ಪ್ರೊಟೀನ್, ಫೈಬರ್ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್ ಸಮೃದ್ಧವಾಗಿರುವ ಬೇಳೆಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದು ಬಹಳ ಉತ್ತಮವೆಂದು ಆಹಾರ ತಜ್ಞರ ಹಾಗೂ ವೈದ್ಯರ ನಿರ್ಣಯ. ಮೊಳಕೆಕಾಳುಗಳನ್ನು ಹಾಗೇನೇ ಎಷ್ಟು ತಿನ್ನಬಹುದು ? ಒಂದ್ ಹತ್ತು ಕಾಳು ತಿಂದು " ಸಾಕು, ಇನ್ನು ನೀನೇ ತಿನ್ನು " ಅನ್ನುವವರೇ ಎಲ್ಲರೂ.
ಮೊಳಕೆಕಾಳುಗಳ ಉಪ್ಕರಿ ಮಾಡಿಟ್ಟು ನೋಡಿ, ತಟ್ಟೆ ಎಲ್ಲ ಖಾಲಿ, " ಇನ್ನೂ ಸ್ವಲ್ಪ ಇದ್ರೆ ಹಾಕು " ಎಂಬ ಕೇಳಿಕೆಯೂ ಬಂದೀತು. ಯಾವುದೇ ಧಾನ್ಯವನ್ನೂ ಮೊಳಕೆ ಬರಿಸಬಹುದು, ಅದರಲ್ಲೂ ಪಚ್ಚೆಹಸರನ್ನು ಮೊಳಕೆ ಬರಿಸಲು ಬಹಳ ಸುಲಭ.
2 ಕಪ್ ಪಚ್ಚೆಹಸರು, ಮುಂಜಾನೆಯೇ ನೀರಿನಲ್ಲಿ ನೆನೆ ಹಾಕಿ.
ಸಂಜೆ ನೀರು ಬಸಿಯಿರಿ, ಹತ್ತಿಯ ಬಟ್ಟೆಯಲ್ಲಿ ಗಂಟು ಕಟ್ಟಿ ನೇತಾಡಿಸಿ.
ಮಾರನೇ ದಿನ ಬೆಳಗ್ಗೆ ಮೊಳಕೆಕಾಳುಗಳು ಲಭ್ಯ.
ಊಟದ ಹೊತ್ತಿಗೆ ಕೋಸಂಬರಿ ಮಾಡಿಕೊಳ್ಳಿ. ರುಚಿಗೆ ಉಪ್ಪು, ತುಸು ನಿಂಬೇರಸ ಎರೆಯುವಲ್ಲಿಗೆ ಕೋಸಂಬರಿ ಸಿದ್ಧ.
ಉಪ್ಕರಿ:
ತುಸು ನೀರು ಹಾಗೂ ರುಚಿಗೆ ಉಪ್ಪು ಹಾಕಿ ಬೇಯಿಸಿ, ಹೆಚ್ಚು ಬೇಯಿಸುವ ಅಗತ್ಯವಿಲ್ಲ, ಒಂದು ಕುದಿ ಬಂದರೆ ಸಾಕು. ಹೆಚ್ಚು ಬೆಂದಿದ್ದು ಮಕ್ಕಳಿಗೆ ಕೊಡುವಂತಹ ಮಣ್ಣಿಯಂತಾದೀತು.
ಒಗ್ಗರಣೆ ಮಾಡಿಕೊಳ್ಳಿ, ನೀರುಳ್ಳಿ, ಹಸಿಮೆಣಸು, ಕರಿಬೇವು ಇರಲಿ, ಸಾಸಿವೆ ಚಟಪಟ ಅನ್ನುವಾಗ ಎಲ್ಲವನ್ನೂ ಹಾಕಿ ಬಾಡಿಸಿ, ಚಿಟಿಕೆ ಅರಸಿನ ಹುಡಿ ಇರಲಿ.
ಈಗ ಬೆಂದ ಪಚ್ಚೆಹಸರನ್ನು ಹಾಕಿ. ನೀರಿನಂಶ ಆರಲು ಸ್ವಲ್ಪ ಹೊತ್ತು ಚಿಕ್ಕ ಉರಿಯಲ್ಲಿರಲಿ. ಕೊನೆಗೆ ಒಂದು ಹಿಡಿ ಕಾಯಿತುರಿ ಹಾಕಿ ಕೈಯಾಡಿಸಿ. ತಟ್ಟೆಯಲ್ಲಿರಿಸಿ ಮಕ್ಕಳನ್ನು ಸಂಜೆಯ ತಿಂಡಿಗೆ ಕರೆಯಿರಿ.
<><><><><><>
ಸೆಕೆ ಸಮಯ, ಪಚ್ಚೆಹಸರು ತಂಪು ಅಂದ್ಬಿಟ್ಟು ಅಕ್ಕಿಯೊಂದಿಗೆ ಅರೆದು ಮುಂಜಾನೆಗೊಂದು ತಿಂಡಿ ಮಾಡಿಕೊಳ್ಳೋಣಾಂತ ನೀರಿನಲ್ಲಿ ನೆನೆ ಹಾಕಿಟ್ಟು ಆಯ್ತು. ಅಕ್ಕಿ ಹಾಗೂ ಪಚ್ಚೆಹಸರು ಒಂದೇ ತಪಲೆಯಲ್ಲಿ ನೆನೆ ನೆನೆದು ಹಿಗ್ಗಿದುವು. ಅದೇನಾಯಿತೋ, ರಾತ್ರಿ ನಾಲ್ಕು ಹನಿ ಮಳೆ ಬಿದ್ದಿತು, ವಿದ್ಯುತ್ ಹೋಯಿತು.
" ಬೆಳಗಾದಾಗ ಅರೆದರಾಯಿತು, " ಇಲ್ಲ, ರಾತ್ರಿ ಹೋದ ಕರೆಂಟು ಮಟಮಟ ಮದ್ಯಾಹ್ನ ಬಂತು.
ಅಂತೂ ಕರೆಂಟು ಬಂದಿತು, ಸಂಜೆಯಾದಾಗ ನೆನೆದ ಕಾಳು ಅಕ್ಕಿಯೊಂದಿಗೆ ಬೆರೆತು ಚೆನ್ನಾಗಿ ಮೊಳಕೆ ಬಂದಿತ್ತು. ಛೇ, ಛೇ... ಇದನ್ನೇನು ಮಾಡಲೀ ಎಂದು ಚಿಂತಿಸುತ್ತಾ ಪುನಃ ನೀರೆರೆದು ತೊಳೆದು ಅರೆಯುವ ಯಂತ್ರದೊಳಗೆ ತಳ್ಳಿಯಾಯ್ತು.
ಈ ಹಿಟ್ಟು ನಾಳೆ ಹುಳಿ ಬಂದೀತು, ತೆಳ್ಳವು ಎರೆಯಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾ ಒಂದು ಕಪ್ ರಾಗಿ ಹುಡಿಯನ್ನೂ ಸೇರಿಸಿ ಹಿಟ್ಟು ತೆಗೆದು, ಉಪ್ಪು ಕೂಡಿಸಿ ಮುಚ್ಚಿಟ್ಟಾಯ್ತು. ರಾಗಿಯನ್ನೂ ಸೇರಿಸಿದ್ದರಲ್ಲಿ ಎಲ್ಲ ಧಾನ್ಯಗಳೂ ಸೇರಿ ಒಟ್ಟಿಗೆ 3 ಕಪ್ ಆಯ್ತು, ನೋಡಿ, ದೋಸೆ ಹೇಗಾಯ್ತು...
ಮೂಂಗ್ ದಾಲ್ ಯಾ ಮೂಂಙ್ ದಾಲ್ ಎಂಬ ಈ ಧಾನ್ಯ ಭಾರತ ಮೂಲದ್ದು ಎಂಬುದು ನಮಗೆ ತಿಳಿದಿರಲಿ. ಶತಶತಮಾನಗಳಿಂದ ಈ ಧಾನ್ಯವನ್ನು ನಮ್ಮ ಕೃಷಿಕರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇಂಗ್ಲೀಷಿನ ಮೂಂಗ್ ಎಂಬ ಶಬ್ದವು ದಕ್ಷಿಣ ಭಾರತದ ಪ್ರಾಚೀನ ಭಾಷೆಯಾದ ತುಳುವಿನಿಂದ ಬಂದುದಾಗಿರಬೇಕು. ದವಸಧಾನ್ಯಗಳ ಮೊಳಕೆಯನ್ನು ಮುಂಙೆ ಎಂದೇ ಹೇಳುವ ರೂಢಿ. ದಕ್ಷಿಣ ಕನ್ನಡಿಗರು, ಕೇರಳೀಯರು ಪಚ್ಚೆಹಸರನ್ನು ಜಾಸ್ತಿ ಉಪಯೋಗಿಸುತ್ತಾರೆ. ಕೇರಳದಲ್ಲಿ ಶಾಲಾಮಕ್ಕಳಿಗೆ ಗಂಜಿಯೂಟದೊಂದಿಗೆ ಪಚ್ಚೆಹಸರನ್ನೂ ಬೇಯಿಸಿ ಕೊಡುತ್ತಾರೆ. ನನ್ನ ಮಕ್ಕಳೂ ಶಾಲೆಗೆ ಹೋಗುತ್ತಿದ್ದಾಗ ಶಾಲೆಯ ಗಂಜಿಯೂಟವನ್ನು ತಪ್ಪದೇ ಉಂಡು ಮನೆಗೆ ಬರುತ್ತಿದ್ದರು. ರಜಾದಿನಗಳಲ್ಲೂ " ಶಾಲೆ ಗಂಜಿ ಮಾಡಮ್ಮಾ" ಎಂಬ ಡಿಮ್ಯಾಂಡೂ ಇರ್ತಾ ಇತ್ತು. ರೇಷನ್ ಶಾಪ್ ನಲ್ಲಿ ಮಾತ್ರ ಸಿಗುತ್ತಿದ್ದ ಬೆಳ್ಳಗಿನ ಕುಚ್ಚುಲಕ್ಕಿಯನ್ನು, ಎರಡು ಬೆಳೆ ಗದ್ದೆ ಬೇಸಾಯ ಇದ್ದರೂ ತರುವಂತಾಗಿತ್ತು.
ದೋಸೆ ಚೆನ್ನಾಗಿ ಬಂದಿತ್ತಲ್ಲ, ಇನ್ನೊಮ್ಮೆ ಮಾಡೋಣ ಅಂದ್ಬಿಟ್ಟು ಅಕ್ಕಿ ಹಾಗೂ ಪಚ್ಚೆಹಸರನ್ನು ಬೆಳಗ್ಗೇನೇ ನೆನೆ ಹಾಕಿಟ್ಟು ಸಂಜೆ ಅರೆಯಬೇಕಾದರೆ ಇನ್ನೊಂದು ಐಡಿಯಾ ತಲೆಗೇರಿತು.
" ಈ ಬಾರಿ ರಾಗಿ ಸೇರಿಸಲಿಕ್ಕಿಲ್ಲ "
" ಬೇರೇನು ಹಾಕ್ತೀರಾ ..."
" ಸ್ವಲ್ಪ ಉದ್ದು, ಮೆಂತೆ ಸೇರ್ಸೋಣ "
ಕಾಲು ಕಪ್ ಉದ್ದು, ಒಂದು ಚಮಚ ಮೆಂತೆ ನೀರೆರೆದು ಇಟ್ಟಾಯ್ತೇ, ಅರ್ಧ ಗಂಟೆ ಬಿಟ್ಟು ಅರೆಯುವ ತಯಾರಿ ನಡೆಯಿತು.
ಬೆಳಗಿನಿಂದ ನೀರಿನಲ್ಲಿದ್ದ 2 ಕಪ್ ಬೆಳ್ತಿಗೆ ಅಕ್ಕಿ + 1 ಕಪ್ ಪಚ್ಚೆ ಹಸರನ್ನು ತೊಳೆದಿಟ್ಟಾಯ್ತು. ಉದ್ದು ಮೆಂತೆಯೂ ನೀರಿನಿಂದ ಎದ್ದು ಮಿಕ್ಸೀಯೊಳಗೆ ಬಿದ್ದು... ಅರೆದು ಆಯಿತು.
ಎಲ್ಲ ಹಿಟ್ಟುಗಳನ್ನೂ ಒಟ್ಟುಗೂಡಿಸಿ, ರುಚಿಗೆ ಉಪ್ಪು ಸೇರಿಸಿ, ತಪಲೆಯನ್ನು ಮುಚ್ಚಿಟ್ಟು ಮಾರನೇ ದಿನ ಎರೆದ ದೋಸೆ, ವಾಹ್..... ಉದ್ದಿನ ದೋಸೆಯಾ ನಿನ್ನ ಹೆಸರು ?
Posted via DraftCraft app