ನಿನ್ನೆ ಮುಂಜಾನೆ ಹೊರಚಾವಡಿಯಲ್ಲಿ ಕುಳಿತಿದ್ದ ಹಾಗೆ, ಅಪರಿಚಿತರೊಬ್ಬರು ಮನೆಯೊಳಗೆ ನುಗ್ಗಿದರು. ಬಗಲಲ್ಲಿ ಒಂದು ಚೀಲ, ಚೀಲ ತುಂಬ ಪುಸ್ತಕಗಳು.
ನನಗೆ ಮಹದಾನಂದ, ಐ ಪ್ಯಾಡ್ ಪಕ್ಕಕ್ಕಿರಿಸಿ, ಅವರು ಚೀಲದೊಳಗಿನಿಂದ ಒಂದೊಂದೇ ಪುಸ್ತಕಗಳನ್ನು ಹೊರ ತೆಗೆಯುತ್ತಿದ್ದಂತೆ ಐ ಫೋನ್ ಕ್ಲಿಕ್ ಕ್ಲಿಕ್ಕೆಂದಿತು.
“ ನಿನಗೆ ಯಾವ ಪುಸ್ತಕ ಬೇಕೆಂದು ನೋಡಿಕೋ… “ ಎಂದ ನನ್ನವರು, ಬಂದ ಮಹನೀಯರೊಡನೆ ಹಿರಣ್ಯದ ನಾಗಬನದ ಅಭಿವೃದ್ಧಿಯ ವಿಚಾರವಾಗಿ ಪಟ್ಟಾಂಗಕ್ಕಿಳಿದರು.
“ ಯಾವ ಪುಸ್ತಕ ಇಟ್ಕೊಳ್ಳಲಿ… “ ನನ್ನ ಪರದಾಟವನ್ನು ಕಂಡು ಶ್ರೀಯುತ ಶಂಕರ ಕುಳಮರ್ವರು ನಾಲ್ಕು ಪುಸ್ತಕಗಳನ್ನು ಆಯ್ದು ಕೊಟ್ಟರು. ಅಂತೂ ಎರಡು ಪುಸ್ತಕಗಳು ನನ್ನ ಬಿಡುವಿನ ವೇಳೆಯ ಓದಿಗಾಗಿ ಕಪಾಟು ಸೇರಿದುವು.
ಈ ಹೊತ್ತು, ಪುಸ್ತಕಗಳ ಹೊತ್ತಗೆಯನ್ನು ಹೊತ್ತು ತಂದ ಮಹನೀಯರನ್ನು ಕಂಡಾಗ, ಬಾಲ್ಯದ ದಿನಗಳ ನೆನಪು ಸಹಜವಾಗಿ ನುಗ್ಗಿ ಬಂದಿತು. ಕಾಸರಗೋಡಿನ ವಿದ್ವಾಂಸರು ಮೌನವಾಗಿಯೇ ಸಾಹಿತ್ಯಕೃಷಿ ನಡೆಸಿದವರಾಗಿದ್ದಾರೆ. ಪುಸ್ತಕ ಪ್ರೀತಿಯನ್ನು ಬಾಲ್ಯದಿಂದಲೇ ಕಲಿಸಿಕೊಟ್ಟವರು ನನ್ನ ಅಪ್ಪ. ಮನೆಗೆ ಪುಸ್ತಕ ಮಾರಾಟಗಾರರು ಬಂದಾಗ ಕೊಂಡುಕೊಳ್ಳುವ ಔದಾರ್ಯತೆ ಅವರಲ್ಲಿತ್ತು. ಮದುವೆಯಾಗಿ ಹಿರಣ್ಯಕ್ಕೆ ಬಂದಾಗಲೂ ಇಲ್ಲಿಯೂ ಅದೇ ತೆರನಾದ ಪುಸ್ತಕ ಪ್ರೀತಿಯನ್ನು ಕಂಡು ಬೆರಗೂ ಆಯಿತು. ನನ್ನ ಮಾವನವರ ಬಳಿ ಸುಮಾರು ಐದು ಸಾವಿರಕ್ಕೂ ಮೀರಿ ಪುಸ್ತಕಗಳಿದ್ದುವು.
ಇದೇ ಹೊತ್ತಿನಲ್ಲಿ ನಾನು ಉತ್ಥಾನ ಮಾಸಪತ್ರಿಕೆಯಲ್ಲಿ ಬರೆಯುತ್ತಿರುವ ಅಡುಗೆ ಬರಹಗಳು “ ಸರಳ ಅಡುಗೆಗಳು “ ಎಂಬ ಶಿರೋನಾಮೆಯಲ್ಲಿ ಪ್ರಕಟಿತವಾಗುತ್ತಲಿದೆ.