Pages

Ads 468x60px

Saturday, 28 June 2014

ಅಡುಗೆಗೊಂದು ಕಳೆ




ಬಂದ ಮಳೆ
ಕೊಳೆಯ ತೊಳೆ
ಹಸಿರು ಹೊಳೆ
ಉಚಿತ ಬೆಳೆ
ಅಡುಗೆಗೊಂದು ಕಳೆ




ಬೇಸಿಗೆಯ ಬಿರು ಬಿಸಿಲು,  ಎಲ್ಲೆಲ್ಲೂ ತೀರದ ದಾಹ.   ಬಾಯಾರಿಕೆ ತಣಿಸಿಕೊಳ್ಳಿ ಎಂಬಂತೆ ಮಳೆ ಸುರಿದು ಹೋಯಿತು.   ಸುರಿದ ಮಳೆಯಿಂದ ನೆಲದಿಂದ ಮೇಲೆದ್ದ ಸಸ್ಯ ಸಂಕುಲ,  ಎಲ್ಲೋ ನೆಲದಡಿಯಲ್ಲಿ ಹುದುಗಿದ ಈ ಹಸಿರು ಮೇಲೆದ್ದು ಬರಲು ಒಂದು ಪುಟ್ಟ ಮಳೆ ಹನಿ ಸಾಕಾಯಿತು.   

ಬಾಲ್ಯದಿಂದಲೇ ಪರಿಚಿತ ಈ ಕಳೆಸಸ್ಯ.    ನಮ್ಮ ಬಾಲ್ಯದಲ್ಲಿ ಈವತ್ತಿನ ಟೀವಿ ಜಾಲ,   ಮೊಬೈಲ್,  ಇಂಟರ್ನೆಟ್ ಇತ್ಯಾದಿ ಇರಲಿಲ್ಲ ಕಣ್ರೀ,   ಶಾಲೆಯ ಆಟಪಾಟಗಳ ಜೊತೆಜೊತೆಗೆ ಗಿಡಗಳ ಒಡನಾಟದಲ್ಲೇ ಬೆಳೆದವರು ನಾವು.    ನಮ್ಮ ಮನೆಯಂಗಳಕ್ಕೆ ರಸ್ತೆಯ ದೊಡ್ಡ ಆಲದಮರ ನೆರಳು.    ಅಪ್ಪ ಮನೆಯಂಗಳದಲ್ಲಿ ಸಾಲಾಗಿ ಕ್ರೋಟನ್ ಗಿಡಗಳನ್ನು ನೆಡಿಸಿದ್ದರು.   ಅಮ್ಮನಿಗೆ ಬೇಕಾದ ಮಲ್ಲಿಗೆ,  ಸೇವಂತಿಗೆ,  ಗುಲಾಬಿಗಳು ಮರದ ನೆರಳಿನಿಂದಾಗಿ ಆಗ್ತಾನೇ ಇರಲಿಲ್ಲ.   ಆದರೂ ಮನೆಯಂಗಳ ಎಂದ ಮೇಲೆ ಪುಟ್ಟ ಗಾರ್ಡನ್ ಇರಲೇಬೇಕು.   ದಾಸವಾಳ,  ನಂದಿಬಟ್ಟಲು ಮಾತ್ರವಲ್ಲದೆ ಕ್ರೋಟನ್ ಗಿಡಗಳೂ ಹೂದೋಟಕ್ಕೆ ಭೂಷಣ.   ಕ್ರೋಟನ್ ಗಿಡಗಳಿಗೆ ಹೆಚ್ಚಿನ ಆರೈಕೆಯೇನೂ ಬೇಡ,   ಮಳೆಗಾಲದಲ್ಲಿ ಒಮ್ಮೆ ಸೊಪ್ಪು ಸವರಿ,  ಗೆಲ್ಲುಗಳನ್ನು ಕತ್ತರಿಸಿ ಬಿಡಬೇಕು.   ಎಲೆಗಳ ವಿನ್ಯಾಸವೂ,  ವರ್ಣಗಳೂ ಇದರ ಆಕರ್ಷಣೆ.   ಇದೇ ಥರ ಕ್ರೋಟನ್ ಅಂತ ಹೇಳಬಹುದಾದ ಒಂದು ಕಳೆ ಸಸ್ಯ ಇದು.

ಅದೇನೇ ಹೊಸ ವಿನ್ಯಾಸದ ವಸ್ತು ಕಣ್ಣೆದುರು ಬರಲಿ, ಬಾಂಬೇ ಎಂಬ ಅಡ್ಡ ನಾಮ ಇಡುವ ವಾಡಿಕೆ ನಮ್ಮದು.  ನೆಲಬಸಳೆಯನ್ನು ಬಾಂಬೇ ಬಸಳೆ ಅನ್ನುವುದಿದೆ.   ಚಿರೋಟಿ ರವೆಗೆ ಬಾಂಬೇ ಸಜ್ಜಿಗೆ ಅನ್ನುವವರು ನಾವು.   ಹಾಗೆ ಈ ಸೊಪ್ಪು ನಮ್ಮ ಬಾಯಿಯಲ್ಲಿ ಬೊಂಬಾಯಿ ಹರಿವೆ ಆಗಿತ್ತು.   ಕ್ರೋಟನ್ ಗಿಡಗಳಂತೆ ಬೇಕಾದ ವಿನ್ಯಾಸದಲ್ಲಿ ಕತ್ತರಿಸಿ ಹೂತೋಟಕ್ಕೆ ಹೊಸ ಕಳೆಯನ್ನೂ ನೀಡಬಲ್ಲ ಈ ಕಳೆಸಸ್ಯ ಕ್ರೋಟನ್ ಹರಿವೆಯೂ ಹೌದಾಗಿತ್ತು.   ಯಾವಾಗಲೂ ತೇವಾಂಶ ಇರುವಲ್ಲಿ ಹಸಿರುಹಸಿರಾಗಿ,  ಪ್ರಖರ ಬಿಸಿಲು ಬೀಳುವಲ್ಲಿ ಹಳದಿ ವರ್ಣದಲ್ಲಿ,   ನೀರೇನೂ ದೊರೆಯದ ಬಂಜರು ಜಾಗದಲ್ಲಿ ಮಾಸಲು ಕೆಂಪು ಬಣ್ಣ ತಳೆಯುವ ಈ ವಿಚಿತ್ರ ಸಸ್ಯ ರಂಗಿನ ಹರಿವೆಯೂ ಆಗಿತ್ತು.   ನನ್ನಮ್ಮ ಹಾಗೂ ಪಕ್ಕದ ಮನೆಯಾಕೆ ಇದರ ಎಳೆಯ ಕುಡಿಗಳನ್ನು ಅಡುಗೆಯಲ್ಲಿ ಬಳಸುತ್ತಿದ್ದುದನ್ನು ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ.

ಪಕ್ಕದಮನೆಯ ಶೋಭಾ ತರಹೇವಾರಿ ಗಿಡಗಳನ್ನು ನೆಡುವವಳು,  ಶೋಭಾ ಈ ಕಳೆಸಸ್ಯವನ್ನು ಅದೆಲ್ಲಿಂದಲೋ ಸಂಪಾದಿಸಿ ಮನೆಯಂಗಳದಲ್ಲಿ ಸಾಲು ಮಾಡಿ ನೆಟ್ಟು ಪೋಷಿಸಿದವಳು.    ಬೆಳೆದಂತೆಲ್ಲಾ ಆಗಾಗ ಕತ್ತರಿಯಾಡಿಸುತ್ತಿದ್ದಳು.   ಅವಳು ಕತ್ತರಿಯಾಡಿಸಿ ಚೆಲ್ಲಾಡಿದ ಎಲೆಗಳನ್ನು ಅವಳಮ್ಮ ಅಡುಗೆಮನೆಗೆ ಒಯ್ದಿರಬೇಕು,   ನನ್ನಮ್ಮನಿಗೂ ಶೋಭಾ ಅಮ್ಮನೂ ಏನೇನೋ ಅಡುಗೆ ಹೇಳ್ಕೊಡೋರು,  ಅಂತೂ ನಮ್ಮ ಮನೆಯೊಳಗೂ ಈ ಸೊಪ್ಪು ಬಂತು.    ಇದೆಲ್ಲ ಹಳೇ ವಿಷಯ.   ಈಗ ನಾವು ಪ್ರಸ್ತುತಕ್ಕೆ ಬರೋಣ.





ಬಾಲ್ಯದಲ್ಲಿ ಚಿರಪರಿಚಿತವಿದ್ದ ಈ ಸಸ್ಯವನ್ನು ನಾನು ಮತ್ತೆ ಕಂಡಿದ್ದಿಲ್ಲ.   ಮದುವೆಯಾದ ನಂತರ ಮರೆತೇ ಹೋಗಿತ್ತು.   ಇದು ಪುನಃ ನನ್ನೆದುರು ಪ್ರತ್ಯಕ್ಷವಾಯಿತು.   ತೋಟದಲ್ಲಿಯೂ ಅಲ್ಲ,  ಗೇರುಮರಗಳ ಆಸುಪಾಸಿನಲ್ಲಿಯೂ ಅಲ್ಲ,   ಗದ್ದೆಹುಣಿಯಲ್ಲಂತೂ ಅಲ್ಲವೇ ಅಲ್ಲ.   ಹೀಗೇ ಸುಮ್ಮನೆ ಸಂಜೆಯ ವೇಳೆ ನೆರೆಮನೆಯ ಪ್ರೇಮಕ್ಕನ ಮನೆಗೆ ಹೋಗಿದ್ದೆ.   ಏನೇನೋ ಲೊಟ್ಟೆಪಟ್ಟಾಂಗ ಆಯ್ತು,  ಹಿಂತಿರುಗಿ ಬರುವಾಗ ಗೇಟಿನ ಪಕ್ಕ ಸಾಲು ಮಾಡಿ ನೆಟ್ಟಿದ್ದ ಇದೇ ಕ್ರೋಟನ್ ಹರಿವೆ ಕಣ್ಣಿಗೆ ಬಿತ್ತು.

   " ಈ ಗಿಡ ಎಲ್ಲಿಂದ ಸಿಕ್ಕಿತೂ ?  ನಂಗೂ ಎರಡು ಕಡ್ಡಿ ಕೊಟ್ಟಿರು... ನೆಟ್ಟುಕೊಳ್ಳುತ್ತೇನೆ " 
" ಧಾರಾಳವಾಗಿ ನೆಟ್ಟುಕೊ..." ಅಂದಳು ಪ್ರೇಮಾ.

ಮನೆಗೆ ತಂದೆನಾ,   ಚೆನ್ನಪ್ಪನೂ ಈ ಕೋಲುಕಡ್ಡಿಗಳಂತಿದ್ದ ದಂಟುಗಳನ್ನು ಕಂಡು ಗೊಣಗಿದ   " ಇಂಥದ್ದೆಲ್ಲ ಯಾಕೆ ತರೂದು,  ನಾಳೆ ತೋಟದಲ್ಲಿ ಇರ್ತದೆ "   ಚೆನ್ನಪ್ಪನ ಭವಿಷ್ಯವಾಣಿ ನಿಜವಾಯಿತು.

ಸಸ್ಯವಿಜ್ಞಾನದಲ್ಲಿ Amaranthaceae ಕುಟುಂಬ ಬಹಳ ದೊಡ್ಡದು.   ಅದರಲ್ಲೂ 180ಕ್ಕೂ ಮೇಲ್ಪಟ್ಟು ವರ್ಗೀಕರಣವೂ ಇದೆ.   ನಾವು ಸಾಮಾನ್ಯವಾಗಿ ಬಳಸುವ ಹರಿವೆಯನ್ನೇ ನೂರಾರು ಬಣ್ಣದಲ್ಲಿ ಕಾಣಬಹುದು.   2,500ಕ್ಕೂ ಹೆಚ್ಚು ಜಾತಿಗಳಿವೆಯಂತೆ.  ಹೂತೋಟದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸಲ್ಪಡುವ ಹರಿವೆ ಜಾತಿಯ ಕಳೆಸಸ್ಯಗಳು ಒಟ್ಟಾರೆಯಾಗಿ Wild Spinach ಎಂದು ಕರೆಯಲ್ಪಡುತ್ತವೆ ಹಾಗೂ ತಿನ್ನಲು ಯೋಗ್ಯವಾಗಿವೆ,  ರುಚಿಕರವೂ ಆಗಿರುತ್ತವೆ ಎಂದು ಗೂಗಲ್ ಹುಡುಕಾಟದಲ್ಲಿ ತಿಳಿಯಿತು.   

ಇದರ ಎಲೆ ಹಾಗೂ ದಂಟು ಕೂಡುವಲ್ಲಿ ಪುಟ್ಟ ಬಿಳಿ ಹೂಗಳೂ ಅರಳುತ್ತವೆ.   ಬಹುತೇಕ ಇದು ಹೊನಗೊನೆ ಸೊಪ್ಪು ( Alternanthera  sessilis ) ಸಮೀಪವರ್ತಿ ಸಸ್ಯ ಆಗಿರಲೂ ಬಹುದು
.
ಮಧು ಬೆಂಗಳೂರಿನಿಂದ ಬಂದಿದ್ದ,  ಅವನ ವಿಮರ್ಶೆ ತಿಳಿಯಬೇಡವೇ,  ಇದೇ ಸೊಪ್ಪಿನ ಸಾಸಿವೆ ತಯಾರಾಯಿತು.

  " ತಿಂದು ನೋಡು,  ಹೇಗಿದೆ ?"
" ಆಹ,  ಏನು ರುಚಿ,   ಇಷ್ಟು ಒಳ್ಳೆಯ ಸೊಪ್ಪು ಬೆಂಗಳೂರಿನ ಪೇಟೆಯಲ್ಲಿ ಸಿಕ್ಕಲಿಕ್ಕಿಲ್ಲ..."





ಸುಮ್ಮನೇ ನನ್ನ ಸಂದೇಹ ಪರಿಹಾರಕ್ಕಾಗಿ ನಮ್ಮ ನೆರೆಯ ತರಕಾರೀ ಕೃಷಿ ನಿಪುಣನಾದ ಮಲೆಯಾಳಿಯನ್ನು ಮಾತಿಗೆಳೆದೆ. 
   "ಇದು ಹರಿವೆಯೇ ಅಕ್ಕ... "  ಅಂದ್ಬಿಟ್ಟು  " ಮಣ್ಣಿನ ಚಟ್ಟಿಯಲ್ಲಿ ನೆಟ್ರೆ ಚಂದ ಕಾಣ್ತದೆ "  ಎಂಬ ಸಲಹೆಯನ್ನೂ ಕೊಟ್ಟ ರವೀಂದ್ರನ್.

ಹೌದೂ,  ಈ ಕಳೆಸಸ್ಯಗಳನ್ನು ತಿನ್ನುವ ಅಗತ್ಯವಾದರೂ ಏನಿದೆ ?   ಕೇಳಿಯೇ ಕೇಳ್ತೀರಾ.  ಅದಕ್ಕೂ ಉತ್ತರ ಇದೆ.
ನಿಸರ್ಗದಲ್ಲಿ ಉಚಿತವಾಗಿ ಲಭ್ಯ.   ನೆಟ್ಟು ಬೆಳೆಸಲು ಕಾಸು ಖರ್ಚಿಲ್ಲ,  ಆರೈಕೆಯೇನೂ ಬೇಕಾಗಿಲ್ಲ.
ರಸಗೊಬ್ಬರಗಳ ಹಂಗಿಲ್ಲ,  ಕೀಟನಾಶಕಗಳನ್ನು ಸಿಂಪಡಿಸಬೇಕಾಗಿಲ್ಲ.
ನೀರೇನೂ ಲಭಿಸದಿದ್ದರೂ ಇದರ ಕಳೆಗೆ ಸಾಟಿಯಿಲ್ಲ.
ಇಂತಹ ವನಸ್ಪತಿ ಸಸ್ಯಗಳಿಂದ ಶರೀರಕ್ಕೆ ಅಡ್ಡ ಪರಿಣಾಮಗಳೇನೂ ಇಲ್ಲ.
ಬಸಳೆ ಹರಿವೆಗಳಿಗಿಂತಲೂ ರುಚಿಕರ,   ಅಹಿತಕರ ಘಾಟು,  ಕಹಿ ಇಲ್ಲವೇ ಇಲ್ಲ.
ಪರಿಸರಸ್ನೇಹೀ ಸಸ್ಯ.
ಸೊಪ್ಪು ತರಕಾರಿಗಳ ಸಂತುಲಿತ ಪೋಷಕಾಂಶಗಳಾದ ಖನಿಜಾಂಶಗಳು,  ಬಿ ಜೀವಸತ್ವ, ರಿಬೊಫ್ಲೊವಿನ್,  ವಿಟಮಿನ್ ಎ,  ವಿಟಮಿನ್ ಸಿ,  ಫೈಬರ್ ಇತ್ಯಾದಿಗಳಿಂದ ಸಮೃದ್ಧವಾಗಿದೆ.

ಸೊಪ್ಪುಗಳನ್ನು ಉಪ್ಪು ಕೂಡಿಸಿ ಬೇಯಿಸಿದ್ರಾ,   ತೆಂಗಿನತುರಿ,  ಒಣಮೆಣಸು ಅರೆದು ಹಾಕಿದ್ರಾ,  ದಪ್ಪ ಮಜ್ಜಿಗೆ ಎರೆದ್ರಾ,  ಇದನ್ನು ಪಚ್ಚಡಿ ಅನ್ನಿ.  
ತೆಂಗಿನ ತುರಿ,  ಸಾಸಿವೆ ಅರೆದು,  ಮಜ್ಜಿಗೆ ಕೂಡಿಸಿದ್ದು ಸಾಸಮೆ.
ತೆಂಗಿನ ತುರಿ,  ಜೀರಿಗೆ ಅರೆದು ಮಜ್ಜಿಗೆ ಕೂಡಿಸಿದ್ದು ಜೀರಿಗೆ ಬೆಂದಿ,  ಇದಕ್ಕೆ ಬೇಳೆಕಾಳುಗಳನ್ನೂ ಹಾಕಬಹುದು,  ಹಲಸಿನ ಬೇಳೆಯೂ ಆದೀತು.
ಬೆಲ್ಲ ಇವೆಲ್ಲದಕ್ಕೂ ಹಾಕಬಹುದು,  ಅದು ನಿಮ್ಮ ಆಯ್ಕೆ.
ಇವೆಲ್ಲ ಊಟದ ಸಹವ್ಯಂಜನಗಳಾಗಿರುವುದರಿಂದ ನಾಳೆಗೆ ಅಥವಾ ರಾತ್ರಿಗೆ ಉಳಿಯುವಷ್ಟು ಮಾಡಲಿಕ್ಕಿಲ್ಲ.   ರಾತ್ರಿಯೂಟಕ್ಕೂ ಬೇಕಿದ್ದರೆ ಕುದಿಸಿ ಇಡಬೇಕು.


Posted via DraftCraft app

0 comments:

Post a Comment