ಮೇಲುಕೋಟೆಯಿಂದ ತಿರುಗಿ, ನಮ್ಮ ಗಾಡಿ ಬೆಂಗಳೂರಿಗೆ ಅಭಿಮುಖವಾಗಿ ಚಲಿಸಿತು. ಬೆಂಗಳೂರು ಹೊರ ವಲಯ ತಲಪಿದ ಕೂಡಲೇ ಮಗನಿಗೊಂದು ಫೋನ್ ಕರೆ. " ಅಲ್ಲೇ ನಿಂತಿರಿ... ಈಗ ಬಂದೆ " ಅಂದ. ಬೈಕಿನಲ್ಲಿ ದೌಡಾಯಿಸಿ ಬಂದ ಮಧು ನಮ್ಮನ್ನು ನಾಗರಬಾವಿಯ ತಂಗಿಯ ಮನೆ ತಲಪಿಸಿದ. ಆಯಾಸ ಪರಿಹಾರಕ್ಕಾಗಿ ಬಿಸಿ ನೀರ ಸ್ನಾನ, ಅತಿಥಿ ಸತ್ಕಾರ ಸ್ವೀಕರಿಸಿ, ಎಲ್ಲರೂ ವಿಶ್ರಾಂತಿ ಪಡೆದೆವು.
ಏನೂ ಚಳಿಯಿಲ್ಲದೆ ಬೆಂಗಳೂರಿನಲ್ಲಿ ಬೆಳಗಾಯಿತು. ತಂಗಿಯ ಅಡುಗೆಮನೆಯಲ್ಲಿ ತಿಂಡಿತೀರ್ಥಗಳ ವ್ಯವಸ್ಥೆ ಅಡುಗೆಯಾಕೆಯದ್ದು. ತಂಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥೆ, ಆಕೆಯ ಪತಿ ಯು. ಕೆ. ಭಟ್ ಉದ್ಯಮಿ, ಸುಮಾರು ಮೂವತ್ತು ವರ್ಷಗಳಿಂದ ಬೆಂಗಳೂರನ್ನೇ ಉದ್ಯಮದ ಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಇರಲಿ, ನಾವೀಗ ಚಿತ್ರಾನ್ನ ತಿನ್ನೋಣ. ಕ್ಯಾಪ್ಸಿಕಂ ಚಿತ್ರಾನ್ನ ನಮಗೆಲ್ಲರಿಗೂ ಹಿಡಿಸಿತು, ಉದ್ದಿನ ವಡೆ ಕೂಡಾ ಬಂದಿತು. ಪ್ರತಿ ಬಾರಿಯೂ ಬೆಂಗಳೂರಿಗೆ ಬಂದಿದ್ದಾಗ ಇಲ್ಲಿನ ಕಾಫಿ ತುಂಬ ಇಷ್ಟ ಪಟ್ಟು ಕುಡಿಯುವಂಥದ್ದು. ಇಲ್ಲಿನ ಹವೆ ಕಾಫಿಪ್ರಿಯರಿಗೆ ಹೇಳಿಸಿದ್ದು ಎಂದೇ ನನ್ನ ಅನ್ನಿಸಿಕೆ. ನಾವೆಲ್ಲರೂ ಬೆಂಗಳೂರು ತಿರುಗಾಟಕ್ಕೆ ಸಿದ್ಧರಾದೆವು. ನಮಗೆ ಮಾರ್ಗದರ್ಶಕನಾಗಿ ಮಧು ಕೂಡಾ ಸಿದ್ಧನಾದ.
ನನ್ನ ಮಗ ನಮ್ಮನ್ನು ತನ್ನ ಮನೆಗೆ ಕರೆದೊಯ್ಯಲು ಏನೇನೂ ಉತ್ಸುಕನಾಗಿರಲಿಲ್ಲ, ಈಗ ತನ್ನ ಆಫೀಸ್ ಕಡೆ ಬೇಗನೇ ಹೊರಡಿಸಿದ. ಅಲ್ಲಿಂದ ಮತ್ತೆ ಎಂ. ಜಿ. ರೋಡ್, ಮೆಟ್ರೋ ರೈಲು, ಶಾಪಿಂಗ್ ಮಾಲ್ ದರ್ಶನ. ಶಾಪಿಂಗ್ ಮಾಲ್ ಅಂದೊಡನೆ ನಾನು ಶೀಲಾ ಬಳಿ ಅಂದೆ " ಬೆಂಗಳೂರಿಗೆ ಬಂದ ನೆನಪಿಗೆ ಒಂದು ಸೀರೆ ಹಾಗೂ ಒಂದು ಪುಸ್ತಕ ಖರೀದಿಸೋಣ " ಅವಳೂ ಹ್ಞೂಂಗುಟ್ಟಿದಳು.
" ಈಗ ಪೇಟೆ ನೋಡ್ತಾ ಹೋಗೂದು, ಪರ್ಚೇಸ್ ಗಿರ್ಚೇಸ್ ಗೆ ಸಮಯ ಇಲ್ಲ " ಅಂದ್ರು ನಮ್ಮೆಜಮಾನ್ರು. ಮಾಗಡಿ ರಸ್ತೆಯಲ್ಲಿರುವ ಮಗನ PACE WISDOM SOLUTIONS ಆಫೀಸ್ ಸಂದರ್ಶಿಸಿ ಮುಂದುವರಿದೆವು. ಒಂದು ಸ್ವೀಟ್ ಸ್ಟಾಲ್ ನಲ್ಲಿ ಹಾಲಿನ ಕೆನೆಯಿಂದಲೇ ಮಾಡಿದ್ದ ಒಂದು ಸಿಹಿ, ರಸಮಲೈ ತಿಂದಾಯಿತು. ಎಂ. ಜಿ. ರೋಡ್ ಉದ್ದಕೂ ನಮ್ಮ ರಥ ನಿಧಾನವಾಗಿ ಚಲಿಸಿತು. ಮೆಟ್ರೋ ರೈಲು ನಿಲ್ದಾಣದಲ್ಲಿ ಕಾರು ಪಾರ್ಕಿಂಗ್ ಮಾಡಿ, ಟಿಕೇಟು ಖರೀದಿಸಿ ಒಳ ಹೋಗಬೇಕಾದರೇ ತಪಾಸಣೆಗೊಳಪಟ್ಟೆವು.
ರೈಲು ಬೆಂಗಳೂರು ನಗರ ಸೌಂದರ್ಯವನ್ನು ತೋರಿಸುತ್ತಾ ಮುಂದೆ ಸಾಗಿತು. ಕೊಳೆಗೇರಿಗಳೂ, ಎತ್ತರೆತ್ತರ ಕಟ್ಟಡಗಳೂ ಎದುರಾದವು. ಯಾವುದೇ ವಾಸ್ತು ವಿನ್ಯಾಸವಿಲ್ಲದ, ಬೆಂಕಿಪೊಟ್ಟಣಗಳನ್ನು ಸಾಲಾಗಿ ಇರಿಸಿದಂತಹ ಈ ನಗರಸೌಂದರ್ಯ ವೀಕ್ಷಣೆಯಲ್ಲಿ ಆಸಕ್ತಿ ಇಲ್ಲವಾಯಿತು. ಈ ಮೆಟ್ರೊ ರೈಲಿನಲ್ಲಿ ಚಲಿಸುತ್ತಾ ಕಂಡಂಥ ತಾರಸಿ ಕಟ್ಟಡಗಳ ಮೇಲ್ಭಾಗದ ದೃಶ್ಯಗಳು - ನೀರಿನ ಪ್ಲಾಸ್ಟಿಕ್ ಟಾಂಕಿಗಳು, ಒಣ ಹಾಕಲ್ಪಟ್ಟ ವಿಧವಿಧವಾದ ಬಟ್ಟೆಗಳು, ಟೀವಿ ಆಂಟೆನಾಗಳು, ಟೆಂಟ್ ಗುಡಾರಗಳು, ಕೆಲವೆಡೆ ಖಾಲಿ ಜಾಗಗಳು, ಖಾಲಿ ಜಾಗದಲ್ಲಿ ಬೇಕಾಬಿಟ್ಟಿ ಬೆಳೆದಿದ್ದ ಕಳೆಸಸ್ಯಗಳು, ಪ್ಲಾಸ್ಟಿಕ್ ಕಸ...... ಒಂದೇ ಎರಡೇ ? ಅಂತೂ ಮೆಟ್ರೋ ಪ್ರವಾಸ ಮುಗಿಯಿತು, ನಾವು ಯಥಾಪ್ರಕಾರ ಕಾರು ನಿಲ್ಲಿಸಿದಲ್ಲಿಗೆ ಬಂದಿದ್ದೆವು. ರೈಲ್ವೇ ನಿಲ್ದಾಣದಲ್ಲಿ ಎಲ್ಲಿಯೂ ಕಸ್ತೂರಿ ಕನ್ನಡದ ಪರಿಮಳ ಬರಲಿಲ್ಲ, ಅಲ್ಲಿದ್ದ ಕಾರ್ಯನಿರ್ವಾಹಕರು ಕನ್ನಡಿಗರಂತೆ ಕಾಣಿಸಲೂ ಇಲ್ಲ. ರೈಲಿನ ಒಳಗೆ ಯಾಂತ್ರಿಕ ಧ್ವನಿ ನಿಲುಗಡೆ ಬಂದಾಗ ಕನ್ನಡದಲ್ಲಿಯೂ ಕೇಳಿಸುತ್ತಾ ಇದ್ದಿದ್ದೇ ಒಂದು ಸಮಾಧಾನ. ಮೆಟ್ರೋ ರೈಲು ನೋಡದಿದ್ದವರು ಒಂದು ಬಾರಿ ಕುಳಿತು ಕೊಳ್ಳಬಹುದು.
ಊಟದ ಹೊತ್ತು, " ಊಟಕ್ಕೇನು ಮಾಡೋಣ ಮಧೂ " ಗಿರೀಶ್ ಕೇಳಿದ್ದು.
" ಹೋಗುವಾ ಮುಂದೆ ಮುಂದೆ..."
ಕಾರು ಎಂ. ಜಿ. ರಸ್ತೆಯುದ್ದಕ್ಕೂ ಹುಡುಕುತ್ತಾ ಮುಂದುವರಿಯಿತು. ಚೈನೀಸ್ ಹೋಟಲ್, ನಾನ್ ವೆಜ್ ರೆಸ್ಟರಾಂಟ್ ಗಳೇ ಕಂಡವಲ್ಲದೆ ನಮಗೆ ಬೇಕಾಗಿದ್ದ ಸಸ್ಯಾಹಾರಿ ಉಪಾಹಾರ ಗೃಹಗಳು ಈ ರಸ್ತೆಯನ್ನು ಹುಡಿಗೈಯುವಂತೆ ತಿರುಗಿದರೂ ಕಾಣಲೊಲ್ಲದು. ಮುಂಜಾನೆ ತಂಗಿಮನೆಯ ಕ್ಯಾಪ್ಸಿಕಂ ಚಿತ್ರಾನ್ನ ನನಗೆ ಹೊಸರುಚಿಯಾಗಿದ್ದುದರಿಂದ ಪಟ್ಟಾಗಿ ತಿಂದಿದ್ದೆ. ಬಸವಳಿದ ನಮ್ಮ ಕಾರು ಬೇರೊಂದು ರಸ್ತೆಗೆ ತಿರುಗಿತು. ಅಜ್ಜೀಪುಣ್ಯವೋ ಎಂಬಂತೆ ಒಂದು ಬಫೆ ಊಟದ ಸ್ಟಾಲ್ ಎದುರಾಯಿತು. ನಮ್ಮ ಸಾಂಪ್ರದಾಯಿಕ ಊಟ, ಅನ್ನ ಸಾಂಬಾರು ತಿಂದು ಮುಂದಿನ ಬೆಂಗಳೂರು ದರ್ಶನಕ್ಕೆ ಗಾಡಿ ಹೊರಟಿತು.
" ಮಾಲ್ ಸಂಸ್ಕೃತಿ ನಮ್ಮ ಕಿರಾಣಿ ಅಂಗಡಿಗಳನ್ನು ಧೂಳೀಪಟ ಮಾಡಲಿದೆ " ಇತ್ಯಾದಿ ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿ ಮಾತ್ರ ಗೊತ್ತಿದ್ದ ನನಗೆ ಮಾಲ್ ಸಂದರ್ಶಿಸುವ ಅವಕಾಶ ಸಿಕ್ಕಿತು.
" ಇಲ್ಲಿ ನಮ್ಮಂತವರು ಕೊಳ್ಳಲಿಕ್ಕೇನೂ ಇಲ್ಲ, ಸುಮ್ಮನೇ ನೋಡ್ಬಿಟ್ಟು ಬರೂದು ತಿಳೀತಾ..." ಪಟ್ಟಣಕ್ಕೆ ಬಂದ ಪುಟ್ಟಕ್ಕನಂತೆ ಹ್ಞೂಂಗುಟ್ಟದೇ ವಿಧಿಯಿಲ್ಲ.
ಸಂಜೆ ಆಯಿತು. ಒಂದು ಮದುವೆ ರಿಸೆಪ್ಷನ್ ಪಾರ್ಟಿ ನಮಗಾಗಿ ಕಾಯುತ್ತಿತ್ತು. ಅದೇನಾಗಿತ್ತೂಂದ್ರೆ ಪುತ್ತೂರಿನ ನಮ್ಮ ಸಂಬಂಧಿಕರ ಮುದುವೆಗೆ ಹೋಗಲು ಏನೋ ಕಾರಣದಿಂದ ಹೋಗಲು ಸಾಧ್ಯವಾಗಿರಲಿಲ್ಲ, ಕೆಲವೊಮ್ಮೆ ಮರೆತೂ ಹೋಗುವುದಿದೆ. ಇದೂ ಹಾಗೇ ಆಗಿತ್ತೂ ಅನ್ನಿ.
" ಮದುವೆಗೆ ಹೇಗೂ ಹೋಗಲಿಲ್ಲ, ಈಗ ಪಾರ್ಟಿ ಬೆಂಗಳೂರಿನಲ್ಲಿ ಇಟ್ಕೊಂಡಿದಾರೆ, ಮರೆಯದೇ ಹೋಗಿ " ಕಿರಿಯ ತಂಗಿ ಗಾಯತ್ರಿ ಸಲಹೆ ಕೊಟ್ಟಿದ್ದನ್ನು ಸ್ವೀಕರಿಸಿ ಬೆಂಗಳೂರಿನ ಔತಣಕೂಟದಲ್ಲಿ ಪಾಲ್ಗೊಂಡೆವು. ಬಫೇ ಊಟ, ಏನೇನೋ ಪಂಚಭಕ್ಷ್ಯ ಪರಮಾನ್ನಗಳಿದ್ದರೂ ನೆಲದ ಮೇಲೆ ಚಕ್ಕಳಮಕ್ಕಳ ಕುಳಿತು ಉಂಡಂತ ಸುಖ ಇದರಲ್ಲಿ ಇಲ್ಲ.
- ಮುಂದುವರಿಯಲಿದೆ.
Posted via DraftCraft app