ದಿನವೂ ತೊಗರಿಬೇಳೆ ಬೇಯಿಸುವುದಿದೆ, ಕುಕ್ಕರ್ ಕೈ ಕೊಟ್ಟಿತು. ಅದೆಷ್ಟೇ ತಿಣುಕಾಡಿದರೂ ವಿಸಿಲ್ ಹಾಕಲೊಪ್ಪದೇ ದಳದಳನೆ ನೀರು ಸುರಿಸಿತು. “ ಗ್ಯಾಸ್ಕೆಟ್ ತೆಗೆದು ಫ್ರಿಜ್ ಒಳಗಿಡು, “ ನಮ್ಮವರ ಪುಕ್ಕಟೆ ಸಲಹೆ ಸಿಕ್ಕಿತು.
“ ಈಗ ಬೇಳೆ ಬೇಯಿಸುವುದು ಹೇಗೇ? “ ನನ್ನ ಪೆದ್ದು ಪ್ರಶ್ನೆ.
“ ಹಾಗೇನೇ ಬೇಯಿಸು.. ಹೇಗೂ ಕರೆಂಟ್ ಉಚಿತ, ಹೊರಗೆ ಬಿಸಿಲು ಬಂದಿದೆ, ಎಲ್ಲವನ್ನೂ ನಾನೇ ಹೇಳಿ ಕೊಡ್ಬೇಕು, ಸ್ವಲ್ಪ ತಲೆ ಖರ್ಚು ಮಾಡಲೂ ಕಲಿ…”
ಹೇಳುವುದನ್ನೇ ಮರೆತಿದ್ದೆ. ನಮ್ಮ ಮನೆ ಸೋಲಾರ್ ಪವರ್ ಹೌಸ್ ಆಗಿ ಹಲವು ವರ್ಷಗಳಾಗಿವೆ. ಮನೆ ತುಂಬ ವಿದ್ಯುತ್ ಚಾಲಿತ ಉಪಕರಣಗಳು.
ಬೇಳೆಯನ್ನು ಹಾಗೇ ಸುಮ್ಮನೆ ಇಂಡಕ್ಷನ್ ಒಲೆಯಲ್ಲಿಟ್ಟು ಬೇಯಿಸಿದ್ದೂ ಆಯ್ತು. ನನ್ನ ತರಕಾರಿಗಳೂ ಅದೇ ತರಹ ಬೆಂದುವು.
ಸಂಜೆಯಾಗುತ್ತಲೇ ವಿದ್ಯುತ್ ರೈಸ್ ಕುಕ್ಕರ್ ಅಟ್ಟದಿಂದ ಕೆಳಗಿಳಿಯಿತು. ಧೂಳು ಕೊಡವಿದರೆ ಸಾಲದು, ಚೆನ್ನಾಗಿ ತೊಳೆದೂ ಇರಿಸಲಾಯಿತು. ನಾಳೆಯ ಸಾಂಬಾರ್ ಇದರಲ್ಲೇ ಮಾಡೋಣ.
“ ಅನ್ನ ಮಾಡಲಿಕ್ಕೆ ರೈಸ್ ಕುಕ್ಕರ್ ಅಲ್ವ, ಸಾಂಬಾರ್ ಹೇಗೆ ಮಾಡ್ತದೆ ಅದು? “ ಮಗರಾಯನ ಝಗಮಗ ಪ್ರಶ್ನೆ.
ರೈಸ್ ಕುಕ್ಕರಲ್ಲಿ ಬೇಕಿದ್ದಷ್ಟು ತೊಗರಿಬೇಳೆ, ಅಂದಾಜು ಐದಾರು ಚಮಚದಷ್ಟು ತೊಳೆದು ಹಾಕುವುದು. ನೀರು ತುಸು ಜಾಸ್ತಿ ಎರೆಯಲೇ ಬೇಕು. ನಿಧಾನಗತಿಯಲ್ಲಿ ಬೇಯುವ ಈ ಪಾತ್ರೆಯಲ್ಲಿ ನೀರು ಆರದಂತೆ ನೋಡಿಕೊಳ್ಳುವ ಅಗತ್ಯವಿದೆ.
ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳುವುದು. ನನ್ನ ಬಳಿ ಟೊಮ್ಯಾಟೋ ಹಾಗೂ ಕ್ಯಾಪ್ಸಿಕಂ ಇತ್ತು.
ಸ್ವಲ್ಪ ಕಾಯಿತುರಿ, ಮಸಾಲೆಗೆ ಎರಡು ಒಣಮೆಣಸು, ಇಂಗು, ಕೊತ್ತಂಬರಿ ಹಾಗೂ ಜೀರಿಗೆ ಹುರಿಯುವುದು.
ಕಾಯಿತುರಿಯೊಂದಿಗೆ ನೀರು ಹಾಕದೆ ಅರೆಯುವುದು.
ತೊಗರಿಬೇಳೆ ಚೆನ್ನಾಗಿ ಬೆಂದ ನಂತರ ಟೊಮ್ಯಾಟೋ ಹಾಗೂ ಕ್ಯಾಪ್ಸಿಕಂ ಹಾಕುವುದು.
ತರಕಾರಿಗಳನ್ನು ಹಾಕಿದ ನಂತರ ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹುಳಿ ಬೆಲ್ಲ ಹಾಕುವುದು. ಚಿಟಿಕೆ ಅರಸಿಣವನ್ನೂ ಹಾಕಬೇಕು.
ತರಕಾರಿ ಬೆಂದ ನಂತರ ರುಬ್ಬಿದ ಮಸಾಲೆ ಕೂಡಿ, ಅಗತ್ಯ ಪ್ರಮಾಣದ ನೀರು ಎರೆದು ಕುದಿಸಿ. ಕರಿಬೇವು ಕೂಡಿದ ಒಗ್ಗರಣೆ ಬೀಳಲಿ.
ಇದೀಗ ಸಾಂಬಾರ್ ಆಯ್ತು. ಮೂವತ್ತು ನಲ್ವತ್ತು ವರ್ಷಗಳ ಹಿಂದೆ ಕಟ್ಟಿಗೆಯ ಒಲೆಯಲ್ಲಿ ನಮ್ಮ ಅಡುಗೆ ನಡೆಯುತ್ತಿತ್ತು. ದೊಡ್ಡ ಒಲೆಯಲ್ಲಿ ಅನ್ನ ಬೇಯುತ್ತಿದ್ದರೆ ಅದಕ್ಕೆ ತಾಗಿದಂತಿದ್ದ ಚಿಕ್ಕ ಒಲೆಯಲ್ಲಿ ಸಾಂಬಾರ್, ತರಕಾರಿಗಳನ್ನು ಬೇಯಿಸಲಾಗುತ್ತಿತ್ತು. ಎರಡೂ ಒಲೆಯಲ್ಲಿ ಎಸರು ಕುದಿಯಲಾರಂಭಿಸಿದಾಗ, ಅಡುಗೆಯ ಯಜಮಾಂತಿಯ ಉಳಿದ ನಿತ್ಯಕೆಲಸಗಳಿಗೆ ಆರಾಮ. ನಾನೂ ಇದೇ ತರಹ ಅಡುಗೆ ನಿಭಾಯಿಸಿದ್ದೇನೆ.
ಎರಡು ಒಲೆಗಳು ಕೂಡಿದಂತಹದು ಕೋಡೊಲೆ ಎಂದು ಹೇಳಬಹುದಾಗಿದೆ. ನನ್ನ ಅಮ್ಮ ಅಂದಿನ ದಿನಗಳಲ್ಲಿ ಕೋಡೊಲೆಯಲ್ಲಿ ಕಬ್ಬಿಣದ ಪುಟ್ಟ ಬಾಣಲೆಯಿಟ್ಟು ಮೆಣಸು ಮಸಾಲೆ ಹುರಿಯುವುದು, ಒಗ್ಗರಣೆ ಸಟ್ಟುಗಕ್ಕೆ ಕೋಡೊಲೆಯೇ ಗತಿ. ಕಲಾಯಿ ಹಾಕಿದ ಹಿತ್ತಾಳೆಯ ಪುಟ್ಟ ಪಾತ್ರೆಯಲ್ಲಿ ಬೆಣ್ಣೆ ಕರಕರಗಿ ತುಪ್ಪವಾಗುತಿತ್ತು. ಕಾಫಿ ತಣ್ಣಗಾಯಿತೇ, ಕೋಡೊಲೆ ಇದೆ. ಹೀಗೆಲ್ಲ ನೂರೆಂಟು ನೆನಪುಗಳು…
ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ನಮ್ಮವರು ಯಾವುದೇ ಹೊಸ ಉಪಕರಣ ಮಾರುಕಟ್ಟೆಗೆ ಬರಲಿ, ಖರೀದಿಸುತ್ತಾರೆ. ಹಾಗಾಗಿಯೇ ನನ್ನ ಬಳಿ ಮೈಕ್ರೋವೇವ್, ರೈಸ್ ಕುಕ್ಕರ್, ನಾನ್ ಸ್ಟಿಕ್ ತವಾ ಪಾತ್ರಪರಡಿಗಳು ಹಿಂದಿನಿಂದಲೇ ಇವೆ, ಯಾವುದನ್ನೂ ಒತ್ತಾಯದಿಂದ ತರಿಸಿದ್ದಲ್ಲ. “ಉಪಯೋಗಿಸು, ಹಾಳಾದರೆ ಅತ್ತ ಇಡು.. ಅದರ ಗ್ಯಾರಂಟಿ ಒಂದೇ ವರ್ಷ ತಿಳೀತಾ..” ಇಂತಹ ಪುಕ್ಕಟೆ ಸಲಹೆಗಳು.
ಅಂತೂ ರೈಸ್ ಕುಕ್ಕರ್ ಸಾಂಬಾರ್ ರುಚಿಕಟ್ಟಾಗಿರುತ್ತದೆ ಎಂದು ತೋರಿಸಿ ಕೊಟ್ಟಾಯ್ತು. ಈ ಮಾದರಿಯ ರೈಸ್ ಕುಕ್ಕರ್ ಇಪ್ಪತೈದು ವರ್ಷಗಳ ಹಿಂದೆಯೇ ನನ್ನ ಬಳಿ ಇತ್ತು, ವಿದೇಶದಿಂದ ತರಿಸಿದ್ದು. ಆಗಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣಗಳನ್ನು ಬೇಕಾಬಿಟ್ಟಿ ಉಪಯೋಗಿಸಲು ಬಾರದು, ವಿದ್ಯುತ್ ಕಡಿತ, ಲೋಡ್ ಶೆಡ್ಡಿಂಗ್, ಹೀಗೇ ಸಮ್ಮನೆ ಕರೆಂಟ್ ಹೋಗುವ ಸಮಸ್ಯೆಗಳು…
ಆದರೂ ಐದು ಲೀಟರ್ ಸಾಮರ್ಥ್ಯದ ಆ ಕುಕ್ಕರನ್ನು ಬೆಳ್ತಿಗೆ ಅನ್ನ ಮಾಡಲು ಚೆನ್ನಾಗಿರುತ್ತದೆ ಎಂದು ಮನೆ ಮಂದಿಯೆಲ್ಲ ಒಪ್ಪಿಕೊಂಡಿದ್ದರು. ಆದರೆ ದಿನವೂ ಕುಚ್ಚುಲಕ್ಕಿಯೇ ನಮ್ಮ ಊಟದ ಅನ್ನವಾಗಿರುವಾಗ, ತೊಗರಿಬೇಳೆ, ತರಕಾರಿ ಬೇಯಿಸಲಿಕ್ಕೆ ಈ ಕುಕ್ಕರ್ ಸೀಮಿತವಾಗಿತ್ತು. ಆಗಾಗ ಬರುತ್ತಿದ್ದ ನನ್ನಮ್ಮನೂ ರೈಸ್ ಕುಕ್ಕರನ್ನು ಮೆಚ್ಚಿಕೊಂಡಿದ್ದರು.
“ ಇದು ಆದೀತು, ಆ ಮೈಕ್ರೋವೇವ್ ಸುಮ್ಮನೆ.. “
“ ಮೈಕ್ರೋವೇವ್ ಹಾಳಾಗಿ ಬಿಟ್ಟಿದೆ. “
“ ಒಳ್ಳೇದಾಯ್ತು ಬಿಡು.. “
ಈ ಬಾರಿ ನಮ್ಮ ಕುಚ್ಚುಲಕ್ಕಿ ಅನ್ನ ಮಾಡಿ ನೋಡೋಣ ಎಂದು ಮುಕ್ಕಾಲು ಪಾವು ಅಕ್ಕಿಯನ್ನು ಬೇಯಿಸಿ ನೋಡಲಾಯಿತು. ಇದರಲ್ಲಿ ವಿಶೇಷ ಪರಿಣತಿ ಏನೂ ಬೇಡ, ಹಿಡಿಸುವಷ್ಟು ನೀರೆರೆದು, ನಮ್ಮ ಅಕ್ಕಿಯನ್ನೂ ತೊಳೆದು ಹಾಕಿ, ವಿದ್ಯುತ್ ಸಂಪರ್ಕ ಕೊಟ್ಟು ಸುಮ್ಮನಿದ್ದರಾಯಿತು. ಬೆಂದಿತೋ, ಕುದಿಯುತ್ತಿದೆಯೋ ಎಂದು ಮುಚ್ಚಳ ತೆಗೆದು ನೋಡಲಡ್ಡಿಯಿಲ್ಲ.
ಊಟದ ಸಮಯಕ್ಕೆ ಅನ್ನ ಬೆಂದಿದೆ ಎಂದು ಸುವಾಸನೆಯಲ್ಲೇ ತಿಳಿಯಿತು. ಕಟ್ಟಿಗೆಯ ಒಲೆಯಲ್ಲಿ, ಒಂದೇ ಹದನಾದ ಉರಿಯಲ್ಲಿ ಬೆಂದ ಅನ್ನದ ರುಚಿ ಹೇಗಿರುತ್ತದೆ ಎಂದು ಬಲ್ಲವರೇ ಹೇಳಬಲ್ಲರು.
ವಿದ್ಯುತ್ ಅಡುಗೆಯ ಈ ಸ್ಪೂರ್ತಿಯಿಂದ ಈಗ ನಮ್ಮ ಮನೆಗೆ ಅಗಾರೋ ಇಲೆಕ್ಟ್ರಿಕ್ ಕುಕ್ಕರ್ ಬಂದಿದೆ.
ಅಗಾರೋ ಕುಕ್ಕರ್ ಅಡುಗೆಯ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
0 comments:
Post a Comment