ಹಲಸಿನ ಹಣ್ಣಿನ ಬೆರಟಿ ವಿಷಯ ತಿಳಿದಾಯ್ತು. ಈಗ ಸರಳವಾದ ಒಂದು ಜಾಮ್ ಹಲಸಿನ ಹಣ್ಣಿನಿಂದ ತಯಾರಿಸೋಣ. ಇದಕ್ಕೆ ಬೇಕಾಗಿರುವುದೇನೇನು ?
ಸಿಹಿಯಾದ ಹಲಸಿನ ಹಣ್ಣಿನ ಸೊಳೆಗಳು 15ರಿಂದ 20 ಇದ್ದರೆ ಸಾಕು. ಬೇಳೆ ಬಿಡಿಸಿ ಸೊಳೆಗಳನ್ನು ಮಿಕ್ಸಿಯಲ್ಲಿ ತಿರುಗಿಸಿ ತೆಗೆಯಿರಿ.
2 ಅಚ್ಚು ಬೆಲ್ಲ
3 -4 ಚಮಚ ತುಪ್ಪ
ಬಾಣಲೆ ಒಲೆಗೇರಿಸಿ ಹಣ್ಣುಗಳು ಬೇಯಲಿ.
ಆಗಾಗ ಸೌಟಾಡಿಸಿ.
ಬೆಂದ ಪರಿಮಳ ಬಂತೇ, ಬೆಲ್ಲ ಹಾಕಿ ಬಿಡಿ.
ಬೆಲ್ಲ ಕರಗಿತೇ, ತಳ ಹತ್ತದಂತೆ ಕೆದಕುತ್ತಿರಿ.
ಜಾಮ್ ಪಾಕ ಬಂತೇ, ತುಪ್ಪ ಇಟ್ಕೊಂಡಿದ್ದೀರಲ್ಲ, ಎರೆಯಿರಿ.
ತುಪ್ಪ ಹಣ್ಣಿನ ಪಾಕದೊಂದಿಗೆ ಸೇರಿತೇ, ಕೆಳಗಿಳಿಸಿ.
ಚೆನ್ನಾಗಿ ತಣಿಯಿತೇ, ಸ್ಟೀಲ್ ಡಬ್ಬದಲ್ಲಿ ತುಂಬಿಸಿ.
ದೋಸೆ, ಚಪಾತಿಗಳೊಂದಿಗೆ ಸವಿಯಿರಿ.
ಬೆರಟಿಯಂತೆ ದೀರ್ಘಕಾಲ ಉಳಿಯುವಂತದ್ದಲ್ಲ, ನಾಲ್ಕು ದಿನದೊಳಗೆ ತಿಂದು ಡಬ್ಬ ಖಾಲಿಯಾಗಿಸಿ.
ಇದನ್ನು ಪಾಯಸ ಬೇಕಿದ್ದರೆ ಮಾಡಿಕೊಳ್ಳಲಡ್ಡಿಯಿಲ್ಲ. ಪಾಯಸ ಮಾತ್ರ ಸಾಕು, ಜಾಮ್ ಬೇಡ ಅಂತಿದ್ರೆ ತುಪ್ಪ ಸೇರಿಸಬೇಕಾಗಿಲ್ಲ. ವಿಧಾನ ಹೇಗೆ?
ಇನ್ನಿತರ ಪಾಯಸಗಳಂತೆ ಮಾಡಿದರಾಯಿತು.
ಅರ್ಧ ಕಪ್ ಅಕ್ಕಿ ಹಿಟ್ಟು
ತೆಂಗಿನಕಾಯಿ ಹಾಲು
ಬೆಲ್ಲ ಅಥವಾ ಸಕ್ಕರೆ
ಏಲಕ್ಕಿ ಹುಡಿ
ಅಕ್ಕಿ ಹಿಟ್ಟನ್ನು ನೀರು ಕಾಯಿಹಾಲು ಎರೆದು ಕುದಿಸಿ, ಸೌಟಾಡಿಸುತ್ತ ಇದ್ದರೆ ಗಂಟು ಕಟ್ಟುವುದಿಲ್ಲ.
ಕುದಿಯಿತೇ, ಅಕ್ಕಿ ಹಿಟ್ಟು ಬೆಂದಿದೆ.
ಬೆಲ್ಲ ಹಾಕಿ, ಕರಗಿತೇ, ಕಾಯಿಹಾಲು ಇನ್ನೊಮ್ಮೆ ಎರೆಯಿರಿ.
ಹಲಸಿನ ಜಾಮ್ ಪಾಕದ ಮುದ್ದೆಯನ್ನು ಹಾಕಿ ಸೌಟಾಡಿಸಿ.
ದಪ್ಪ ಕಾಯಿಹಾಲು ಎರೆಯಿರಿ, ಇದು ಕೊನೆಯ ಹಂತ.
ಕುದಿ ಬಂದಾಗ ಏಲಕ್ಕಿ ಹುಡಿ ಹಾಕಿ ಕೆಳಗಿಳಿಸಿ.
ಬಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ, ಊಟದೊಂದಿಗೂ ಸವಿಯಿರಿ.
Posted via DraftCraft app
0 comments:
Post a Comment