Saturday, 25 April 2015
ಮಾಮರವೆಲ್ಲೋ, ಕೋಗಿಲೆಯೆಲ್ಲೋ......
ಇನ್ನೂ ಮಳೆಗಾಲ ಬಂದಿಲ್ಲ, ಗಾಳಿ ಜೋರಾಗಿ ಬೀಸಿತೋ, ವಿದ್ಯುತ್ ಹೋಗಿಯೇ ಬಿಟ್ಟಿತು, ಎಲ್ಲಿಗೇ ? ಅದರಪ್ಪನ ಮನೆಗೇ ಕಂಬಿ ಕಿತ್ತಿತು. ಬೀಸಿದ ಗಾಳಿಯಿಂದಾಗಿ ವಾತಾವರಣವೆಲ್ಲ ತಂಪು ತಂಪಾಯಿತು. ಪ್ರಕೃತಿಮಾತೆಯ ಈ ವಾತಾನುಕೂಲೀ ವ್ಯವಸ್ಥೆಯಿಂದಾಗಿ ಸುಖವಾಗಿ ರಾತ್ರಿ ಬೆಳಗಾಯಿತು. ಮಗಳಂತೂ ಸಿಡಿ ಸಿಡಿಗುಟ್ಟುತ್ತ " ಅಪ್ಪಾ, ಮೊದಲು ಕರೆಂಟ್ ಸರಿ ಮಾಡ್ಸೀ..." ಅನ್ನಲು ಪ್ರಾರಂಭಿಸಿದಳು. ಅದೇನೋ ಕಂಪ್ಯೂಟರು್ರ ವರ್ಕು ತುಂಬಾನೇ ಇದೆಯಂತೆ. ನಂಗೂ ಇತ್ತು ಫೇಸ್ ಬುಕ್ ವರ್ಕು.
ಒಳಗೇ ಕುಳಿತಿದ್ದು ಉದಾಸೀನ ಬಡಿದು ಮಾಡಲು ಉದ್ಯೋಗವೇನೂ ತೋಚದೆ ನಮ್ಮ ಹುಡುಗಿ " ಅಮ್ಮಾ, ಮಾವಿನಕಾಯ್ ಆಗಿಲ್ವಾ '" ಅಂತಾ ಕೇಳಿದ್ಳು, ಬೀಂಬುಳಿ ಮರದ ಬುಡದಲ್ಲಿದ್ದ ದೋಟಿ ತಗೊಂಡು ತೋಟಕ್ಕೆ ಹೊರಟಳು. " ಅಲ್ಲೊಂದು ಪಾದೆಕಲ್ಲು ಇದೇ ನೋಡೂ... ಆ ಮಾವಿನಮರ ನೋಡಿ ಬಾ "
" ಥುತ್, ಯಾವುದರಲ್ಲೂ ಇಲ್ಲ " ಕೈ ಬೀಸಿಕೊಂಡು ಬಂದಳು.
" ಹೌದಾ, ಆ ದೊಡ್ಡ ಮಾವಿನಮರದ ಬುಡಕ್ಕೆ ಹೋಗಿ ನೋಡಲ್ಲ... ಸುರಂಗದ ಹತ್ತಿರ " ಪುಸಲಾಯಿಸದೇ ಬೇರೆ ದಾರಿಯಿಲ್ಲ.
ಕುಣಿಯುತ್ತಾ ಬಂದಳು, ವರ್ಷದ ಮೊದಲ ಮಾವಿನಹಣ್ಣಿನ ಸಂಪಾದನೆ ಅವಳದು. " ಅಪ್ಪಂಗೆ ಕೊಡ್ಬೇಡಾ, ಇದು ನನ್ನದು "
" ಆಯ್ತೂ, ಒಂದು ದಿನ ಇಟ್ಟು ತಿಂದರೆ ಸಿಹೀ ಆಗಿರುತ್ತೆ.... "
" ನಾಳೆ ನಾನು ಹೋಗ್ತೀನಲ್ಲ...."
" ಹಂಗಿದ್ರೆ ಸಂಜೆ ಪುನಃ ಮಾವಿನಮರದ ಬುಡ ನೋಡಿ ಬಾ, ಹಾಗೇ ಪೇರಳೇನೂ ಕೊಯ್ದು ಇಟ್ಕೋ... ರೂಮಿನಲ್ಲಿ ತಿನ್ನುವಿಯಂತೆ "
Subscribe to:
Post Comments (Atom)
0 comments:
Post a Comment