Friday, 6 June 2014
ಮಾಂಙನ್ನಾರೀ, ಬೆಡಗಿನ ವೈಯ್ಯಾರಿ
ವರ್ಷಗಳ ಹಿಂದೆ ತಂಗಿಯ ನೂತನ ಗೃಹಪ್ರವೇಶ ಸಮಾರಂಭಕ್ಕೆ ಹೋಗಬೇಕಾಗಿ ಬಂತು, ಹೋಗದಿದ್ದರಾಗುತ್ಯೇ, ತಂಗಿಯಲ್ಲವೇ, ಅವಳೇ ಊರಿನಲ್ಲಿದ್ದ ಕುಟುಂಬ ವರ್ಗವನ್ನು ಕರೆಸಿ ಕೊಂಡಳು ಅನ್ನಿ. ಸುಮಾರು 50 - 60 ಮಂದಿ, ಪುರೋಹಿತರಿಂದ ಹಿಡಿದು ಪರಿಕರ್ಮಿ ಸಹಿತವಾಗಿ ಒಂದು ಬಸ್ಸು ಹಿಡಿಸುವಷ್ಟು ಜನ ಬೆಂಗಳೂರಿಗೆ ಉಲ್ಲಾಸಕರ ಪ್ರಯಾಣ ಬೆಳೆಸಿದೆವು.
ಊರಿನ ಔತಣಕೂಟಗಳಲ್ಲಿ ಸಮಾರಂಭದ ಎಲ್ಲ ಕೆಲಸಕಾರ್ಯಗಳಲ್ಲಿ ಬಂದ ನೆಂಟರಿಷ್ಟರು ತೊಡಗಿಸಿಕೊಳ್ಳುತ್ತಾರೆ ಹಾಗೂ ಸಭಾ ವ್ಯವಸ್ಥೆಯನ್ನೂ ನಿರ್ವಹಿಸುತ್ತಾರೆ, ಇಂತಹ ತಜ್ಞರಿಗೆ ' ಸುಧರಿಕೆಯವರು ' ಎಂದು ರೂಢನಾಮವೂ ಇದೆ. ಈಗ ನಾವು ಹೋಗಿರೋದು ಬೆಂಗಳೂರಿಗೆ, ಇದು ಬೆಂಗಳೂರಿನ ಔತಣ, ಒಂದು ಬದಲಾವಣೆ ಏನಪ್ಪಾ ಅಂದ್ರೆ ಸುಧರಿಕೆಯ ಪಂಚಾಯ್ತಿ ಬಿಡಿ, ನಾವು ನೆಂಟರಿಷ್ಟರು ನಾಲ್ಕು ಹೊತ್ತೂ ತಿಂದೂ ಕುಡಿದೂ, ಮಲಗಿದ್ದೂ ಎದ್ದೂ ಮಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ. ಈಗೀಗ ನಗರಗಳ ಸಂಪ್ರದಾಯ ಹಳ್ಳಿಗಳಿಗೂ ಬಂದ್ಬಿಟ್ಟಿದೆ, ಏನು ಮಾಡೋಣಾ, ಸುಧರಿಕೆ ಮಾಡ ಬೇಕಾಗಿರುವ ನೆಂಟರಿಷ್ಟರು ಕಾಣ್ತಾನೇ ಇಲ್ಲ, ಹೊಸ ತಲೆಮಾರಿನ ಯುವಕರಿಗೆ ಇದೆಲ್ಲ ಗೊತ್ತೇ ಇಲ್ಲ, ಇದೆಲ್ಲ ಇದ್ದಿದ್ದೇ, ಹೋಗಲಿ ಬಿಡಿ, ಕಾಲಾಯ ತಸ್ಮೈ ನಮಃ.
ನಾಲ್ಕು ಹೊತ್ತೂ ತಿನ್ನುವ ಸುಧರಿಕೆ ಮಾಡ್ತಾ ಇದ್ದಾಗ ಊಟದೊಂದಿಗೆ ಉಪ್ಪಿನಕಾಯಿ ಬರ್ತಾ ಇತ್ತು, ಬರದೇ ಇದ್ದರೆ ಆಗುತ್ಯೇ, ಎಲ್ಲಿ ಔತಣಕ್ಕೆ ಹೋದರೂ ಉಪ್ಪಿನಕಾಯಿಗೆ ಪ್ರಾಶಸ್ತ್ಯ ಕೊಡೋವ್ರು ನಾವು. ಉಪ್ಪಿನಕಾಯಿಗೆ ಮಾವಿನ ಪರಿಮಳ, ಆದ್ರೆ ಮಾವಿನ ಹೋಳು ಅಥವಾ ಮಾವಿನ ಮಿಡಿ ಸಿಗ್ತಾ ಇರಲಿಲ್ಲ. ನಂಗಂತೂ ಆಲೋಚಿಸಿ ಸಾಕಾಯ್ತು. ಪಕ್ಕದಲ್ಲೇ ಕೂತಿದ್ದ ಗೌರತ್ತೆ ಬಳಿ ಕೇಳಬೇಕಾಯ್ತು.
" ಇದೆಂಥ ಉಪ್ಪಿನ್ಕಾಯೀ, ಒಂದೂ ಮಾವಿನ ಹೋಳು ಸಿಕ್ತಾ ಇಲ್ಲ, ಈಗ ಮಾವಿನ ಸೀಸನ್ ಕೂಡಾ ಅಲ್ಲ "
" ಅದೂ ಮಾಂಙನ್ನಾರೀದು, ಅಷ್ಟೂ ಗೊತ್ತಾಗಿಲ್ವಾ ". ಅಂದ್ರು ಗೌರತ್ತೆ.
" ಓ, ಹೌದಲ್ಲ..." ನೆನಪಾಯಿತು. ನನ್ನಮ್ಮ ಮಾಡ್ತಿದ್ದ ಮಾವಿನ ಶುಂಠಿಯ ನಳಪಾಕಗಳು ನೆನಪಾದುವು
ಬಾಲ್ಯದ ನೆನಪೂ ಆಯಿತು. ಅಮ್ಮನ ತರಕಾರಿ ಬುಟ್ಟಿಯಲ್ಲಿ ಮಾಂಙನ್ನಾರಿಗೆ ಯಾವಾಗಲೂ ಸ್ಥಾನ ಇತ್ತು. ಅಷ್ಟೇ ಏಕೆ, ಊರಿನ ತೋಟದ ಮನೆಗೆ ಶಾಲೆಯ ರಜಾದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮಾಂಙನ್ನಾರಿಯ ಒಂದು ಗೆಡ್ಡೆಯನ್ನು ತೋಟದ ಕೆರೆಯ ಪಕ್ಕ ಮಣ್ಣಿನಲ್ಲಿ ಹೂತಿಟ್ಟು, ನಂತರ ಮುಂದಿನ ರಜಾಸಮಯದಲ್ಲಿ ಬಂದಾಗ ಗಿಡ ಸೊಗಸಾಗಿ ಅರಶಿನದ ಗಿಡದ ಹಾಗೇ ಬೆಳೆದು ನಂತಿರುತ್ತಿತ್ತು. ನಾನೇ ಗುದ್ದಲಿಯಲ್ಲಿ ನೆಲ ಬಗೆದು ಮಾಂಙನ್ನಾರಿ ಗೆಡ್ಡೆಗಳನ್ನು ಬುಟ್ಟಿ ತುಂಬ ಸಂಗ್ರಹಿಸಿದ್ದೂ ನೆನಪಾಯಿತು. ಆಗ ಗೆಡ್ಡೆ ಗೆಣಸುಗಳಿಗೆ ಇಂದಿನಂತೆ ಕಾಡು ಪ್ರಾಣಿಗಳ ಕಾಟ ಇರಲಿಲ್ಲ. ತೋಟದೊಳಗೆ ವಿಧವಿಧವಾದ ಗೆಡ್ಡೆ ತರಕಾರಿಗಳು ಯಥೇಚ್ಛವಾಗಿ ಲಭ್ಯ. ಮುಂಡಿ ಕೆಸು, ಸುವರ್ಣ ಗೆಡ್ಡೆ, ಕೂವೆ ಇವೆಲ್ಲ ಅಡಿಕೆ ತೋಟದೊಳಗೆ ಮಾಮೂಲು. ಈಗ ಮನೆಯಂಗಳದಲ್ಲಿ ನೆಟ್ಟ ಗೆಣಸು ಕೂಡಾ ಸಿಗುವುದು ಕಷ್ಟ..
ಬೆಂಗಳೂರಿನಿಂದ ವಾಪಸ್ಸಾಗುತ್ತಲೇ ನಮ್ಮ ಚೆನ್ನಪ್ಪನ ಬಳಿ ಬೆಂಗಳೂರು ಸುದ್ದಿ ಹೇಳುತ್ತಾ " ಮಾಂಙನ್ನಾರಿ ಎಲ್ಲಿಂದಾದ್ರೂ ತರಿಸ್ಬೇಕಲ್ಲ " ಅಂದೆ.
" ಅದಕ್ಕೇನಂತೆ, ತರುವಾ...." ಅವನ ಮನೆ ಹಿತ್ತಿಲಿಂದ ತಂದೂ ಕೊಟ್ಟ. ಬೀಂಬುಳಿ ಉಪ್ಪಿನಕಾಯಿಗೆ ಮಾವಿನ ಶುಂಠಿಯನ್ನೂ ಕತ್ತರಿಸಿ ಹಾಕಿ, ಎಲ್ಲ ಗೆಡ್ಡೆ ತರಕಾರಿಗಳು ಹಂದಿ ಕಾಟದಿಂದ ತೋಟದಿಂದ ಕಣ್ಮರೆಯಾಗಿರುವಾಗ ಇದನ್ನು ಮನೆಯಂಗಳದ ಹೂಗಿಡಗಳೆಡೆಯಲ್ಲಿ ನೆಟ್ಟು ಜೋಪಾನ ಮಾಡಬೇಕಾಯಿತು. ಬೀಂಬುಳಿಯೊಂದಿಗೆ ಕತ್ತರಿಸಿ ಹಾಕಿದ ಮಾವಿನ ಶುಂಠಿ ಉಪ್ಪಿನಕಾಯಿಗೆ ಬೆಂಗಳೂರಿನಲ್ಲಿ ಸವಿದ ಉಪ್ಪಿನ್ಕಾಯಿ ಸ್ವಾದ ಬರಲಿಲ್ಲ. ಇದರೊಳಗಿನ ಸುವಾಸನೆ ಎಲ್ಲಿಗೆ ಹೋಯಿತೋ ತಿಳಿಯಲಿಲ್ಲ. " ನೆಟ್ಟ ಗೆಡ್ಡೆ ಫಲ ಕೊಡಲಿ, ಆಗ ನೋಡಿಕೊಳ್ಳೋಣ " ಎಂದು ಸುಮ್ಮನಾಗಬೇಕಾಯಿತು.
ಕಣ್ಣಿನ ನೋಟಕ್ಕೆ ಅರಸಿನದ ಗಿಡದಂತೆ, ಬೇರಿನ ಗೆಡ್ಡೆ ಶುಂಠಿಯಂತೆ, ಕತ್ತರಿಸಿದಾಗ ತಾಜಾ ಮಾವಿನಕಾಯಿಯ ಸುಗಂಧ ಬಂದಿತೇ, ಇದೇ ನಮ್ಮ ದಕ್ಷಿಣ ಕನ್ನಡಿಗರ ಮಾಂಙನ್ನಾರಿ. ಅಚ್ಚಗನ್ನಡದಲ್ಲಿ ಮಾವಿನ ಶುಂಠಿ, ನೆಲಮಾವು, ಅಂಬೆಅರಶಿಣ, ಅಂಬೆಕೊಂಬು, ತುಳುವರ ಕುಕ್ಕುಶುಂಠಿ, ತಮಿಳು ಹಾಗೂ ಮಲಯಾಳಂನಲ್ಲಿ ಮಾಂಙಯಿಂಜಿ. ಆಂಗ್ಲ ಭಾಷಿಕರು ಬೇರೇನೂ ತೋಚದೆ mango ginger ಅಂದಿದ್ದಾರೆ. ಸಸ್ಯವಿಜ್ಞಾನಿಗಳ ಪ್ರಕಾರ ಇದು curcuma amada. ಸಸ್ಯವಿಜ್ಞಾನವು ಮಾವಿನಶುಂಠಿಯನ್ನು Zingiberaceae ಕುಟುಂಬವಾಸಿಯೆಂದು ಪರಿಗಣಿಸಿದರೂ ಇದು ಅರಸಿನದ ಸಮೀಪವರ್ತಿ ಸಸ್ಯವೆಂದೂ ಹೇಳುತ್ತದೆ. ಬೃಹತ್ ವೃಕ್ಷವಾದ ಮಾವು ಹಾಗೂ ನೆಲದೊಳಗೆ ಹುದುಗಿರುವ ನೆಲಮಾವು ಬೇರೆ ಬೇರೆ ಕುಟುಂಬದಲ್ಲಿವೆ.
ಎಪ್ರಿಲ್, ಮೇ ತಿಂಗಳು ಬಂದಾಗ ಒಂದೆರಡು ಮಳೆ ಬರುವುದು ಸಾಮಾನ್ಯ. ಆಗಲೇ ಇದರ ಗೆಡ್ಡೆಯನ್ನು ನಾಟಿ ಮಾಡಲು ಸಕಾಲ. ತರಗೆಲೆ, ಸುಡುಮಣ್ಣು ಗೊಬ್ಬರ ಸಾಕು. ಹೆಚ್ಚಿನ ಆರೈಕೆಯೇನೂ ಇದಕ್ಕೆ ಬೇಡ, ರೋಗಬಾಧೆಯೇನೂ ಇಲ್ಲ, ಆರು ತಿಂಗಳಲ್ಲಿ ಇಳುವರಿ ಪಡೆಯಬಹುದಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯೂ ಇದೆ.
ಅಂಬಟೆಯ ಸಾರು ಒಲೆಯ ಮೇಲೆ ಕೂತಿತ್ತು. ಇದಕ್ಕೆ ಮಾವಿನ ಶುಂಠಿ ಕತ್ತರಿಸಿ ಹಾಕಿದ್ರೆ ಮಾವಿನ ಸಾರು ಆಗಬಹುದು ಅಂದುಕೊಳ್ಳುತ್ತ ಮಾವಿನ ಶುಂಠಿಯ ಪ್ರಯೋಗ ಮೊದಲು ಅಂಬಟೆಯ ಮೇಲಾಯಿತು. ಮಾವಿನ ಶುಂಠಿಯ ಚೂರುಗಳು ಅನ್ನದೊಂದಿಗೆ ಅಗಿಯುತ್ತಿದ್ದಂತೆ ತಾಜಾ ಮಾವಿನಕಾಯಿ ತಿಂದಂತಹ ಅನುಭವ ದೊರೆಯಿತು. ಏನೇ ನಳಪಾಕ ಮಾಡಬೇಕಿದ್ದರೂ ಬೇಯಿಸಿದ ಗೆಡ್ಡೆಯನ್ನೇ ಉಪಯೋಗಿಸಬೇಕೆಂಬ ಸತ್ಯದರ್ಶನವಾಯಿತು. ಇನ್ನೇಕೆ ತಡ, ಮಾವಿನ ಶುಂಠಿಯ ರಸರುಚಿಗಳನ್ನು ಮಾಡೋಣ.
ಊಟದೊಂದಿಗೆ ಹಸಿ ತರಕಾರಿ ಇರಬೇಕು. ಸೌತೆಯೊಂದಿಗೆ ಮಾಂಙನ್ನಾರಿ ತುರಿದು ಹಾಕಿ. ಮಾಂಙನ್ನಾರಿಯನ್ನು ಬೇಯಿಸಿ ತುರಿದುಕೊಳ್ಳಿ. ಘಮ್ ಘಮ್ ಪರಿಮಳ...
ಚಟ್ನಿ ಹೀಗೆ ಮಾಡೋಣ:
ಒಂದು ಕಪ್ ಕಾಯಿತುರಿ
ಒಂದು ತುಂಡು ಬೇಯಿಸಿದ ಮಾವಿನಶುಂಠಿ
ಎರಡು ಬೀಂಬುಳಿ
ರುಚಿಗೆ ಉಪ್ಪು
ಎಲ್ಲವನ್ನೂ ಅರೆಯಿರಿ. ಬೀಂಬುಳಿ ರಸಭರಿತ ಹುಳಿಯಾಗಿರುವುದರಿಂದ ಅರೆಯುವಾಗ ಬೇರೆ ನೀರು ಹಾಕುವ ಅಗತ್ಯವೇ ಇಲ್ಲ. ಖಾರ ಬೇಕಿದ್ದವರು ಹಸಿಮೆಣಸು ಸೇರಿಸ್ಕೊಳ್ಳಿ.
ಇದೇ ಮಾದರಿಯಲ್ಲಿ ಸಿಹಿಮಜ್ಜಿಗೆ ಎರೆದು ನುಣ್ಣಗೆ ಅರೆದುಕೊಂಡರೆ ತಂಬುಳಿ ಆಯ್ತು, ಇಲ್ಲಿ ಬೀಂಬುಳಿ ಹಾಕೋದು ಬೇಡ.
ಶೀತ, ಕಫ ಪ್ರಕೃತಿಯ ಮಂದಿ ಮಜ್ಜಿಗೆ ಕುಡಿಯಲು ಇಷ್ಟ ಪಡುವುದಿಲ್ಲ. ಮಜ್ಜಿಗೆಹುಳಿಯಿಂದಲೂ ಮಾರು ದೂರವಿರುತ್ತಾರೆ. ಅಂಥವರಿಗೂ ಮಾವಿನಶುಂಠಿ ಹಾಕಿದ ಮಜ್ಜಿಗೆ ಏನೂ ತೊಂದರೆ ಕೊಡದು. ಮಜ್ಜಿಗೆಹುಳಿಗೆ ತೆಂಗಿನಕಾಯಿ ಅರೆಯುವಾಗ ಒಂದು ತುಂಡು ಮಾವಿನಶುಂಠಿಯೊಂದಿಗೆ ಅರೆಯಿರಿ.
ನಮ್ಮ ಸನಾತನ ವೈದ್ಯಕೀಯ ಪದ್ಧತಿಯಂತೆ ಮಾವಿನ ಶುಂಠಿಯ ಗೆಡ್ಡೆಗಳು ಅತಿ ಶ್ರೇಷ್ಠವಾದ ಔಷಧೀಯ ಗುಣಗಳನ್ನು ಹೊಂದಿವೆ. ಹೆಚ್ಚಾಗಿ ಜ್ವರದ ತಾಪದಿಂದಲೇ ಬಾಯಿರುಚಿ ಕೆಡುವುದು ಸಾಮಾನ್ಯ, ಜಡ್ಡುಗಟ್ಟಿದ ನಾಲಿಗೆಗೆ ಬಾಯಿರುಚಿ ಹೆಚ್ಚಿಸುವ ಶಕ್ತಿ ನೀಡುವುದು ಈ ಮಾಂಙನ್ನಾರಿ. ಜ್ವರದ ತಾಪವನ್ನು ಕಡಿತಗೊಳಿಸುವ ಸಾಮರ್ಥ್ಯ ಮಾವಿನಶುಂಠಿಯಲ್ಲಿದೆ. ಜೀರ್ಣಾಂಗಗಳ ಕಾರ್ಯಕ್ಷಮತೆ ವೃದ್ಧಿಸಿ, ಕರುಳು ಹಗುರಾಗುವುದು. ಉಲ್ಲಾಸಕರ ಸುವಾಸಿತ ಆಹಾರವೂ ಆಗಿರುವುದರಿಂದ ಕಾಮವರ್ಧಕವೂ ಹೌದು. ಪಿತ್ತಸಂಕಟದಿಂದ ತಲೆಸುತ್ತು ಬರುವುದಿದೆ, ಇದನ್ನು ಮನೆಮದ್ದಾಗಿ ನಿಂಬೆರಸದೊಂದಿಗೆ ಸೇವಿಸುವುದು ಅತ್ಯುತ್ತಮ. ಗಂಟಲಿನ ಕಿರಕಿರಿ, ದಮ್ಮು, ತೀವ್ರಸ್ವರೂಪದ ಕೆಮ್ಮುಗಳಿಗೆ ಇದರ ಸೇವನೆಯಿಂದ ಸುಖ. ಎಷ್ಟಾದರೂ ಅರಸಿನದ ಜಾತಿಗೆ ಸೇರಿದ್ದಲ್ಲವೇ, ಹಸಿ ಅರಸಿನದಂತೆ ಅರೆದು ಮೈ ಚರ್ಮಕ್ಕೆ ಲೇಪಿಸಿದರಾಯಿತು, ಚರ್ಮದ ತುರಿಕೆ, ಚರ್ಮರೋಗ, ಚರ್ಮದ ಮೇಲಿನ ಗಾಯಗಳಿಗೆ ಪರಿಣಾಮಕಾರೀ ಉಪಶಮನ.
ಸಂಜೆಯ ಲಘು ಉಪಹಾರವಾಗಿ ಚಿತ್ರಾನ್ನ ಮಾಡೋಣ:
ಒಂದು ಬಟ್ಟಲು ಉದುರುದುರಾದ ಅನ್ನ
ಒಂದು ಚಮಚ ಬೇಯಿಸಿ ತುರಿದ ಮಾವಿನ ಶುಂಠಿ
ತೆಂಗಿನ ತುರಿ, ಸಾಸಿವೆ, ಸ್ವಲ್ಪ
ಚಿಟಿಕೆ ಅರಸಿನ
ರುಚಿಗೆ ಉಪ್ಪು, ನಿ೦ಬೆ ರಸ
ತೆಂಗಿನ ತುರಿಯೊಂದಿಗೆ ಎಲ್ಲ ಸಾಮಗ್ರಿ ಹಾಕಿಕೊಂಡು ಅರೆದಿಡಿ.
ಬಾಣಲೆಗೆ ಎಣ್ಣೆ ಎರೆದು ಸಾಸಿವೆ, ಉದ್ದಿನಬೇಳೆ, ಕರಿಬೇವು ಒಗ್ಗರಣೆ ತಯಾರಾಯ್ತೇ, ಅರೆದ ಮಸಾಲೆ ಹಾಕಿಕೊಳ್ಳಿ. ಅನ್ನ ಉದುರಿಸಿ. ಎರಡು ತೊಟ್ಟು ಲಿಂಬೆ ರಸ ಬೆರೆಸಿ, ಚೆನ್ನಾಗಿ ಮಗುಚಿ ಮುಚ್ಚಿಡಿ. ಸ್ಟವ್ ಆರಿಸಿ.
ಹಲ್ವಾ:
ಪಪ್ಪಾಯ ಹಣ್ಣಾಗಿತ್ತು, ಕತ್ತರಿಸಿದ ಹೋಳುಗಳು ನಾವಿಬ್ಬರು ತಿಂದರೆ ಎಷ್ಟು ತಿನ್ನಲಿಕ್ಕಾದೀತು? ಸಂಜೆ ಟೀ ಜೊತೆ ಏನೊ ಒಂದು ಇರಲೇಬೇಕಲ್ಲ, ಹಲ್ವಾ ಬೇಗ ಮಾಡಿಕೊಳ್ಳಬಹುದು, ಉಳಿದರೆ ನಾಳೆಯೂ ತಿನ್ನೋಣ ಅಂದ್ಕೊಂಡು ಸಕ್ಕರೆ,ತುಪ್ಪ ಬೆರೆಸಿ ಹಲ್ವಾ ಸಿದ್ಧವಾಯಿತು. ಒಂದು ತುಂಡು ಮಾವಿನಶುಂಠಿ ತುರಿ ಹಲ್ವ ಪಾಕದೊಂದಿಗೆ ಸೇರಿತು. ಆಹ್.. ಆ ರುಚಿ .. ನೀವೂ ಮಾಡಿ ಸವಿಯಿರಿ !
ಮಾವಿನ ಶುಂಠಿ ಅಡುಗೆ ಪ್ರಯೋಗ ನಮ್ಮ ಭೂರಿಭೋಜನಗಳಲ್ಲಿ ಇರಲೇಬೇಕಾದ ಮೆಣಸ್ಕಾಯಿ ಕಡೆ ತಿರುಗಿತು. ನಾವು ದಕ್ಷಿಣ ಕನ್ನಡಿಗರು ಮೆಣಸ್ಕಾಯಿ ಪದದ ಬಳಕೆ ಮಾಡುವಲ್ಲಿ ಉತ್ತರ ಕನ್ನಡಿಗರು ಕಾಯಿರಸ ಅನ್ನುತ್ತಾರೆ. ಕರ್ನಾಟಕ ವಿಶಾಲ ವಾ್ಯಪ್ತಿಯ ಪ್ರದೇಶ, ಅಡುಗೆಯಲ್ಲಿ ತೆಂಗಿನಕಾಯಿ ಇಲ್ಲದೆ ಶೇಂಗಾಪುಡಿ, ಹುರಿಗಡಲೆಪುಡಿಗಳಿಂದಲೂ ಕರಿ ಅಥವಾ ರಸಂಗಳನ್ನು ದಪ್ಪಗೊಳಿಸಲು ಬಳಸುವುದೂ ಒಂದು ಪದ್ಧತಿ. ಇಂತಹ ವೈವಿಧ್ಯಗಳನ್ನು ನಾವು ಹೊಂದಿರುವಾಗ ಮೆಣಸ್ಕಾಯಿ ಬದಲಾಗಿ ಗೊಜ್ಜು ಕೂಡಾ ಆದೀತು.
ಈಗ ಮೆಣಸ್ಕಾಯಿ ಮಾಡೋಣ.
ಒಂದು ಕಪ್ ತೆಂಗಿನ ತುರಿ
ಮಾವಿನ ಶುಂಠಿ, ಎರಡಿಂಚು ತುಂಡು, ತುರಿಯಿರಿ.
ರುಚಿಗೆ ಉಪ್ಪು, ಬೆಲ್ಲ, ಹುಳಿ
ಒಗ್ಗರಣೆ ಸಾಹಿತ್ಯ
3 ಒಣಮೆಣಸು
1 ಚಮಚ ಉದ್ದಿನಬೇಳೆ
2 ಚಮಚ ಕೊತ್ತಂಬರಿ
2 - 3 ಚಮಚ ಎಳ್ಳು
ಮಸಾಲೆಗಳನ್ನು ಘಮ್ ಎಂಬಂತೆ ಹುರಿಯಿರಿ. ತೆಂಗಿನತುರಿಗೆ ಮಾವಿನ ಶುಂಠಿ, ಹುರಿದ ಮಸಾಲೆ ಸೇರಿಸಿಕೊಂಡು ಅರೆಯಿರಿ. ಉಪ್ಪು, ಬೆಲ್ಲ, ಹುಳಿ ಕೂಡಿಸಿ, ಅವಶ್ಯವಿರುವ ನೀರು ಎರೆದು ಕುದಿಸಿ. ಸಾರಿನಷ್ಟು ತೆಳ್ಳಗೆ ಮಾಡಬಾರದು, ದಪ್ಪವಾಗಿರಲಿ. ಒಗ್ಗರಣೆ ಕೊಡಿ. ತೆಂಗಿನತುರಿ ಇಲ್ವೇ, 2 ಚಮಚ ಹುರಿಗಡಲೆಯನ್ನು ಮೇಲೆ ಹೇಳಿದ ಮಸಾಲೆಯೊಂದಿಗೆ ಅರೆದುಕೊಳ್ಳಿ, ಮಾಂಙನ್ನಾರೀ ಗೊಜ್ಜು ಅನ್ನಿ.
ಮಾಂಙನ್ನಾರೀ ಸಾಸ್:
4 ಟೊಮ್ಯಾಟೋ, ದೊಡ್ಡ ಗಾತ್ರದ್ದು
ಒಂದು ತುಂಡು ಮಾವಿನ ಶುಂಠಿ
ರುಚಿಗೆ ಉಪ್ಪು, ಸಕ್ಕರೆ
1-2 ಚಮಚ ತುಪ್ಪ ಅಥವಾ ಎಣ್ಣೆ
ಟೊಮ್ಯಾಟೋ ಹಾಗೂ ಮಾವಿನ ಶುಂಠಿಯನ್ನು ಇಡಿಯಾಗಿ ಬೇಯಿಸಿ. ತಣಿದ ಮೇಲೆ ಸಿಪ್ಪೆ ತೆಗೆದು ಅರೆದುಕೊಳ್ಳಿ, ನೀರು ಬೇಡ. ತಣ್ಣೀರಿನಲ್ಲಿ ಹಾಕಿಟ್ಟರೆ ಬೇಗನೆ ಸಿಪ್ಪೆ ತೆಗೆಯಬಹುದು.
ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿಕೊಳ್ಳಿ. ಅರೆದ ಮಿಶ್ರಣವನ್ನು ಎರೆಯಿರಿ. ಕುದಿಯುತ್ತಿದ್ದ ಹಾಗೆ ಉಪ್ಪು, ಸಕ್ಕರೆ ಹಾಕಿ ದಪ್ಪಗಟ್ಟುತ್ತಿದ್ದ ಹಾಗೇ ಸೌಟಿನಲ್ಲಿ ಕೈಯಾಡಿಸಿ, ಕೆಳಗಿಳಿಸಿ.
ಅತಿ ಶೀಘ್ರವಾಗಿ ತಯಾರಿಸಬಹುದು, ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿ. ಬ್ರೆಡ್, ಚಪಾತಿ, ಪೂರಿ, ನಾನ್, ತೆಳ್ಳವು ಜೊತೆ ಸವಿಯಿರಿ. ಒಂದೆರಡು ದಿನ ಇಟ್ಟುಕೊಳ್ಳಬಹುದು.
ಆರಂಭದಲ್ಲೇ ಬರೆದಂತೆ ಮಾವಿನಶುಂಠಿ ಉಪ್ಪಿನಕಾಯಿಯ ಸ್ವಾದವೇ ಊಟದ ರುಚಿ ಇನ್ನೂ ಹೆಚ್ಚಿಸುವಂತಹದು. ಲಿಂಬೇ ಉಪ್ಪಿನಕಾಯಿ, ತರಕಾರೀ ಮಿಶ್ರಣದ ಉಪ್ಪಿನಕಾಯಿ, ಯಾವುದೇ ವಿಧಾನದ ಉಪ್ಪಿನಕಾಯಿ ಆಗಿರಲಿ, ಮಾವಿನಶುಂಠಿ ಧಾರಾಳವಾಗಿ ಹಾಕಬಹುದಾಗಿದೆ. ಬೇಯಿಸಿಕೊಂಡು ಬಿಲ್ಲೆಗಳಂತೆ ಕತ್ತರಿಸಿ ಉಪ್ಪಿನಕಾಯಿ ಮಿಶ್ರಣದೊಂದಿಗೆ ಸೇರಿಸಿ. ಬೇಯಿಸಿದ ಮಾವಿನಶುಂಠಿ ಮೆತ್ತಗಾಗುವುದೇ ಇಲ್ಲ.
ಮಿಶ್ರ ತರಕಾರಿ ಉಪ್ಪಿನಕಾಯಿ ಹೇಗೆ ಮಾಡೋಣ?
ಲಿಂಬೇ ಹೋಳುಗಳು, 2 ಲಿಂಬೆ ಹಣ್ಣು ಸಾಕು
ಬೇಯಿಸಿ ಬಿಲ್ಲೆಗಳಂತೆ ಕತ್ತರಿಸಿದ ಮಾವಿನಶುಂಠಿ, ಒಂದು ಕಪ್
ಕತ್ತರಿಸಿದ ಸೌತೆಕಾಯಿ ಹೋಳುಗಳು, 3 ಕಪ್
ಉಪ್ಪು, 2 ಕಪ್
ಉಪ್ಪಿನಕಾಯಿ ಮಸಾಲೆ ಹುಡಿ , 2 ಕಪ್
ಸಾಸಿವೆ ಹುಡಿ, ಒಂದು ಕಪ್
ಉಪ್ಪಿನಕಾಯಿ ಮಸಾಲೆ ಹುಡಿ ಮಾರ್ಕೆಟ್ ನಲ್ಲಿ ತರಹೇವಾರಿ ಸಿಗುತ್ತವೆ. ಸಾಸಿವೆ ಹುಡಿ ಮಾತ್ರ ಮಾಡಿಕೊಂಡರೆ ಉತ್ತಮ. ಸಾಸಿವೆಯನ್ನು ನಾನ್ ಸ್ಟಿಕ್ ತವಾದಲ್ಲಿ ತುಸು ಬೆಚ್ಚಗೆ ಮಾಡಿಕೊಳ್ಳಿ, ಹುರಿಯುವುದೇನೂ ಬೇಡ. ನುಣ್ಣಗಿನ ಹುಡಿ ಮಿಕ್ಸೀಯಲ್ಲಿ ಮಾಡಿಕೊಳ್ಳಿ. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ ಜಾಡಿಯಲ್ಲಿ ತುಂಬಿ. ಅರ್ಧಗಂಟೆಯೊಳಗೆ ತರಕಾರಿ ಹೋಳುಗಳು ಉಪ್ಪು ಎಳೆದು ರಸಭರಿತ ಹಾಗೂ ಸ್ವಾದಿಷ್ಟ ಉಪ್ಪಿನಕಾಯಿ ನಿಮ್ಮದಾಗುವುದು.
Posted via DraftCraft app
Subscribe to:
Post Comments (Atom)
0 comments:
Post a Comment