ಚುಮುಚುಮು ಬೆಳಗಾಗುತ್ತಿದ್ದಂತೆ ನಾವು ಚಿಕ್ಕಮಗಳೂರಿನಲ್ಲಿದ್ದೆವು. ಆರು ಗಂಟೆ ಆಗಿತ್ತೋ ಇಲ್ವೋ, ನಮ್ಮ ಪ್ರಾತರ್ವಿಧಿಗಳಿಗೂ ಒಂದು ಜಾಗ ಬೇಕಿತ್ತಲ್ಲ, ಸುಸಜ್ಜಿತ ಉಪಾಹಾರ ಗೃಹ ಎದುರಾಯಿತು. ದಾವಣಗೆರೆ ಬೆಣ್ಣೆದೋಸೆಯಲ್ಲದಿದ್ದರೂ ಚಿಕ್ಕಮಗಳೂರಿನ ಬೆಣ್ಣೆದೋಸೆ, ಸೆಟ್ ದೋಸೆ, ಉದ್ದಿನ ವಡೇ ಟೇಬಲ್ ಮೇಲೆ ಬಂದು ಕುಳಿತಾಗ ಬಾಯಿಚಪಲ ಉಕ್ಕಿ ಹರಿಯಿತು. ದೋಸೆ ಒಳಗಡೆ ಒಂದ ಮುದ್ದೆ ಬೆಣ್ಣೆಯಿದ್ದಿತು, ಉಳಿದಂತೆ ಕಡ್ಲೇಕಾಯಿ ಚಟ್ನಿ. ಚಳಿಯಿನ್ನೂ ಬಿಟ್ಟಿರದಿದ್ದರೂ ಬಿಸಿಬಿಸಿಯಾದ ಕಾಫಿ ಉದರ ಸೇರಿತು. ತಿಂಡಿತೀರ್ಥ ಪೂರೈಸಿಕೊಂಡು ನೇರವಾಗಿ ಶೀಲಾ ಸ್ನೇಹಿತೆ ಮನೆ ತಲಪಿದೆವು. ಅಲ್ಲಿಯೂ ಒಂದು ಗಂಟೆಗೂ ಹೆಚ್ಚು ಕಾಲ ಕಳೆದೆವು. ಗಿರೀಶ್ ಕಾರನ್ನು ತಿಕ್ಕೀ ತಿಕ್ಕೀ ತೊಳೆದ. ಇಲ್ಲಿ ನೆಟ್ ಕನೆಕ್ಷನ್ ಸರಿಯಾಗಿ ದೊರೆಯಿತು. ನಾನೂ ಗಿರೀಶನ ಐ ಪಾಡಿನಲ್ಲಿ ಬರೆದಿದ್ದ ಪ್ರವಾಸ ಕಥನದ ಮೊದಲ ಕಂತನ್ನು ನನ್ನ ಮೇಲ್ ಗೆ ಕಳುಹಿಸಿ ಸಮಾಧಾನ ಹೊಂದಿದೆ.
ಊರಿಗೆ ಬಂದ ಮೇಲೆ ಮನೆಗೆ ಬಂದ ಆಪ್ತೇಷ್ಟರೊಂದಿಗೆ ಪ್ರವಾಸದ ಅನುಭವಗಳನ್ನು ಹಂಚೆಕೊಂಡಾಗ ಈ ಬೆಣ್ಣೆದೋಸೆಯೂ ಸುದ್ದಿಯ ವಿಷಯವಾಗಿತ್ತು.
" ದೋಸೆ ಒಳ್ಗಡೆ ಬೆಣ್ಣೆ ಇತ್ತು, ಇಷ್ಟೇನಾ ಬೆಣ್ಣೆದೋಸೆ ಅಂದ್ರೆ..."
" ಅತ್ತಿಗೆ, ದಾವಣಗೆರೆ ಬೆಣ್ಣೆದೋಸೆ ಅಂದ್ರೆ ಹಾಗಲ್ಲ, ದೋಸೆಯ ಎರಡೂ ಬದಿಗೆ ಬೆಣ್ಣೆ ಹಾಕಿ ಬೇಯಿಸಿ ಕೊಡ್ತಾರೆ " ಅಂದ ಶ್ರೀಪಾದ.
" ಓ, ಹಾಗೆಯಾ, ಇನ್ನೊಂದ್ಸಾರಿ ನೋಡೋಣ "
ಪ್ರವಾಸದ ಕೊನೆ ಹಂತದಲ್ಲಿ ಹೊಟ್ಟೆ ಕೆಟ್ಟಿದ್ದು, ಆ ಊರಿನ ಯಾವ ಔಷಧಾಲಯಗಳಲ್ಲೂ ಕುಟಜಾರಿಷ್ಟ ಲಭಿಸದೇ ಉಪವಾಸ ವ್ರತಧಾರಿಯಾಗಿದ್ದು ಎಲ್ಲವನ್ನೂ ಕೇಳಿಸ್ಕೊಂಡ ಶ್ರೀಪಾದ.
" ಏನೇ ಆದ್ರೂ ನಮ್ಮ ಮನೆಯಲ್ಲಿ ಗಂಜಿ ಕುಡಿದ ಸುಖ ಆ ಹೋಟೆಲ್ ಊಟದಲ್ಲಿ ಹೇಗೆ ಬಂದೀತು?" ಅಂದ. " ಕುಚ್ಚುಲಕ್ಕಿ ಅನ್ನ ಆ ಕಡೆ ಇಲ್ವೇ ಇಲ್ಲ, ಏನು ತಿಂದ್ರೂ ಬೆಳ್ತಿಗೆ ಅನ್ನದ ಬಾತು "
ಬೆಣ್ಣೆದೋಸೆ ತಿಂದಾಯ್ತು, ಮನೆಗೆ ಹೋದ್ಮೇಲೆ ನನ್ನ ಪರೀಕ್ಷಾರ್ಥ ಪ್ರಯೋಗ ನಡೆಯಿತು. ಸಾಮಾನ್ಯವಾಗಿ ಮನೆಯಲ್ಲಿರುವವರು ನಾವಿಬ್ಬರೇ ಆಗಿದ್ದುದರಿಂದ ಒಂದೂವರೆ ಕಪ್ ಬೆಳ್ತಿಗೆ ಅಕ್ಕಿ ಸಾಕಾಯಿತು. ಇನ್ನುಳಿದಂತೆ ಐದಾರು ಬಾಳೆಹಣ್ಣು, ಒಂದು ಕ್ಯಾರೆಟ್ ಕೂಡಾ ದೋಸೆಹಿಟ್ಟಿಗೆ ಸೇರಿತು. ಉದ್ದು ತುಂಬಾ ಹಾಕಿದ್ರೆ ದಿನವಿಡೀ ತೇಗು ಬರುತ್ತಿರುತ್ತೆ, ಹಾಗಾಗಿ ನನ್ನ ಉದ್ದು ಕನಿಷ್ಠ ಪ್ರಮಾಣದಲ್ಲಿರುತ್ತದೆ. ಉದ್ದು, ಕಡ್ಲೇ ಬೇಳೆ, ಮೆಂತೆ ಇವಿಷ್ಟು ಧಾನ್ಯಗಳು ಒಟ್ಟಿಗೆ ಅರ್ಧ ಕಪ್. ಎಲ್ಲವನ್ನೂ ನೆನೆಸಿಟ್ಟು, ಚೆನ್ನಾಗಿ ತೊಳೆದಿಟ್ಟು, ನುಣ್ಣಗೆ ಅರೆದಿಟ್ಟು, ಹಿಟ್ಟನ್ನು ಕಲಸಿಟ್ಟು, ಉಪ್ಪು ಹಾಕಿಟ್ಟು, ಹುದುಗು ಬರಲು ಏಳೆಂಟು ಗಂಟೆಗಳಷ್ಟು ಮುಚ್ಚಿಟ್ಟು, ದೋಸೆ ಎರೆದಿಟ್ಟು, ಒಳಗೆ ಬೆಣ್ಣೆಮುದ್ದೆಯನಿಟ್ಟು ತಿನ್ನಲಾಗಿ ಇದುವೇ ಬೆಣ್ಣೆದೋಸೆ ಕೇಳಿರೇ ಗೆಳತಿಯರೇ....
" ಇಲ್ಲಿಯೂ ಒಂದು ಗುಡಿಯಿದೆ. ಅದನ್ನು ನೋಡ್ಬಿಟ್ಟು ಬೇಲೂರಿಗೆ " ಗಿರೀಶ್ ಹೀಗಂದಾಗ ಪ್ರವಾಸ ಹೊರಟಿದ್ದು ಸಾರ್ಥಕವಾಯಿತು ಅಂತನ್ನಿಸದಿದ್ದೀತೇ. ಪುನಃ ಉತ್ಸಾಹದ ರೆಕ್ಕೆಪುಕ್ಕಗಳು ಮೂಡಿದುವು. ನಾವು ಭೇಟಿ ನೀಡಿದ್ದು ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ. ಈ ದೇವಾಲಯ ಸಂಪೂರ್ಣ ಕನ್ನಡಮಯ. ಗೋಡೆಬರಹಗಳೆಲ್ಲ ಕನ್ನಡದಲ್ಲಿವೆ. ಕನ್ನಡದಲ್ಲೇ ಪೂಜಾವಿಧಿಗಳನ್ನು ನೆರವೇರಿಸುವ ಹಿರಿಮೆ ಹಿರೇಮಗಳೂರಿನ ಖ್ಯಾತನಾಮ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರದು. ಈ ಕಡೆ ನಾವು ಸಂದರ್ಶಿಸಿದ ಎಲ್ಲ ದೇಗುಲಗಳಲ್ಲೂ ಪ್ರಸಾದರೂಪವಾಗಿ ದೊರೆತಿದ್ದು ಕಲ್ಲುಸಕ್ಕರೆ. ಇಲ್ಲಿ ಕನ್ನಡದ ಕಂಪಿನ ಕಲ್ಲುಸಕ್ಕರೆ ತಿಂದು ಕೃತಾರ್ಥರಾದೆವು. ಬನ್ನಿ, ದೇವಾಲಯದ ಒಳ ಹೊರ ಸುತ್ತಾಡಿ ಬರೋಣ.
- ಮುಂದುವರಿಯಲಿದೆ.
Posted via DraftCraft app
0 comments:
Post a Comment