Pages

Ads 468x60px

Saturday, 16 May 2015

ಚಪಾತಿಗೊಂದು ಕೂಟು






ಮಳೆಗಾಲ ಬಂದಿಲ್ಲ, ಆದರೇನಂತೆ, ಗುಡುಗು ಸಿಡಿಲುಗಳ ಅಟ್ಟಹಾಸ. ನಾಳೆ ಮುಂಜಾನೆ ಚಪಾತಿ ಮಾಡ್ಕೊಳ್ಳೋಣ
ಅಂತ ತೀರ್ಮಾನಕ್ಕೆ ಬಂದಿದ್ದೆ. ಗಳಿಗೆಗೊಮ್ಮೆ ಹೋಗುತ್ತಾ, ಬರುತ್ತಾ ಇರುವ ಈ ವಿದ್ಯುತ್ತನ್ನು ನಂಬಿ ಅಕ್ಕಿ, ಉದ್ದು ಅರೆಯುವ ದುಃಸಾಹಸ ಬೇಡ.


ಚಪಾತಿಗೊಂದು ಕೂಟು ಆಗ್ಬೇಡವೇ ? ಆಗಲೇಬೇಕು, ಸುಮ್ಸುಮ್ನೇ ಚಪಾತಿ ಹರಿದು ತಿನ್ನುವುದೆಂದರೇನು ? ಅದೂ ಅಡುಗೆಮನೆಯಲ್ಲಿ ಏನೇನೋ ಸಾಹಿತ್ಯಗಳು ಸಿದ್ಧವಿರುವಾಗ ? ನಮ್ಮೂರಿನ ಜನಪ್ರಿಯ ಬೇಳೆಕಾಳು ಪದೆಂಗಿ. " ಅರೆ! ಪದೆಂಗಿ ಅಂದ್ರೇನೂ... ಅಂದ್ಬಿಟ್ಟೀರಾ ಮತ್ತೆ, ನಮ್ಮ ಜನಸಾಮಾನ್ಯರ ಭಾಷೆ ತುಳು, ಮೂಂಙ್ ದಾಲ್ ಅಂತ ಆಂಗ್ಲಭಾಷಾ ಪ್ರವೀಣರು ಹೇಳ್ತಾರಲ್ಲ, ಆ ಹೆಸ್ರು ಕಾಳು ಇದು.

ಎರಡು ಮುಷ್ಠಿ ಕಾಳುಗಳನ್ನು ನೆನೆ ಹಾಕಿ ಆಯ್ತು. ಚಪಾತಿ ಹಿಟ್ಟು ನಾಳೆ ಕಲಸಿದ್ರಾಯ್ತು. ರಾತ್ರಿ ಮುಂಚಿತವಾಗಿ ಕಲಸಿಟ್ಟರೆ ಒಂದೆರಡು ಚಪಾತಿ ಹೆಚ್ಚು ಸಿಗುತ್ತಂತೆ, ಇರೋದು ನಾವಿಬ್ರೇ, ಹೆಚ್ಚುವರಿ ಚಪಾತಿಗಳ ಅಗತ್ಯವೇನೂ ಇಲ್ಲ.

ಬೆಳಗಾಯಿತು, ಹಲ್ಲುಜ್ಜಿ ಬರುವಾಗಲೇ ಕುಕ್ಕರು್ರ ಮಡಿಯಾಗಿ ಒಳಗೆ ಬಂದಿತು, ಪಚ್ಚೆಸ್ರು ಬೇಯಿಸಬೇಕಲ್ಲ.

ಚಪಾತಿ ಹಿಟ್ಟು ಕಲಸೋಣ. 2 ಲೋಟ ಹಿಟ್ಟು, ಒಂದು ಲೋಟ ಕುದಿಯುತ್ತಿರುವ ನೀರು, ಉಪ್ಪು ಕೂಡಿದ್ದಾಗಿರಬೇಕು. ಇದು ವಾಡಿಕೆಯ ಲೆಕ್ಕಾಚಾರ.

ಹಿಟ್ಟಿಗೆ ಕುದಿನೀರು ಎರೆದು ಕಲಸಿ, ಕೈ ಸುಡದಂತೆ ಮರದ ಸಟ್ಟುಗ ಬಳಸಿ. ತುಸು ಆರಿದ ನಂತರ ಕೈಯಲ್ಲೇ ಮುದ್ದೆಗಟ್ಟಿ, ಚೆನ್ನಾಗಿ ನಾದಿರಿ. ಈ ವೇಳೆಗೆ ಹೆಸ್ರು ಕಾಳು ಬೆಂದಿರುತ್ತದೆ. ಇದನ್ನೊಂದು ಕೂಟು ಯಾ ಕರಿ್ರ ಎಂಬೋಪಾದಿಯಲ್ಲಿ ಪರಿವರ್ತಿಸುವುದು ಹೇಗೆ ?

ಒಂದು ದೊಡ್ಡ ನೀರುಳ್ಳಿ, ಚಿಕ್ಕದಾಗಿ ಕತ್ತರಿಸಿ.
ಒಂದು ಬೀಟ್ರೂಟ್ ತುಂಡನ್ನು ನೀರುಳ್ಳಿ ಥರಾನೇ ಕತ್ತರಿಸಿಕೊಳ್ಳಿ,
ಒಂದು ಹಿಡಿ ಕಾಯಿತುರಿ.
ಇವೆಲ್ಲವೂ ಬೆಂದ ಪಚ್ಚೆಸ್ರು ಬೇಳೆಯೊಂದಿಗೆ ಸೇರಲಿ. ರುಚಿಗೆ ಉಪ್ಪು ಬೀಳಲಿ. ಚೆನ್ನಾಗಿ ಕಲಸಿಕೊಳ್ಳಿ.. ಬೇಕಿದ್ದರೆ ಒಗ್ಗರಣೆ, ಮಸಾಲೆಪುಡಿ ಹಾಕಬಹುದು. ನಾನು ಹಾಕಿಲ್ಲ, ಪುನಃ: ಕುದಿಸಲೂ ಇಲ್ಲ. ಹಸಿ ತರಕಾರಿಗಳ ಕೋಸಂಬರಿ ಥರ, ಜತೆಗೆ ಬೇಯಿಸಿದ ಹೆಸ್ರು....

ವಾಡಿಕೆಯಂತೆ ಮಗಳು ಬಂದಿದ್ದಾಗ ಇದೇ ಪಚ್ಚೆಸ್ರು ಕೂಟು ಪುನರಾವರ್ತನೆ ಆಯಿತು. ಈ ಬಾರಿ ಬೀಟ್ರೂಟಿಲ್ಲ, ನೀರುಳ್ಳಿ, ಹಸಿಮೆಣಸು, ಕಾಯಿತುರಿ ಹಾಕಿದ್ದು ಬಿಟ್ರೆ ಬೇರೇನಿಲ್ಲ. ಚಪಾತಿ ತಿನ್ನುತ್ತಾ ಮಗಳಂದಿದ್ದು, " ಇನ್ನು ಚಪಾತಿಗೆ ಇದೇ ಕೂಟು ಮಾಡಮ್ಮ"

0 comments:

Post a Comment