Pages

Ads 468x60px

Tuesday 24 November 2020

ತಿಳಿಸಾರು

 


ಏನಾಯ್ತು ಮಾಡಿದ್ದ ಸಾಂಬಾರ್ ಮುಗಿದೇ ಹೋಯ್ತು ರಾತ್ರಿಯೂಟಕ್ಕೆ ಹೊಸದಾಗಿ ಸಾಂಬಾರ್ ಅಟ್ಟಣೆ ಮಾಡುವುದೇ ಎಲ್ಲಾದ್ರೂ ಉಂಟೇ..  ತೆಳ್ಳಗಿನ ಒಂದು ತಿಳಿಸಾರು ಮಾಡಿ ಬಿಡೋಣ.


ಅಷ್ಟಕ್ಕೂ ಸಾಂಬಾರು ಮುಗಿಯಲಿಕ್ಕೆ ಊಟದ ಹೊತ್ತಿಗೆ ನೆಂಟರ ಆಗಮನವಾಗಿರಲಿಲ್ಲ ನಾವೇ ಇದ್ದಿದ್ದು.    “ ತೋಟದಲ್ಲಿ ಇಬ್ಬರು ಕೆಲಸ ಮಾಡ್ತಿದಾರೆ ಅನ್ನ ತಂದಿದಾರಂತೆ ಸ್ವಲ್ಪ ಉಪ್ಪಿನಕಾಯಿ ಕೊಟ್ರೆ ಸಾಕಂತೆ ಇದ್ದರೆ ಮಜ್ಜಿಗೆ ಕೊಡು.. "


ಉಪ್ಪಿನಕಾಯಿ ಮಜ್ಜಿಗೆಗಿಂತ ಸಾಂಬಾರೇ ವಾಸಿ ಅಂದ್ಬಿಟ್ಟು ನಾನೇ ಸಾಂಬಾರ್ ಕೊಟ್ಟು ಇದೀಗ ರಾತ್ರಿಯಡುಗೆಯ ಚಿಂತೆಯೂನನ್ನದೇ..


ಸಂಜೆಗೂ ಮುಂಚೆ ಸಾರು ಮಾಡ್ಬೇಕಾದ್ರೆ ಪುನಃ ತೊಗರಿಬೇಳೆ ಬೇಯಿಸುವುದೇ ವ್ಯರ್ಥ ಕೆಲಸ.


ಬಾಣಲೆ ಒಲೆಗೇರಿತು ಬಿಸಿಯೇರಿತು.

ಒಂದು ಚಮಚ ಎಣ್ಣೆ ಬಿದ್ದಿತು.

ಅನುಕ್ರಮವಾಗಿ,

ಉದ್ದಿನ ಬೇಳೆ ಗಾತ್ರದ ಇಂಗು

ಒಂದು ಚಮಚ ತೊಗರಿಬೇಳೆ

ಎರಡು ಒಣಮೆಣಸು

ಎರಡು ಚಮಚ ಕೊತ್ತಂಬರಿ

ತುಸು ಜೀರಿಗೆ

ಕೊನೆಗೆ ಒಂದೆಸಳು ಕರಿಬೇವು

ಹುರಿಯಲ್ಪಟ್ಟಿತು,   ಘಮ್ ಘಮ್ ಪರಿಮಳ ಎದ್ದಿತು.


ಬಿಸಿ ಆರಿದ ನಂತರ ಮಿಕ್ಸಿ ಪುಡಿ ಮಾಡಿ ಕೊಟ್ಟಿತು.

ಇನ್ನೇನು ಮಾಡೋಣಾ ಅಂದರೆ,

ಒಂದು ತಪಲೆಯಲ್ಲಿ  ಅಂದಾಜು ಒಂದೂವರೆ ಲೋಟ ನೀರು ಎರೆದು ರುಚಿಕರವಾಗುವಷ್ಟು ಉಪ್ಪು ಹಾಗೂ ಬೆಲ್ಲ ಹಾಕುವುದು.  

ಮಧ್ಯಾಹ್ನದ ಅಡುಗೆಗೆ ಗಿವುಚಿದ ಹುಣಸೆಯ ಹುಳಿ ಇತ್ತು ಅದಕ್ಕೇ ಪುನಃ ನೀರೆರೆದು ರಸ ಶೋಧಿಸಿ ಎರೆಯಲಾಯಿತು 

 ರಸದ್ರವವನ್ನು ಒಲೆಯ ಮೇಲೆ ಇಡುವುದು 

ಕುದಿಯಲಿ,

ಈಗ ಮಾಡಿದಂತಹ ತಾಜಾ ಸಾರಿನ ಹುಡಿ ಬೀಳಲಿ.  

ಚಿಟಿಕೆ ಅರಸಿಣ ಪುಡಿ ಹಾಕಲೇ ಬೇಕು.  

ಫ್ರಿಜ್ ಒಳಗೆ ಇದ್ದಂತಹ ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕುವುದು.   

ಹುರಿಯುವಾಗ ಇಂಗು ಹಾಕಿದ್ರೂ ಕುದಿಯುವಾಗ ಇನ್ನೊಮ್ಮೆ ಇಂಗಿನ ನೀರು ಎರೆಯುವುದು.

ಕೊನೆಗೆ ತುಪ್ಪದಲ್ಲಿ ಒಗ್ಗರಣೆ ಕೊಟ್ಟು ತಿಳಿ ಸಾರು ಆಯ್ತು ಅನ್ನಿ.

 

ಊಟ ಮಾಡುವಾಗ ಮದುವೆಮನೆಯ ಸಾರು ದೇವಸ್ಥಾನಗಳಲ್ಲಿ ಅನ್ನಪ್ರಸಾದ ಉಣ್ಣುವಾಗ ಬಡಿಸುವ ಸಾರು ನೆನಪಾಗದಿರಲಿಲ್ಲ...


ಬೆಲ್ಲ ಹಾಕಲೇ ಬೇಕೆಂದಿಲ್ಲ ನಾವು ಬೆಲ್ಲ ಪ್ರಿಯರಾಗಿರುವುದರಿಂದ ಬೆಲ್ಲ ಹಾಕಲಾಗಿದೆ.


ಹಾಗೇನೇ ಕುಡಿಯಲೂ ಯೋಗ್ಯ  ತಿಳಿಸಾರು.

ಕರಿದ ಹಪ್ಪಳ ಸಂಡಿಗೆ ಇದ್ದರಂತೂ ತಿಳಿಸಾರಿನೂಟ ರಸವತ್ತಾಗಿರುತ್ತೆ.


ತೆಂಗಿನಕಾಯಿ ತುರಿಯುವ ಶ್ರಮ ಇಲ್ಲಿಲ್ಲ.

ಟೊಮ್ಯಾಟೋ ಹಸಿಮೆಣಸಿನಕಾಯಿ ಶುಂಠಿ ಬೇಕಿಲ್ಲ.

ಕೊತ್ತಂಬರಿ ಸೊಪ್ಪು ಕಡ್ಡಾಯವಲ್ಲ.




0 comments:

Post a Comment