Pages

Ads 468x60px

Saturday, 20 December 2014

ತೇಂಗೊಳಲ ಮಾಲೆ




ಅಕಸ್ಮಾತ್ ತಿಂಡಿಗಳು ಅಡುಗೆಯ ಪ್ರಯೋಗಾಲಯದಲ್ಲಿ ಎದ್ದು ಬರುವುದಿದೆ.   ಈ ತೇಂಗೊಳಲ್ ಹಾಗೇ ಆದದ್ದು.   ಆ ದಿನ ಹಬ್ಬದ ಅಡುಗೆ,  ದೇವರಿಗೆ ಏನೇನೆಲ್ಲ ಪ್ರಸಾದಗಳನ್ನು ಅರ್ಪಿಸಿ ಕೊನೆಗೆ ನಾವು ತಿನ್ನುವ ಸಂಭ್ರಮ.   ಮಕ್ಕಳಿಬ್ಬರೂ ಮನೆಗೆ ಬಂದಿದ್ದರು,   ಕಟ್ಟಪ್ಪಣೆ ಬೇರೆ,    " ಅಮ್ಮಾ,  ಅಜ್ಜ ಇದ್ದಾಗ ಮಾಡ್ತಾ ಇದ್ದಂತಹ ತಿಂಡಿಗಳೆಲ್ಲ ಇರಬೇಕು "

ಆಯ್ತೂಂತ ಅಡುಗೆಮನೆಯ ಬಿಡುವಿರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಯಿತು.   ಪಂಚಕಜ್ಜಾಯ,  ನೆಯ್ಯಪ್ಪಂ,   ಮೋದಕ,  ಕಲಸವಲಕ್ಕಿ,  ಹೆಸ್ರು ಪಾಯಸ,  ಇತ್ಯಾದಿ ಸಿಹಿಗಳೊಂದಿಗೆ ಘಮಘಮಿಸುವ ಸಣ್ಣಕ್ಕಿ ಅನ್ನ,  ಸಾರು, ಪಲ್ಯ.... ಹಪ್ಪಳ ಇರಬೇಕಿತ್ತು,  ಸಾಮಾನು ಪಟ್ಟಿಯಲ್ಲಿ ನಾನು ಬರೆದು ಕೊಟ್ಟಿದ್ದನ್ನು ಮಾತ್ರ ತರೋರು ನಮ್ಮೆಜಮಾನ್ರು.  

" ಏನ್ಮಾಡೋದೇ,  ಹಪ್ಪಳ ಇಲ್ವಲ್ಲ ..."
" ನಂಗೆ ಹಪ್ಪಳ ಬೇಕೇ ಬೇಕು "  ಎಂದಳು ಮಗಳು.
" ನೋಡೋಣ, ಬೇರೇನಾದ್ರೂ ಸಿಗುತ್ತಾ ಅಂತ "  ಡಬ್ಬಗಳನ್ನು ಜಾಲಾಡಿದಾಗ ಕಡ್ಲೆ ಹುಡಿ ಇದೆ. 
 " ಖಾರದ ಕಡ್ಡಿ ಆದೀತಾ "
" ಹ್ಞೂ ಆದೀತು "

ಆದೀತಂದ್ರೂ ಗಡಿಬಿಡಿಯ ಹೊತ್ತಿನಲ್ಲಿ ಮಾಡಿದ್ದು ಸರಿ ಬರುತ್ತೋ ಇಲ್ವೋ,   ಇಲ್ಲೊಂದು ಅಕ್ಕಿಹುಡಿಯ ಪ್ಯಾಕೆಟ್ಟೂ ಇದೆ.   ಐಡಿಯಾ  ಹೊಳೆಯಿತು.

3 ಕಪ್ ಅಕ್ಕಿಹುಡಿ
1 ಕಪ್ ಕಡ್ಲೇ ಹುಡಿ
2 ಚಮಚ ಖಾರ ಪುಡಿ
ರುಚಿಗೆ ಉಪ್ಪು 

ಎಲ್ಲವನ್ನೂ ತಪಲೆಗೆ ಹಾಕಿಕೊಂಡು ನೀರೆರೆದು ಚಪಾತಿ ಹಿಟ್ಟಿನ ಮುದ್ದೆಯಂತೆ ಕಲಸಿ ಇಟ್ಟಾಯಿತು.
ಚಕ್ಕುಲಿ ಮಟ್ಟು ಮೈ ಕೊಡವಿ ಸಿದ್ಧವಾಯಿತು.   ಅದರೊಳಗೆ ಆರು ತೂತಿನ ಬಿಲ್ಲೆ ಹೊಗ್ಗಿಸಿ,  ಹಿಟ್ಟನ್ನು ಉಂಡೆ ಮಾಡಿ ತುಂಬಿಸಿ,  ಬಿಸಿ ಎಣ್ಣೆಗೆ ತೂತಿನಿಂದ ಹಿಟ್ಟು ಮಾಲೆಯಂತೆ ಇಳಿದು,  ಹೊರಳಿ ಮೇಲೇರಿದಾಗ ತೇಂಗೊಳಲ ಮಾಲೆ ಪ್ರತ್ಯಕ್ಷವಾಯಿತಲ್ಲ,   ನಮ್ಮ ದೇವರು ಸುಪ್ರೀತನಾದನೆಂದು ಬೇರೆ ಹೇಳಬೇಕಿಲ್ಲ.





ವಾರಕ್ಕೊಂದಾವರ್ತಿ ಮಗಳು ಮನೆಗೆ ಬರ್ತಿರ್ತಾಳಲ್ಲ,   ಏನೋ ಒಂದು ಡಬ್ಬದಲ್ಲಿ ಇರಲೇಬೇಕು.  " ಏನು ಮಾಡಲೀ ?"
" ಚೌತೀಗೆ ಮಾಡಿದ್ದು ಮಾಡಮ್ಮಾ "
" ಯಾವ್ದೂ,  ಪಂಚಕಜ್ಜಾಯನಾ "
" ಅದೇ ಎಣ್ಣೆಯಲ್ಲಿ ಹುರಿದದ್ದೂ,  ಖಾರದಕಡ್ಡೀ... "  ರಾಗ ಎಳೆದಳು.
" ತೇಂಗೊಳಲ್ ಅನ್ನೂ "
"ಹ್ಞಾ,  ಅದೇ ...  ಮಾಡೂ "
" ಆವತ್ತು ಗಡಿಬಿಡಿಯಲ್ಲಿ ಮಾಡಿದ್ದಲ್ವಾ,   ಈಗ ಕ್ರಮಪ್ರಕಾರವಾಗಿ ಮಾಡ್ತೇನೆ,  ನೋಡ್ತಿರು "

" ಹಾಗಿದ್ರೆ ಸಂಪ್ರದಾಯದ  ತೇಂಗೊಳಲ್ ಹೇಗೇ ಮಾಡ್ತೀರಾ ?"  ಪ್ರಶ್ನೆ ಕೇಳಿಯೇ ಕೇಳ್ತೀರಾ.  ಈಗ ಕಡ್ಲೇ ಹಿಟ್ಟು ಹಾಕಿದಲ್ಲಿ ಉದ್ದಿನ ಹಿಟ್ಟು ಹಾಕಿಕೊಂಡರಾಯಿತು.  ಮಾರುಕಟ್ಟೆಯಲ್ಲಿ ಉದ್ದಿನಹುಡಿಯೂ ಸಿಗುತ್ತದೆ.   ಅದಿಲ್ಲವಾದರೆ ಒಂದು ಕಪ್ ಉದ್ದು ನೆನೆ ಹಾಕಿಟ್ಟು ನುಣ್ಣಗೆ ಅರೆಯಿರಿ,  ನೀರು ಜಾಸ್ತಿ ಹಾಕದಿರಿ.  ಅರೆಯುವಾಗ ತುಸು ಜೀರಿಗೆ,  ರುಚಿಗೆ ಉಪ್ಪು ಕೂಡಿಸಿ ಅರೆಯಿರಿ.

ಅರೆದಾಯಿತೇ,  ತಪಲೆಗೆ ಹಾಕಿಕೊಳ್ಳಿ,  3 ಕಪ್ ಅಕ್ಕಿಹುಡಿ ಅಳೆದು ಹಾಕಿರಿ.   ಗಟ್ಟಿಯಾಗಿ ಕಲಸಿಕೊಳ್ಳಿ.   ನಂತರ ಈ ಹಿಂದೆ ಹೇಳಿದಂತೆ ಕರಿಯಿರಿ.  

ಅಂತೂ ಮಾಡಿ ತಿಂದೆವು,   ಚಕ್ಕುಲಿಗಿಂತ ಇದೇ ಮಾಡಿಟ್ಟುಕೊಳ್ಳಲು ಸುಲಭದ್ದು ಎಂದೂ ನನ್ನ ತಿಳುವಳಿಕೆಗೂ ಬಂದಿತು.  








Posted via DraftCraft app

0 comments:

Post a Comment