Pages

Ads 468x60px

Saturday, 18 April 2015

ಬಾನಿನಲ್ಲಿ ಹೊಳೆವ ರೊಟ್ಟಿ







ಬೀಟ್ರೂಟು ಹೋಳು ಮಾಡುತ್ತಿದ್ದ ಹಾಗೇ ಕೆಲವನ್ನು ತೆಳ್ಳಗೆ ಬಿಲ್ಲೆಗಳಾಗಿಸಿ ಇಟ್ಕೊಂಡಿದ್ದೆ, ಸಂಜೆಗೊಂದು ತಿನಿಸು ಮಾಡೋಣಾಂತ. ಮತ್ತೇನಿಲ್ಲ, ಕಡ್ಲೇಹಿಟ್ಟಿನಲ್ಲಿ ಮುಳುಗಿಸಿ ಪೋಡಿ ಕರಿಯೋಣಾಂತಿದ್ದೆ. ಸಂಜೆ ಮಗಳು ಬರುವವಳಿದ್ದಾಳೆ ಬೇರೆ, ಹೀಗೆಲ್ಲ ಕನಸುಗಳು...

ಊಟದ ಹೊತ್ತಿಗೆ ತಿಳಿಯಿತು, ಇವಳು ಈ ವಾರದಲ್ಲಿ ಬರುವಂತಿಲ್ಲ. ಏನೇ ಮಾತುಕತೆ ಇದ್ದರೂ ಅಪ್ಪನ ಬಳಿಯೇ ಹೇಳಿಕೊಳ್ಳುವ ಮಗಳು, ಸರಿ. ಊಟ ಮುಗಿಸಿ, ಐಪಾಡ್ ಬಿಡಿಸಿ, ಈಗ iPadAir2 ಬೇರೆ ಬಂದಿದೆ. ಫೇಸ್ ಬುಕ್ಕು, ಟ್ವೀಟಿಂಗು ಎಲ್ಲಾದಿಕ್ಕೂ ಕನ್ನಡ ಕೀ ಪ್ಯಾಡ್ ಸಲೀಸು. ಬರೆದು ಕಾಪೀ ಪೇಸ್ಟ್ ಮಾಡೋ ರಗಳೆ ಇಲ್ವೇ ಇಲ್ಲ. ಒಂದೆರಡು ಟ್ವೀಟ್ ಗಳಿಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿ, ಮದ್ಯಾಹ್ನದ ಸುಖನಿದ್ರೆ ತೆಗೆದು ಯಥಾಪ್ರಕಾರ ಅಡುಗೆಮನೆಗೆ ಬಂದಾಗ ಬೀಟ್ರೂಟು ಬಿಲ್ಲೆಗಳ ಸ್ವಾಗತ ದೊರೆಯಿತು.

ಮಕ್ಕಳು ಮನೆಯಲ್ಲಿದ್ದರೆ ಎಣ್ಣೆಯಲ್ಲಿ ಕರಿದ ತಿಂಡಿಗಳ ಸಂಭ್ರಮ. ಬೀಟ್ರೂಟ್ ಮೂಲೆಗೆ ಹೋಯಿತು. ಸಂಜೆಯ ಚಹಾ ಕುಡಿದ ನಂತರ ನಾಳೆಗೇನು ತಿಂಡಿ ಮಾಡಲೀ ಎಂಬ ಚಿಂತೆ, ತುಂಡು ಮಾಡಿಟ್ಟ ಬೀಟ್ರೂಟಿಗೆ ಹೇಗೆ ಗತಿ ಕಾಣಿಸಲೀ ಎಂಬ ಚಿಂತೆ ಇನ್ನೊಂದೆಡೆ.
ಚಹಾ ಕುಡಿದಾದ ನಂತರ ತೋಟದಲ್ಲಿ ಅಡ್ಡಾಡಿ ಬರುವ ವಾಡಿಕೆ, ಕೈಯಲ್ಲಿ ಚಿಕ್ಕದೊಂದು ಕತ್ತಿ ಇರಲೇಬೇಕು. ತೋಟದೊಳಗೆ ಮುಂದುವರಿಯುತ್ತಿದ್ದ ಹಾಗೆ ಬುಡಸಹಿತ ಬಿದ್ದ ಬಾಳೆ ಎದುರಾಯಿತು, ಗೊನೆ ಹಾಕಿಲ್ಲ, ಏನಿಲ್ಲ, ಕಾಡುಹಂದಿಯ ಪ್ರತಾಪ. ಕಾಂಡವನ್ನು ಹಿಂಡಿಹಿಪ್ಪೆ ಮಾಡಿ ಬೇರುಗಡ್ಡೆಯನ್ನು ತಿನ್ನುವ ಸಾಹಸಿ ಹಂದಿ ಬಂದಿದೆ. ಬಾಳೆ ಎಲೆಗಳು ಇನ್ನೂ ಹಚ್ಚಹಸಿರಾಗಿ ನಳನಳಿಸುತ್ತಿವೆ. ಬಹುಶಃ ನಿನ್ನೆ ರಾತ್ರಿಯ ಹಂದೀ ಕಾರ್ಬಾರು. ಹೋಗಲಿ, ಈ ಬಾಳೆ ಎಲೆಗಳು ಕತ್ತಿಯೇಟಿಗೆ ನನ್ನ ಕೈ ಸೇರಿದುವು. ನಾಳೆ ಅಕ್ಕಿರೊಟ್ಟಿ ಮಾಡೋಣ.

ರೊಟ್ಟಿಯ ಏರ್ಪಾಡು ಏನಿದ್ದರೂ ನಾಳೆಗೆ. ಬಾಳೆಲೆ ರೂಢಿಸಿಕೊಂಡಿದ್ದಾಯಿತು. ಬೆಳಗೂ ಆಯಿತು. ಇಬ್ಬರಿಗೆ ಎರಡು ಲೋಟಾ ಅಕ್ಕಿಹುಡಿ ಸಾಕಾದೀತು. ಅಳೆದಾಯಿತು, ತಪಲೆಗೆ ಸುರುವುತ್ತಿದ್ದಾಗ ಮೂಲೆಗೆ ಒತ್ತರಿಸಲ್ಪಟ್ಟ ಬೀಟ್ರೂಟು ಕಣ್ಣಿಗೆ ಬಿತ್ತು. ಅಪ್ರಯತ್ನವಾಗಿ ಕೈಗೆತ್ತಿ ಚಕಚಕನೆ ಕತ್ತರಿಸಿ ಮಿಕ್ಸಿಯ ಜಾರೊಳಗೆ ಸೇರಿದ ಬೀಟ್ರೂಟು ಕೆಂಪು ಮುದ್ದೆಯಾಗಿ ಹೊರ ಬಂದಿತು.


2 ಲೋಟ ಹಿಟ್ಟಿಗೆ 3 ಲೋಟ ನೀರು ಕುದಿಯಿತು. ರುಚಿಗೆ ತಕ್ಕ ಉಪ್ಪು ಬೆರೆತು ಬೀಟ್ರೂಟ್ ಮುದ್ದೆಯೂ ಕೂಡಿದಾಗ ಅಕ್ಕಿಹಿಟ್ಟಿನ ಮುದ್ದೆ ದೊರೆಯಿತು.
ರೊಟ್ಟಿಮಣೆ ಹೊರಗೆ ಬಂದಿತು. ಧೂಳು ಕೊಡವಿ ಬಾಯ್ದೆರೆಯಿತು.
ಬಾಳೆ ಎಲೆ ಎಣ್ಣೆ ಪೂಸಿಕೊಂಡು ಸಿದ್ಧವಾಯಿತು.
ತಡವೇಕೆ ಅಕ್ಕಾ, ರೊಟ್ಟಿ ಒತ್ತಿ ಆಯಿತೇ, ಕಾದ ತವಾ ಮೇಲೆ ಬಿದ್ದಿತೇ, ಉರುಳಿ ಹೊರಳಿ ಬೆಂದ ರೊಟ್ಟಿ ಹಾರಿಹೋಯಿತೇ, ಗಗನದಲ್ಲಿ ಮಿನುಗಿತೇಕೆ....ಹೇಳಕ್ಕಾ!
ತಟ್ಟೆಯಲ್ಲಿ ತಂದು ಇಟ್ಟೆ,
ಬಾನಿನಲ್ಲಿ ಹೊಳೆವ ರೊಟ್ಟಿ !






ಬೀಟ್ರೂಟ್ ದೋಸೆ:

ರೊಟ್ಟಿ ತಯಾರಿಗೆ ಉದಾಸೀನವೇ, ದೋಸೆಯನ್ನೂ ಮಾಡಬಹುದು. ಹೇಗೂ ದೋಸೆಗೇಂತ ಹಿಟ್ಟು ತಯಾರಿಸಿಯೇ ಇಟ್ಟಿರ್ತೀರ. ಸಂಜೆಯ ತಿನಿಸಿಗೆಂದು ದೋಸೆಹಿಟ್ಟು ಇಟ್ಟುಕೊಂಡಿದ್ದೀರ ತಾನೇ, ಈ ಹಿಟ್ಟಿಗೆ ಚಿಕ್ಕ ಬೀಟ್ರೂಟು ತುಂಡನ್ನು ನುಣ್ಣಗೆ ಪುಡಿ ಮಾಡಿ ದೋಸೆಹಿಟ್ಟಿಗೆ ಕೂಡಿಸಿ. ದೋಸೆ ಎರೆದುಕೊಳ್ಳಿ. ಬೀಟ್ರೂಟ್ ಗೆಡ್ಡೆಗೆ ಅಡ್ಡವಾಸನೆ ಏನೇನೂ ಇಲ್ಲವಾದುದರಿಂದ " ದೋಸೆಗೆ ಈ ಬಣ್ಣ ಹೇಗೆ ಬಂತೂ...." ಪ್ರಶ್ನೆಗೆ ಉತ್ತರಿಸಲೇ ಬೇಡಿ. ದೋಸೆ
ಮಾತ್ರವೇಕೆ, ಇಡ್ಲಿ, ಉಪ್ಪಿಟ್ಟು ಇತ್ಯಾದಿಗಳಿಗೂ ಬಣ್ಣ ಬಳಿಯಿರಿ. ತಣ್ಣಗೆ ಪಾನಕ ಯಾ ಶರಬತ್ತು ಮಾಡುವಾಗಲೂ ತುಸುವೇ ಬೀಟ್ರೂಟ್ ಹಾಕಿದ್ರೂ ಸಾಕು, ವರ್ಣಭರಿತ ಜ್ಯೂಸ್ ಸಿದ್ಧ. ನಾಳೆ ಅಕ್ಕಿ ಸಂಡಿಗೆ ಮಾಡೋಣಾಂತಿದೀನಿ, ಪೇಟೆಯಿಂದ ಬೀಟ್ರೂಟ್ ತರಿಸಿ ಆ ಮೇಲೆ ಬಣ್ಣದ ಸಂಡಿಗೆ ಮುಂಡಿ ಎಲೆಯ ಮೇಲೆ ಎರೆದು ಒಣಗಿಸಿ, ಎಣ್ಣೆಯಲ್ಲಿ ಕರಿದು, ಅದನ್ನು ನನ್ನ ಮಗಳು ತಿಂದು ನೋಡಿ ಶಿಫಾರಸ್ಸು ಕೊಟ್ಟ ನಂತರ ಇಲ್ಲಿಗೂ ತರದಿರುತ್ತೇನಾ.....

0 comments:

Post a Comment