Pages

Ads 468x60px

Friday, 18 October 2024

ಕೆಸುವಿನೆಲೆ ಗೊಜ್ಜು

 



ಮಳೆಯಂತೂ ಬಿಡುವ ಲಕ್ಷಣ ಕಾಣಿಸುತ್ತಿಲ್ಲ,   ಬಾಳೆ ಎಲೆ, ಕೆಸುವಿನೆಲೆ, ಉರಗೆ ಇತ್ಯಾದಿಗಳನ್ನು ತರಲು ರಂಗಣ್ಣನ ಬಳಿಯೇ ಹೇಳಬೇಕಾಗಿದೆ.   ಪತ್ರೊಡೆ ತಿನ್ನದೆ ಯಾವ ಕಾಲ ಆಯ್ತು,  ಅಂಗಳದ ಸೊಪ್ಪುಸದೆಗಳನ್ನು ಕಟಾವ್ ಮಾಡಿದ ನಂತರ ಕೆಸುವಿನೆಲೆಗೂ ಗತಿಯಿಲ್ಲವಾಗಿದೆ.  ನನ್ನ ಇಂಗಿತವನ್ನು ಅರ್ಥ ಮಾಡಿಕೊಂಡ ರಂಗಣ್ಣ.  ಅವನೇ ತಂದುಕೊಟ್ಟ ಬಾಳೆ ಎಲೆಗಳನ್ನು ಸೂಕ್ತವಾಗಿ ಕತ್ತರಿಸಿ, ಜೋಡಿಸಿಟ್ಟು, ಪ್ಲಾಸ್ಟಿಕ್ ಕವರಿನೊಳಗಿಟ್ಟು ತಂಪು ಪೆಟ್ಟಿಗೆಯ ಒಳಗಿರಿಸಲಾಯಿತು. 


ಕೆಸುವಿನೆಲೆ ಸಿಕ್ಕಾಪಟ್ಟೆ ತಂದಿದ್ದ,  ಬಹುಶಃ ಪತ್ರೊಡೆಗೆ ಎಷ್ಟು ಸೊಪ್ಪು ಬೇಕಾದೀತೆಂಬ ಅಂದಾಜು ಅವನಿಗೆ ತಿಳಿದಿಲ್ಲ.   ಇರಲಿ,  ನನ್ನ ಪತ್ರೊಡೆಗೆ ಬೇಕಾದಂತಹ ದೊಡ್ಡ ಗಾತ್ರದ ಹದಿನೈದು ಎಲೆಗಳನ್ನು ತೆಗೆದಿಟ್ಟು ಮಿಕ್ಕುಳಿದ ಎಲೆಗಳು ತಂಪು ಪೆಟ್ಟಿಗೆ ಸೇರಿದವು.  


ಹೀಗೆ ತಂಪು ಪೆಟ್ಟಿಗೆ ಸೇರಿದ ಕೆಸುವಿನೆಲೆಗಳ ಗತಿಯೇನಾಯ್ತು ತಿಳಿಯುವ ಕುತೂಹಲವೇ?




ಮಜ್ಜಿಗೆ ದೋಸೆ ಮಾಡುವುದಿದೆಯಲ್ಲ,  ನಾಲ್ಕು ಎಲೆಗಳನ್ನು ಅರೆದು ದೋಸೆ ಹಿಟ್ಟಿಗೆ ಸೇರಿಸಲಾಯಿತು.  ಏನು ಹಚ್ಚಹಸಿರು ಬಣ್ಣ ಅಂತೀರಾ,  ಹಸಿರು ಬಣ್ಣದ ಹಿಟ್ಟು ದೋಸೆಯಾದ ನಂತರವೂ ತನ್ನ ಬಣ್ಣ ಕಳೆದು ಕೊಳ್ಳದೇ ಹಸಿರಾಗಿ ಮೆರೆಯಿತು.  ಇದಕ್ಕಾಗಿ ಹೆಚ್ಚಿನ ಹುಳಿಯೇನೂ ನಾನು ಹಾಕಿಲ್ಲ,  ಯಾವುದೇ ಮಾದರಿಯ ದೋಸೆಗೂ ಕೆಸುವಿನೆಲೆ ಹೊಂದಿಕೊಳ್ಳುತ್ತದೆ ಎಂದು ತಿಳಿಯಿತು.


ಮಧ್ಯಾಹ್ನ ಒಂದು ಸಾಂಬಾರ್ ಆಗಲೇ ಬೇಕು ತಾನೇ, ಏಳೆಂಟು ಎಲೆಗಳನ್ನು ತೆಗೆದಿರಿಸಿ,  ತುಸು ಬಾಡಿದ ನಂತರ ಸುರುಳಿಯಾಗಿ ಸುತ್ತಿ ಚೇಟ್ಲ ಎಂದು ಕರೆಯುವ ರೂಪಕ್ಕೆ ತರಲಾಯಿತು.  ನಾನು ಆ ದಿನ ಮಾಡಿದಂತಹ ಸಾಂಬಾರಿಗೆ ಚೇಟ್ಲ ಕೆಸು ಸೇರಿಕೊಂಡಿತು.   ಇನ್ನೊಂದೆರಡು ದಿನ ಬಿಟ್ಟು ಮಜ್ಜಿಗೆ ಹುಳಿಗೂ ಚೇಟ್ಲ ಬೆರೆಯಿಕು.  ಇಷ್ಟಾಗುವಾಗ ನನಗೂ ಕೆಸುವಿನೆಲೆಯ ಅಡುಗೆಯ ಹೊಸ ಸಾಧ್ಯತೆಗಳು ಗೋಚರವಾದುವು.   ಮಳೆ ಇಲ್ಲದ ದಿನ  ಅಂಗಳಕ್ಕಿಳಿದು ಕೆಸುವಿನೆಲೆಗಳ ತಪಾಸಣೆಗೆ ಹೊರಟಿದ್ದಾಯಿತು.





ವಾರದ ಹಿಂದೆ ಅಂಗಳದ ಹಸಿರು ಕತ್ತಿ ಪ್ರಹಾರಕ್ಕೆ ಒಳಗಾಗಿತ್ತು.  ಅಂಗೈ ಅಗಲದ ಕೆಸುವಿನ ಹತ್ತಾರು ಚಿಗುರೆಲೆಗಳು ಕೈ ತುಂಬಿದುವು.


ಇದನ್ನೆಲ್ಲ ಹಾಕಿ ಒಂದು ಗೊಜ್ಜು ಮಾಡಿಟ್ಕೊಳೋಣ.

“ ಹೇಗೆ ಮಾಡಿದ್ದೂ? “


ಸ್ವಲ್ಪ  ನೀರಿನಲ್ಲಿ ಕೆಸುವಿನೆಲೆಗಳನ್ನು ಬೇಯಿಸುವುದು.


ಯಾವುದೇ ಕ್ರಮದ ಗೊಜ್ಜು ಮಾಡುವುದಿದ್ದರೂ ಉಪ್ಪು ಹುಳಿ ಬೆಲ್ಲ ಅವಶ್ಯಕ.

ಬಾಣಲೆಯಲ್ಲಿ ಎಣ್ಣೆ ಹಾಕಿ ಮಸಾಲಾ ಸಾಮಗ್ರಿಗಳಾದ ಮೆಣಸು, ಉದ್ದಿನಬೇಳೆ, ಕೊತ್ತಂಬರಿ, ಜೀರಿಗೆ, ಮೆಂತೆ, ಇಂಗು ಇತ್ಯಾದಿಗಳನ್ನು ಸಾಂಬಾರಿಗೆ ಹುರಿಯುವ ಕ್ರಮದಲ್ಲಿೆ ಹುರಿಯಿರಿ. ಬೆಳ್ಳುಳ್ಳಿಯನ್ನೂ ಸೇರಿಸಿ.  ಕರಿಬೇವಿನೆಲೆ ಹಾಕಿ, ತೆಂಗಿನತುರಿ ಅರಸಿಣ ಹುಡಿ ಸೇರಿಸಿ, ಬಾಣಲೆ ಕೆಳಗಿಳಿಸಿ.


ಆರಿದ ನಂತರ  ಬೇಯಿಸಿದ ಕೆಸುವಿನೆಲೆ, ಹುಳಿ ಕೂಡಿ ಅರೆಯಿರಿ.

ಅವಶ್ಯವಿದ್ದ ಹಾಗೆ ನೀರು ಸೇರಿಸಿ. ಉಪ್ಪು ಬೆಲ್ಲ ಮರೆಯದೆ ಹಾಕಿ ಕುದಿಸಿ, ಒಗ್ಗರಣೆ ಕೊಡಿ.

ಈ ಗೊಜ್ಜು ನನ್ನ ಅನ್ನ ಚಪಾತಿಗಳೊಂದಿಗೆ ಬೆರೆಯಿತು.  ಮುಗಿಯುವ ತನಕ ಕುದಿಸಿ ಉಣಲಡ್ಡಿಯಿಲ್ಲ.


ನಾಳೆ ತಗತೇ ಸೊಪ್ಪಿನಿಂದ ಹೀಗೇನೆ ಗೊಜ್ಜು ಮಾಡುವುದಿದೆ. ಹೇಗೂ ಹಿತ್ತಲಲ್ಲಿ ಬೆಳೆದು ನಿಂತ ಸಸಿಗಳಿವೆ.  ಮಳೆಗಾಲದಲ್ಲಿ ಉಚಿತವಾಗಿ ದೊರೆಯುವ ನೈಸರ್ಗಿಕ ಹಸಿರೆಲೆಗಳನ್ನು ನಮ್ಮ ಅಡುಗೆಯಲ್ಲಿ ಹಿತವಾಗಿ ಮಿತವಾಗಿ ಬಳಸೋಣ,  ನಿಸರ್ಗ ಮಾತೆಗೆ ನಮಿಸೋಣ.






0 comments:

Post a Comment