ಬಕ್ಕೆ ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನವನ್ನು ಹಿಂದಿನ ವರ್ಷವೇ ಬರೆದಿದ್ದೇನೆ. ಹಲಸಿನಲ್ಲಿ ತುಳುವ ಎಂಬ ಇನ್ನೊಂದು ಜಾತಿಯಿದೆ. ಇದು ಮೆತ್ತನೆ ಹಾಗೂ ಪಿಚಿಪಿಚಿ ಹಣ್ಣು, ನಾರು ಅಧಿಕವಾಗಿರುವ ಈ ಹಣ್ಣಿಗೆ ಆಕರ್ಷಣೆ ಇಲ್ಲ. " ತುಳುವನ ಹಣ್ಣೇ... ನಂಗೆ ಬೇಡ " ಇಂತಹ ಉತ್ತರವೇ ದೊರೆತೀತು. ಆದರೆ ಇದರಿಂದಲೂ ಅಚ್ಚುಕಟ್ಟಾಗಿ ಇಡ್ಲಿ, ಪಾಯಸಗಳನ್ನು ಮಾಡಲು ಸಾಧ್ಯವಿದೆ. ಹೇಗೆಂದು ನೋಡೋಣ.
ದೊಡ್ಡ ಬಟ್ಟಲು ತುಂಬ ಹಣ್ಣು ಇಟ್ಕೊಳ್ಳಿ. ನಾವು ಈಗ ಹಣ್ಣಿನ ರಸ ಸಂಗ್ರಹಿಸಬೇಕಾಗಿದೆ. ಹೇಗೆ?
ಜಾಲರಿ ರಂಧ್ರಗಳಿರುವ ತಟ್ಟೆ ಅಥವಾ ಬಟ್ಟಲು.
ತಟ್ಟೆಯಿಂದ ರಸ ಸಂಗ್ರಹಿಸಲು ಒಂದು ತಪಲೆ.
ತಪಲೆಯ ಮೇಲೆ ಜಾಲರಿ ತಟ್ಟೆ ಇಟ್ಟುಕೊಳ್ಳುವಂತಿರಬೇಕು.
ಹಣ್ಣಿನ ಬೇಳೆ ಬಿಡಿಸುವುದೇನೂ ಬೇಡ, ಹಾಗೇನೇ ಜಾಲರಿ ತಟ್ಟೆಯಲ್ಲಿಟ್ಟು ಉಜ್ಜುತ್ತಾ ಬನ್ನಿ. ಹೀಗೆ ಉಜ್ಜಿದಂತೆ ಯಾ ತಿಕ್ಕಿದಂತೆ ಹಣ್ಣಿನ ರಸ ರಂಧ್ರಗಳಿಂದ ಕೆಳಗಿಳಿದು ತಳದಲ್ಲಿರುವ ತಪಲೆಯಲ್ಲಿ ಸಂಗ್ರಹವಾಗುತ್ತಿರುತ್ತದೆ, ತಿಳಿಯಿತಲ್ಲ....
ಐದು ಕಪ್ ಹಣ್ಣಿನ ರಸ + ಮೂರು ಕಪ್ ಅಕ್ಕಿ ತರಿ + ರುಚಿಗೆ ಹುಡಿಯುಪ್ಪು.
ಬೆರೆಸಿದ ಸಾಂದ್ರತೆ ಮಾಮೂಲು ಇಡ್ಲಿ ಹಿಟ್ಟಿನಂತಿರಬೇಕು.
ಬಾಳೆಲೆ ಬಾಡಿಸಿ ಇಟ್ಟಿದೀರಿ,
ಅಟ್ಟಿನಳಗೆಯಲ್ಲಿ ನೀರು ಕುದೀತಾ ಇದೆ, ಇನ್ಯಾಕೆ ತಡ ಮಾಡ್ತೀರಿ?
ಬಾಳೆಯೊಳಗೆ ಒಂದು ಸೌಟು ಹಿಟ್ಟು ತುಂಬಿಸಿ, ಲಕ್ಷಣವಾಗಿ ಮಡಚಿಟ್ಟು ಒಳಗಿಡುತ್ತಾ ಬನ್ನಿ.
ಎಲ್ಲವನ್ನೂ ಇಟ್ಟಾಯ್ತೇ, ಅಟ್ಟಿನಳಗೆ ಮುಚ್ಚಿ ಹದಿನೈದು ನಿಮಿಷ ಬೇಯಿಸಿ.
ಅಕ್ಕಿ ತರಿಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು, ಪ್ಯಾಕೆಟ್ ಖರೀದಿಗಿಂತ ಮನೆಯಲ್ಲೇ ಮಾಡಿಕೊಂಡರೆ ಮಿತವ್ಯಯ. ಹೇಗೆ ?
ಅವಶ್ಯವಿರುವಷ್ಟು ಬೆಳ್ತಿಗೆ ಅಕ್ಕಿ ಅಳೆದು ತೊಳೆಯಿರಿ.
ನೀರು ಬಸಿಯಿರಿ.
ಜಾಲರಿ ತಟ್ಟೆಗೆ ಹಾಕಿ ಅರ್ಧ ಗಂಟೆಯ ಕಾಲ ನೀರಪಸೆ ಆರಲು ಬಿಡಿ, ಆಗಾಗ ಕೈಯಾಡಿಸಿ.
ಒದ್ದೆಯಾರಿದ ಕೂಡಲೆ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿ.
ಆಯಿತಲ್ಲ ಅಕ್ಕಿ ತರಿ.
ಇಡ್ಲಿ ಎಂದಾಕ್ಷಣ ಈ ಹಿಟ್ಟನ್ನು ತಟ್ಟೆಯಲ್ಲಿ ಅಥವಾ ಇಡ್ಲಿ ಸ್ಟ್ಯಾಂಡ್ ನಲ್ಲಿ ಎರೆಯಲು ಸಾಧ್ಯವಾಗದು. ಬಾಡಿಸಿದ ಬಾಳೆಲೆಯಲ್ಲೇ ಎರೆದಿಟ್ಟು ಆವಿಯಲ್ಲಿ ಬೇಯಿಸುವುದೊಂದೇ ದಾರಿ. ಬಾಳೆಲೆ ಸಿಗದವರು ಸಾಗುವಾನಿ ಎಲೆ, ಉಪ್ಪಳಿಕ ಮರದ ಎಲೆ ಉಪಯೋಗಿಸಬಹುದು. ಈ ಎಲೆಗಳನ್ನು ಬಾಡಿಸುವ ಅಗತ್ಯವಿಲ್ಲ.
ಈ ಕಡುಬಿನ ವಿಶೇಷ ಏನಪ್ಪಾಂದ್ರೆ ಇದಕ್ಕೆ ಬೆಲ್ಲ, ತೆಂಗಿನತುರಿ ಏನೂ ಹಾಕಿಲ್ಲ. ಬೆಂದ ಕಡುಬು ತಿನ್ನಲು ಚಟ್ಣಿಯೂ ಬೇಡ, ಹಾಗೇ ಸುಮ್ಮನೆ ತಿಂದೇಳಬಹುದು. ಹೊಟ್ಟೆಗೂ ಗಟ್ಟಿ ತಿನಿಸು. ನನ್ನ ಮಕ್ಕಳಿಬ್ಬರೂ ಈ ಕಡುಬು ಮಾಡಿದ ಕ್ಷಣದಿಂದಲೇ ತಿನ್ನಲು ಹಾಜರು. ರಾತ್ರಿಯೂಟಕ್ಕೂ ಹಲಸಿನ ಹಣ್ಣಿನ ಇಡ್ಲಿ, ಬೆಳಗೆದ್ದೂ ಇಡ್ಲಿ, ಸಂಜೆ ಶಾಲೆಯಿಂದ ಬಂದು ಅಟ್ಟಿನಳಗೆಯಲ್ಲಿ ಇನ್ನೆಷ್ಟು ಇಡ್ಲಿಗಳಿವೆ ಎಂದು ಇಣುಕಿ ನೋಡಿ, " ಇನ್ನೂ ಇದೇ " ಅಂದು ತಟ್ಟೆ ತಂದು ತಿಂದು ಎದ್ದು ಆಟವಾಡಿಕೊಳ್ಳಲು ಹೋಗುತ್ತಿದ್ದರು. ಈ ಬ್ಲಾಗ್ ಬರಹವನ್ನು ಹಲಸಿನ ಋತುವಿನಲ್ಲೇ ಸಿದ್ಧಪಡಿಸಿದ್ದರೂ ಓದುಗರ ನೋಟಕ್ಕೆ ನಿಲುಕುವಾಗ " ಹಲಸಿನ ಹಣ್ಣು ಎಲ್ಲಿದೇ ?" ಎಂಬ ಪ್ರಶ್ನೆ ನಾನೂ ಕೇಳಬೇಕಾದೀತು. ಚಿಂತೆಯಿಲ್ಲ ಓದಿಟ್ಕೊಳ್ಳಿ, ಮುಂದೆ ಸಂದರ್ಭ ಸಿಕ್ಕಾಗ ಮಾಡುವಿರಂತೆ.....
<><><><><><>
ನಮ್ಮಜಮಾನ್ರು ಪ್ರತಿದಿನವೂ ಗಂಟೆಗಟ್ಟಲೆ ಸ್ನೇಹಿತ ಗಿರೀಶ್ ಜೊತೆ ಮೆಸೆಂಜರ್ ಮೂಲಕ ಹರಟೆ ಹೊಡೆಯುವುದಿದೆ. ಅವರ ಪಟ್ಟಾಂಗ ನನ್ನ ಕಿವಿಗೂ ಬೀಳುತ್ತಿರುತ್ತದೆ. ಇವರು ಹೇಳ್ತಿದ್ರು, " KTM ಬೈಕ್ ರಾಲಿಗೆ ಹೋಗುವಾಗ ಹಲಸಿನ ಕೊಟ್ಟಿಗೆ ತಿಂದು ಹೋಗಿದ್ದು, ದಾರಿಯಲ್ಲಿ ಬಿಡು, ಮನೆ ತಲಪುವವರೆಗೆ ಹಸಿವು ಅಂತ ಆಗ್ಲೇ ಇಲ್ಲ "
ನಿನ್ನೆ ಇದೇ ಹಣ್ಣಿನ ಇಡ್ಲಿ ತಿಂದು ಬೆಳ್ಳಂಬೆಳಗ್ಗೆ ಏಳು ಗಂಟೆ ಆಗ್ಬೇಕಾದ್ರೇ ಮಂಗಳೂರಿಂದ ಕುದುರೆಮುಖದ ತನಕ ಬೈಕ್ ಸವಾರಿಯಲ್ಲಿ ಭಾಗವಹಿಸಲು ಮಂಗಳೂರಿಗೆ ಹೋಗಿದ್ರು. ಬೈಕು ಏರಿ ಹೋದವ್ರು ಅದೆಷ್ಟು ಫೋಟೊ ತಂದಿದ್ರೂ, ಎಲ್ಲ ಬೈಕು ಸವಾರಿ ವೀರರ ಫೋಟೋಗಳು. ಒಂದೆರಡು ಸುಂದರ ಪ್ರಕೃತಿ ದೃಶ್ಯಗಳೂ ಸಿಕ್ಕವು. ನಿಸರ್ಗರಮ್ಯ ದೃಶ್ಯಗಳನ್ನು ನೋಡುತ್ತಿದ್ದಂತೆ " ಛೆ, ನಾನೂ ಹೋಗಬಹುದಾಗಿದ್ದರೆ...." ಅಂತನ್ನಿಸಿದ್ದು ಮಾತ್ರ ಸುಳ್ಳಲ್ಲ.
Posted via DraftCraft app
ಟಿಪ್ಪಣಿ: 22/8/2015 ರಂದು ಸೇರಿಸಿದ ಚಿತ್ರ-ಬರಹ..... ತುಳುವ ಹಲಸಿನ ಬೆರಟಿ
ಉಪ್ಪುಸೊಳೆಯ ಪದಾರ್ಥ ಉಣ್ಣುತ್ತಿದ್ದ ಹಾಗೆ ಚೆನ್ನಪ್ಪ ಅಂದ, " ಅಕ್ಕ, ತೋಟದಲ್ಲಿ ತುಳುವೆ ಹಲಸಿನಕಾೖ ಇನ್ನೂ ಉಂಟಲ್ಲ !"
" ಇದೆಯಾದರೆ ತಂದಿಡು, ಇನ್ನಂದಾವರ್ತಿ ಉಪ್ಪುಸೊಳೆ ಹಾಕಿಡೋಣ, ಹಣ್ಣಾದರೆ ಬೆರಟಿ ಮಾಡಿಟ್ಕೊಳ್ಳುವ..." ನನ್ನ ಮಾರುತ್ತರ.
ಸಂಜೆ ವೇಳೆಗೆ ಹಲಸಿನಕಾೖ ಬಂದಿತ್ತು, ದೊಡ್ಡ ಗಾತ್ರದ್ದು. ನನ್ನ ಬಿಡುವಿನ ವೇಳೆ ಬಂದಾಗ ಹಣ್ಣಾಗಿ ಕಮ್ಮನೆ ಬರಲು ಶುರುವಾಗಿತ್ತು.
ತುಳುವ ಹಣ್ಣನ್ನು ಬಿಡಿಸಲು ಏನೂ ಕಷ್ಟವಿಲ್ಲ, ಕತ್ತಿಗಿತ್ತಿ ಒಂದೂ ಬೇಡ, ಒಂದ್ಹತ್ತು ಸೊಳೆ ಬಿಡಿಸಿ " ಏಯ್, ಮಗಳೇ... ತಿಂದು ನೋಡೇ " ಕರೆದೆ.
ಅವಳೂ ಓಡೋಡಿ ಬಂದಳು. " ಹ್ಞು, ತುಂಬ ಸಿಹಿ ಇದೇ..." ಮಗಳ ಒಪ್ಪಿಗೆ ಸಿಕ್ಕಿದ ನಂತರ ಒಂದು ತಪಲೆ ತುಂಬ ಸೊಳೆ ಒಳ ಬಂದಿತು. ಹಣ್ಣಿನ ರಸ ತೆಗೆಯುವ ಕಾಯಕದಲ್ಲಿ ತತ್ಪರಳಾಗಿದ್ದಾಗ ನಮ್ಮೆಜಮಾನ್ರು ಅಲ್ಲಿಗೆ ಬಂದರು.
" ಓ, ತುಳುವನಾ, ಎಲ್ಲಿತ್ತಂತೇ... ಆ ಕೆರೆ ಪಕ್ಕದ ಮರ ಆಗಿರ್ಬೇಕು " ಎನ್ನುತ್ತಾ ಒಂದು ಸೊಳೆ ತಿಂದರು. ನನಗೆ ಸಿಟ್ಟು ಬರತೊಡಗಿತು, " ಅಲ್ಲಿ ಹೊರಗೆ ಇನ್ನೂ ಅರ್ಧ ಹಣ್ಣು ಹಾಗೇ ಇದೆ, ಎಲ್ಲ ಬಿಡಿಸಿ ತಂದ್ಕೊಟ್ಟರೆ ಹಲ್ವಾ ಮಾಡ್ಬಹುದು "
"ಹಂಗಿದ್ರೆ ಒಂದು ಪಾತ್ರೆ ಕೊಡು " ಅನ್ನುತ್ತ ದೊಡ್ಡ ಡಬರಿ ತೆಗೆದುಕೊಂಡು ಹೊರ ಹೋಗಿ ಎಲ್ಲ ಸೊಳೆಗಳನ್ನೂ ಬಿಡಿಸಿ ತಂದ್ಕೊಟ್ರು.
ರಸ ಬಿಡಿಸುವ ನನ್ನ ಪ್ರಯಾಸವನ್ನು ಗಮನಿಸಿ, ಇದಕ್ಕಾಗಿ ಸೂಕ್ತವಾದ ಯಂತ್ರ ಮನೆಯೊಳಗೆ ಬೇರೇನು ಇದೆ ಎಂಬ ತಪಾಸಣೆಯೂ ನಡೆದು, " ಚಕ್ಕುಲಿ ಮಟ್ಟಿನಲ್ಲಿ ಆಗುತ್ತಾ ನೋಡ್ತೇನೆ " ಅಂದು ಚಕ್ಕುಲಿ ಒರಲಿಗೂ ಹಲಸನ್ನು ಹಿಡಿಸಿ ಹೋದರು ನಮ್ಮೆಜಮಾನ್ರು.
ಅಂತೂ ಅಂದಾಜು ಒಂದು ಲೀಟರು ರಸ ದೊರೆಯಿತು. ಅಷ್ಟೇ ತೂಕದ ಬೆಲ್ಲವನ್ನೂ ಕೂಡಿಸಿ, ದಪ್ಪ ಬಾಂಡ್ಲಿ ಗ್ಯಾಸ್ ಒಲೆಗೇರಿತು. ಕುದಿದೂ ಕುದಿದೂ ಬೆಲ್ಲವೂ ಕರಗಿದ ನಂತರ ನಾನ್ ಸ್ಟಿಕ್ ಬಾಣಲೆಗೆ ವರ್ಗಾಯಿಸಲ್ಪಟ್ಟು, ಇಂಡಕ್ಷನ್ ಒಲೆಗೇರಿತು ಹಲಸಿನ ಹಣ್ಣಿನ ರಸಪಾಕ!
ಉಷ್ಣತೆಯನ್ನು ನಿಯಂತ್ರಣದಲ್ಲಿರಿಸಿ, ಒಂದು ಸಮಯವನ್ನೂ ಹೊಂದಿಸಿ, ಮರದ ಸಟ್ಟುಗದಲ್ಲಿ ಆಗಾಗ ಕೈಯಾಡಿಸುತ್ತ ಇದ್ದ ಹಾಗೆ ಒಂದು ವಿಧವಾದ ಪಾಕಕ್ಕೆ ಬಂದಿತು. ಎರಡು ಚಮಚ ತುಪ್ಪ ಹಾಕಿದ್ದೂ ಆಗಿತ್ತು, ಅಂತೂ ಬಹು ಬೇಗ ಆಯ್ತು, " ವಿಜ್ಞಾನಯುಗ ನಮ್ಮ ಕೆಲಸವನ್ನು ಹಗುರಾಗಿಸಿದೆ " ಅನ್ನೋದು ಸುಳ್ಳಲ್ಲ.
ಜಿಟಿಜಿಟಿ ಮಳೆ ಬೇರೆ ಬರ್ತಾ ಇತ್ತು. ಒಂದು ಲೋಟ ಬಿಸಿ ಹಾಲು ಹಾಗೂ ಎರಡು ಚಮಚ ಹಲಸಿನ ಜಾಮ್ ( ಬೆರಟಿ ) ಹಾಕಿ ಕದಡಿದಾಗ ಸೊಗಸಾದ ಮಿಲ್ಕ್ ಶೇಕ್ ನಮ್ಮ ಕೈಲಿತ್ತು! ತೆಂಗಿನ ಕಾಯಿ ಹಾಲು ಹಾಕಿದ್ರೆ ಪಾಯಸವೂ ರೆಡಿ.
ಅಂದ ಹಾಗೆ ನನ್ಮಗಳು ನಾಳೆ ಬೆಂಗಳೂರಿಗೆ ಹೋಗುವವಳಿದ್ದಾಳೆ, ಮಗನಿಗೂ, ನನ್ನ ತಂಗಿಗೂ ತುಳುವನ ಹಣ್ಣಿನ ಬೆರಟಿ ಕಳುಹಿಸುವ ಮಾಸ್ಟರ್ ಪ್ಲಾನ್ ಕೂಡಾ ತಯಾರಾಯ್ತು, ಏನಂತೀರ ?
0 comments:
Post a Comment