ಅಡುಗೆಯ ಹೊತ್ತು, ವಿದ್ಯುತ್ ಕೈ ಕೊಟ್ಟಿದೆ. ಅಡುಗೆಮನೆಯ ಉಳಿದೆಲ್ಲ ಕೈಚಳಕ ಮಾಡಿದ್ದಾಯ್ತು, ತೆಂಗಿನಕಾಯಿ ಅರೆಯದೆ ಸಾಂಬಾರ್ ಆಗಬೇಕಿದೆ.
ಆಗಬೇಕು, ಹೇಗೆ?
ಅರ್ಧ ಲೋಟ ತೊಗರಿಬೇಳೆ ತೊಳೆದು, ಮುಳುಗುವಷ್ಟು ನೀರೆರೆದು ಕುಕ್ಕರಿನಲ್ಲಿ ಬೇಯಿಸುವುದು, ಭರ್ತಿ ಮೂರು ಸೀಟಿ ಹಾಕಲಿ, ಬೇಳೆ ಮೆತ್ತಗಾದಷ್ಟೂ ಉತ್ತಮ.
ತರಕಾರಿ ಯಾವುದು?
ನಾಲ್ಕು ದಿನ ಹಿಂದೆ ಕೆಸುವಿನೆಲೆಯ ಪತ್ರೊಡೆ ಮಾಡಿದಾಗ ಕೆಸುವಿನ ದಂಟು ಸಹಿತವಾಗಿ ಕೊಯ್ದು ಇಟ್ಟಿದ್ದರಲ್ಲಿ ದಂಟುಗಳು ಹಾಗೇನೆ ತರಕಾರಿ ಬುಟ್ಟಿಯಲ್ಲಿ ಬಿದ್ದಿವೆ. ದಂಟುಗಳಿಗೆ ಒಂದು ಗತಿ ಕಾಣಿಸೋಣ.
ಕೆಸುವಿನ ದಂಟು ತುಸು ಬಾಡಿರಬೇಕು, ಹೊರಸಿಪ್ಪೆಯ ನಾರು ತೆಗೆಯುವುದು ಬಹಳ ಸುಲಭದ ಕಾರ್ಯ. ಅಲ್ಪಸ್ವಲ್ಪ ನಾರು ಉಳಿದರೂ ತೊಂದರೆಯಿಲ್ಲ, ಕರಿಕೆಸು ತುರಿಸುವ ಭಯವಿಲ್ಲ.
ಸಮಾನ ಗಾತ್ರದ ಹೋಳು ಮಾಡುವುದು.
ಬೇಯಿಸಿಟ್ಟ ತೊಗರಿಬೇಳೆಗೆ ಕೆಸುವಿನ ದಂಟಿನ ಹೋಳುಗಳನ್ನು ಸೇರಿಸಿ, ರುಚಿಗೆ ಸೂಕ್ತವಾಗುವಂತೆ ಉಪ್ಪು ಹಾಗೂ ಹುಳಿ ಹಾಕಿ ಬೇಯಿಸಿ. ಸಿಹಿ ಇಷ್ಟಪಡುವವರು ಬೆಲ್ಲವನ್ನೂ ಹಾಕಬಹುದು.
ಕುಕ್ಕರ್ ಒಂದು ಸೀಟಿ ಹಾಕಿದೊಡನೆ ಕೆಳಗಿಳಿಸಿ, ನಿಧಾನವಾಗಿ ಒತ್ತಡ ತೆಗೆಯಿರಿ, ಬೆಂದಿರುತ್ತದೆ.
ಒಗ್ಗರಣೆಗೆ,
ಏಳೆಂಟು ಸುಲಿದ ಬೆಳ್ಳುಳ್ಳಿ,
ಒಂದೆಸಳು ಕರಿಬೇವು,
ಮೂರು ಚಮಚ ತೆಂಗಿನೆಣ್ಣೆ,
ಸಾಸಿವೆ, ಒಣಮೆಣಸಿನ ಚೂರುಗಳು,
ಒಗ್ಗರಣೆ ಸಿದ್ಧ, ಇದೀಗ ಗ್ಯಾಸ್ ಆರಿಸಿ.
ಉದ್ದಿನಕಾಳಿನಷ್ಟು ಇಂಗು ನೀರಿನಲ್ಲಿ ಕರಗಿಸಿ ಮೊದಲೇ ಇಟ್ಟುಕೊಂಡಿರಬೇಕು, ಇಂಗಿನ ನೀರನ್ನು ಒಗ್ಗರಣೆಗೆ ಎರೆಯಿರಿ.
ತಲಾ ಅರ್ಧ ಚಮಚ ಸಾರಿನ ಹುಡಿ, ಮೆಣಸಿನ ಹುಡಿ, ಗರಂ ಮಸಾಲಾ ಹುಡಿ, ಚಿಟಿಕೆ ಅರಸಿಣಗಳು ಒಗ್ಗರಣೆಗೆ ಬೀಳಲಿ.
ಕುಕ್ಕರ್ ಒಳಗಿರುವ ಬೆಂದ ಅಡುಗೆಗೆ ಈ ಮಸಾಲಾ ಒಗ್ಗರಣೆ ಸುರಿಯಿರಿ.
ಸೌಟಾಡಿಸಿ, ರುಚಿಕರವಾಗಿದೆಯಲ್ಲ!
ಕೆಸುವಿನ ದಂಟಿನ ಗಸಿ ಸಿದ್ಧವಾಗಿದೆ. ಅನ್ನ ಮಾತ್ರವಲ್ಲದೆ ಚಪಾತಿ, ದೋಸೆ, ಇಡ್ಲಿಗಳಿಗೂ ಹೊಂದಿಕೊಳ್ಳುವ ಅಡುಗೆ ನಮ್ಮದಾಗಿದೆ.
ಈ ಗಸಿಯನ್ನು ಸಾರು ಮಾಡುವುದು ಹೇಗೆ?
ತೊಗರಿಬೇಳೆಯ ಪ್ರಮಾಣ ಕಡಿಮೆ ಮಾಡಿದರಾಯಿತು, ಕೆಸುವಿನ ದಂಟಿನ ಸಾರು ಅನ್ನಿ, ಹಪ್ಪಳವನ್ನೂ ಹುರಿದು ಸಾರಿನೂಟ ಬೇಕಾದಷ್ಟಾಯಿತು ಅನ್ನಿ.
ಕೆಸುವಿನ ದಂಟಿನ ಬೋಳು ಹುಳಿ ಸಾಮಾನ್ಯವಾಗಿ ಮಾಡುವ ಅಡುಗೆ. ಇದಕ್ಕೆ ಬೇಳೆಕಾಳು ಬೇಡ, ಉಪ್ಪು ಹುಳಿಯೊಂದಿಗೆ ಬೆಂದ ಹೋಳುಗಳಿಗೆ ಬೆಳ್ಳುಳ್ಳಿ ಒಗ್ಗರಣೆ ಬಿದ್ದರೆ ಸಾಕು.
ನವರಾತ್ರಿ ಸಮಯದಲ್ಲಿ ಹೊಸ ಅಕ್ಕಿ ಊಟ (ಹೊಸ್ತು ) ಮಾಡುವ ಸಂಪ್ರದಾಯವಿದೆ. ಪ್ರಕೃತಿಯಲ್ಲಿ ದೊರೆಯುವ ವಿಧವಿಧವಾದ ತಾಜಾ ಮಾಲುಗಳಿಂದಲೇ ಭೋಜನ ಸಿದ್ಧ ಪಡಿಸುವ ಪದ್ಧತಿ ಇಲ್ಲಿದೆ. ಕೆಸುವಿನ ದಂಟಿನ ಬೆಂದಿ ಆಗಲೇಬೇಕು.
ಬೆಂದಿ ಹೇಗೆ?
ತೊಗರಿಬೇಳೆ ಬೇಡ, ಕೆಸುವಿನ ದಂಟುಗಳನ್ನು ಈಗಾಗಲೇ ಹೇಳಿದ ಕ್ರಮದಲ್ಲಿ ಬೇಯಿಸುವುದು.
ಅರ್ಧ ಕಡಿ ತೆಂಗಿನತುರಿಯನ್ನು ನಾಲ್ಕು ಒಣಮೆಣಸು ಕೂಡಿ ನುಣ್ಣಗೆ ಅರೆದು ಸೇರಿಸಿ, ಕುದಿಸಿ ಒಗ್ಗರಣೆ ಕೊಡುವುದು. ಬೆಳ್ಳುಳ್ಳಿ ಗಿಳ್ಳುಳ್ಳಿ ಬೇಡ. ಇದು ಒಂದು ಸಾಂಪ್ರದಾಯಿಕ ಅಡುಗೆ.
ಸೂಚನೆ: ನಾನು ಅಡುಗೆಗೆ ಬಳಸಿದ್ದು ಕರಿಕೆಸು, ಇದಕ್ಕೆ ಏನೂ ತರಿಕೆಯಿಲ್ಲ, ಮಾಮೂಲಿ ಅಡುಗೆಗೆ ಹಾಕುವ ಹುಳಿ ಸಾಕು. ಕಾಡುಕೆಸುವಿನ ದಂಟು ಅಡುಗೆಗೆ ಬಳಸಬಹುದಾದರೂ ಹುಣಸೆಹುಳಿ ಜಾಸ್ತಿ ಹಾಕಬೇಕು.
ಕರಿಕೆಸು, Colocasia esculenta ಒಂದು ಹಿತ್ತಲ ಬೆಳೆ ಹಾಗೂ ಅಲಂಕಾರಿಕ ಸಸ್ಯ. ಚೆನ್ನಾಗಿ ನೀರು ದೊರೆಯುವ ಸ್ಥಳದಲ್ಲಿ ನೆಟ್ಟರೆ ಸದಾ ಕಾಲವೂ ನಳನಳಿಸುತ್ತಿರುತ್ತದೆ. ಬೇಕಿದ್ದಾಗ ಕೊಯ್ದು ದಂಟುಗಳ ಸಾಂಬಾರ್, ಸೊಪ್ಪಿನ ಪತ್ರೊಡೆ ತಿಂದು ಆನಂದಿಸಬಹುದು. ಚೇಂಬು ಎಂದು ಕರೆಯಲ್ಪಡುವ ಇದರ ಗೆಡ್ಡೆ ಪುಷ್ಠಿದಾಯಕ ಆಹಾರ.