Pages

Ads 468x60px

Saturday, 30 August 2014

ಬಂದಿತು ದೀವಿಹಲಸು.....







...... ಮರದಿಂದಿಳಿದು ಬಂದಿತು ದೀವಿಹಲಸು.   ಯಾತಕ್ಕೆ ಹೀಗೆ ಹೇಳಿದ್ದೂಂದ್ರೆ ಬೇಸಿಗೆಯಲ್ಲಿ ಒಂದಾದರೂ ಕೊಯ್ಯಲು ಸಿಕ್ಕಿರಲಿಲ್ಲ.   ಬಿಸಿಲಿಗೆ ಉದುರಿದ ಕಾಯಿಗಳನ್ನು ನೋಡಿದ್ದೇ ಬಂತು.   ಮಳೆಗಾಲ ಬಂದೇ ಬಂತು.   ಇನ್ನಾದರೂ ಕೊಯ್ದು ತರಹೇವಾರಿ ಅಡುಗೆಗಳನ್ನು ಮಾಡಿ ಉಣಬಹುದಲ್ಲ ಅಂದುಕೊಂಡಿದ್ದರೆ ಪ್ರಾರಂಭವಾದ ಮಳೆ ಆಟಿ ತಿಂಗಳು ಮುಗಿಯುವ ತನಕ ಬಿಡದೇ ಸುರಿಯಿತು.   ಸೋಣೆ ತಿಂಗಳಲ್ಲಿ ಬಿಸಿಲು ಕಂಡರೂ ಜೀಗುಜ್ಜೆಗಳು ಮಳೆಯ ರಭಸಕ್ಕೆ ಹಣ್ಣಾಗಿಯೋ,  ಬಾವಲಿಗಳು ತಿಂದೋ ಏನು ಕಥೆಯೋ ಕಾಣಿಸಲೇ ಇಲ್ಲ.   ಹಿಂದಿನಂತೆ ತೋಟದೊಳಗೆ ಕೆಲಸದಾಳುಗಳು ಈಗ ಇಲ್ಲ,   ಬಿಸಿಲು ಕಣ್ತೆರೆದ ಮೇಲೆ ಮರದ ತಪಾಸಣೆ ನಾನೇ ಮಾಡಬೇಕಾಯಿತು.   ಒಂದೆರಡು ಜೀಗುಜ್ಜೆ ಇವೆಯೆಂದು ಸಮಾಧಾನ ಪಟ್ಟುಕೊಳ್ಳುತ್ತ   " ಉದ್ದನೆಯ ದೋಟಿಗೆ ಕತ್ತಿ ಕಟ್ಟಿ ಕೊಯ್ದು ಕೊಡಿ " ಅಂತ ನಮ್ಮೆಜಮಾನ್ರನ್ನು ಪುಸಲಾಯಿಸಿದಾಗ ಮರದಿಂದಿಳಿದು ಬಂದಿತು ದೀವಿಹಲಸು. 

ಇಬ್ಬರ ಊಟಕ್ಕೆ ಜೀಗುಜ್ಜೆ ಸಾಕಷ್ಟು ದೊಡ್ಡ ಗಾತ್ರದಲ್ಲಿದ್ದಿತು.   ಅರ್ಧ ಭಾಗದ ಸಿಪ್ಪೆ ಗೂಂಜು ಕೆತ್ತಿ ತೆಗೆದು ಒಂದು ಕೊದ್ದೆಲ್ ತಯಾರಾಯಿತು.   ಉಳಿದರ್ಧ ಸಿಪ್ಪೆ ಗೂಂಜು ತೆಗೆಯಲ್ಪಟ್ಟು ಚಿಪ್ಸ್ ಆಗೇ ಹೋಯ್ತು,  ಇನ್ನೆರಡು ದಿನದಲ್ಲಿ ಮಗಳು ಬರ್ತಾಳೆ.

ಕೊದ್ದೆಲ್ ಮಾಡೂದು ಹೇಗೇ ?
ತೊಗರಿಬೇಳೆ ಬೇಯಿಸಿಟ್ಕೊಂಡಿದ್ದೀರಾ,   ದೀವಿಹಲಸಿನ ಹೋಳುಗಳನ್ನು ಬೇಯಿಸಿ.  ಉಪ್ಪು,  ಹುಳಿ ಹಾಕ್ಕೊಳ್ಳಿ.
ಒಂದು ಕಡಿ ತೆಂಗಿನ ತುರಿ
2-3 ಒಣಮೆಣಸು
2 ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
ಕಾಲು ಚಮಚಾದಷ್ಟು ಜೀರಿಗೆ, ಮೆಂತೆ
ಬೇಳೆ ಗಾತ್ರದಷ್ಟು ಇಂಗು
ಚಿಟಿಕೆ ಅರಸಿನ,  ಕರಿಬೇವು

ಎಣ್ಣೆಪಸೆಯಲ್ಲಿ ಮಸಾಲಾ ಸಾಮಗ್ರಿಗಳನ್ನು ಹುರಿದು ತೆಂಗಿನತುರಿಯೊಂದಿಗೆ ಅರೆದು,  ಬೇಯಿಸಿಟ್ಟ ತರಕಾರಿ ಹಾಗೂ ಬೇಳೆಗಳಿಗೆ ಕೂಡಿಸಿ, ಕುದಿಸಿ.  ಒಗ್ಗರಣೆ ಇರಲಿ.





ಈಗ ಜೀಗುಜ್ಜೆ ಬೆಂದಿ ಮಾಡೋಣ.   ಇದಕ್ಕೆ ಬೇಕಾಗಿರುವುದೇನೇನು ?
ಜೀಗುಜ್ಜೆ ಹೋಳುಗಳು
10-12 ಹಲಸಿನ ಬೇಳೆ,  ತುಂಡು ಮಾಡಿದ್ರೂ ಆದೀತು,  ಗುಂಡುಕಲ್ಲಿನಲ್ಲಿ ಜಜ್ಜಿ ಇಟ್ಟರೂ ಆದೀತು.
10-12 ಕೆಸುವಿನೆಲೆ,   ಆದಷ್ಟು ಪುಟ್ಟ ಎಲೆಗಳ ಆಯ್ಕೆ ಉತ್ತಮ.  ಕೆಸುವಿನೆಲೆಗಳನ್ನು ದಿನ ಮುಂಚಿತವಾಗಿ ಕೊಯ್ಯಬೇಕಾಗುತ್ತದೆ.   ಬಾಡಿದ ಎಲೆಗಳನ್ನು ಮಾತ್ರ ಸುರುಳಿ ಸುತ್ತಿ ಗಂಟು ಹಾಕಲು ಸಾಧ್ಯವಿದೆ.   ಇದೀಗ ಚೇಟ್ಳ ತಯಾರಾಯಿತು.
ತಯಾರಾದಿರಲ್ಲ,  ಎಲ್ಲವನ್ನೂ ಉಪ್ಪು,  ಹುಳಿಯೊಂದಿಗೆ ಬೇಯಿಸಿ.   
ಈ ಮೊದಲು ಹೇಳಿದ ಕೊದ್ದೆಲ್ ಪಾಕ ವಿಧಾನವನ್ನೇ ಅನುಸರಿಸಿ.
ಇಲ್ಲಿ ತೊಗರಿಬೇಳೆ ಹಾಕಲಿಕ್ಕಿಲ್ಲ,   ತೆಂಗಿನ ತುರಿಗೆ ಹುರಿದ ಒಣಮೆಣಸು ಮಾತ್ರ ಹಾಕಿ ಅರೆಯುವುದೂ ಇದೆ.   ಒಗ್ಗರಣೆಗೆ ಬೆಳ್ಳುಳ್ಳಿ ಸುಲಿದು ಹಾಕಬಹುದು.
ದೀವಿಹಲಸೇ ಆಗಬೇಕೆಂದಿಲ್ಲ,  ಹಣ್ಣು ಸೌತೆಕಾಯಿಯಿಂದಲೂ ಇದೇ ಥರ ಬೆಂದಿ ಮಾಡುವುದಿದೆ.   
ಹಲಸಿನ ಬೇಳೆ ಇಲ್ವೇ,   ಚಿಂತೆ ಬೇಡ, ಇಲ್ಲದಿದ್ದರೂ ನಡೆಯುತ್ತದೆ.





Posted via DraftCraft app

0 comments:

Post a Comment