ಬೆಳಗಾಗಿತ್ತು, ಪಾತ್ರೆಗಳನ್ನು ಬೆಳಗಿ ಒಳಗೆ ತರ್ತಾ ಇದ್ದೆ, ಪುರ್ರೆಂದು ಪುಟಾಣಿ ಹಕ್ಕಿಯೊಂದು ಹಾರಿ ನನಗಿಂತ ಮುಂಚಿತವಾಗಿ ಒಳಗೆ ನುಗ್ಗಿತು. ಕೂಡಲೇ ನನ್ನ ಪ್ರಜ್ಞೆ ಎಚ್ಚರವಾಗಿ ಮಗಳಿಗೆ ಕೂಗಿ ಹೇಳಿದ್ದು " ಬೇಗ ಬಾರೇ, ಹಕ್ಕೀದು ಫೊಟೋ ತೆಗೀ ...."
ಹಕ್ಕಿ ಒಳಗೆ ಹಾರಿ ಬಂದಿದ್ದೇನೋ ಆಯಿತು, ಚಾವಡಿಯ ಬಾಗಿಲು ತೆರೆದಿರಲಿಲ್ಲ, ಕಿಟಿಕಿ ಬಾಗಿಲು ಕೂಡಾ ಮುಚ್ಚಿಯೇ ಇದ್ದಿತು. ಹಕ್ಕಿ ಹೊರ ಹೋಗಲಾರದೆ ಕಿಟಿಕಿಯ ಸಂದುಗಳಲ್ಲಿ ರೆಕ್ಕೆ ತೂರಿಸಿ ಒದ್ದಾಡಿ ಹೊರ ಹೋಗಲು ಪ್ರಯತ್ನ ಪಡುವ ಸಾಹಸ ನೋಡಿದಾಗ ಅಪ್ರಯತ್ನವಾಗಿ ಕವನವೊಂದು ಹುಟ್ಟಿತು.
ಮಗಳೇನೋ ಹಲವಾರು ಚಿತ್ರಗಳನ್ನು ತೆಗೆದಿಟ್ಟಿದ್ದಳು. ಮನೆಯ ಒಳಗಲ್ವೇ, ಮಸುಕು ಮಸುಕಾದ ಚಿತ್ರಗಳು. " ಇದೇನೇ ಹೀಗೆ ಬಂತೂ ...?"
" ಹಕ್ಕಿ ಹಿಂದೆ ಓಡಿ ಫೊಟೋ ತೆಗೆಯುವುದು ಎಂಥದು, ಬಾಳೆಹಣ್ಣಿನ ಫೊಟೋ ತೆಗೆದ ಹಾಗಾ ..." ದಬಾಯಿಸಿದಳು ಮಗಳು.
ಇರಲಿ ಅಂದ್ಬಿಟ್ಟು ಆ ಕ್ಷಣದಲ್ಲಿ ಮೂಡಿದ ಭಾವಗಳನ್ನು ಅಕ್ಷರದಲ್ಲಿ ಸೆರೆ ಹಿಡಿದು ಸುಮ್ಮನಾಗಿರಬೇಕಾಯಿತು.
ಎಂದಿನಂತೆ ಮಳೆಗಾಲ ಬಂದಿತು. ಅಂಗಳದ ತುಂಬಾ ಏನೇನೂ ಹುಲ್ಲು ಕಳೆ. ಅಲ್ಲೊಂದು ಕಮಾನು ಬಳ್ಳಿ ಮೇಲೇಳುತ್ತಾ ಇದೆ, " ಇದನ್ನು ಕಿಟಿಕಿ ಬಾಗಿಲಿಗೆ ಹಬ್ಬಿಸೋಣ " ಅಂದ್ಕೊಂಡು ಬಳ್ಳಿಗೊಂದು ಆಸರೆ ನೀಡಿ.... ಕೆಲವೇ ದಿನಗಳಲ್ಲಿ ಕಮಾನು ಬಳ್ಳಿ ಹರಡಿ ಹಬ್ಬಿ ಚೆಲುವಿನ ಚಿತ್ತಾರ ಮೂಡಿಸಿತು.
ಈಗ ನೆನಪಾಯಿತು, ಎಂದೋ ಬರೆದಿದ್ದ ಹಕ್ಕಿ ಹಾಡು. " ಒಂದೆರಡು ಹೂವರಳಲಿ " ಇನ್ನೊಂದು ಫೊಟೋ ತೆಗೆದು ಹಕ್ಕಿಯನ್ನು ಎಲ್ಲಿಂದಾದರೂ ತಂದು ಕೂರಿಸುವ ಪ್ರಯತ್ನ ಮಾಡೋಣ ಅಂತ ನಾನಿದ್ದೆ. ಅದೇನಾಯ್ತೋ, ಅಂಗಳದ ಕಳೆಸಸ್ಯಗಳಿಗೆ ಕತ್ತೀ ಪ್ರಹಾರ ಆಗಾಗ್ಗೆ ನಡೆಸುತ್ತಿರುತ್ತಾರೆ ನಮ್ಮೆಜಮಾನ್ರು, ಕತ್ತಿ ಅಲಗು ತಟ್ಟಿತೋ, ಹಬ್ಬಿದ ಲತೆ ಬಾಡಲು ತೊಡಗಿತು.
" ಛೇ, ಇದೇನಾಯಿತು..." ಚಿಂತಿಲ್ಲ, ಹೂ ಬೇರೆಡೆಯಿಂದ ತಂದು ಜೋಡಿಸೋಣ. ಅಂತೂ ಅರಳಿದ ಕಮಾನು ಬಳ್ಳಿಯ ಹೂಗಳು ದೊರೆತು ಹೊಸತೊಂದು ಫೊಟೋ ಇಮೇಜ್ ಸೃಷ್ಟಿಯಾಯಿತು. ಜೊತೆಗೊಂದು ಹಕ್ಕಿಯೂ ಬಂದು ಕುಳಿತಿತು. ಇನ್ನು ಓದಿರಲ್ಲ ನನ್ನ ಕವನ....
Cypress Vine ಎಂಬ ಹೆಸರಿನ ಈ ಅಲಂಕಾರಿಕ ಲತೆ ಅಮೇರಿಕಾದಿಂದ ಬಂದಿರುವಂತಾದ್ದು. Morning glory, Star Glory, hummingbird vine ಇತ್ಯಾದಿಯಾಗಿ ಕರೆಯಲ್ಪಡುವ ಈ ಕಮಾನುಬಳ್ಳಿ ಸಸ್ಯಶಾಸ್ತ್ರೀಯವಾಗಿ Ipomoea quamoclit ಹೆಸರನ್ನು ಹೊಂದಿದೆ. ಕೇರಳೀಯರು ಇದನ್ನು ಆಕಾಶ ಮುಲ್ಲ (ആകാശ മുല്ല, ಆಕಾಶಮಲ್ಲಿಗೆ ) ಅಂದಿದ್ದಾರೆ. ನಕ್ಷತ್ರ ಮಲ್ಲಿಗೆ ಅಂತಾನೂ ಹೇಳ್ತಾರೆ. ಆದ್ರೂನೂ ನಮ್ಮ ನೆರೆಯ ರವೀಂದ್ರನ್ " ಇದು ಕಾಕ್ಕ ಪೂ ಅಕ್ಕ " ಅಂದ್ಬಿಟ್ಟ. ಒಟ್ಟಿನಲ್ಲಿ ಕಾಗೆಯೂ ಹಕ್ಕಿಯಲ್ವೇ, ಇರಲಿ ನೂರಾರು ಹೆಸರುಗಳು.
ಹೇರಳವಾಗಿ ಹೂವರಳುವ ಈ ಲತೆಯ ಪುನರುತ್ಪಾದನೆ ಬೀಜಗಳಿಂದ. ಹೊಯಿಗೆ ಮಿಶ್ರಿತ ಹಾಗೂ ತೇವಾಂಶ ಉಳಿಯುವಂತಹ ಮಣ್ಣು ಅವಶ್ಯಕ. ಚೆನ್ನಾಗಿ ಬಿಸಿಲೂ ಇರುವಲ್ಲಿ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ. ಹಕ್ಕಿಯ ಗರಿಗಳಂತಹ ಎಲೆಗಳೂ ಆಕರ್ಷಕ. ಬಿಳಿ, ಕೆಂಪು ಹಾಗೂ ನಸುಗೆಂಪು ಬಣ್ಣದಲ್ಲಿ ಹೂವುಗಳ ವೈವಿಧ್ಯತೆಯೂ ಇದೆ. ಬಳ್ಳಿಗಳು ಹಬ್ಬಲು ಆಸರೆಯೂ ಇದ್ದರೆ ಮಾತ್ರ ಸೊಗಸು. ಹಕ್ಕಿಗಳೂ, ಚಿಟ್ಟೆಗಳೂ ಸ್ವಾಭಾವಿಕವಾಗಿ ಇದರ ಬಳಿ ಸುಳಿದಾಡುತ್ತಿರುತ್ತವೆ, ಹಾಗೆಂದೇ ಇದಕ್ಕೆ ಹಮ್ಮಿಂಗ್ ಬರ್ಡ್ ವೈನ್ ಎಂದು ಹೆಸರು ಬಂದಿದೆ. ಮೋಹಕವಾದ ಈ ಲತೆಯ ಹೂ, ಎಲೆ, ಬೀಜಗಳು ನಂಜಿನಿದ ಕೂಡಿದೆ, ವಿಷಯುಕ್ತ.
Posted via DraftCraft app
ಟಿಪ್ಪಣಿ: 23/11/2015 ರಂದು ವಿಸ್ತರಿಸಿ ಬರೆದಿದ್ದು.
ಈ ಬಾರಿ ನಾನು ಕಮಾನು ಬಳ್ಳಿಯ ಸುದ್ದಿಗೇ ಹೋಗಿರಲಿಲ್ಲ. ಮೊನ್ನೆ ಅಂಗಳದಲ್ಲಿ ಅಡ್ಡಾಡುತ್ತಿದ್ದಾಗ ಕಮಾನು ಬಳ್ಳಿ ತುಳಸಿಯ ಗಿಡಗಳ ಸಾಲಿನೆಡೆಯಲ್ಲಿ ತೆವಳುತ್ತಾ ಮುಂದುವರಿಯುತ್ತಿದೆ! ಇರಲಿ, ಹೂವರಳಿದಾಗ ನೋಟಕ್ಕೆ ಚೆನ್ನ ಅಲ್ವೇ ?
ಇವತ್ತು ತುಳಸೀಪೂಜೆಯೂ ಬಂದಿದೇ, ತುಳಸೀಗಿಡವಂತೂ " ನನಗಿಂತ ಚೆಲುವೆ ಯಾರಿಹಳು " ಎಂಬಂತೆ ಬಿಂಕದ ಸಿಂಗಾರಿಯಾಗಿಹಳು. ನಿಸರ್ಗದತ್ತ ಶೃಂಗಾರ ನೋಟ ಬ್ಲಾಗ್ ಓದುಗರಿಗಾಗಿ....
ಟಿಪ್ಪಣಿ: 29/1/2016 ...ಮುಂದುವರಿದಿದೆ.
ಯಾವ ಹಕ್ಕಿಗಾಗಿ ನಾನು ಇಷ್ಟೆಲ್ಲ ಪಾಡು ಪಟ್ಟಿದ್ದೆನೋ, ಅದೇ ಹಕ್ಕಿ ಈವತ್ತು ನಮ್ಮೆಜಮಾನ್ರ ಕೆಮರಾದಲ್ಲಿ ಬಂಧಿಯಾಯಿತು.
ಮನೆಯಿಂದ ಕೆಳಗಿಳಿದು ಬರುವಲ್ಲಿ ಗೋಡೆಗೆ ತಾಕಿದಂತೆ ಒಂದು ಅಲಂಕಾರಿಕ ಗಿಡ ಇದೆ. ಮೊದಲೆಲ್ಲ ಮಳೆಗಾಲದಲ್ಲಿ ಗೆಲ್ಲು ಕತ್ತರಿಸಿ ಬಿಡ್ತಾ ಇದ್ದೆವು. " ಗಿಡದೊಳಗೆ ಹಕ್ಕೀ ಗೂಡು ಇದೆ " ಎಂದು ಚೆನ್ನಪ್ಪ ಯಾವಾಗ ತೋರಿಸಿದನೋ, ಆ ನಂತರ ನಮ್ಮವರು ಆ ಗಿಡದ ತಂಟೆಗೆ ಹೋಗುವುದನ್ನೇ ಬಿಟ್ಟಿದ್ದಾರೆ.
ಈ ದಿನ ಮುಂಜಾನೆಯ ತಿಂಡಿ ತಿಂದು ಹೊರಗೆ ಬಂದಾಗ ಹಕ್ಕಿ ಆರಾಮವಾಗಿ ಗಿಡದ ಮೇಲೆ ಕೂತಿದೆ! ಬಹುಶಃ ಗೂಡಿನಲ್ಲಿ ಮೊಟ್ಟೆಯಿದ್ದಿರಬೇಕು, ಹಾರಿ ಹೋಗದೇ ಸುಮ್ಮನಿದ್ದ ಹಕ್ಕಿಯನ್ನು ಕೆಮರಾದಲ್ಲಿ ಹಿಡಿದಿರಿಸಲು ಇದೇ ಸುವರ್ಣಾವಕಾಶ ಅಂದುಕೊಳ್ಳುತ್ತ ಐಫೋನ್ ಹಾಗೂ ಐಪಾಡ್ ಗಳೆರಡರಲ್ಲೂ ಫೊಟೋ ಸೆರೆ ಹಿಡಿದರು.
" ಓ, ಹಿಂಬಾಗಿಲಿನಿಂದಲೂ ತೂರಿ ಬಂದ ಹಕ್ಕಿ ಇದೇನಾ? " ನಾನೂ ಅಚ್ಚರಿ ಪಟ್ಟೆ.
0 comments:
Post a Comment