Pages

Ads 468x60px

Friday, 1 August 2014

ಹಲಸಿನ ಹಣ್ಣಿನ ಪಾಯಸ








ತೋಟದ ಮರಗಳಲ್ಲಿರುವ ಹಲಸಿನ ಹಣ್ಣುಗಳನ್ನು ಎಲ್ಲವನ್ನೂ ಸ್ವಾಹಾ ಮಾಡಲಿಕ್ಕಾಗುವುದಿಲ್ಲ.   ಹಾಗೇ ಸುಮ್ಮನೆ ಕೇಳುವವರಿಲ್ಲದೆ ಬಿದ್ದು ಕೊಳೆತು ಹೋಗುವುದೇ ಜಾಸ್ತಿ.  ಮುಗಿಯಿತೆಂದರೆ ಮುಗಿಯುವುದಿಲ್ಲ,   ನಿನ್ನೆ ಹತ್ತು ಗಂಟೆಯ ಚಹಾ ಕುಡಿದು ನಮ್ಮೆಜಮಾನ್ರು ಬೈಕ್ ಹತ್ತಿ ಉಪ್ಪಳದ ಕಡೆ ಹೋದರು.   ನಮ್ಮ ಅಂತರ್ಜಾಲ ಸಂಪರ್ಕ ಸಾಧನದ ಮೋಡೆಮ್ಮು ಸರಿಯಾಗಿ ಕೆಲ್ಸ ಮಾಡ್ತಿರಲಿಲ್ಲ.   ಅದರ ಕಾರ್ಯಭಾರ ನಿಮಿತ್ತ ಹೋದವ್ರು ಬರುವಾಗ ಸಂಜೆಯಾಗಿತ್ತು.   ಬರುವಾಗ ಚೀಲ ತುಂಬ ಹಲಸಿನ ಹಣ್ಣಿನ ಸೊಳೆಗಳು.  ಇದನ್ನೇ ನಾನು ಮುಗಿಯಿತೆಂದರೆ ಮುಗಿಯುವುದಿಲ್ಲ ಅಂದಿದ್ದು.  ಉಪ್ಪಳ ಪೇಟೆಯ ಕೆಲಸ ಮುಗಿಸಿ ವಾಪಸ್ಸಾಗುವಾಗ ಬೇಕೂರಿನ ಬಳಿ ಕಳಂದೂರು ಉಷಕ್ಕನ ಮನೆ,  ಸೀದಾ ಅಲ್ಲಿಗೆ ಹೋಗಿದ್ದಾರೆ,  ಸಂಜೆತನಕ ಹರಟೆ ಹೊಡೆದು,  ಹಲಸಿನಹಣ್ಣು ತಿಂದು,  ಬರುವಾಗ ಮನೆಗೂ ಹಣ್ಣು ಕೊಟ್ಟಿದ್ದಾಳೆ ಉಷ.

" ಉಷತ್ತೆ ಕೊಟ್ಟಿದ್ದಂತೇ..... ಹಲಸಿನಹಣ್ಣು ಬಂತೂ ನೋಡಮ್ಮಾ"  ಅನ್ನುತ್ತಾ ಮಗಳು ಅಪ್ಪನ ಬೈಕಿನಲ್ಲಿ ನೇತಾಡುತ್ತಿದ್ದ ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ ಒಳಗೆ ತಂದಳು.

" ಕೊಟ್ಟಿಗೆ ಮಾಡಿಡು "
" ಹೇಗಿದೇ ಹಣ್ಣು " 
" ತಿಂದು ನೋಡಲ್ಲ ..."
" ಈಗ ರಾತ್ರಿ ಏಳು ಗಂಟೆ ಆಯ್ತಲ್ಲ,   ತೋಟದಿಂದ ಬಾಳೆಲೆ ತರೋರ್ಯಾರು ?"
" ಇಡ್ಲಿ ತಟ್ಟೆಯಲ್ಲಿ ಮಾಡು " ಅಂದರು ಮಗಳ ಅಪ್ಪ.
" ಅದಾಗಲಿಕ್ಕಿಲ್ಲ,  ಇಷ್ಟು ಹಣ್ಣಿಗೆ ಮೂರು ಪಾವು ಅಕ್ಕಿ ಬೇಕಾದೀತು,  ಮಾಡಿಟ್ರಾಯ್ತಾ,  ತಿನ್ನಲಿಕ್ಕೆ ಯಾರುಂಟು ... ಪಾಯಸ ಮಾಡಿ ಕುಡಿದರೆ ಹೇಗೆ ?"
" ಅದೂ ಮಾಡು "

ಚಳಿಚಳಿ ಅನ್ನಿಸುವ ಹಾಗೆ ಮಳೆ ಬೇರೆ ಬರ್ತಿದೆ,  ಬಿಸಿಬಿಸಿಯಾಗಿ ದಿಢೀರ್ ಪಾಯಸ ತಯಾರಾಯಿತು,   ಉಳಿದ ಹಣ್ಣೆಲ್ಲವೂ ಮಿಕ್ಸಿಯಲ್ಲಿ ಮುದ್ದೆಯಾಗಿ,  ಮಿಕ್ಸಿಯಲ್ಲಿ ಮುದ್ದೆಯಾದ ಹಣ್ಣಿನ ಮುದ್ದೆಯಲ್ಲಿ ಒಂದು ಹಿಡಿಯಷ್ಟು ತೆಗೆದಿಟ್ಟು, ಬೆಲ್ಲವೂ ಸೇರಿಕೊಂಡು ಒಲೆಯ ಮೇಲೆ ಕುಳಿತಿತು.  " ಜಾಮ್ ಇಲ್ಲವೇ ಬೆರಟಿ ಆಗಲಿದ್ದೇನೆ "  ಅಂದಿತು.

" ತೆಗೆದಿಟ್ಟ ಹಣ್ಣೇನ್ಮಾಡ್ತೀರಾ ..."
" ಅದು ಮುಂಜಾನೆಗೊಂದು ತಿಂಡಿ ಆಗ್ಲೇಬೇಕಲ್ಲ.   ಅದಕ್ಕಾಗಿ ಮೀಸಲಿಟ್ಟಿದ್ದು "
" ಹೌದಲ್ಲ,   ಕ್ಷಣಮಾತ್ರದಲ್ಲಿ ಹಲಸಿನ ಹಣ್ಣಿನ ಪಾಯಸ ಹೇಗೆ ?"

ಹಲಸಿನಹಣ್ಣಿನ ಸೊಳೆಗಳು,  15ರಿಂದ 20 ಸೊಳೆಗಳು ಸಾಕು.
ತೆಂಗಿನಕಾಯಿ ಹಾಲು,  ದಪ್ಪ ಹಾಲು ತೆಗೆದಿರಿಸಿ,  ನೀರು ಕಾಯಿಹಾಲನ್ನೂ ತೆಗೆಯಿರಿ.
ಸೊಳೆಗಳನ್ನು ಹುಡಿ ಆಗುವಂತೆ ಮಿಕ್ಸಿಯಲ್ಲಿ ತಿರುಗಿಸಿ ತೆಗೆಯಿರಿ.   ಕತ್ತಿಯಲ್ಲಿ ಕೊಚ್ಚಿದರೂ ಆದೀತು.  ಹಿಟ್ಟಿನಂತಾಗಬಾರದು.
ನೀರು ಕಾಯಿಹಾಲಿನಲ್ಲಿ ಬೇಯಲಿ.
2 ಚಮಚ ಅಕ್ಕಿಹಿಟ್ಟು ನೀರುಕಾಯಿಹಾಲಿನಲ್ಲಿ ನೆನೆಸಿ ಬೆಂದ ಹಣ್ಣಿಗೆ ಎರೆಯಿರಿ.
ಅಕ್ಕಿಹಿಟ್ಟು ಕುದಿಯಿತೇ,  ಸೌಟಾಡಿಸಿ.
ಸಿಹಿಗೆ ಬೆಲ್ಲ,
ಡಬ್ಬದಲ್ಲಿ ಸಾಕಷ್ಟು ಇರಲಿಲ್ಲ,
ಚಿಂತೆಯಿಲ್ಲ,
ಸಕ್ಕರೆ ಇದೆಯಲ್ಲ.
ಏಲಕ್ಕಿ ಉಂಟಲ್ಲ,   
ಹಾಕಿರಲ್ಲ,
ದಪ್ಪ ಕಾಯಿಹಾಲು ಎರೆದಿರಲ್ಲ,
ಪಾಯಸ ಆಗೇ ಹೋಯ್ತಲ್ಲ.

ಇಷ್ಟೆಲ್ಲ ಆಗುವಾಗ,  ಊಟ ಮುಗಿಸಿ,  ಪಾಯಸ ಕುಡಿದು ಎದ್ದಾಗ,  ಒಲೆಯ ಮೇಲೆ ಇದ್ದ ಹಣ್ಣು ಬೆಂದೆನೆಂದಿತು.   ಇನ್ನು ನಾಳೆ ನೋಡಿಕೊಂಡರಾಯಿತು.  ಮಲಗುವ ಮೊದಲು ಮಗನಿಗೊಂದು ಫೋನ್ ಹೋಯಿತು.
" ಹೌದ,  ಬೆರಟಿ ಕಾಯಿಸಿ ಇಟ್ಟಿರು,  ಮುಂದಿನವಾರ ಬರುವೆ ..."  ಉತ್ತರ ದೊರೆಯಿತು.
" ಅಣ್ಣ ಬಾ ಅಂತಿದಾನೆ "  ಅನ್ನುತ್ತ  ಎರಡು ದಿನ ಬಿಟ್ಟು ಮಗಳು ಬೆಂಗಳೂರಿಗೆ ಹೊರಟಳು.   ಹಲಸಿನ ಹಣ್ಣಿನ ಜಾಮ್ ತಯಾರಿತ್ತು.




ಇದು ಯಂತ್ರೋಪಕರಣಗಳ ಯುಗ.   ಏನೇ ಕಠಿಣ ಕೆಲಸಗಳನ್ನು ನಿಭಾಯಿಸಲು ಅಡುಗೆಮನೆಯಲ್ಲಿ ಏನೇನೋ ಸಾಧನಗಳನ್ನು ತಂದಿಟ್ಟುಕೊಳ್ಳುತ್ತೇವೆ.    ಹೌದೂ,  ನಮ್ಮಜ್ಜಿಯಂದಿರು ಏನ್ಮಾಡ್ತಿದ್ರಂತೆ, ಕೇಳಿರಲ್ಲ ?   ಹಲಸಿನ ಹಣ್ಣು,  ಬಾಳೆಹಣ್ಣುಗಳನ್ನು ಅಗತ್ಯ ಬಿದ್ದಾಗ  ಅಡಿಕೆ ಮರದ ಅಗಲವಾದ ಹಾಳೆಯ ಮೇಲೆ ಹಣ್ಣುಗಳನ್ನು ಸುರುವಿ,  ಚಕಚಕನೆ ನಾಲ್ಕಾರು ಬಾರಿ ಬಾಳಂಗತ್ತಿಯಲ್ಲಿ ಕೊಚ್ಚಿದಾಗ ಹಣ್ಣುಗಳು ಬೇಕಾದ ಹಾಗೆ ತುಂಡಾಗಿ ಸಿದ್ಧವಾಗುತ್ತಿದ್ದುವು.   ನಾನೇ ಅದೆಷ್ಟೋ ಬಾರಿ ನನ್ನಮ್ಮನಿಗೆ ಹೀಗೆ ಹಣ್ಣುಗಳನ್ನು ಕೊಚ್ಚಿ  ಕೊಟ್ಟಿಲ್ಲ ?  ಹೀಗೆ ಕೊಚ್ಚಿದ ಹಣ್ಣಿಗೆ ನಂತರ ಹಲಸಿನ ಹಣ್ಣಿನ ಕೊಚ್ಚಲು ಎಂಬಂತಹ ಹೆಸರು ಕೂಡಾ ಇದೆ.   ಫ್ರುಟ್ ಸಲಾಡ್ ಪ್ರಿಯರಿಗೆ ಹಲಸಿನ ಹಣ್ಣಿನ ಕೊಚ್ಚಲು ಮೇಲಿಂದ ಹಾಲಿನ ಐಸ್ ಕ್ರೀಂ ಎರೆದು ಫ್ರೀಜ಼ರ್ ಒಳಗಿಟ್ಟು ಕೂಡಾ ತಿನ್ನಬಹುದು.

ಈಗ ಈ ಬರಹ ಸಿದ್ಧ ಪಡಿಸುತ್ತಿದ್ದಾಗ ಬಾಳಂಗತ್ತಿಯ ನೆನಪಾಯಿತು.    ವಾಸ್ತವವಾಗಿ ಬಾಳಂಗತ್ತಿಯನ್ನು ಅಡಿಕೆತೋಟದ ಮಾಲೀಕರು ರಾತ್ರಿವೇಳೆ ತೋಟ ಕಾಯುವ ಕೆಲಸಗಾರನ ಕೈಯಲ್ಲಿರಿಸುತ್ತಿದ್ದರು.   ಅಡಿಕೆ ಹಣ್ಣಾಗಿ,  ತೋಟದಿಂದ ಅಂಗಳಕ್ಕೆ ಬಂದು,  ಅಂಗಳದಲ್ಲಿ ಒಣಗಿ,  ಅಟ್ಟದ ದಾಸ್ತಾನು ಕೊಠಡಿಯೆಂಬ ಪತ್ತಾಯದ ಒಳ ಸೇರುವ ತನಕ ಬಾಳಂಗತ್ತಿಯ ಕಾವಲು.   ಬಾಳಂಗತ್ತಿಯೂ ಅಡಿಕೆ ಕೃಷಿಕರ ಮರ್ಜಿಗನುಸಾರ ವಿಧ ವಿಧ ವಿನ್ಯಾಸಗಳಲ್ಲಿರುತ್ತಿದ್ದವು.    ಸಾಂಪ್ರದಾಯಿಕ ತರವಾಡು ಮನೆಗಳಲ್ಲಿ ಈಗ ಬಾಳಂಗತ್ತಿ ಉಪಯೋಗವಿಲ್ಲದೆ ಮೂಲೆಯಲ್ಲಿರುವ ಸಾಧ್ಯತೆಯೇ ಹೆಚ್ಚು.




ಹಿಂದೆ ಅಂದರೆ ನನ್ನ ಬಾಲ್ಯದ ನೆನಪಿನ ಪುಟಗಳಲ್ಲಿ ಹಲಸು ಮರದಲ್ಲಿ ಗುಜ್ಜೆ ಬಿಟ್ಟಲ್ಲಿಂದ ಪ್ರಾರಭವಾಗಿ ಹಣ್ಣಾಗಿ ಮುಗಿಯುವ ತನಕದ ಎಲ್ಲ ಹಂತಗಳಲ್ಲೂ ಹಲಸು ದಿನನಿತ್ಯದ ಉಪಯೋಗಕ್ಕೆ ಲಭ್ಯವಿತ್ತು.    ಈಗ ಹಾಗಿಲ್ಲ,  ಹಲಸು ತಿನ್ನಿ ಎಂದು ತಮಟೆ ಹೊಡೆದು ಹೇಳುವಂಥಲ್ಲಿಗೆ ನಾವು ತಲಪಿದ್ದೇವೆ.   ಅಲ್ಲಿಲ್ಲಿ ಹಲಸುಮೇಳ,   ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಗಳನ್ನು ಕಾಣುತ್ತಿದ್ದೇವೆ.    ವರ್ಷಕ್ಕೊಮ್ಮೆ ಇಂತಹ ಮೇಳಗಳಲ್ಲಿ ದೊರಕಿದ್ದನ್ನು ತಿಂದು ಬಾಯಿ ಚಪ್ಪರಿಸಿದರೇನು ಬಂತು ?  ಗ್ರಾಮೀಣ ಪ್ರದೇಶಗಳಲ್ಲಿ ಹಲಸು ವರ್ಷವಿಡೀ ದೊರೆಯುವಂಥದ್ದು ಎಂಬ ವಾಸ್ತವ ಎಷ್ಟು ಮಂದಿಗೆ ತಿಳಿದಿದೆ ?   ನೂರಾರು ಹಲಸು ಮರಗಳಿರುವ ಭೂಪ್ರದೇಶದಲ್ಲಿ ಒಂದಲ್ಲ ಒಂದು ಮರ ಫಲ ನೀಡುತ್ತಿರುತ್ತದೆ.     40 ವರ್ಷಗಳ ಹಿಂದೆ,  ನಮ್ಮ ಹಿರಿಯರ ಯಜಮಾಂತಿಕೆಯ ಕಾಲದಲ್ಲಿ ಹಲಸಿಗೆ ಇಂತಹ ಶೋಚನೀಯ ಸ್ಥಿತಿ ಇರಲಿಲ್ಲ.   ಕೃಷಿ ಕಾರ್ಮಿಕರು ಹಾಗೂ ಮರಗಳ ಬಾಂಧವ್ಯ ಚೆನ್ನಾಗಿತ್ತು.   ಸಂಜೆಯಾಗುತ್ತಲೇ ಹಣ್ಣುಗಳನ್ನು ಹೊತ್ತು  ತರುವ ಕಾರ್ಮಿಕರು ಮನೆ ಯಜಮಾನನ ಅಗತ್ಯ ನೋಡಿಕೊಂಡು ತಮ್ಮೊಳಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು.  ಹಣ್ಣು ಮಾತ್ರವಲ್ಲ,  ಬೇಳೆ ಕೂಡಾ ಸದುಪಯೋಗ ಆಗುತ್ತಿದ್ದುದನ್ನು ನೋಡುತ್ತ ದೊಡ್ಡವರಾದವರು ನಾವು.   

ಕಾಸರಗೋಡು ನಗರದ ನಮ್ಮ ಮನೆಗೆ ಊರಿನ ತೋಟದಿಂದ ಕೆಲಸದಾಳುಗಳೇ ಹಲಸನ್ನು ಹೊತ್ತು ತರುತ್ತಿದ್ದರು. ಉಪ್ಪುಸೊಳೆಯೂ ಸಿದ್ಧವಾಗುತ್ತಿತ್ತು,  ಉಂಡ್ಳಕಾಳನ್ನೂ ಮಾಡಬಹುದಾಗಿತ್ತು. ಗುಜ್ಜೆ ಪಲ್ಯ,  ಉಪ್ಪಿನಕಾಯಿ,  ಬೇಳೆಚಕ್ಕೆ ಕೊದಿಲ್,  ಹಲಸಿನಕಾಯಿ ದೋಸೆ, ಸೋಂಟೆ, ಹಪ್ಪಳ,  ಹಣ್ಣಿನ ಕೊಟ್ಟಿಗೆ,  ಹಣ್ಣುಹಪ್ಪಳ,  ಬೆರಟಿ ಪಾಯಸ, ಹಲಸಿನ ಹಣ್ಣುತುಪ್ಪ ಹೀಗೆ ಮುಗಿಯದ ಲಿಸ್ಟ್...   ಉಪ್ಪು ಸೊಳೆಯ ರೊಟ್ಟಿ,  ಬೋಳುಹುಳಿ, ಪಲ್ಯ ಇವೆಲ್ಲ ವಿಭಿನ್ನ ರುಚಿಯ ಖಾದ್ಯಗಳು.

ಹಲಸಿನ ರೆಚ್ಚೆ ಜೊತೆ ಕಡಿಯಕ್ಕಿ ಬೇಯಿಸಿ ಉತ್ತಮ ಪಶು ಆಹಾರ ಸಿದ್ಧಪಡಿಸುತ್ತಿದ್ದರು ನಮ್ಮ ಜನ.   ಕರೆಯುವ ಹಸು ಎಮ್ಮೆಗಳಿಗೆ ಈ ಆಹಾರದಿಂದ ಧಾರಾಳ ಹಾಲು.   ಕೊಂಡು ತರುವ ಪಶು ಆಹಾರಗಳಲ್ಲೂ ಮಿತವ್ಯಯ ಸಾಧಿಸಬಹುದು.   ಜಾನುವಾರುಗಳೂ ಇಷ್ಟಪಟ್ಟು ಪಾಯಸ ಹೀರಿದಂತೆ ಕುಡಿಯುವ ಸಂಭ್ರಮವನ್ನು ನೋಡಿಯೇ ಆನಂದಿಸಬೇಕು.   ಅಂತೂ ಹಲಸಿನ ಹಣ್ಣಿನ ಯಾವ ತುಂಡೂ ನಿರುಪಯುಕ್ತವಲ್ಲ ಎಂಬುದು ನಮಗೆ ತಿಳಿದಿದೆ.   ಆದರೆ ಈಗ ಪ್ರಚಾರ ಬೇಕಾಗಿದೆ,  ಯಾಕೆ ಹೀಗಾಗಿದೆ ?   ಆತ್ಮಾವಲೋಕನ ನಾವೇ ಮಾಡಿಕೊಳ್ಳಬೇಕಾಗಿದೆ. ನೆನಪಿರಲಿ,  ಹಲಸುಬೆಳೆಗೆ ಕೀಟನಾಶಕಗಳ ಸಿಂಪರಣೆ ಇಲ್ಲ,  ರಸಗೊಬ್ಬರಗಳನ್ನೂ ಅದು ಕೇಳುವುದಿಲ್ಲ.   ಪ್ರಕೃತಿಯಲ್ಲಿ ಉಚಿತವಾಗಿ ದೊರೆಯುವ ಪರಿಶುದ್ಧವಾದ ಹಲಸಿನ ಹುಲುಸು ಬೆಳೆಯನ್ನು ನಿರ್ಲಕ್ಷಿಸದಿರೋಣ.





                                                 ಹಲಸಿನ ಹಣ್ಣಿನ ದೋಸೆ


ಹಲಸಿನ ಹಣ್ಣಿನ ಪಾಯಸ ಕುಡಿದಾಯ್ತಲ್ಲ,  ಉಳಿದ ಹಣ್ಣು ಮಿಕ್ಸೀಯಲ್ಲಿ ಮುದ್ದೆಯಾಗಿದ್ದುದ್ದರಲ್ಲಿ ಒಂದು ಹಿಡಿ ತೆಗೆದಿಟ್ಟಿದ್ದೆನೆಂದು ಬರೆದಿದ್ದೆನಲ್ಲ,  ಅದೇನಾಯ್ತೂಂತ ಬರೆಯದಿದ್ದರೆ ಹೇಗೆ?

ಮಗಳ ಹುಕುಂ ಪ್ರಕಾರ ಉದ್ದಿನದೋಸೆಗಾಗಿ ಅಕ್ಕಿ,  ಉದ್ದು, ಮೆಂತೆ ಸಂಜೆಯೇ ನೆನೆ ಹಾಕಿ ಆಗಿತ್ತು.  ಇದೀಗ ಹಲಸಿನ ಹಣ್ಣನ್ನೂ ಕೂಡಿಸಿಕೊಂಡು ಅರೆದಿದ್ದಾಯಿತು.   ಉದ್ದು ತುಸು ಕಮ್ಮಿ ಹಾಕಿದ್ರೂ ಆಗ್ತಿತ್ತು,  ಆದ್ರೇನ್ಮಾಡೋಣಾ,  ಉದ್ದು ನೀರಿಗೆ ಹಾಕಿ ಆಗಿತ್ತಲ್ಲ,  ಚಿಂತೆಯಿಲ್ಲ.
ಅಳತೆ ಪ್ರಮಾಣ:
ಬೆಳ್ತಿಗೆ ಅಕ್ಕಿ 3 ಕಪ್
ಉದ್ದು ಒಂದು ಕಪ್
ಮೆಂತೆ 2-3 ಚಮಚ
ಹಲಸಿನ ಹಣ್ಣು 7-8 ಸೊಳೆ
ರುಚಿಗೆ ಉಪ್ಪು ಕೂಡಿಸಿ ಮುಚ್ಚಿ ಇಟ್ಟು ಮಾರನೇ ದಿನ ಮುಂಜಾನೆಗೊಂದು ತಿಂಡಿ ರೆಡಿ.



Posted via DraftCraft app

0 comments:

Post a Comment