ಕಾರು ಹೊರಟಿತು. ಕಾರು ಹೊರಡುವ ಮೊದಲು ನಮ್ಮವರು ಇಳಿದು ಮನೆ ತನಕ ಹೋಗಿ ಬಂದರು. " ಏನಿಲ್ಲ, ಹಿಂಬಾಗಿಲು ಹಾಕಿದ್ಯೋ ಇಲ್ವೋ ಅಂತ ನೋಡಿದ್ದೂ...." ಅಂತಂದ್ರು. ಹೀಗೆ ಹೊರಡುವಾಗ ಇರಿಸು ಮುರಿಸು ಆಗೂದು ಸಹಜವೇ. ನಾವು ಹಳ್ಳೀ ಮಂದಿ ಯಾವತ್ತೂ ಮನೆ ಬೀಗ ಹಾಕಿ ಹೋದೋರೇ ಅಲ್ಲ. ಹಾಗಂತ ಬಾಗಿಲು ಹಾಕಿ ಮನೆಯೊಳಗೇ ಇರುವವರೂ ಅಲ್ಲ, ಮುಂಬಾಗಿಲು ಸದಾ ತೆರೆದಿರುವಂತದು, ರಾತ್ರಿ ಮಲಗುವ ಮೊದಲು ಬಾಗಿಲು ಜಡಿದರಾಯಿತು. ಗದ್ದೆ, ತೋಟ, ಜಾನುವಾರುಗಳು ಪ್ರತಿದಿನವೂ ಸಹಸ್ಪಂದನ ಬಯಸುವಂತಹವು. ವಿಶಾಲ ವ್ಯಾಪ್ತಿಯ ಪ್ರದೇಶದಲ್ಲಿ ಜನವಸತಿಯೂ ಇರಬೇಕು ಎಂಬ ದೂರದರ್ಶಿತ್ವದಿಂದ ನಮ್ಮೆಜಮಾನ್ರೇ ಇಲ್ಲಿ ಹಲವು ಮನೆಗಳು ಇರುವ ಹಾಗೆ ನೋಡಿಕೊಂಡಿದ್ದಾರೆ. ಅವರಿಗೆಲ್ಲಾ ಹೇಳ್ಬಿಟ್ಟು ಆಗಿತ್ತು. ದಿನಾ ಮನೆಕಾವಲು ಮಾಡಲು ಖಾದರ್, ಚಿದಾನಂದ್ ಒಪ್ಪಿಕೊಂಡೂ ಆಗಿತ್ತು.
ಮಡಿಕೇರಿ, ಕುಶಾಲನಗರ ಅತಿವೇಗದಿಂದ ತಲಪಿದ ಹಾಗೇ ಇವರಿಗೆ ಇನ್ನೊಂದು ಅನುಮಾನ ಬಂದಿತು. " ಹೌದೂ, ಬೀಗದಕೈ ಎಲ್ಲಿಟ್ಟಿದ್ದೀ " ನನ್ನನ್ನೇ ಕೇಳೋದೇ!
" ಇದೊಳ್ಳೆ ಚೆನ್ನಾಯ್ತು, ಬೀಗ ಹಾಕಿದೋರು ನೀವಲ್ವಾ? ನನ್ಹತ್ರ ಕೊಟ್ಟಿಲ್ಲ " ಆದ್ರೂ ವ್ಯಾನಿಟಿ ಬ್ಯಾಗ್ ಬಿಡಿಸಿ ಹುಡುಕಿದೆ, ಇದ್ದರಲ್ವೇ ಸಿಗೂದು.
" ಇನ್ನೇನ್ಮಾಡೂದಂತೀರಾ..." ನನ್ನ ಕಂಗಾಲು ಸ್ಥಿತಿ ನೋಡಿ ಇವರಿಗೂ ಅಯ್ಯೋ ಅನಿಸಿರಬೇಕು.
" ಈಗ ಚಿಂತೆ ಮಾಡ್ತಾ ಕೂತಿರ್ಬೇಡ, ಸುಮ್ಮನಿದ್ದು ಬಿಡು "
ಇನ್ನೇನು ಮೈಸೂರು ತಲಪಲಿದ್ದೇವೆ ಎಂದಾದಾಗ ನಮ್ಮವರು ಅಕ್ಕನ ಮನೆಗೆ ಕರೆ ಕೊಟ್ಟೂ ಆಯಿತು. ಆಗ ಸಂಜೆಯಾಗಿತ್ತು. ಸಂಜೆಯ ತಿಂಡಿಗೆ ಅಕ್ಕನ ಮನೆಗೆ ಎಂಬ ಸಂತಸ ನಮ್ಮವರಿಗೆ. ಮೈಸೂರು ನಗರ ಕಾಣಿಸ ತೊಡಗಿತು.
" ಇಲ್ಲೇ ಕಾರ್ ನಿಲ್ಲಿಸಿ ಮನೆಗೆ ರೂಟ್ ಎಲ್ಲಿಂದ ಎಲ್ಲಿಗೆ ಅಂತ ಕೇಳಿಯೇ ಬಿಡೋಣ " ಎಂದ ಗಿರಿ.
" ಅಲ್ಲೇ ನಿಂತಿರಿ, ಐದು ನಿಮಿಷದಲ್ಲಿ ಬಂದ್ಬಿಟ್ಟೆ " ಅಂದ್ರು ಇವರ ಭಾವ ಮೊಬೈಲ್ ಕರೆಗೆ ಓಗೊಟ್ಟು.
" ಓಹ್! ನಾವು ನಿಂತ ಪಾಯಿಂಟ್ ಅಷ್ಟು ಕರೆಕ್ಟ್ " ಗಿರೀಶ್ ಗೆದ್ದ ನಗು.
ಚಹಾ, ತೆಳ್ಳವು ಸಮಾರಾಧನೆ ಆಯ್ತು, ಬಿಸಿನೀರ ಸ್ನಾನ ಮುಗಿಸಿ ಎಲ್ಲರೂ ಪುನಃ ತಯಾರಾದರು. " ಈ ರಾತ್ರಿ ಕನ್ನಂಬಾಡಿ ನೋಡಿ ಬಂದ್ಬಿಡೋಣ "
" ಇವತ್ತು ರಜಾದಿನ, ಸಂಜೆ ವೇಳೆ ಮೈಲುದ್ದ ಕ್ಯೂ ಇರ್ತದೆ "
" ಹಾಗಿದ್ರೆ ನೀವೆಲ್ಲ ಹೋಗ್ಬನ್ನಿ, ನಾನು ಮನೇಲಿರ್ತೇನೆ " ಅತ್ತಿಗೆ ಜೊತೆ ಪಟ್ಟಾಂಗಕ್ಕಿಳಿದೆ. ಊರ ಸುದ್ದಿ, ಟೀವಿ ಸುದ್ದಿ, ಧಾರಾವಾಹಿ ಸುದ್ದಿ ಆಯ್ತು.
" ನಾಳೆ ತಿಂಡಿ ಏನು "
" ಪತ್ರೊಡೆ ಮಾಡೋಣಾಂತ ತಯಾರು ಮಾಡಿ ಆಗ್ಲೇ ಆಗಿದೆ, ಇನ್ನು ಅಟ್ಟಿನಳಗೆಯಲ್ಲಿ ಬೇಯ್ಸಿದ್ರಾಯ್ತು " ಅನ್ನುವ ಹೊತ್ತಿಗೆ ಬೆಳಗ್ಗೆ ಹತ್ತೂ ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಮಗ ಸೊಸೆ ಹಾಗೂ ಮೊಮ್ಮಗ ಹಾಜರಾದರು. ಅರ್ಚನಾ ಖುಷಿ ಖುಷಿಯಿಂದ ರಾತ್ರಿಯೂಟದ ಸಿದ್ಧತೆ ನಡೆಸಿದಳು.
" ಶಾವಿಗೆ ಪಾಯಸ ಮಾಡ್ತೇನೆ, ಪಾಯಸಕ್ಕೆ ಹಾಲು ಎರೆಯಲೋ, ಕಾಯಿಹಾಲು ಮಾಡಲೋ " ಎಂಬ ಅವಳ ಜಿಜ್ಞಾಸೆಗೆ ಅವಳ ಗಂಡಾನೇ ಉತ್ತರ ಕೊಟ್ಟ. " ಕಾಯಿಹಾಲನ್ನೇ ಹಾಕು "
ರಾತ್ರಿ ಊಟ ಮುಗಿದು ಮಲಗುವ ಸಿದ್ಧತೆ ನಡೆಸಿದಾಗಲೂ ಚಳಿಯ ಸುದ್ದಿಯಿಲ್ಲ. " ನಮ್ಮೂರಿನ ಥರಾನೇ ಆಗ್ತಿದೆ, ಚಳಿ ಎಲ್ಹೋಯ್ತು?"
" ಮುಗಿಲು ಇದ್ರೆ ಚಳಿ ಇಲ್ಲ ಅತ್ತೆ " ಅಂದ ಕುಮಾರ. " ಚಳಿ ಬೇಕಿತ್ತಾ " ಛೇಡಿಸಿದ.
" ಬ್ಯಾಡಪ್ಪ, ಈ ಹವೆ ಚೆನ್ನಾಗಿದೆ "
ಪತ್ರೊಡೆ ತಿನ್ನುತ್ತಿರಬೇಕಾದರೆ ತಯಾರಿಯ ವಿಧಾನವನ್ನೂ ಅತ್ತಿಗೆ ಹೇಳಲಾರಂಭಿಸಿದರು. ಮನೆಯ ಹಿಂದೆ ಇರುವ ಪುಟ್ಟ ಜಾಗದಲ್ಲಿ ಕರಿಕೆಸವು ನೆಟ್ಟುಕೊಂಡಿದ್ದಾರೆ, ಏನೂ ತುರಿಸದು. ಅಕ್ಕಿಯೊಂದಿಗೆ ಉದ್ದಿನಬೇಳೆಯನ್ನೂ ಅರೆದಿದ್ದಾರೆ.
" ಇದೇನು ಬೆಳ್ತಿಗೆ ಅಕ್ಕಿ ಹಾಕಿದ್ದೂ...."
" ಅದು ಹೊಸಾ ಕ್ರಮದಲ್ಲಿ ಮಾಡಿದ್ದು "
ಪತ್ರೊಡೆ ನಂಗೆ ಹೊಸ ತಿಂಡಿಯೇನೂ ಅಲ್ಲ, ಮನೆಯಲ್ಲಿ ಮುಜಾನೆಗೊಂದು ತಿಂಡಿಯಲ್ಲಿ ಇದಕ್ಕೆ ಖಾಯಂ ಸ್ಥಾನವಿದೆ, ನೆಂಟರಿಷ್ಟರು, ಆಳುಕಾಳುಗಳು ಇರುವ ಹೊತ್ತಿಗೆ ಸಂಜೆ ತಯಾರು ಮಾಡಿ ಇಟ್ಬಿಟ್ರೆ ರಗಳೆಯಿಲ್ಲ. ನಾವು ಸಾಂಪ್ರದಾಯಿಕವಾಗಿ ತಯಾರಿಸುವ ವಿಧಾನ ಹೀಗಿದೆ.
2 ಕಪ್ ಕುಚ್ಚುಲಕ್ಕಿ, ನೀರಿನಲ್ಲಿ 5-6 ಗಂಟೆ ನೆನೆದಿರಬೇಕು.
1 ಕಪ್ ಕಾಯಿತುರಿ
2-3 ಒಣಮೆಣಸು
ಒಂದು ಹಿಡಿ ಕೊತ್ತಂಬರಿ
ಚಿಕ್ಕ ಚಮಚದಲ್ಲಿ ಅರಸಿನ
ರುಚಿಗೆ ಬೇಕಾದ ಉಪ್ಪು, ಹುಳಿ, ಬೆಲ್ಲ
ಮೊದಲು ಕಾಯಿತುರಿಯೊಂದಿಗೆ ಮಸಾಲೆ ಸಾಮಗ್ರಿಗಳನ್ನು ಅರೆದಿಡಿ. ಅಕ್ಕಿಯನ್ನು ಚೆನ್ನಾಗಿ ತೊಳೆದು ಹಾಕಿಕೊಂಡು ಪುನಃ ತರಿ ತರಿಯಾಗಿ ಮಸಾಲೆ ಚೆನ್ನಾಗಿ ಕೂಡಿ ಬರುವಂತೆ ಅರೆದು ತೆಗೆಯಿರಿ. ಮಿಕ್ಸೀಗಿಂತ ಕಡೆಯುವ ಕಲ್ಲು ಚೆನ್ನ. ಕೆಸುವಿನ ಸೊಪ್ಪು ಕತ್ತರಿಸಿಟ್ಟಿದ್ದೀರಾ, ಬಾಳೆಲೆ ಬಾಡಿಸಿ ಇಟ್ಕೊಂಡಿದ್ದೀರಾ, ಇನ್ನೇಕೆ ತಡ ಮಾಡ್ತೀರಿ? ಟೀವಿ ಕಾರ್ಯಕ್ರಮಗಳನ್ನು ನಾಳೆ ನೋಡಿದ್ರಾಯ್ತು. ಅಟ್ಟಿನಳಗೆ ಒಲೆಗೇರಿಸಿ ನೀರು ಕುದಿಸಿ.
ಹಿಟ್ಟು ಹಾಗೂ ಕೆಸುವಿನ ಸೊಪ್ಪು ಚೆನ್ನಾಗಿ ಬೆರೆಸಿ, ಬಾಡಿಸಿದ ಬಾಳೆಲೆಯೊಳಗಿಟ್ಟು, ಮಡಚಿಟ್ಟು ಅಟ್ಟಿನಳಗೆಯೆಂಬ ಉಗಿಪಾತ್ರೆಯೊಳಗಿಡಿ. ಅರ್ಧ ಗಂಟೆ ಹೊತ್ತು ಬೇಯಿಸಿ. ರಾತ್ರಿಯೂಟದೊಂದಿಗೂ ತಿನ್ನಿ, ಮಾರನೇ ದಿನ ಬೆಳಗ್ಗೆ ಪುಡಿ ಮಾಡಿ ಒಗ್ಗರಣೆ ಹಾಕಿ ಬಾಣಲೆಯಲ್ಲಿ ಬಿಸಿ ಬಿಸಿಯಾಗಿಸಿ ತಿನ್ನಿ.
ಪತ್ರೊಡೆ ಉಪ್ಕರಿ ಮಾಡುವ ವಿಧಾನ:
ಬಾಳೆಲೆಯೊಳಗೆ ಬೆಂದ ಪತ್ರೊಡೆಯನ್ನು ಬೇಕಿದ್ದಷ್ಟು ಹುಡಿ ಮಾಡಿಟ್ಕೊಳ್ಳಿ.
ಒಂದು ಕಡಿ ತೆಂಗಿನ ತುರಿ
ಒಗ್ಗರಣೆ ಸಾಮಗ್ರಿಗಳು: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಮೆಣಸು
ಒಂದು ಕಪ್ ಬೆಲ್ಲದ ಹುಡಿ
ಒಂದು ಕಪ್ ನೀರು, ರುಚಿಗೆ ಉಪ್ಪು, ಬೇಕಿದ್ದರೆ ಹುಳಿಯನ್ನೂ ಈ ನೀರಿನಲ್ಲಿ ಕಲಸಿಟ್ಟುಕೊಳ್ಳಿ.
ಬಾಣಲೆಯನ್ನು ಒಲೆ ಮೇಲಿಟ್ಟು ಒಗ್ಗರಣೆ ಸಿದ್ಧಪಡಿಸಿ, ಚಟಪಟ ಸದ್ದು ನಿಂತಾಗ ಬೆಲ್ಲ ಸುರಿದು ನೀರು ಎರೆಯಿರಿ. ಬೆಲ್ಲ ಚೆನ್ನಾಗಿ ಕರಗಿ ನೀರಾಯಿತೇ, ಈಗ ತೆಂಗಿನ ತುರಿಯೊಂದಿಗೆ ಪತ್ರೊಡೆಹುಡಿ ಹಾಕಿ ಸೌಟಿನಲ್ಲಿ ಮಗುಚಿ ಒಂದೆರಡು ನಿಮಿಷ ಮುಚ್ಚಿ ಬೇಯಿಸಿ. ಬೆಲ್ಲದ ಸುವಾಸನೆಯ ಘಮಘಮಿಸುವ ಸಿಹಿ ಉಪ್ಕರಿ ಸಿದ್ಧ. ಬೆಲ್ಲ ಆಗದವರಿಗೆ ನೀರುಳ್ಳಿ ಹಾಕಿದರಾಯಿತು, ಇದು ಖಾರ ಪತ್ರೊಡೆ ಉಪ್ಕರಿ ಆಯ್ತು.
ತೆಂಗಿನತುರಿಯೊಂದಿಗೆ ಜೀರಿಗೆ ಅರೆದು, ಮೇಲೆ ಹೇಳಿದಂತೆ ಒಗ್ಗರಣೆಗಿಟ್ಟು , ತೆಂಗಿನ ಮಸಾಲೆ ಕುದಿಸಿ, ಅದಕ್ಕೆ ಪತ್ರೊಡೆ ಹುಡಿ ಬೆರೆಸಿದ್ದು ಪತ್ರೊಡೆ ಬೆಂದಿ ಎಂಬ ಹೆಸರಿನಿಂದ ತಿನ್ನಿ. ದಪ್ಪ ಮೊಸರಿಗೆ ಒಗ್ಗರಣೆ ಹಾಕಿಟ್ಟು ಪತ್ರೊಡೆ ಹುಡಿ ಹಾಕಿದಲ್ಲಿ ಮೊಸರು ಬಜ್ಜಿ ಬಂದಿತು.
ವೃತ್ತಾಕಾರದಲ್ಲಿ ತೆಳ್ಳಗೆ ಬಿಲ್ಲೆಗಳಂತೆ ಕತ್ತರಿಸಿ ಕಾವಲಿಗೆ ಎಣ್ಣೆ ಸವರಿ ಬಿಸಿ ಮಾಡಿ ತಿನ್ನುವುದು ಇನ್ನೊಂದು ವಿಧಾನ. ಕಡ್ಲೇ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ, ಪತ್ರೊಡೆ ಪೋಡಿ ಆನ್ನಿ. ಸಂಜೆಯ ಚಹಾದೊಂದಿಗೆ ಬಿಸಿ ಬಿಸಿಯಾಗಿ ತಿನ್ನಿ.
ಪತ್ರೊಡೆಯ ಸಮ್ಮಾನದೊಂದಿಗೆ ನಾವು ಮುಂದಿನ ಪಯಣಕ್ಕೆ ಸಿದ್ಧರಾದೆವು. ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು ಎಲ್ಲರಿಗೂ ಗೊತ್ತಿರುವಂಥದೇ. ರಸ್ತೆಯುದ್ದಕ್ಕೂ ಕಾರು ಚಲಿಸುತ್ತಿದ್ದಂತೆ ಮೈಸೂರು ಸುಂದರ ನಗರವೆಂದು ತಿಳಿಯಿತು. ಅಂತಹ ವಾಹನ ದಟ್ಟಣೆಯೇನೂ ಇಲ್ಲದ ಪ್ರಶಾಂತ ನಗರ. ಚಾಮುಂಡೇಶ್ವರೀ ದರ್ಶನ ಹಾಗೂ ಮೈಸೂರರಮನೆ ವೀಕ್ಷಣೆ ನಮ್ಮ ಮುಂದಿನ ಗುರಿಯಾಗಿಟ್ಟು ವಾಹನ ಚಲಿಸಿತು.
" ಮೃಗಾಲಯ ನೋಡಬಹುದಿತ್ತು " ಅಂದಳು ಶೀಲಾ.
" ಮೃಗಾಲಯದೊಳಗೆ ನಡೆದಾಡಿ ಹೊರ ಬರಬೇಕಾದರೇ ಸಂಜೆಯಾದೀತು, ಅದನ್ನು ಮುಂದಿನ ಟ್ರಿಪ್ ನಲ್ಲಿ ನೋಡೋಣ " ಕತ್ತಲಾಗುವ ಮೊದಲೇ ಬೆಂಗಳೂರು ತಲಪುವ ನಿಶ್ಚಯ ಮಾಡಿದ್ದ ಗಿರೀಶ್. ಅರಮನೆ ಹಾಗೂ ಆವರಣದಲ್ಲೆಲ್ಲೂ ಫೊಟೊ ತೆಗೆಯುವಂತಿಲ್ಲ. ಚಾಮುಂಡೀ ಬೆಟ್ಟದಲ್ಲಿ ಇಂತಹ ನಿರ್ಬಂಧಗಳು ಕಾಣಿಸಲಿಲ್ಲ. ಬೆಟ್ಟದ ಮೇಲೆ ಸಂತೇ ವ್ಯಾಪಾರಗಳದ್ದೇ ಕಾರ್ಬಾರು. ನಮ್ಮ ರಾಜನೆಲ್ಲಿಕಾಯಿ ಕೂಡಾ ಮಾರಾಟದ ಸರಕುಗಳಲ್ಲಿ ಕಾಣ ಸಿಕ್ಕಿತು.
- ಮುಂದುವರಿಯಲಿದೆ.
Posted via DraftCraft app
0 comments:
Post a Comment