Pages

Ads 468x60px

Wednesday, 15 April 2026

ಪಾಲ್ಪಾಯಸಂ

 

ನಿನ್ನೆ ಹಿರಣ್ಯ ದೇಗುಲದಲ್ಲಿ ಸಂಕ್ರಾಂತಿಯ ಸಡಗರ,  ವಿಷು ಸಂಕ್ರಾಂತಿಯಾದುದರಿಂದ ಭಕ್ತಾದಿಗಳ ದಟ್ಟಣೆ.  ಮುಂಜಾನೆಯಿಂದಲೇ ಪೂಜೆ ಪ್ರಾರಂಭ,  ಪಕ್ಕದಲ್ಲೇ ಕೆಳಗೆ ನಾಗಬನ, ಅಲ್ಲಿಯೂ ಪೂಜಾಕೈಂಕರ್ಯ.   ಅಪರಾಹ್ನ ಕಾಲದ ಪೂಜಾ ನಂತರ ಅನ್ನ ಪ್ರಸಾದ.  ದೇವಸ್ಥಾನದ ಊಟವೆಂದರೆ ಅನ್ನ,ಪಲ್ಯ ಸಾರು ಸಾಂಬಾರು, ಸಿಹಿ, ಮಜ್ಜಿಗೆ, ಉಪ್ಪಿನಕಾಯಿ..

ಗುಜ್ಜೆ ಪಲ್ಯನಿನ್ನೆಯ ವಿಶೇಷ,  ಈಗ ಹಲಸಿನಕಾಯಿಯದೇ ದರ್ಬಾರು,  ಬಿಡುವಂತಿಲ್ಲ ಎಂಬಂತೆ ಮಾವಿನ ಹಣ್ಣಿನ ಮೆಣಸ್ಕಾಯಿ ಇದ್ದಿತು.

ಕ್ಷೀರ,  ಹೆಸ್ರು ಪಾಯಸ, ನೈವೇದ್ಯದ ವಿಶೇಷ ಪಾಲ್ಪಾಯಸಂ ಇದ್ದಿತು.

ಈ ಪಾಲ್ಪಾಯಸ ಮಾಡಿದ ಕ್ರಮ ಹೇಗೆಂದು ತಿಳಿಯಲು ಅಡುಗೆಪಂಡಿತರನ್ನೇ ಕೇಳೋಣಾ ಅಂತಿದ್ರೇ ಯಾರನ್ನೂ ಕಾಣಿಸಲಿಲ್ಲ.   ಚಿಂತೆಯಿಲ್ಲ,  ಮನೆಗೆ ಹೋದ್ಮೇಲೆ ಅಮ್ಮನ ಡೈರಿ ತೆಗೆದು ನೋಡಿದ್ರಾಯ್ತಪ..


ಅಮ್ಮ ಟೀವಿಯಲ್ಲಿ ಬರುತ್ತಿದ್ದಂತಹ ನಳಪಾಕಗಳನ್ನು ನೋಡುತ್ತ ಬರೆದೂ ಇಡ್ತಿದ್ರು. ಅದಕ್ಕೂ ಮೊದಲು ಸುಧಾ ವಾರಪತ್ರಿಕೆಯಲ್ಲಿ ಮಹಿಳೆಯರಿಗೆಂದೇ ಎರಡು ಪುಟಗಳ ಕಾಮಧೇನು ಅಂಕಣದಲ್ಲಿ ಪ್ರಕಟವಾಗುತ್ತಿದ್ದ ಅಡುಗೆ ಪುಟಗಳನ್ನು ಜೋಪಾನವಾಗಿ ಕತ್ತರಿಸಿ, ತೆಗೆದಿರಿಸುತ್ತಿದ್ದರು.  ಸೂಕ್ತ ಸಂದರ್ಭ ದೊರೆತಾಗ ಅಡುಗೆಯ ಪ್ರಯೋಗ, ನನಗೆ ಈಗಲೂ ಚೆನ್ನಾಗಿ ನೆನಪಿದೆ,  ಟೊಮೇಟೋ ಕಾಯಿರಸ ಎಂಬ ವ್ಯಂಜನ ಸುಧಾ,  ಕಾಮಧೇನು ವಿಭಾಗದಲ್ಲಿ ಬಂದದ್ದು, ತುಂಬ ರುಚಿಕರವಾದ ಈ ಪದಾರ್ಥವನ್ನು ನಾನು ಹಿರಣ್ಯದಲ್ಲೂ ಮಾಡಿದ್ದೇನೆ,  ಬ್ಲಾಗ್ ನಲ್ಲೂ ಇದೆ.  ಆಸಕ್ತರು. ಹುಡುಕಿ ಓದಿರಿ.


ಟಿಪ್ಪಣಿ: ಹಿರಣ್ಯ ದೇವಸ್ಥಾನದ ಪಾಲ್ಪಾಯಸದ ಈ ವಿಧಾನ ನನಗೆ ಸಿಕ್ಕಿದ್ದು ಅಮ್ಮನ ಹಳೆಯ ಕೈಬರಹದ ಪುಸ್ತಕದಲ್ಲಿ. ಹಬ್ಬದ ದಿನ ಅಮ್ಮನ ಕೈರುಚಿಯ ನೆನಪು ಈ ಪಾಯಸದ ಸಿಹಿಯನ್ನು ಇನ್ನಷ್ಟು ಹೆಚ್ಚಿಸಿದೆ.





ಹಿರಣ್ಯ ದುರ್ಗಾಪರಮೇಶ್ವರಿ ದೇವಸ್ಥಾನದ ಆ ನೈವೇದ್ಯದ ಪರಿಮಳ ಮತ್ತು ರುಚಿಯನ್ನು ಮನೆಯಲ್ಲೇ ಮರುಸೃಷ್ಟಿಸಲು ಇಲ್ಲಿದೆ ವಿಧಾನ. 


ದೇವಸ್ಥಾನದ ಭಟ್ಟರು ಕಟ್ಟಿಗೆಯ ಒಲೆಯ ಮೇಲೆ ಗಂಟೆಗಟ್ಟಲೆ ಕುದಿಸಿ ಆ ವಿಶೇಷ ರುಚಿಯನ್ನು ತರುತ್ತಾರೆ. ಆದರೆ ನಮ್ಮ ಮನೆಯ ಇಂಡಕ್ಷನ್ ಒಲೆಯ ಮೇಲೆಯೇ, ದಪ್ಪ ತಳದ ಕುಕ್ಕರ್ ಬಳಸಿ ಅದೇ ಹದವನ್ನು ಸುಲಭವಾಗಿ ತರಬಹುದು.

ಬೇಕಾಗುವ ಸಾಮಗ್ರಿಗಳು:

ಪೂರ್ಣ ಕೆನೆಯುಕ್ತ ಹಾಲು - ಒಂದು ಲೀಟರ್

ನೀರು -  ಅರ್ಧ ಲೀಟರ್ (ಹಾಲು ತಳ ಹಿಡಿಯದಿರಲು)

ಬೆಳ್ತಿಗೆ ಅಕ್ಕಿ - ಕೇವಲ 3 ರಿಂದ 4 ಚಮಚ (ಅಕ್ಕಿ ಕಡಿಮೆ ಇದ್ದಷ್ಟೂ ಪಾಯಸದ ಹದ ಚೆನ್ನಾಗಿರುತ್ತದೆ)

ಸಕ್ಕರೆ -  ಅರ್ಧ ಲೋಟ (ಅತಿಯಾದ ಸಿಹಿಯಿಲ್ಲದ, ಹಿತವಾದ ರುಚಿಗೆ ಇದು ಸರಿಯಾದ ಅಳತೆ)

ಏಲಕ್ಕಿ ಪುಡಿ - ಒಂದು ಚಿಕ್ಕ ಚಮಚ

ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ

ಪಚ್ಚ ಕರ್ಪೂರ (Edible camphor) - ಒಂದು ಸಣ್ಣ ಚಿಟಿಕೆ (ಇದೇ ದೇವಸ್ಥಾನದ ಪಾಯಸದ ಸುವಾಸನೆಯ ಗುಟ್ಟು!)

ಮಾಡುವ ವಿಧಾನ:

ಅಕ್ಕಿಯ ತಯಾರಿ: ಅಕ್ಕಿಯನ್ನು ಚೆನ್ನಾಗಿ ತೊಳೆದು 10 ನಿಮಿಷ ನೆನೆಯಲು ಬಿಡಿ. ಪಾಯಸದಲ್ಲಿ ಅಕ್ಕಿ ಕರಗಿ ಹೋಗಬಾರದು ಎಂದರೆ, ತೊಳೆದ ಅಕ್ಕಿಯನ್ನು ಸ್ವಲ್ಪ ತುಪ್ಪದಲ್ಲಿ ಲಘುವಾಗಿ ಹುರಿದುಕೊಳ್ಳಬಹುದು.

ಕುದಿಸುವಿಕೆ (ಮುಖ್ಯ ಹಂತ): ದಪ್ಪ ತಳದ ಕುಕ್ಕರ್‌ನಲ್ಲಿ ಹಾಲು ಮತ್ತು ನೀರನ್ನು ಸೇರಿಸಿ ಕುದಿಯಲು ಇಡಿ. ಹಾಲು ಉಕ್ಕಿ ಬರುವಾಗ, ಅಕ್ಕಿಯನ್ನು ಸೇರಿಸಿ.

ಮಂದ ಉರಿಯ ಬೇಯಿಸುವಿಕೆ: ಕುಕ್ಕರ್ ಮುಚ್ಚಳ ಮುಚ್ಚಿ,  ವೆಯಿಟ್ ಹಾಕದಿರಿ.

ಕುದಿಯುವಾಗ ಉರಿಯನ್ನು ಸಂಪೂರ್ಣ ಕಡಿಮೆ ಮಾಡಿ,  30-40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ನಡುವೆ ಒಂದೆರಡು ಬಾರಿ ಸೌಟಿನಿಂದ ತಿರುಗಿಸಿ. ಹಾಲು ನಿಧಾನವಾಗಿ ಕುದಿದು, ತಿಳಿ ಗುಲಾಬಿ ಅಥವಾ ಕೆನೆ ಬಣ್ಣಕ್ಕೆ ತಿರುಗುತ್ತದೆ.

ಸಕ್ಕರೆ ಸೇರಿಸುವಿಕೆ: ಅಕ್ಕಿ ಸಂಪೂರ್ಣವಾಗಿ ಬೆಂದು, ಹಾಲು ಗಟ್ಟಿಯಾದ ಮೇಲೆ ಮಾತ್ರ ಸಕ್ಕರೆ ಸೇರಿಸಿ. ಮೊದಲೇ ಸಕ್ಕರೆ ಹಾಕಿದರೆ ಅಕ್ಕಿ ಸರಿಯಾಗಿ ಬೇಯುವುದಿಲ್ಲ. ಸಕ್ಕರೆ ಕರಗಿ, ಪಾಯಸ ಮಂದವಾದ ನಂತರ ಮತ್ತೆ 5 ನಿಮಿಷ ಕುದಿಸಿ.

ಒಗ್ಗರಣೆ ಮತ್ತು ಪರಿಮಳ: ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಆ ಒಂದು ಚಿಟಿಕೆ ಪಚ್ಚ ಕರ್ಪೂರವನ್ನು ಸೇರಿಸಿ ಒಲೆ ಆರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿದರೆ, ದೇವಸ್ಥಾನದ ಭಟ್ಟರ ಕೈರುಚಿಯ ಪಾಲ್ಪಾಯಸ ಸವಿಯಲು ಸಿದ್ಧ.






Saturday, 4 April 2026

ದ್ರೌಪದೀ ಅಡುಗೆ



ಒಲೆ ಉರಿಸಿ ಅಡುಗೆ ಮಾಡುವ ಕಾಲ ಮತ್ತೆ ಬಂದ ಹಾಗಿದೆ.  ಎಲ್ಲೋ ಯುದ್ಧ ನಡೆಯುತ್ತಿದೆ,  ನಮ್ಮ ಅಡುಗೆ ಅನಿಲ ಸರಬರಾಜು ಇಲ್ಲ,  ಸ್ಟಾಕಿಲ್ಲ… ಸಪ್ಲೈ ಇಲ್ಲ.. ಇಂತಹ ಉತ್ತರಗಳು.


ಮೊನ್ನೆ ಮಧುಕರನೂ ಅಂದಿದ್ದ,  “ ಇರುವ ಗ್ಯಾಸ್ ಸಿಲಿಂಡರನ್ನು ಕಡಿಮೆ ಉಪಯೋಗಿಸು, ಸಾಧ್ಯವಾದಷ್ಟೂ ಕರೆಂಟಿನಲ್ಲೇ ಅಡುಗೆ ಮಾಡು.  ಇಲ್ಲಿ ಹೋಟಲ್ಗಳಲ್ಲಿ ದೋಸೆ ಇಲ್ಲ,  ಅನ್ನಕ್ಕೆ ಸಾಂಬಾರ್ ಇಲ್ಲ… ಕೇವಲ ಚಟ್ಣಿ ಕೊಡ್ತಾರೆ..”


“ಅದೊಂದು ಅಸ್ಸಾಂ ಅಕ್ಕಿ ಆನ್ ಲೈನಲ್ಲಿ ತರಿಸಿ ಕೊಟ್ಟಿದ್ದರೆ ಮಾಡಿ ನೋಡಬಹುದಿತ್ತು.  ನೀರು ಕುದಿಸದೇ ಅನ್ನ ಆಗುತ್ತಂತೆ.. ". 

“ ತರಿಸೋಣ,  ಈಗ ಕರೆಂಟಿನಲ್ಲೇ ಅನ್ನ ಮಾಡು..”


ನಾನು ಯಾವತ್ತೂ ಗ್ಯಾಸ್ ಒಲೆಯಲ್ಲಿ ಅನ್ನ ಮಾಡಿಯೇ ಇಲ್ಲ,  ಇಂಡಕ್ಷನ್ ಸ್ಟವ್ ನನ್ನ ಅಚ್ಚುಮೆಚ್ಚಿನದು.  ಅದರ ಮೇಲಿಟ್ಟು ಎಲ್ಲವನ್ನೂ ಸೆಟ್ ಮಾಡಿಟ್ಟು ಆಚೆ ಹೋಗಲಡ್ಡಿಯಿಲ್ಲ.  ಹಾಲು, ದೋಸೆ, ಪುಲ್ಕಾ, ಒಗ್ಗರಣೆ… ಗ್ಯಾಸ್ ಒಲೆ.


ಅನ್ನ ಕರೆಂಟಿನಲ್ಲಿ ಬೇಯುತ್ತಲಿದೆ.  ಮನೆಯಲ್ಲಿ ಸೋಲಾರ್ ಇರುವುದರಿಂದ ವಿದ್ಯುತ್ ಉಪಕರಣಗಳ ಉಚಿತ ಕಾರ್ಯ ನಿರ್ವಹಣೆ.

ಇನ್ನೊಂದು ರೈಸ್ ಕುಕರ್ ,  ಸಾಂಬಾರ್ ಇತ್ಯಾದಿ ಮಾಡಲಿಕ್ಕೆ.  ಪ್ಲಗ್ ಹಾಕಿ ಬಿಟ್ಟರಾಯಿತು,  ಬೇಳೆ, ತರಕಾರಿ ಎಲ್ಲವೂ ಹಿತವಾಗಿ ಬೇಯುತ್ತೆ.

ಇವತ್ತು ಸರಳವಾಗಿ ಒಲೆ ರಹಿತ ಅಡುಗೆ ಮಾಡೋಣ.




ಯುದ್ಧಕಾಲವಾದುದರಿಂದ ತರಕಾರಿಗಳ ಬೆಲೆ ಪಾತಾಳಕ್ಕಿಳಿದಿದೆಯಂತೆ. ಪತ್ರಿಕೆಯಲ್ಲಿ ಕಂಡಿದ್ದು.  ಗಲ್ಫ್ ರಾಜ್ಯಗಳಿಗೆ ರವಾನೆಯಾಗುತ್ತಿದ್ದ ತರಕಾರಿಗಳು ಹೋಗುವ ದಾರಿ ಕಾಣದೆ ಇಲ್ಲೇ ನೆಲ ಕಚ್ಚಿವೆ.


ಹೌದೂ ಹಾಗಿದ್ದರೆ ನೇಂದ್ರ, ಬಚ್ಚಂಗಾಯಿ ಜಾಸ್ತಿಯೇ ತರಿಸೋಣ.

“ಅಕ್ಕ, ಮೊನ್ನೆಯಿಂದಲೇ ನೇಂದ್ರಕ್ಕೆ ಕ್ರಯ ತುಂಬ ಕಮ್ಮಿಯಿತ್ತು.”  ಎಂದ ರಂಗಣ್ಣ.


ಈಗ ನೇಂದ್ರ ಸಿಕ್ಕಾಪಟ್ಟೆ ಬಂದಿದೆ,  ಹಣ್ಣು ತಿಂದು ಮುಗಿಯದು,  ಅಡುಗೆಗೂ ಉಪಯೋಗಿಸೋಣ, ಪಕ್ವವಾದಂತಹ ನೇಂದ್ರದ ಸಿಪ್ಪೆ ಬಿಡಿಸಿ, ಪಲ್ಯಕ್ಕೆ ಹೆಚ್ಚುವ ತರಹ ಕತ್ತರಿಸಿ,  ಉಪ್ಪು ಬೆರೆಸಿ,  ಮೊಸರು ಎರೆದು, ಕಾಯಿತುರಿ ಬೆರೆಸಿ, ಬಜ್ಜಿ ಎಂಬ ನಾಮಕರಣ ನೀಡೋಣ.

ಮುಂಜಾನೆಯ ಚಟ್ಟಣಿ ತಂಪು ಪೆಟ್ಟಿಗೆಯಲ್ಲಿ ಹಾಯಾಗಿದ್ದಿತು. ಹೊರಗೆ ಬಂದು ಟೇಬಲ್ ಅಲಂಕರಿಸಿತು. 

ಮಜ್ಜಿಗೆ ನಮಗೆ ಅನಿವಾರ್ಯ, ಊಟ ಮುಕ್ತಾಯ ಆಗುವುದೆಂತು?

ನಮ್ಮ ಮಿಡಿ ಉಪ್ಪಿನಕಾಯಿ,  ಇದಕ್ಕೆ ಒಲೆಯೇ ಬೇಕಿಲ್ಲ.  ನಿಂಬೆಹುಳಿ ಉಪ್ಪಿನಕಾಯಿಯೂ ಒಲೆಯನ್ನು ಕೇಳದು.  


ಪುರಾಣಗಳ ಪ್ರಕಾರ, ದ್ರೌಪದಿ ಒಲೆ ಹಚ್ಚಿ ಕಷ್ಟಪಡುವ ಬದಲು, ವನವಾಸದ ಸಮಯದಲ್ಲಿ ಸೂರ್ಯದೇವನು ಕರುಣಿಸಿದ "ಅಕ್ಷಯ ಪಾತ್ರೆ" ಅವಳ ಬಳಿಯಿತ್ತು. ಆ ಪಾತ್ರೆಯ ವಿಶೇಷವೆಂದರೆ, ಅದರಲ್ಲಿ ಅಡುಗೆಯನ್ನು 'ಮಾಡುವ' ಅಗತ್ಯವೇ ಇರಲಿಲ್ಲ! ದ್ರೌಪದಿ ತಾನು ಊಟ ಮಾಡುವವರೆಗೆ, ಆ ಪಾತ್ರೆಯಿಂದ ಎಷ್ಟು ಜನರಿಗೆ ಬೇಕಾದರೂ, ಎಂತಹ ರುಚಿಯಾದ ಭೋಜನವಾದರೂ ಸಿದ್ಧವಾಗಿ ಸಿಗುತ್ತಿತ್ತು.


ಆ ಅಡುಗೆ ಹೇಗಿದ್ದೀತು ಎಂದು ಕಲ್ಪಿಸಿಕೊಂಡರೆ,

ಅದು ಸಾಕ್ಷಾತ್ ಸೂರ್ಯದೇವನ ಪ್ರಸಾದವಾದ್ದರಿಂದ, ಅತ್ಯಂತ ಶುದ್ಧ, ಆರೋಗ್ಯಕರ ಮತ್ತು ದಿವ್ಯವಾದ ರುಚಿಯನ್ನು ಹೊಂದಿದ್ದಿರಬೇಕು.

ಈಗಿನ ಹೋಟೆಲ್ ಊಟದಂತೆ ಕೃತಕವಾಗಿರದೆ, ಅತಿಯಾದ ಖಾರ-ಮಸಾಲೆಗಳಿಲ್ಲದೆ, ದೇಹಕ್ಕೂ ಮನಸ್ಸಿಗೂ ಹಿತವಾದ ಸಾತ್ವಿಕ ಮತ್ತು ನೈಸರ್ಗಿಕ ರುಚಿ ಅದರಲ್ಲಿರುತ್ತಿತ್ತು.

ಕಾಡಿನಲ್ಲಿ ಸಿಗುವ ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನೇ ಷಡ್ರಸಗಳನ್ನಾಗಿ ಪರಿವರ್ತಿಸುವ ಶಕ್ತಿ ಆ ಪಾತ್ರೆಗಿದ್ದಿರಬೇಕು.