Pages

Ads 468x60px

Monday, 29 April 2013

ಪುಟ್ಟನ ಹಣ್ಣು





ಪುಟ್ಟ ಓಡಿ ಬಂದನು
ಗೇರುಹಣ್ಣು ಕಂಡನು
ಕೋಲು ಒಂದ ತಂದನು
ಕೋಲ ಬಡಿತ ನಾಟದಿರಲು
ಹಣ್ಣು ಕೈಗೆ ಸಿಗದೆ ಇರಲು
ಸರಸರನೆ ಮರವನೇರಲು |

ಗೇರು ಕೈಗೆ ಎಟುಕದಿರಲು
ಕೋಲು ಕೆಳಗೆ ಬೀಳಲು
ಪುಟ್ಟ ಜಾರಿ ಬಿದ್ದನು
 ಕನರು ಹಣ್ಣು ಬೇಡ ಎಂದನು
ಗಾಯವೇನೂ ಆಗದಿರಲು 
ನನ್ನ ಅಜ್ಜೀ ಪುಣ್ಯ ಎಂದನು |




Posted via DraftCraft app

Monday, 22 April 2013

ರಾಗೀ ಹಾಲುಬಾಯೀ






ಮುಂಜಾನೆಗೊಂದು ತಿಂಡಿಯ ಹಿಟ್ಟು ಉಳಿದಿತ್ತು. ಅಕ್ಕೀ, ರಾಗೀ ಹಾಕಿ ಮಾಡಿದ್ದು ತೆಳ್ಳವು, ನಮಗಿಬ್ಬರಿಗೆ ಬೇಕಾದ ದೋಸೆ ಎರೆದು ಮಿಕ್ಕುಳಿದ ಹಿಟ್ಟು ಒಂದು ದೊಡ್ಡ ಲೋಟಾ ಆಗುವಷ್ಟು ಇತ್ತು.

" ಇರಲಿ, ಸಂಜೆ ಪುನಃ ದೋಸೆ ಎರೆದು ತಿಂದ್ರಾಯ್ತು " ಅಂತೀರಾ,

ಅದನ್ನೇ ತಿನ್ನೋದಿಕ್ಕೆ ಬೇಜಾರು. ಇದನ್ನು ಹಾಲುಬಾಯಿ ಮಾಡಿದ್ರೆ ಹೇಗೆ ?

ಹಾಲುಬಾಯಿ ಅಂದ್ರೆ ಏನೂಂತ ಗೊತ್ತಿಲ್ಲದವರಿಗೆ ಮಾಡುವ ವಿಧಾನ ಹೇಳದಿದ್ದರೆ ಹೇಗೆ ?

ಅಕ್ಕಿಹಿಟ್ಟು, ತೆಂಗಿನಕಾಯಿ ಹಾಲು, ಬೆಲ್ಲ. ಇದು ಮಾಮೂಲು ಸಾಮಗ್ರಿ. ತುಂಬ ಮೃದುವಾದ ಈ ಸಿಹಿಭಕ್ಷ್ಯ, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರಿಗೂ ಹಿತಕರ ಹಾಗೂ ರುಚಿಕರ. ಹಳೇ ಕಾಲದವರ, ಮಾಡಲು ಸುಲಭವಾದ ಸಿಹಿತಿಂಡಿ. ಹಸರೇ ಹೇಳುವಂತೆ ಈ ತಿಂಡಿಯನ್ನು ಕಂಡು ಹಿಡಿದವರೂ ನಮ್ಮ ಕನ್ನಡಿಗರೇ ಎಂದು ನನ್ನ ಊಹೆ. ಬಾಯಿಗೆ ಹಾಕಿದ್ರೆ ಮುಗೀತು, " ಬುಳುಕ್ " ಎಂದು ಉದರ ಪ್ರವೇಶ ಅಲ್ವೇ... ಹಾಲುಗಲ್ಲ, ಹಾಲುಹಸುಳೆ ಇತ್ಯಾದಿ ರೂಢನಾಮಗಳಂತೆ ಈ ತಿಂಡಿ ಹಾಲುಬಾಯಿ ಆಗ್ಹೋಗಿದೆ ಅನ್ನಿ.

ಈ ಪಾಕವಿಧಾನ ಮಾಡಲು ಸುಲಭ ಯಾರಿಗೆ ? ಯಂತ್ರೋಪಕರಣಗಳ ಯುಗದಲ್ಲಿ ಇರುವಂತಹ ನಮ್ಮಂತಹವರಿಗೆ. ಅಂದಿನ ಕಾಲದ ಪಾಕತಜ್ಞೆಯರು ಕಟ್ಟಿಗೆಯ ಒಲೆ, ಮಣ್ಣಿನ ಮಡಕೆ, ರುಬ್ಬುವ ಗುಂಡು, ಬೀಸೋಕಲ್ಲುಗಳ ಸಾಂಗತ್ಯದಿಂದಲೇ ಅಡುಗೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದವರೆಂಬುದನ್ನು ಮರೆಯದಿರೋಣ.

ನನ್ನತ್ತೆ ಕೂಡಾ ವೈವಿಧ್ಯಮಯವಾದ ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದರು. ಅಡುಗೆಮನೆಯ ಜೆಂಙದ ಮೇಲೆ ಸಾಲಾಗಿ ಉಪ್ಪಿನಕಾಯಿ ಭರಣಿಗಳು, ಅದರ ಮೇಲೆ ಕವುಚಿ ಹಾಕಲ್ಪಟ್ಟ ಮಣ್ಣಿನ ಮಡಕೆಗಳು, ಯಾವುದನ್ನೂ ನಾವು ಮುಟ್ಟುವ ಹಾಗಿರಲಿಲ್ಲ. ಭರಣಿ ಕೆಳಗಿಳಿಸಿ ಉಪ್ಪಿನಕಾಯಿ ಹೊರ ತೆಗೆಯುವ ಕಲೆಗಾರಿಕೆ ನಮ್ಮತ್ತೆಗೆ ಮಾತ್ರ ಗೊತ್ತಿತ್ತು. ಅಡುಗೆಮನೆಯ ಎಬಿಸಿಡಿ.. ಗೊತ್ತೇ ಇಲ್ಲದ ನಾನು ಯಾವ ಉಸಾಬರಿಗೂ ತಲೆ ಹಾಕ್ತಾನೇ ಇರಲಿಲ್ಲ. ಒಮ್ಮೆ ಏನಾಯ್ತು, ನನಗೂ ಅಡುಗೆ ಮಾಡುವ ಉಮೇದು ಬಂದು, ಪುನರ್ಪುಳಿ ಸಾರು ಮಾಡಲು ತೊಡಗಿದೆ. ಸಾರೇನೋ ಆಯ್ತು, ಕಟ್ಟಿಗೆಯ ಒಲೆಯ ಮೇಲಿಂದ ಮಣ್ಣಿನ ಮಡಕೆಯಲ್ಲಿ ಕುದಿದ ಸಾರನ್ನು ಕೆಳಗಿಳಿಸುವ ಧಾವಂತದಲ್ಲಿ ಕೈ ಜಾರಿ ಕೆಳಗೆ ಬಿದ್ದ ಮಡಕೆ ಹೋಳು ಹೋಳಾಗಿ, ಸಾರು ಪೂರಾ ಒಲೆಗೆ ಚೆಲ್ಲಿ, ಒಲೆಯ ಬೆಂಕಿ ಆರಿ, ಬೂದಿಯೆಲ್ಲ ಹಾರಿ, ಅನಾಹುತವನ್ನು ನನ್ನತ್ತೆ ನೋಡಿ " ನೀನು ಮಡಕೆಯಲ್ಲಿ ಅಡುಗೆ ಮಾಡೂದು ಬೇಡ " ಎಂದು ಅಪ್ಪಣೆ ಕೊಡಿಸಿದ್ರು.

ಈ ಹಳೇ ಕಥೆಗಳೆಲ್ಲ ಒತ್ತಟ್ಟಿಗಿರಲಿ, ನಾವು ಇಂದಿನ ಕಾಲಧರ್ಮಕ್ಕನುಸಾರ ಹಾಲುಬಾಯಿ ಮಾಡಿಕೊಳ್ಳೋಣ..

ಈಗ ಉಳಿದಿರುವ ಹಿಟ್ಟಿನಲ್ಲಿ ರಾಗಿಯೂ ಇದೆ. ಅದಕ್ಕೆ ಬೆಲ್ಲ ಹಾಕಿದ್ರೆ ಮತ್ತೂ ಕಪ್ಪಗಾಗಿ ಬಿಡುತ್ತೆ, ನಾವು ಒಂದು ಕಪ್ ಸಕ್ಕರೆ ಹಾಕೋಣ.

ಮನೆಯಲ್ಲಿ ಇರೋರು ನಾವಿಬ್ಬರೇ, ಒಂದ್ಹತ್ತು ಮಂದಿಯಾದರೂ ಇದ್ದಿದ್ದರೆ ತೆಂಗಿನಕಾಯಿ ತುರಿದು, ಕಡೆದು, ಹಾಲು ತೆಗೆದು ಹಾಕಬಹುದಿತ್ತು, ಹಾಗಾಗಿ ಒಂದು ಲೋಟ ಹಸುವಿನ ಹಾಲು ಅಥವಾ ಎಮ್ಮೆಹಾಲು...ಬೇಡ ಬಿಡಿ, ಪ್ಯಾಕೆಟ್ ಹಾಲು ಹಾಕೋಣ.

ಇನ್ನು ತುಪ್ಪ ಸವರಿದ ಬಾಣಲೆ ಒಲೆ ಮೇಲೆ ಇಡಿ. ನೀರುದೋಸೆ ಹಿಟ್ಟು, ಹಾಲು ಎರೆದು ಸೌಟಿನಲ್ಲಿ ಮಗುಚುತ್ತಾ ಇರಿ. ಐದೇ ನಿಮಿಷದಲ್ಲಿ ಹಿಟ್ಟು ಬೆಂದು ಮುದ್ದೆಗಟ್ಟಿತೇ, ಈಗ ಸಕ್ಕರೆ ಸುರಿಯಿರಿ. ಸಿಹಿ ಹೆಚ್ಚು ಬೇಕಾದಲ್ಲಿ ಇನ್ನೂ ಸಕ್ಕರೆ ಹಾಕಬಹುದು, ಸಕ್ಕರೆ ಕರಗಿ ಪುನಃ ಮಿಶ್ರಣದೊಂದಿಗೆ ಕೂಡಿಕೊಳ್ಳುವಂತೆ ಸೌಟಿನಲ್ಲಿ ಕೈಯಾಡಿಸುತ್ತಾ ಇರಿ.

ಬೆಂದ ಹಿಟ್ಟು ಕೈಗೆ ಅಂಟುವುದಿಲ್ಲ ಹಾಗೂ ಪಾಕಕ್ಕೆ ಒಂದು ಹೊಳಪು ಕೂಡಾ ಬರುತ್ತದೆ. ಒಂದೆರಡು ಚಮಚ ತುಪ್ಪ ಎರೆದು ಕೆಳಗಿಳಿಸಿ. ತಟ್ಟೆಗೆ ಹಾಕಿ ಮಟ್ಟಸ ಮಾಡಿ ಬಿಡಿ.

ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿ. ಚೆನ್ನಾಗಿ ಆರಿದ ಮೇಲೆ ತಿನ್ನಬೇಕಾಗಿರುವುದರಿಂದ ಮುಂಜಾನೆಯ ತಿಂಡಿ ತಿಂದಾದ ಕೂಡಲೇ ಮಾಡಿಟ್ಟುಕೊಳ್ಳಿ.

ಏಲಕ್ಕಿ, ಗೋಡಂಬಿ, ದ್ರಾಕ್ಷಿ ಇತ್ಯಾದಿ ಬೇಕಿದ್ರೆ ಹಾಕಬಹುದು. ಪರಿಮಳಯುಕ್ತ ಬಾದಾಮ್ ಹುಡಿ ಬೇಕಿದ್ರೂ ಹಾಕಿ. ಅದು ಬೇಡಾಂದ್ರೆ ಗಸಗಸೆ ಹುರಿದು ಹಾಕಿಕೊಳ್ಳಿ. ಹಾಲುಬಾಯಿ ತಿಂದು ರಾತ್ರಿ ಸುಖವಾಗಿ ನಿದ್ರಿಸಿ.



Posted via DraftCraft app

Monday, 15 April 2013

ಬಂದಿದೆ ಬಿರು ಬೇಸಿಗೆ, ಇಲ್ಲಿದೆ ನೀರು ಮಜ್ಜಿಗೆ....





ಪಕ್ಕದಮನೆಯಾಕೆ ಬಂದರು.  ಕೈಯಲ್ಲಿ ಒಂದು ಸ್ಟೀಲು ಲೋಟ,  " ಮಜ್ಜಿಗೆ ಬೇಕಿತ್ತು..."
" ಅಷ್ಟೇನಾ,  ಕೂತಿರಿ,  ತರ್ತೇನೆ .."
" ಮಜ್ಜಿಗೆ ಮಾಡೂದು ಹೇಗೇ..."
ಆಕೆಗೆ ಮಜ್ಜಿಗೆ ತಯಾರಿಸುವ ವಿಧಾನವನ್ನು ಸಾದ್ಯಂತವಾಗಿ ವಿವರಿಸಿ ಹೇಳಿಯಾಯ್ತು.

ಮಜ್ಜಿಗೆಯಲ್ಲಿ ಅಂತಹ ಮಹತ್ವವೇನಿದೆ ?   ಕಾದಾರಿದ ಹಾಲಿಗೆ ಸ್ವಲ್ಪ ಹುಳಿಯಾದ ಮೊಸರು ಅಥವಾ ಮಜ್ಜಿಗೆ ಎರೆದು ಮುಚ್ಚಿಟ್ಟರಾಯಿತು,  ಕೆಲವು ಗಂಟೆಗಳಲ್ಲಿ ದಪ್ಪ ಮೊಸರು ಸಿದ್ಧ.  ಮೊಸರನ್ನು ಕಡೆದು,  ಬೆಣ್ಣೆಯನ್ನು ತೆಗದು ಉಳಿಯುವ ಶೇಷವೇ ಮಜ್ಜಿಗೆ.   ಈ ಮಜ್ಜಿಗೆಗೆ ಉಪ್ಪು,  ಹಸಿಮೆಣಸು ಹಾಗೂ ಬೇವಿನೆಲೆಯ ಒಗ್ಗರಣೆ ಕೊಟ್ಟು ಬೇಕಾದ ನೀರು ಸೇರಿಸಿದರೆ ಮಜ್ಜಿಗೆನೀರು ತಯಾರು.   ಸಾಂಪ್ರದಾಯಿಕ ಔತಣಕೂಟಗಳಲ್ಲಿ  ಕೊನೆಯ ತುತ್ತು ಅನ್ನ ಈ ಒಗ್ಗರಣೆಭರಿತ ಮಸಾಲಾ ಮಜ್ಜಿಗೆಗೆ ಮೀಸಲು.

ಬಂದಿದೆ ಬಿರು ಬೇಸಿಗೆ
ಇಲ್ಲಿದೆ ನೀರು ಮಜ್ಜಿಗೆ
ತಣಿಯಲಿ ದಾಹದ ಬೇಗೆ....

ಇದಲ್ಲದೆ ನಮಗೆ ಇಷ್ಟ ಬಂದಂತೆ ಮಸಾಲಾ ಮಜ್ಜಿಗೆ ತಯಾರಿಸಬಹುದು.   ಶುಂಠೀ,  ಗಾಂಧಾರೀಮೆಣಸು ನುರಿದು,  ಸುವಾಸನಾಯುಕ್ತ ಮಾಂಙನ್ನಾರೀ ಜೊತೆಯಲ್ಲಿ ಕುಡಿಯಬಹುದು.
  ಅನ್ನದ ಗಂಜಿಗೆ ಮಜ್ಜಿಗೆ ಬೆರೆಸಿ,  ಈ ಸೂಪ್ ಊಟದ ಅರ್ಧ ಗಂಟೆ ಮುಂಚಿತವಾಗಿ ಕುಡಿದು ಬಳಲಿಕೆ ನಿವಾರಿಸಿ.





ಮೊಸರನ್ನು ಹಾಗೇ ಮಿಕ್ಸಿಯಲ್ಲಿ ತಿರುಗಿಸಿ ಉಪ್ಪು ಅಥವಾ ಸಕ್ಕರೆಯೊಂದಿಗೆ ಕುಡಿಯುವ ಸಂಪ್ರದಾಯ ಉತ್ತರಭಾರತೀಯರದ್ದು.   ಇದಕ್ಕೆ ವಾಡಿಕೆಯಲ್ಲಿ ಲಸ್ಸೀ ಎಂದೂ ಹೆಸರಿದೆ.  ಸಿಹಿ ಮಜ್ಜಿಗೆ ಹಾಗೂ ಮಾವಿನಹಣ್ಣಿನ ರಸದ ಸಂಯೋಜನೆ ಮ್ಯಾಂಗೋ ಲಸ್ಸೀ ಎಂದೇ ಜನಪ್ರಿಯವಾಗಿದೆ.

ಇನ್ನೊಂದು ಕುತೂಹಲಕಾರೀ ಸಂಗತಿ ಗೊತ್ತಾ,  ಬಡಜನರೇ ಹೆಚ್ಚಿರುವ ನಮ್ಮೀ ಭಾರತದೇಶದಲ್ಲಿ ವಾಶಿಂಗ್ ಮೆಶೀನುಗಳು ಹೆಚ್ಚು ಮಾರಾಟವಾಗುತ್ತಿರುವುದು ವಿದೇಶೀ ಉದ್ಯಮಿಗಳನ್ನು ಚಕಿತಚಿತ್ತರನ್ನಾಗಿಸಿ,  ಇಲ್ಲಿಗೆ ಅಧ್ಯಯನತಂಡವೊಂದು ಬಂದು ಬೆಕ್ಕಸಬೆರಗಾಗುವಂತೆ ಮಾಡಿದ್ದು ಲಸ್ಸೀ ಪಾರ್ಲರುಗಳು.   ಯಾಕಂತೀರಾ,  ಲಸ್ಸೀ ಪಾರ್ಲರುಗಳ ಒಳಗಿರುವ ಯಂತ್ರಗಳು ವಾಶಿಂಗ್ ಮೆಶೀನುಗಳಾಗಿದ್ದುವು !

ತಂಪು ಹುಳಿ ಅಥವಾ ತಂಬುಳಿ: 
 ತೆಂಗಿನತುರಿ, ತುಸು ಜೀರಿಗೆ ಹಾಗೂ ಮಜ್ಜಿಗೆ,  ರುಚಿಗೆ ಉಪ್ಪು.   ಇವಿಷ್ಟನ್ನು ನುಣ್ಣಗೆ ಅರೆದು,  ಇನ್ಯಾವುದೇ ಸೊಪ್ಪುಸದೆ ಸೇರಿಸಿದ್ದೇ ಆದಲ್ಲಿ ಆ ತಂಬುಳಿಗೆ ಶುಂಠಿ ತಂಬುಳಿ,  ಒಂದೆಲಗದ ತಂಬುಳಿ ಇತ್ಯಾದಿ ಹೆಸರುಗಳು.   ಈ ತಂಬುಳಿಗಳನ್ನು ಕುದಿಸುವ ಪದ್ಧತಿ ಇಲ್ಲ.   ಔಷಧೀ ರೂಪದ ತಂಬುಳಿಗಳನ್ನು ಕುದಿಸುವ ವಾಡಿಕೆ ಇದೆ.   ಹಿಂದೆ ಬಾಣಂತಿಯರಿಗೆ ಹತ್ತು ದಿನಗಳ ಕಾಲ ಕಡ್ಡಾಯವಾಗಿ ಪಥ್ಯಾಹಾರ ರೂಢಿಯಲ್ಲಿತ್ತು.   ಓಮದ ತಂಬುಳಿ,  ಮೆಂತೆ ತಂಬುಳಿಗಳ ಬಳಕೆ ಸಾಮಾನ್ಯವಾಗಿತ್ತು.  ಈ ಕಾಳುಗಳನ್ನು ತುಪ್ಪದಲ್ಲಿ ಹುರಿದು,  ತೆಂಗಿನತುರಿಯೊಂದಿಗೆ ಅರೆದು,  ಮಜ್ಜಿಗೆ ಎರೆದು ಕುದಿಸಿಯೇ ಇಡುವ ಕ್ರಮ.  ಆದರೆ ಈಗಿನ ವೈದ್ಯಕೀಯ ಪದ್ಧತಿ ಈ ಹಳೇ ಕ್ರಮಗಳನ್ನು ಪಾಲಿಸಬೇಕೆಂದು ಹೇಳುವುದೇ ಇಲ್ಲ,    ಚಿಂತೆ ಬೇಕಿಲ್ಲ.




ಮಜ್ಜಿಗೆ ಹುಳಿ:
ತರಕಾರಿ ಬೇಯಿಸಿ.   ಸೌತೆ,  ಕುಂಬಳ,  ತೊಂಡೆಕಾಯಿಗಳು ಮಜ್ಜಿಗೆಹುಳಿ ತಯಾರಿಯಲ್ಲಿ ಹೆಸರುವಾಸಿಯಾಗಿವೆ.  ತೆಂಗಿನತುರಿ ನುಣ್ಣಗೆ ಬೆಣ್ಣೆಯಂತೆ ಅರೆದು,  ದಪ್ಪ ಮಜ್ಜಿಗೆ ಸೇರಿಸಿ ಬೇವಿನಸೊಪ್ಪು ಒಗ್ಗರಣೆ ಕೊಟ್ಟರಾಯಿತು.  ಬೆಲ್ಲ ಹಾಕಬೇಕಾಗಿಲ್ಲ,  ಹುಳಿ ಮಜ್ಜಿಗೆಯಲ್ಲೇ ಇದೆ.  ರುಚಿಗೆ ಉಪ್ಪು ಹಾಕಿದ್ರೆ ಮುಗೀತು.   ಅತೀ ಕಡಿಮೆ ಖರ್ಚಿನ ವ್ಯಂಜನ. ಯಾರಿಗೆ ?   ಮನೆಯಲ್ಲಿ ಹೈನುಗಾರಿಕೆ ಇದ್ದವರಿಗೆ,  ಹಿತ್ತಿಲಲ್ಲಿ ಕಲ್ಪವೃಕ್ಷವೆನಿಸಿದ ತೆಂಗಿನಮರಗಳು ಇದ್ದವರಿಗೆ ಮಾತ್ರ.   ಎಲ್ಲಾ ಸಾಮಗ್ರಿಗಳನ್ನು ಮಾರ್ಕೇಟ್ ನಿಂದ ತಂದೇ ಆಗಬೇಕಾದವರಿಗೆ ಮಜ್ಜಿಗೆಹುಳಿ ದುಬಾರಿಯೇ.   ಮಜ್ಜಿಗೆಹುಳಿಗೆ ಉಪಯೋಗಿಸುವ ತೆಂಗಿನಕಾಯಿ ಕೂಡಾ ಹಸಿಯಾಗಿದ್ದರೇ ಚೆನ್ನ.  

ಇಲ್ಲಿ ಮಜ್ಜಿಗೆಹುಳಿ ಹಾಗೂ ಮೇಲೋಗರ ಅಂದ್ರೆ ಒಂದೇನಾ ಎಂಬ ಪ್ರಶ್ನೆ ಏಳಬಹುದು.   ಅನ್ನದ ಮೇಲೆ ಎರೆದು ತಿನ್ನುವಂತಹ ಯಾವುದೇ ವ್ಯಂಜನಕ್ಕೆ ಮೇಲೋಗರ ಎಂದು ಹೆಸರು.   " ಊಟಕ್ಕೆ ಏನು ಮೇಲೋಗರ ಮಾಡಿದ್ದೀರಾ "   ಅಂದ್ರೆ ನಿಮ್ಮ ರಸಂ ಅಥವಾ ಕರೀ ಯಾವ ನಮೂನೆಯದು ಎಂದು ಅರ್ಥೈಸಬಹುದು.




ಪಳದ್ಯ:
  2 ಚಮಚಾ ಕಡ್ಲೇಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಕಾಳುಕಟ್ಟದಂತೆ ಮಿಶ್ರಗೊಳಿಸಿ ಇಡಿ.   ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿಯುತ್ತಿದ್ದಂತೆ ಬೇವಿನೆಲೆ,  ಸಿಗಿದ ಹಸಿಮೆಣಸು,  ಚಿಟಿಕೆ ಅರಸಿನ ಹಾಕಿ,  ಕಡ್ಲೇಹಿಟ್ಟಿನ ನೀರನ್ನು ಎರೆದು ಕುದಿಸಿ.   ಕುದಿದು ದಪ್ಪ ಬಂದ ಹಾಗೆ ಒಂದು ಲೋಟ ಮಜ್ಜಿಗೆ ಎರೆದು ಬಿಡಿ.  ಒಂದು ಕುದಿ ಬಂದೊಡನೆ ಕೆಳಗಿಳಿಸಿ.   ಸೆಕೆಗಾಲದಲ್ಲಿ ಇಂತಹ ಸಹವ್ಯಂಜನಗಳೇ ಊಟಕ್ಕೆ ಹಿತವೆನ್ನಿಸುತ್ತವೆ.   ಸಾಂಪ್ರದಾಯಿಕವಾಗಿ ತೆಂಗಿನತುರಿಯಲ್ಲಿ ಪಳದ್ಯ ತಯಾರಿ.     ಆದರೆ ಈ ಮೇಲಿನ ವಿಧಾನದಲ್ಲಿ ಇದರ ತಯಾರಿಯೂ ಸರಳ,  ಅಡುಗೆ ಗೊತ್ತಿಲ್ಲದವರಿಗೂ ಮಾಡಿಕೊಳ್ಳಬಹುದು.   ಸೂಪ್ ಥರ ಕುಡಿಯಲೂ ಅಡ್ಡಿಯಿಲ್ಲ.




ಅನಾರೋಗ್ಯದಿಂದ ಹಾಲನ್ನು ಜೀರ್ಣಿಸಿಕೊಳ್ಳಲು ಶಕ್ತಿಯಿಲ್ಲದಿದ್ದಾಗ ಕುದಿಯುತ್ತಿರುವ ಹಾಲಿಗೆ ಲಿಂಬೇರಸ ಎರೆದು ಆ ಕೊಡಲೇ ದಪ್ಪಗಟ್ಟಿದ ಕೆನೆ ತೆಗೆದು ಉಳಿದ ತಿಳಿರಸದ ಸೇವನೆ ಮಜ್ಜಿಗೆಯ ಸರ್ವಶಕ್ತತೆಗೆ ಸಾಕ್ಷಿ.   ಹೀಗೆ ದಪ್ಪಗಟ್ಟಿದ ಕೆನೆಯನ್ನು ಸಿಹಿತಿಂಡಿಗಳ ತಯಾರಿಗೆ ಬಳಸುವ ರೂಢಿ.   ಮೊಸರು ಹಾಗೂ ಜೇನು ಸೇರಿಸಿದ ದ್ರವ್ಯ ಧಾರ್ಮಿಕ ವಿಧಿಗಳಲ್ಲಿ ದೇವತಾಪ್ರಸಾದವಾಗಿ ವಿನಿಯೋಗಿಸಲ್ಪಡುತ್ತದೆ.

ಪಕ್ಕದಮನೆಯಾಕೆಗೆ ಮಜ್ಜಿಗೆ ತಯಾರಿಯ ಕ್ರಮ ಹೇಳಿಕೊಟ್ಟರೆ ಸಾಕೇ,  ಇಲ್ಲಿಯೂ ಬರೆಯದಿದ್ದರೆ ಹೇಗೆ ?

ಪ್ರತಿದಿನವೂ ಮೊಸರು ಕಡೆದು,  ಬೆಣ್ಣೆ ತೆಗೆದು  ಮಜ್ಜಿಗೆಯನ್ನು ಗಾಳಿಯಾಡದ ಹಾಗೆ ಹಿಂದಿನವರು ಭರಣಿಗಳಲ್ಲಿ  ಶೇಖರಿಸಿಡುತ್ತಿದ್ದರು.  ಈಗಿನ ಕಾಲಕ್ಕೆ ತಕ್ಕ ಹಾಗೆ ನಾವು ಗಾಜಿನ ಜಾಡಿಗಳಲ್ಲಿ ತುಂಬಿಟ್ಟರೆ ಸೈ.  ಮಾರನೇ ದಿನ ಪುನಃ ಮೊಸರು ಕಡೆದು,  ನಿನ್ನೆಯ ಮಜ್ಜಿಗೆಯ ಮೇಲಿನ ನೀರು ಚೆಲ್ಲಿ,  ಇನ್ನೊಂದು ಜಾಡಿಗೆ ಮಜ್ಜಿಗೆಯನ್ನು ವರ್ಗಾಯಿಸಿ,  ಮೇಲಿನಿಂದ ಇಂದಿನ ಸಿಹಿ ಮಜ್ಜಿಗೆ ಎರೆದಿಡಬೇಕು.   ನಿನ್ನೆಯ ಮಜ್ಜಿಗೆಯ ಜಾಡಿಯ ತಳದಲ್ಲಿ ದಪ್ಪಗಟ್ಟಿದ ಮಜ್ಜಿಗೆಯೂ ಬೇಡ.   

ಮಜ್ಜಿಗೆಯನ್ನು ಹೀಗೆ ಎರಡು ವಾರಗಳ ತನಕ ಸಂಗ್ರಹಿಸಿಡಬಹುದು.   ನಿರುಪಯುಕ್ತವೆನಿಸಿದ ಮಜ್ಜಿಗೆಯನ್ನು ಕೈತೋಟದ ಸಸ್ಯಗಳಿಗೆ ಎರೆಯುವುದರಿಂದ ಆಮ್ಲೀಯತೆಯನ್ನು ಬಯಸುವ ಗಿಡಗಳೂ ಸೊಗಸಾಗಿರುತ್ತವೆ.

ಮನೆಮದ್ದು :
ವಿಪರೀತ ತಿಂದು ವಾಯುಪ್ರಕೋಪಗೊಂಡಾಗ,   ಇಂಗು ಹಾಗೂ ಉಪ್ಪು ಹಾಕಿ ಮಜ್ಜಿಗೆಯ ಸೇವನೆ.   ಚಟಿಕೆ ಅರಸಿನವನ್ನೂ ಹಾಕಬಹುದು.
ಮಜ್ಜಿಗೆಗೆ ಬೆಳ್ಳುಳ್ಳಿ ಜಜ್ಜಿ ಹಾಕಿ ಕುಡಿಯುವುದರಿಂದ ಜಂತುಹುಳಗಳ ಪೀಡೆ ಶಮನ.
ದಾಳಿಂಬೆ ಸಿಪ್ಪೆ ಅರೆದು ಮಜ್ಜಿಗೆ ಬೆರೆಸಿ ಕುಡಿಯುವುದರಿಂದ ಬೇಧಿಯಿಂದ ಮುಕ್ತಿ.
ಪ್ರತಿದಿನವೂ ಶುಂಠಿ ಬೆರೆಸಿದ ಮಜ್ಜಿಗೆಯ ಉಪಯೋಗದಿಂದ ಗಂಟುನೋವುಗಳಿಗೆ ಉಪಶಮನ ಪ್ರಾಪ್ತಿ.

ಹಾಲಿಗಿಂತ ಕಡಿಮೆ ಕೊಬ್ಬು ಹಾಗೂ ಹಾಲಿಗಿಂತ ಹೆಚ್ಚು ಲ್ಯಾಕ್ಟಿಕ್ ಆಮ್ಲ ಮಜ್ಜಿಗೆಯಲ್ಲಿದೆ,  ಜೀರ್ಣಿಸಲು ಸುಲಭ.   ಪೊಟ್ಯಾಷಿಯಂ,   ವಿಟಮಿನ್ ಬಿ ಕಾಂಪ್ಲೆಕ್ಸ್,  ರಿಬೊಫ್ಲೆವಿನ್,  ಕ್ಯಾಲ್ಸಿಯಂ ಹಾಗೂ ಫಾಸ್ಫರಸ್ ಗಳಿಂದ ಸಮೃದ್ಧವಾಗಿದೆ ಈ ಮಜ್ಜಿಗೆ.

Posted via DraftCraft app

Monday, 1 April 2013

ಮಂಗಳೂರು ಬನ್ಸ್







ಹೆಸರೇ ಹೇಳುವಂತೆ ಇದು ಕೂಡಾ ದಕ್ಷಿಣ ಕನ್ನಡಿಗರ ತಿಂಡಿ.   ಇದನ್ನು ಮಾಡುವ ವಿಧಾನ ಗೋಳೀಬಜೆಗಿಂತ ಸ್ವಲ್ಪ ಭಿನ್ನ.

1 ಬಾಳೇಹಣ್ಣು,  ಗಾಳೀ ಬಾಳೆಹಣ್ಣು ಉತ್ತಮ,   ಇಲ್ಲದಿದ್ದಲ್ಲಿ ಯಾವುದೂ ಆದೀತು.
1 ಕಪ್ ಮೈದಾ
2 - 3  ಚಮಚ ಸಕ್ಕರೆ
ರುಚಿಗೆ ಉಪ್ಪು
ಚಿಕ್ಕ ಚಮಚ ಎಳ್ಳು,  ಓಮ,  ಜೀರಿಗೆ
1 ಸೌಟು ಮೊಸರು
 ಕರಿಯಲು ಎಣ್ಣೆ

ಒಂದು ಅಗಲ  ಪಾತ್ರೆಯಲ್ಲಿ ಬಾಳೇಹಣ್ಣು ನುರಿಯಿರಿ.   ಮೈದಾ ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಮೊದಲು ಹಾಕಿ ಕಲಸಿಕೊಳ್ಳಿ.   ಮೈದಾವನ್ನು ಸೇರಿಸಿ ಚಪಾತೀ ಹಿಟ್ಟಿನ ಹದಕ್ಕೆ ಕಲಸಿ ಇಡಿ.  
ಸಂಜೆಯ ಟೀ ಜೊತೆ ಮಾಡಬೇಕಾದಲ್ಲಿ  ಎಂಟು ಗಂಟೆ ಮೊದಲು ಹಿಟ್ಟು ತಯಾರಿಸಿ ಇಡಬೇಕು.

ದೊಡ್ಡ ಲಿಂಬೇಗಾತ್ರದ ಉಂಡೆಗಳನ್ನು ಮಾಡಿಕೊಂಡು ಮೈದಾಹಿಟ್ಟಿನಲ್ಲಿ ಹೊರಳಿಸಿ ಪೂರೀ ಆಕಾರಕ್ಕೆ ತನ್ನಿ.   ಲಟ್ಟಣಿಗೆ ಏನೂ ಬೇಕಾಗಿಲ್ಲ,  ಕೈಯಲ್ಲೇ ತಟ್ಟಿಕೊಳ್ಳಬಹುದು.   ಹೆಚ್ಚು ತೆಳ್ಳಗಾಗುವ ಅಗತ್ಯವೂ ಇಲ್ಲ.

ಎಲ್ಲವನ್ನೂ ತಟ್ಟಿ ಇಟ್ಕೊಂಡಾಯ್ತೇ,   ಬಾಣಲೆಗೆ ಎಣ್ಣೆ ಎರೆದು ಒಲೆಯ ಮೇಲೆ ಇಡಿ.   ಬಿಸೀ ಎಣ್ಣೆಗೆ ಒಂದೊಂದೇ ಹಾಕಿ.  ಉಬ್ಬಿ ಬರುತ್ತಿದ್ದ ಹಾಗೇ ಸೌಟಿನಿಂದ ಬಿಸಿ ಎಣ್ಣೆ ಚಿಮುಕಿಸುತ್ತಿರಿ.   ಕೆಂಪಗಾಗಿ ಉಬ್ಬಿ ಬಂದ ಮೇಲೆ ಕವುಚಿ ಹಾಕಿ ಕೂಡಲೇ ತೆಗೆಯಿರಿ.  ಎಲ್ಲವನ್ನೂ ಹೀಗೆ ಒಂದೊಂದೇ ಬೇಯಿಸಿ.   ಬಿಸಿ ಬಿಸಿಯಾಗಿ ಟೊಮ್ಯಾಟೋ ಜಾಮ್ ಜೊತೆ ತಿನ್ನೀ ಆಯ್ತಾ.