Pages

Ads 468x60px

Thursday, 25 August 2022

ಮೊಬೈಲ್ ಕುಟ್ಟಿ

 

ದಿನವೂ ಒಂದೇ ರಾಗ

ನನ್ನಜ್ಜಿ ಹೇಳಿದ ಅದೇ ಕತೆ

ಕಾಗಕ್ಕ ಗುಬ್ಬಕ್ಕ ಪುರಾಣ

ಆಲಿಸುತ್ತ ಹಾಯಾಗಿದ್ದ ಮಗು

ತೆರಳಿತು ತನ್ನ ಅರಮನೆಗೆ 


ಟ್ವಿಂಕಲ್ ಟ್ವಿಂಕಲ್ ರಾಗ

ಕಣ್ಣರಳಿಸಿ ಅಜ್ಜಿಯತ್ತ ಹುಸಿನಗು

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಜೋಕಾಲಿ ತೂಗುತ್ತ ನಿದ್ರೆಗೆ ಜಾರೆ


ಯಾವುದೂ ಇನ್ನಿಲ್ಲ

ಕಾಲ ನಿಲ್ಲುವುದಿಲ್ಲ

ನನ್ನ ಪಾಡಿಗೆ ನಾನಿರಲು

ಅಮ್ಮ ಮಗೂಗೆ ಅಷ್ಟಮಿ ಚಾಮಿ ವೇಷ... "

ಮೊಬೈಲಲ್ಲಿ ತೇಲಿ ಬಂದ ಚಿತ್ರಗಳು


ಇದಪ್ಪ ದೇವ್ರು

ಒಂದೇ ಉಸಿರಿಗೆ 

ಮೊಬೈಲ್ ಪರದೆಯ ಮೇಲೆ

ಪ್ರತಿಷ್ಠಾಪಿತ ಕಂದ

ಅಹಹ..  ಅಕ್ಕಾಇದೇನಚ್ಚರಿ

ಮೊಬೈಲ್ ಹಿಡಿವಾಗ

ಕಂದನನ್ನು ಹಿಡಿದೆತ್ತಿದ ಆನಂದ

ನಲಿನಲಿದು ಬಂದಿತಲ್ಲ






Sunday, 21 August 2022

ದಾರೆಹುಳಿ ಸಿಹಿಪಾಕ

 

 ವರ್ಷ ದಾರೆಹುಳಿ ಧಾರಾಳ ಒಂದು ಮರ ಹದಿನೈದು ವರ್ಷಗಳ ಹಿಂದೆ ಬೀಜ ಬಿತ್ತಿ ಆದದ್ದು ಮತ್ತೊಂದು ಎರಡು ವರ್ಷಗಳ ಹಿಂದೆ ನಮ್ಮ ಮಧುಕರ ನರ್ಸರಿಯಿಂದ ಗಿಡ ತಂದು ನೆಟ್ಟಿದ್ದು ಗಾತ್ರದಲ್ಲಿಯೂ ದೊಡ್ಡದು ಹುಳೀ ಅಂದ್ರೆ ಹುಳಿ.


ಹುಳಿ ಇರುವಂತಹ  ಪ್ರಕಾರದ ಹಣ್ಣುಗಳು ಅಡುಗೆಗೆ ವಿಶೇಷ ರುಚಿ ನೀಡುತ್ತವೆಚಟ್ಣಿ ಗೊಜ್ಜು ಸಾರು ಆಯ್ತು.

ಪತ್ರೊಡೆಗೂ ಹಾಕಲಾಯಿತು ಸಾಂಬಾರಿಗೆ ತೆಂಗಿನ ಕಾಯಿ ಅರೆಯುವಾಗ  ಸೇರಿಸಿ ಅರೆದಿದ್ದೂ ಆಯಿತು ಶರಬತ್ತು ಮಾಡಲು ಸಮಯವಲ್ಲ ಧಾರಾಕಾರ ಮಳೆ ಅಲ್ವೇ..


ಉಪ್ಪಿನಕಾಯಿ ಹಾಕಬಹುದಿತ್ತು ಎಳೆಯ ಕಾಯಿ ಆಗಿದ್ದರೆ ಚೆನ್ನಾಗಿರೋದು ಇನ್ನೊಮ್ಮೆ ಮಾಡೋಣ ಬುಟ್ಟಿಯಲ್ಲಿದ್ದ ದಾರೆಹುಳಿಗಳೆಲ್ಲ ಹಣ್ಣಾಗಿವೆ ಇನ್ನು ಅಡುಗೆ ಮಾಡುವಂತಿಲ್ಲ,   ಚಿಂತೆಯಿಲ್ಲ ರಸ ತೆಗೆದು ಸಕ್ಕರೆ ಬೆರೆಸಿ ಪಾಕ ಬರಿಸಿ ಜಾಡಿಯಲ್ಲಿ ತುಂಬಿಸಿಡೋಣ.


 10 ದಾರೆ ಹುಳಿಗಳಿವೆ ಕೈಯಲ್ಲಿ ಹಿಸುಕಿ ರಸ ಶೋಧಿಸಿ ಇಡುವುದು ಮಿಕ್ಸಿ ಯಂತ್ರ ಬೇಡ ಅಂದಾಜು 2 ಲೋಟ ರಸ ದೊರೆಯಿತು.

ಸ್ಟೀಲು ಪಾತ್ರೆ ಹುಳಿ ರಸದಿಂದ ಹೊಳಪು ಕಳಕೊಳ್ಳುವ ಸಾಧ್ಯತೆ ಇದೆ ನಾನ್ ಸ್ಟಿಕ್ ತಪಲೆ ಉತ್ತಮ ಇಂಡಕ್ಷನ್ ಬೇಸ್ ಇರುವ ತಪಲೆಗೆ ದಾರೆಹುಳಿ ರಸ ಎರೆದು ಒಲೆಯ ಮೇಲೆ ಇರಿಸಿ.   ಕುದಿಯಲಿ,   ಒಂದು ಲೋಟ ಸಕ್ಕರೆ ಅಳೆದು ಹಾಕಿ ಬಿಡದೆ ಮರದ ಸಟ್ಟುಗದಲ್ಲಿ ಕೈಯಾಡಿಸಿ ಸ್ಟೀಲ್ ಸೌಟು ಬೇಡ.

ದಾರೆಹುಳಿಯೂ ಸಕ್ಕರೆಯೂ ಜೇನಿನೋಪಾದಿಯಲ್ಲಿ ಬೆರೆತು ಕೂಡಿದಾಗ ಸ್ಟವ್ ಆರಿಸಿ ದಾರೆಹುಳಿಯ  ಸಿಹಿ ದ್ರಾವಣ ಚಪಾತಿ,ದೋಸೆ, ಬ್ರೆಡ್ ಇತ್ಯಾದಿಗಳ ಜೊತೆ ಕೂಡಿ ತಿನ್ನಲು ಯೋಗ್ಯ.





ನಿನ್ನೆ ರಾತ್ರಿ ಚಪಾತಿಗೆ,  ಇಂದು ಮುಂಜಾನೆ ತೆಳ್ಳವು ಜೊತೆ ಕೂಡಿ ತಿನ್ನಲು ಹಿತವಾದ ರಸಗಟ್ಟಿ ನಮ್ಮದಾಯಿತು ಜೇನಿನ ಸಿಹಿ ಮಧುರತೆ ಇದರದ್ದು.


ನಮ್ಮ ದಾರೆಹುಳಿಗೆ ಅಖಂಡ ಕರ್ನಾಟಕದಲ್ಲಿ ನೂರಾರು ಹೆಸರುಗಳು.   ಆಂಗ್ಲ ಭಾಷೆ star fruit ಅಂದಿದೆ ವೈಜ್ಞಾನಿಕ ಪರಿಭಾಷೆಯಲ್ಲಿ ಇದು averrhoa carambola.  


91% ನೀರು 41% ವಿಟಮಿನ್ ಸಿ ದಾರೆಹುಳಿಯ ಹೆಗ್ಗಳಿಕೆ ಉಳಿದಂತೆ ಖನಿಜಾಂಶಗಳು ಕಾರ್ಬೋಹೈಡ್ರೇಟ್ಸ್ ಪ್ರೊಟೀನ್ ಅಲ್ಪಪ್ರಮಾಣದಲ್ಲಿ ಇರುತ್ತದೆ.


ದಾರೆಹುಳಿ ಮಧ್ಯಮ ಗಾತ್ರದ ಮರ ಆಗಿದ್ದು ಸದಾ ಹಸಿರೆಲೆಗಳು ಹೂಗೊಂಚಲು ನಯನಮನೋಹರ ಉದ್ಯಾನವನಗಳ ಶೋಭೆ ಹೆಚ್ಚಿಸುವಂತಹದು ಹಸಿರೆಲೆಗಳನ್ನು ತೋಟದ ಸಸ್ಯಗಳಿಗೆ ಮಳೆಗಾಲದ ಕೊನೆಯಲ್ಲಿ ಹಸಿರು ಗೊಬ್ಬರವಾಗಿ ಹಾಕಬಹುದಾಗಿದೆ ಆ ವೇಳೆಗೆ ಹಣ್ಣುಗಳು ಉದುರಿ ಮುಗಿದಿರುತ್ತವೆ.


ದಾರೆಹುಳಿಯ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದು ಫಲ ಸಿಗಲು ಹಲವು ವರ್ಷ ಕಾಯಬೇಕು ಒಳ್ಳೆಯ ನೀರಾಶ್ರಯವೂ ಇದಕ್ಕೆ ಅಗತ್ಯವಿದೆ ಕಸಿ ಕಟ್ಟಿದ ಗಿಡಗಳು ನರ್ಸರಿಗಳಲ್ಲಿ ಸಿಗುತ್ತವೆ ನೆಟ್ಟ ಮೂರೇ ವರ್ಷದಲ್ಲಿ ದಾರೆಹುಳಿಗಳನ್ನು ಕೊಯ್ಯಬಹುದು.


ಹಣ್ಣಾದ ದಾರೆಹುಳಿಯಿಂದ ನೋವಿನೆಣ್ಣೆ ತಯಾರಿಸಿ ಇಟ್ಟುಕೊಳ್ಳುವ ಪದ್ಧತಿ ಇದೆ ಲೋಟ ದಾರೆಹುಳಿ ರಸ ಲೋಟ ಎಳ್ಳೆಣ್ಣೆ ಬೆರೆಸಿ ನೀರಿನಂಶ ಬತ್ತುವ ತನಕ ಕುದಿಸಿ ಆರಿದ ನಂತರ ಶೋಧಿಸಿ ಜಾಡಿಯಲ್ಲಿ ತುಂಬಿಸಿ.   ಚಳಿಗಾಲದಲ್ಲಿ ಮೈಕೈ ನೋವು ಇರುವಾಗ ಎಣ್ಣೆ ಹಚ್ಚಿ ಬಿಸಿನೀರು ಸ್ನಾನ ಮಾಡಿದರಾಯಿತು.   ಬಾಣಂತಿ ಸ್ನಾನಕ್ಕೂ ಸೂಕ್ತ  ಎಣ್ಣೆ.






Wednesday, 10 August 2022

ಕೆಸುವಿನೆಲೆ ಚಟ್ಣಿ

 


ಅರ್ಧ ದಾರೆಹುಳಿ

ಕೆಸುವಿನೆಲೆ ಐದಾರು

ಬೆಳ್ಳುಳ್ಳಿ ಏಳೆಂಟು

ಒಂದು  ಹಸಿಮೆಣಸು

ಎಲ್ಲವನ್ನೂ ರುಚಿಗೆ ಉಪ್ಪು ಬೆರೆಸಿ ಬೇಯಿಸಿ.

ಕಾಯಿತುರಿಯೊಂದಿಗೆ ರುಬ್ಬಿ

ಚಟ್ಣಿ ಆಯಿತು.




ಪುಸ್ತಕ ಲೈಬ್ರರಿಯಿಂದ ಬಂದಿತ್ತು,  ಆಂಗ್ಲ ಭಾಷೆಯ  ಪುಸ್ತಕ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ.

ಝೀರೋ ಆಯಿಲ್ ಕುಕಿಂಗ್ ಎಂಬಂತಹ  ಪಾಕಶಾಸ್ತ್ರವನ್ನು ಬರೆದವರು ಖ್ಯಾತ ಹೃದಯ ರೋಗ ತಜ್ಞರಾಗಿದ್ದಾರೆ.

  

ಆರೋಗ್ಯಕ್ಕೆ ಕೈಪಿಡಿಯಂತಿರುವ  ಪುಸ್ತಕವನ್ನು ನಾನು ಎರಡೆರಡು ಬಾರಿ ಓದಿದೆ.   ವನಿತಾ ವಯೋಜನ ಪುಸ್ತಕ ವಿನಿಮಯಪದ್ಧತಿ ' ಎಂಬ ಕೇರಳ ಸರಕಾರದ ಯೋಜನೆಯಂತೆ ಕೋವಿಡ್ ಕಾರಣದಿಂದ ವಯಸ್ಕ ಮಹಿಳೆಯರಿಗೆ ಮನೆಗೇ ಪುಸ್ತಕ ಬರುತ್ತಲಿದೆ.  


ಎಣ್ಣೆರಹಿತ ಅಡುಗೆ ಇದಕ್ಕೆ ಸ್ಪೂರ್ತಿ ಹಾಗಾಗಿ ಚಟ್ಣಿಗೆ ಒಗ್ಗರಣೆಯನ್ನೂ ಹಾಕಿಲ್ಲ.



ಆಟಿಯ ಅಟಿಲ್

ಕೆಸುವಿನೆಲೆ ಚಟ್ಣಿ

ಬರಹ  ಬಂದಿದೆ

ಬಿಡುವು ಸಿಕ್ಕಾಗ

ದಾರೆಹುಳಿ ರಸಧಾರೆ

ಒಸರಲಿದೆ...