ಕಾರು ಪಾರ್ಕಿಂಗ್ ಮಾಡ್ಬಿಟ್ಟು ನಾವು ಶಾಪಿಂಗ್ ಮಾಲ್ ಸಂದರ್ಶಿಸಲು ಸಿದ್ಧರಾದೆವು. ಎಲ್ಲಿ ಹೋದರೂ ಹತ್ತಲು ಮೆಟ್ಟಿಲು. ಮೆಟ್ಟಿಲ ಮೇಲೆ ಸುಮ್ನೆ ನಿಲ್ಲೂದು, ಸುಂಯ್ ಅಂತ ಮೇಲೇರುವ ಹಾಗೂ ಕೆಳಗಿಳಿಯುವ ಈ ಉಪ್ಪರಿಗೆ ಹತ್ತುವ ಇಳಿಯುವ ಕೆಲಸ ತೀರಾ ಪೇಚಾಟದಂತಾಯಿತು. ಆದರೂ ವಿಧಿಯಿಲ್ಲ, ಶೀಲಾ ಹಾಗೂ ಮಧು ನನಗೆ ಸಹಕಾರಿಗಳಾದರು.
ಮೇಲೆ ಬಂದಿದ್ದರಲ್ಲಿ ಕಣ್ಣಿಗೆ ಚೇತೋಹಾರಿ ದೃಶ್ಯ. ಈ ಕಾಂಕ್ರೀಟ್ ಲೋಕದೊಳಗೂ ಸರೋವರ, ಅದರೊಳಗೆ ಬೃಹತ್ ವೃಕ್ಷ, ಥೇಟ್ ನಮ್ಮೂರಿನ ಪೈವಳಿಕೆಯಲ್ಲಿನ ಪಳ್ಳದ ಹಾಗೆ. ಸುಮಾರು ಎರಡು ಎಕ್ರೆಗಿಂತಲೂ ಹೆಚ್ಚು ಸ್ಥಳವನ್ನಾಕ್ರಮಿಸಿರುವ ನಮ್ಮೂರಿನ ನೀರಿನ ಹಳ್ಳ ಮುಳಿಗದ್ದೆಯಿಂದ ಉಪ್ಪಳಕ್ಕೆ ಹೋಗುವ ರಸ್ತೆಯಲ್ಲಿ ಕಾಣ ಸಿಗುತ್ತದೆ. ಪಳ್ಳದಲ್ಲಿ ಒಂದು ದೊಡ್ಡ ಮರವೂ, ತುಸು ದೂರದಲ್ಲಿ ಒಂದು ಸೊಗಸಾದ ಬಾವಿಯೂ ಇದೆ. ಬಾಯಿಕಟ್ಟೆ ಪಳ್ಳ ಎಂದೇ ಈ ಸ್ಥಳಕ್ಕೆ ಹೆಸರು. ಈ ನೈಸರ್ಗಿಕ ಕೆರೆ, ಛೆ, ಕೆರೆ ಅಂದರೆ ತಪ್ಪಾದೀತು, ನೈಸರ್ಗಿಕ ಸರೋವರ, ಪೈವಳಿಕೆ ಗ್ರಾಮದ ನೀರಿನ ಸೆಲೆ. ನೀರಿನ ಆಗತ್ಯದ ಹೆಚ್ಚಿನೆಲ್ಲಾ ಕೆಲಸಗಳೂ ಇಲ್ಲೇ ನಡೆಯುತ್ತಿರುತ್ತವೆ. ಬಟ್ಟೆ ತೊಳೆಯುವುದೂ, ಒಣ ಹಾಕಿರುವುದೂ ಇಲ್ಲಿನ ಪಾರೆ ಕಲ್ಲುಗಳ ಮೇಲೇನೇ, ವಾಹನಗಳನ್ನು ನಿರ್ಮಲವಾಗಿ ತೊಳೆಯಲೂ ಇದೇ ಸೂಕ್ತ ಜಾಗ. ಘನ ವಾಹನಗಳಾದ ಬಸ್ಸು ಲಾರಿಗಳು ಮಿಂದು ಶುಚಿರ್ಭೂತವಾಗಿ ತೆರಳುವುದು ಇಲ್ಲಿಂದಲೇ.
ಈ ಸ್ಥಳವನ್ನು ನಮ್ಮ ಸರ್ಕಾರೀ ಯಂತ್ರ ಮನಸ್ಸು ಮಾಡಿದ್ದಿದ್ದರೆ ಉತ್ತಮ ಪ್ರವಾಸೀ ತಾಣವಾಗಿ ಕೇರಳದ ನಕ್ಷೆಯಲ್ಲಿ ಗುರುತಿಸಬಹುದಿತ್ತು. ಅದು ಆಗದ ಕೆಲಸವಾಗಿದ್ದರೆ ಬೇಡ, ಬಿಟ್ಟು ಬಿಡೋಣ. ಹಕ್ಕಿಗಳೂ ಹಾರಾಡುವ ಒಂದು ವಿಹಾರಯೋಗ್ಯ ಪ್ರದೇಶ. ಮಳೆನೀರಿನಾಶ್ರಯದ ಹಳ್ಳವಾಗಿರುವುದರಿಂದ ಮಳೆಗಾಲದಲ್ಲಿ ಮಾತ್ರ ಇಲ್ಲಿ ಜಲವೈಭವ. ಮಳೆಗಾಲ ಹೊರತುಪಡಿಸಿ, ನೀರಿಲ್ಲದೆ ಒಣಗಿಯೇ ಹೋಗುವ ಈ ಪರಿಸರವನ್ನು ಕಂಡಾಗ ನಿಸರ್ಗಪ್ರಿಯರ ಕರುಳು ಕತ್ತರಿಸಿದಂತಾಗದಿರದು. ಆ ಕಾರಣದಿಂದಲೇ ಬೆಂಗಳೂರಿನ ಈ ಕೃತಕ ಸರೋವರವನ್ನು ಕಂಡಾಗ ಮನಸ್ಸಿಗೆ ಹಾಯೆನಿಸಿದ್ದು.
ಪ್ರವಾಸಯೋಗ್ಯ ತಾಣಗಳು ನಮ್ಮೂರಿನಲ್ಲೇ ಬೇಕಾದಷ್ಟಿವೆ. ನಮ್ಮ ಬಾಯಾರು ಗ್ರಾಮದ ನೆರೆಯಲ್ಲಿಯೇ ಇರುವ ಪೊಸಡಿಗುಂಪೆಯೂ ಇಂತಹ ಒಂದು ನಿಸರ್ಗರಮ್ಯ ತಾಣ. ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇಲ್ಲಿ ಅಂತಹ ಅಭಿವೃದ್ಧಿಯೇನೂ ಮಾಡಿಲ್ಲ. ಕಿತ್ತು ಹೋಗಿರುವ ಡಾಮರು ರಸ್ತೆ, ಪ್ರವಾಸಿಗಳಿಗೆ ಬೇಕಾದ ಮೂಲಭೂತ ಸೌಕರ್ಯ ಏನೂ ಇಲ್ಲಿಲ್ಲ.
- ಮುಂದುವರಿಯಲಿದೆ.
Posted via DraftCraft app
0 comments:
Post a Comment