, 

ಖಾರದ ಬಾಬ್ತು ಕಾಳುಮೆಣಸಿನ ಪುಡಿ, 

ಬೇಕಿದ್ದರೆ ನಿಂಬೆ ರಸ,

ಇದ್ದರೆ ಕೊತ್ತಂಬರಿ ಸೊಪ್ಪು,

ಪುಟ್ಟದೊಂದು ಒಗ್ಗರಣೆ…

ಇಷ್ಟಾದರೆ ಕೋಸಂಬರಿ ಆಯಿತು.


ಈಗ ಚಕೋತಾ ತಂಬುಳಿ ಮಾಡೋಣ.

ಚಕೋತಾ ಎಸಳುಗಳನ್ನು ಸೊಗಸಾಗಿ ಬಿಡಿಸುವುದು ಅವಶ್ಯವಿದೆ.

ಉಳಿದಂತೆ ಕಾಯಿತುರಿ,  ಸಿಹಿಮಜ್ಜಿಗೆ ಯಾ ಸಿಹಿ ಮೊಸರು,  ಹುರಿದ ಜೀರಿಗೆ, ಕಾಳುಮೆಣಸು, ರುಚಿಗೆ ಉಪ್ಪು ಕೂಡಿ ನುಣ್ಣಗೆ ಅರೆಯಿರಿ.   ಒಗ್ಗರಣೆಯೊಂದಿಗೆ ಎಸಳುಗಳನ್ನು ಬೆರೆಸುವಲ್ಲಿಗೆ ತಂಬುಳಿ ಸಿದ್ಧವಾಯಿತು.  ಕುದಿಸುವುದೂ ಬೇಡ, ನಾಳೆಗೆ, ರಾತ್ರಿಗೆ ಇಡುವುದಕ್ಕೂ ಇಲ್ಲ.

ಇನ್ನೀಗ ಚಕೋತಾ ಸಿಪ್ಪೆ ಉಳಿದಿದೆ.  ಅದನ್ನೂ ಸವಿರುಚಿಯಾಗಿಸೋಣ.

ಚಕೋತಾ ಸಿಪ್ಪೆ ತುಂಬ ಕಹಿ,  ಕಹಿ ತೆಗೆಯೋಣ.

ಹಸಿರು ಬಣ್ಣದ ಸಿಪ್ಪೆ ಹೆರೆದು ತೆಗೆಯಿರಿ, ಬೆಳ್ಳಗಿನ ತಿರುಳು ಮಾತ್ರ ನಮಗೆ ಸಾಕು,  ಕತ್ತರಿಸಿ ಚೆನ್ನಾಗಿ ಬೇಯಿಸಿ, ನೀರು ಬಸಿದು, ತಿರುಳನ್ನೂ ಹಿಂಡಿ ಇಟ್ಟುಕೊಳ್ಳಿ.

ಒಗ್ಗರಣೆಗಿಟ್ಟು,  ಉಪ್ಪು ಹುಣಸೆ ರಸ, ಬೆಲ್ಲ ಹಾಗೂ ನೀರು ಎರೆದು ಕುದಿಸಿದ ದ್ರಾವಣಕ್ಕೆ ಹಿಂಡಿ ಇರಿಸಿದ ಚಕೋತಾ ಸಿಪ್ಪೆಯ ಚೂರುಗಳನ್ನು ಸೇರಿಸುವಲ್ಲಿಗೆ ಗೊಜ್ಜು ಸಿದ್ಧವಾಗಿದೆ.

ಈ ಗೊಜ್ಜು ಇನ್ನೂ ಪರಿವರ್ತಿತವಾಗಲಿದೆ.  ಖಾರ ಬೇಕಿದ್ದರೆ ಮೆಣಸ್ಕಾಯಿ,  ಸಿಹಿ ಸಾಕು ಎಂದಿದ್ದರೆ ಸಾಸಮೆಯೂ ಆಗುತ್ತದೆ.

ತೆಂಗಿನ ತುರಿಯೊಂದಿಗೆ ಸಾಸಿವೆ, ಬೆಲ್ಲ, ಹಸಿ ಮೆಣಸು ಅರೆದು, ಸಿಹಿ ಮಜ್ಜಿಗೆ ಎರೆಯುವಲ್ಲಿಗೆ ಸಾಸಮೆ ಬಂದಿದೆ.

ಎಳ್ಳು ಹುರಿದು, ಸಾಂಬಾರ ಮಸಾಲೆ ಹಾಗೂ ತೆಂಗಿನ ತುರಿ ಅರೆದು ಕೂಡುವುದು.  ಬೆಲ್ಲ ಹಾಕಲೇ ಬೇಕು.  ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಬೀಳಲೇ ಬೇಕು,  ಒಗ್ಗರಣೆಗೂ ತೆಂಗಿನೆಣ್ಣೆಯೇ ಆಗಬೇಕು.  ಇದೀಗ ಮೆಣಸ್ಕಾಯಿ.

ಬೇಯಿಸಿದ ಸಿಪ್ಪೆಯನ್ನು ತಂಬುಳಿಯಾಗಿಸುವುದೂ ನಮ್ಮ ಕೈಯಲ್ಲಿ ಇದೆ ಎಂದು ಬೇರೆ ಹೇಳಬೇಕಿಲ್ಲ.


ತಂಬುಳಿ ಊಟಕ್ಕೆ ತುಂಬಾ ತಂಪಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ರಾಮಬಾಣ. ಬಿಸಿ ಅನ್ನದ ಜೊತೆ ಊಟ ಮಾಡಲು ಇದು ತುಂಬಾ ರುಚಿ.

ಚಕೋತದಲ್ಲಿ ನಾರಿನಂಶ ಹೆಚ್ಚಿರುವುದರಿಂದ, ವಯಸ್ಸಾದಂತೆ ಕಾಡುವ ಮಲಬದ್ಧತೆಯಂತಹ ಸಮಸ್ಯೆಗೆ ಸೂಕ್ತ ಮನೆಮದ್ದು.

ವಿಟಮಿನ್ ಸಿ ಹೇರಳವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಕ.




ಟಿಪ್ಪಣೆ:

ದಿನಾಂಕ 23, ಫೆಬ್ರವರಿ.  ಬರಹ ಮುಂದುರಿದಿದೆ , ಒಂದು ಫೋಟೋ ಕೂಡಾ ಬಂದಿದೆ. 


ಒಂದು ಸಣ್ಣ ಗುಟ್ಟು: ಸಿಪ್ಪೆಯ ಕಹಿ ತೆಗೆಯುವಾಗ, ಮೇಲಿನ ಹಸಿರು ಸಿಪ್ಪೆಯನ್ನು ಪೂರ್ತಿಯಾಗಿ ಹೆರೆಯದೆ, ಅಲ್ಲಲ್ಲಿ ಸ್ವಲ್ಪ ಉಳಿಸಿಕೊಂಡರೆ ಅದರ ರುಚಿಯೇ ಬೇರೆ! ಈ ಹಸಿರು ಸಿಪ್ಪೆಯಲ್ಲಿರುವ ನೈಸರ್ಗಿಕ ತೈಲಾಂಶವು (Essential oils) ತಂಬುಳಿಗೆ ಅದ್ಭುತವಾದ ನಿಂಬೆಯಂತಹ ಸುವಾಸನೆ ನೀಡುತ್ತದೆ. ಊಟದ ನಂತರ ಬಾಯಿ ವಾಸನೆ ತೊಲಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕೃತಕ ವಸ್ತುಗಳಿಗಿಂತ, ಈ ನೈಸರ್ಗಿಕ ಘಮ ಎಷ್ಟೋ ಪಾಲು ಹಿತ ಮತ್ತು ಆರೋಗ್ಯಕರ. ಇದೊಂದು ರೀತಿ ಊಟದ ಜೊತೆಯೇ ಸವಿಯುವ 'ನೈಸರ್ಗಿಕ ಮೌತ್ ಫ್ರೆಶ್ನರ್'!