" ನೋಡೂ, ಹಾಗಲ ಬಳ್ಳಿ ಪೇರಳೆ ಮರಕ್ಕೆ ಹಬ್ಬಿ ಹೋಗಿದ್ದರಲ್ಲಿ ಈ ಹಾಗಲಕಾಯಿ ಸಿಕ್ಕಿತು "
" ಹೌದಾ, ಎಷ್ಟ್ ಸಿಕ್ತು ?"
" ಒಂದೇ ಕೊಯ್ದಿದ್ದು, ಹೂ, ಕಾಯಿ, ನಿಣೆ ಎಲ್ಲಾ ಇದೆ. ವಾರಕ್ಕೊಂದು ಕೊಯ್ಬಹುದು " ಅಂದರು ಗೌರತ್ತೆ.
" ಅಲ್ಲ, ಈ ಒಂದರಲ್ಲಿ ಏನಡುಗೆ ಆಗ್ತದೆ ?'
" ಮಾಡು ಏನೋ ಒಂದು... ನೀ ಎಕ್ಸ್ಪರ್ಟ್ ಅಲ್ವೇ..."
" ಹಹ... ಈ ಕಹಿಯನ್ನು ನಾವಿಬ್ರೇ ತಿನ್ಬೇಕಷ್ಟೆ..."
ಗೌರತ್ತೆಗೆ ಉಚಿತವಾಗಿ ಲಭಿಸಿದ ಹಾಗಲದಿಂದ ಮದ್ಯಾಹ್ನದೂಟಕ್ಕೆ ಹೀಗೊಂದು ವ್ಯಂಜನ ಸಿದ್ಧವಾಯಿತು. ಇದನ್ನು ಹಾಗಲ ಕೋಸಂಬರಿ ಅಂದರಾಯಿತು.
ಹಾಗಲದ ಒಳಗಿನ ಬೀಜಗಳನ್ನೆಲ್ಲ ತೆಗೆದು ಚಿಕ್ಕದಾಗಿ ಕತ್ತರಿಸಿ, ಒಂದು ಚಮಚ ಉಪ್ಪು ಬೆರೆಸಿ ಇಡಬೇಕು.
ಒಂದು ದೊಡ್ಡ ನೀರುಳ್ಳಿ ಚೂರು ಮಾಡಿ ಇಡಬೇಕು.
ಒಂದು ಕಪ್ ತೆಂಗಿನ ತುರಿ ಇರಲೇ ಬೇಕು.
ಅರ್ಧ ಘಂಟೆ ಬಿಟ್ಟು ಹಾಗಲಕಾಯಿ ಚೂರುಗಳನ್ನು ಅಂಗೈಯಲ್ಲಿ ಚೆನ್ನಾಗಿ ಹಿಂಡಬೇಕು. ಉಪ್ಪು ಬೆರೆಸಿದ ಹಾಗಲದಿಂದ ನೀರು ಇಳಿಯಬೇಕು. ಉಪ್ಪಿನೊಂದಿಗೆ ಕಹಿಯೂ ಹೋಯಿತೆಂದು ತಿಳಿಯಿರಿ. ಈಗ ಅಡುಗೆಗೆ ಸಿದ್ಧವಾದ ಹಾಗಲ ದೊರೆಯಿತು.
ಬಾಣಲೆಗೆ ತುಪ್ಪದ ಪಸೆ ಮಾಡಿಟ್ಟು ಒಲೆಯ ಮೇಲಿಡಿ. ಹಾಗಲ ಕಾಯಿಯನ್ನು ಗರಿ ಗರಿಯಾಗುವಷ್ಟು ಹೊತ್ತು ಒಲೆಯ ಮೇಲಿಟ್ಟಿರಿ. ಇದು ನಿಧಾನಗತಿಯಲ್ಲಿ ಮಾಡಬೇಕಾಗುವಂತಹ ಕೆಲಸ. ಕರಟಿ ಹೋಗಲೂ ಬಾರದು. ಚಿಕ್ಕ ಉರಿಯಲ್ಲಿಟ್ಟು ಆಗಾಗ ಸೌಟಾಡಿಸುತ್ತಿರಿ.
ಊಟಕ್ಕೆ ಎಲ್ಲರೂ ಕುಳಿತರೇ, ಒಂದು ಬಟ್ಟಲಿಗೆ ಗರಿ ಗರಿ ಹಾಗಲ, ನೀರುಳ್ಳಿ, ತೆಂಗಿನ ತುರಿಗಳನ್ನು ಬೆರೆಸಿ, ಎಲ್ಲರ ಊಟದ ತಟ್ಟೆಗೆ ಬಡಿಸಿ...
" ಇನ್ನೂ ಸ್ವಲ್ಪ ಹಾಕು " ಒಕ್ಕೊರಲ ಕೋರಿಕೆ ಬಂದೇ ಬಂತು. ಗೌರತ್ತೆಯ ಮುಸಿನಗು. " ನಿಂಗೂ ಸ್ವಲ್ಪ ತೆಗೆದಿಟ್ಕೋ..."
ಹಾಗಲ ಪಲ್ಯ:
ಹಾಗಲವನ್ನು ಸಿದ್ಧಪಡಿಸಿದ್ದಾಯಿತೇ, ನೀರುಳ್ಳಿ, ಕಾಯಿತುರಿಗಳೂ ಬರಲಿ.
ಬಾಣಲೆಯಲ್ಲಿ ಒಗ್ಗರಣೆ ಸಿಡಿಯಿತೇ, ಬೇವಿನೆಸಳು ಬೀಳಲಿ.
ಹಾಗಲಕಾಯಿ ಹಾಕಿ ಬಾಡಿಸಿಕೊಳ್ಳಿ, ಚಿಕ್ಕ ಉರಿಯಲ್ಲಿ ಬೇಯಿಸಿ. ಉಪ್ಪು ಪುನಃ ಹಾಕದಿರಿ.
ನೀರುಳ್ಳಿ, ಕಾಯಿತುರಿಗಳಿಂದ ಅಲಂಕೃತವಾದ ಈ ಪಲ್ಯಕ್ಕೆ ಬೆಲ್ಲ ಹಾಕಲು ಮರೆಯದಿರಿ.
ಹಾಗಲ ಗೊಜ್ಜು:
ಮೇಲೆ ಹೇಳಿದ ಕ್ರಮದಲ್ಲೇ ಹಾಗಲ ಬೇಯಿಸಿ. ನೀರುಳ್ಳಿ ಹಾಕದೆಯೂ, ಹಾಕಿಯೂ ಮಾಡಬಹುದು.
ಹುಳಿ, ಬೆಲ್ಲಗಳ ದ್ರಾವಣ ಮಾಡಿಟ್ಕೊಂಡಿದೀರಾ, ಎರೆಯಿರಿ. ರುಚಿ ನೋಡಿ ಬೇಕಿದ್ದರೆ ಉಪ್ಪು ಹಾಕಿ.
ಹುಳಿಗೆ ಬದಲು ಟೊಮ್ಯಾಟೋ ಹಾಕಿದರೂ ಆದೀತು.
ಹಾಗಲ ಕಾಯಿ ಸಾಸಮೆ ಅಥವಾ ಸಾಸಿವೆ:
ಉಪ್ಪು ಬೆರೆಸಿ ಕಹಿ ತೆಗೆದ ಹಾಗಲವನ್ನು ಮೊದಲು ಹೇಳಿದ ಕ್ರಮದಲ್ಲೇ ಹುರಿಯಿರಿ. ಗರಿಗರಿಯಾಗಬೇಕೆಂದೇನೋ ಇಲ್ಲ. ಬೆಂದರಾಯಿತು. ಒಂದು ಕಪ್ ಕಾಯಿತುರಿಯನ್ನು ಸಾಸಿವೆ ಹಾಗೂ ಬೆಲ್ಲದೊಂದಿಗೆ ಅರೆಯಿರಿ. ಸಿಹಿ ಮಜ್ಜಿಗೆ ಕೂಡಿಸಿ. ಇದಕ್ಕೆ ಒಗ್ಗರಣೆ ಬೇಡ, ಕುದಿಸುವುದೂ ಬೇಡ.
ಷಡ್ರಸಗಳಲ್ಲಿ ಒಂದಾದ ಕಹಿಯೂ ನಮ್ಮ ಭೂರಿ ಭೋಜನದಲ್ಲಿ ಇರಲೇಬೇಕು. ಬಾಳೆಲೆಯ ಮೇಲೆ ಅದೇನೇ ಭಕ್ಷ್ಯಗಳಿದ್ದರೂ ಹಾಗಲದ ಮೆಣಸ್ಕಾಯಿ ಒಂದು ತುದಿಯಲ್ಲಿ ಬಡಿಸಿರುತ್ತಾರೆ. ಈ ಮೆಣಸ್ಕಾಯಿಯ ಸ್ವಾದವೇ ಬೇರೆ. ಊಟದ ತರುವಾಯ ಅಡುಗೆಯ ಮೇಲೊಂದಿಷ್ಟು ಕಮೆಂಟ್ಸ್ ಇದ್ದೇ ಇರುತ್ತದೆ.
" ಒಂದು ಮೆಣಸ್ಕಾಯಿ ಇತ್ತೂ... ನಾನು ಅದ್ರಲ್ಲೇ ಆಗಾಗ ಬಾಯಿ ಚಪ್ಪರಿಸಿದ್ದು ..."
" ಯಬ್ಬ, ಆ ಮೆಣಸ್ಕಾಯಿಯೋ, ಏನು ಅಡುಗೆಭಟರೋ..."
ಹೀಗೆ ಹೊಗಳಿಕೆ ಹಾಗೂ ತೆಗಳಿಕೆಗಳಿಗೆ ಇಂಬಾಗುವ ಹಾಗಲದ ಮೆಣಸ್ಕಾಯಿಯನ್ನು ನಾವೂ ಮಾಡಿಯೇ ಬಿಡೋಣ. ಒಂದು ಪುಟ್ಟ ಹಾಗಲಕಾಯಿ ಸಾಕು. ಕಹಿರಸವನ್ನು ತೆಗೆಯುವ ಮೊದಲ ಸಿದ್ಧತೆ ಮಾಡಿದ್ರಾ, ಒಂದು ಕಡಿ ತೆಂಗಿನ ತುರಿ ಆಯ್ತೇ, ಬೆಲ್ಲ ಡಬ್ಬದಲ್ಲಿ ಸಾಕಷ್ಟು ಇದೆಯಾ ನೋಡಿಕೊಳ್ಳಿ.
ಮಸಾಲೆಗೆ ಏನೇನಿರಬೇಕು?
3-4 ಒಣಮೆಣಸು
2 ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
3 ಚಮಚ ಎಳ್ಳು
ತುಸು ಎಣ್ಣೆಪಸೆಯಲ್ಲಿ ಹುರಿದಾಯಿತೇ, ತೆಂಗಿನ ತುರಿಯೊಂದಿಗೆ ಅರೆಯಿರಿ. ಮಸಾಲೆ ಅರೆಯುವಾಗ ಉಪ್ಪು, ಹುಳಿ ಹಾಕಿಯೇ ಅರೆದರೆ ಉತ್ತಮ.
ಹಾಗಲ ಬೇಯಿಸಿದ್ರಾ, ಬೆಲ್ಲ ಹಾಕಿದ್ರಾ, ಬೆಲ್ಲ ಕರಗಿತೇ, ಅರೆದ ಮಸಾಲೆ ಮಿಶ್ರಣ ಕೂಡಿಸಿ. ಅವಶ್ಯವಿದ್ದಷ್ಟೇ ನೀರು ಹಾಕಿ, ಸಾರಿನ ಹಾಗೆ ತೆಳ್ಳಗಾಗಬಾರದು, ಕುದಿಸಿ. ಬೇವಿನೆಸಳು ಹಾಕಿ ಒಗ್ಗರಣೆ ಕೊಡಿ.
ನೋಡುತ್ತಿದ್ದ ಹಾಗೇ ಹಾಗಲ ಬಳ್ಳಿ ತನ್ನ ಕೈಲಾದಷ್ಟು ಕಾಯಿಗಳನ್ನು ಕೊಟ್ಟು ಜೀವ ತೊರೆದು ಹೋಯಿತು. ಆದರೇನಂತೆ, ಎಲ್ಲರೂ ಹಾಗಲಪ್ರಿಯರಾಗಿದ್ದಾರಲ್ಲ, ಪೇಟೆಯಿಂದಲೇ ಹಾಗಲ ಬಂದಿತು. ಮನೆಯಂಗಳದಲ್ಲಿ ಸಿಗುತ್ತಿದ್ದ ಹಾಗಲ್ಲ, ನಮ್ಮೆಜಮಾನ್ರು ಒಂದು ಕಿಲೋ ಹಾಗಲಕಾಯಿ ತಂದ್ರು. ಚೀಲ ತುಂಬ ಬಂದ ಹಾಗಲಗಳನ್ನು ನೋಡಿ, " ಇದನ್ನೇನು ಮಾಡಲೀ..." ಅನ್ನುತ್ತಿದ್ದ ಹಾಗೆ ಗೌರತ್ತೆ ಐಡಿಯಾ ಹೇಳ್ಕೊಟ್ರು. " ಈಗ ಮಳೆ ಹೋಯ್ತಲ್ಲ, ಚೆನ್ನಾಗಿ ಬಿಸಿಲೂ ಇದೆ, ಬಾಳ್ಕ ಮಾಡಿ ಇಟ್ಕೊಳ್ಳೋಣ "
ಬಾಳ್ಕ ಅಂದ್ರೇನು ?
ಹಚ್ಚಿಟ್ಟ ತರಕಾರಿಗಳಿಗೆ ಉಪ್ಪು ಬೆರೆಸಿ, ಬಿಸಿಲಿನಲ್ಲಿ ಒಣಗಿಸಿಟ್ಟು, ಡಬ್ಬದಲ್ಲಿ ತುಂಬಿಸಿಟ್ಟು ಬೇಕಿದ್ದಾಗ ಅಡುಗೆಯಲ್ಲಿ ಉಪಯೋಗಿಸಲು ಸಿದ್ಧವಾಗಿ ದೊರೆಯುವ ಕಚ್ಛಾವಸ್ತು ಬಾಳ್ಕ. ಎಣ್ಣೆಯಲ್ಲಿ ಕರಿದೂ ತಿನ್ನಬಹುದು, ನೀರಿನಲ್ಲಿ ಹಾಕಿಟ್ಟು ತುಸು ಮೆತ್ತಗಾದ ಕೂಡಲೇ ಅಡುಗೆಗೆ ಸಿದ್ಧ ತರಕಾರಿಯೂ ದೊರೆಯಿತು. ಯಾವುದೇ ತರಕಾರಿಯನ್ನು ಹೀಗೆ ಒಣಗಿಸಿಟ್ಟುಕೊಳ್ಳಲ ಸಾಧ್ಯವಿದೆ.
ಹಾಗಲಕಾಯಿಗೆ ಕೇವಲ ಉಪ್ಪು ಬೆರೆಸಿದರೆ ಸಾಲದು, ಹೋಳುಗಳು ಮುಳುಗವಷ್ಟು ಮಜ್ಜಿಗೆ ಎರೆದು ಎಂಟು ಗಂಟೆ ಇರಲಿ.
ಮಜ್ಜಿಗೆ, ಉಪ್ಪು ಮಿಶ್ರಿತ ಹಾಗಲದ ಕಹಿಯನ್ನೆಲ್ಲ ಅಂಗೈಯಲ್ಲಿ ಚೆನ್ನಾಗಿ ಹಿಂಡಿ ತೆಗೆಯಿರಿ.
ಅಗಲವಾದ ತಟ್ಟೆಯಲ್ಲಿ ಹರಡಿ ಬಿಸಿಲಿನಲ್ಲಿ ಒಣಗಿಸಿ.
ಒಣಗಿದ ನಂತರ ಊಟದ ಹೊತ್ತಿಗೆ ಎಣ್ಣೆಯಲ್ಲಿ ಕರಿದು ತಿನ್ನಿರಿ.
ಹಾಗಲದ ಬಳ್ಳಿಯ ಎಳೆಯ ಕುಡಿಗಳಿಂದ ತಂಬುಳಿ ಮಾಡಲೂ ಸಾಧ್ಯವಿದೆ. ಕುಡಿಗಳನ್ನು ತುಪ್ಪದಲ್ಲಿ ಬಾಡಿಸಿ, ತುಸು ಜೀರಿಗೆ, ತೆಂಗಿನತುರಿಯೊಂದಿಗೆ ಅರೆದು ಮಜ್ಜಿಗೆ ಕೂಡಿಸಿ. ರುಚಿಗೆ ಉಪ್ಪು, ಸಿಹಿಗೆ ಬೆಲ್ಲವೂ ಇರಲಿ. ಹಾಗಲ ಬಳ್ಳಿಯಲ್ಲಿ ಮೊದಲು ಗಂಡು ಹೂಗಳು ಅರಳುತ್ತವೆ, ಈ ನಿರರ್ಥಕ ಹೂಗಳನ್ನೂ ತಂಬ್ಳಿ, ಸಲಾಡ್ ಗಳಿಗೆ ಬಳಸಬಹುದಾಗಿದೆ. ಅಂದ ಹಾಗೆ ಈ ಬಳ್ಳಿ ಸಸ್ಯ ಮೆಕ್ಸಿಕೋ ಇಲ್ಲವೇ ಆಫ್ರಿಕಾದಿಂದ ಭಾರತಕ್ಕೆ ಬಂದದ್ದಲ್ಲ, ನಮ್ಮ ದೇಶವೇ ಇದರ ತವರು ನೆಲೆ. Momordica charantia ಎಂದು ಸಸ್ಯಶಾಸ್ತ್ರಜ್ಞರು ಇದನ್ನು ಕರೆದಿದ್ದಾರೆ.
ಅತಿ ಕಡಿಮೆ ಕೆಲೊರಿ ಪ್ರಮಾಣ ಹಾಗಲಕಾಯಿಯಲ್ಲಿರುವುದಾದರೂ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ತರಕಾರಿ. ಬಿ ಜೀವಸತ್ವ, ಖನಿಜಾಂಶಗಳು ಹೇರಳವಾಗಿವೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ನಿಯಮಿತವಾಗಿ ಹಾಗಲದ ರಸವನ್ನು ಜೇನು ಬೆರೆಸಿ ಕುಡಿಯಿರಿ.
ಹಾಗಲ ಸೊಪ್ಪಿನ ರಸ ಹಾಗೂ ನಿಂಬೆರಸ ಕೂಡಿಸಿ ಕುಡಿಯಿರಿ, ಚರ್ಮದ ತುರಿಕೆ, ಕಜ್ಜಿಗಳನ್ನು ತೊಲಗಿಸಿ.
ಮಧುಮೇಹಿಗಳಿಗೆ ಹಾಗಲದ ಕಹಿ ತಿಂದರೆ ಒಳ್ಳೆಯದು ಎಂದು ಸಾಮಾನ್ಯ ತಿಳುವಳಿಕೆಯಾಗಿದೆ. ರಕ್ತ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣ ಇಳಿಕೆಯಾಗುವುದೇನೋ ಹೌದೆಂದು ಪ್ರಯೋಗಗಳು ಧೃಢ ಪಡಿಸಿವೆ. ನೆನಪಿರಲಿ, ಇದು ಇನ್ಸುಲಿನ್ ಔಷಧಿಗೆ ಬದಲಿ ಪರಿಹಾರವಲ್ಲ. ಖಾಲಿ ಹೊಟ್ಟೆಯಲ್ಲಿ ತಿನ್ನದಿರಿ, ಒಳ್ಳೆಯದೆಂದು ಅತಿ ಸೇವನೆ ತರವಲ್ಲ. ಬಸುರಿ, ಬಾಣಂತಿಯರು ಹಾಗಲ ಖಾದ್ಯಗಳನ್ನು ಸೇವಿಸದಿರುವುದು ಉತ್ತಮ.
ಟಿಪ್ಪಣಿ: 21 /12 /2016, ಬರಹ ಮುಂದುವರಿದಿದೆ.
ಹಾಗಲಕಾಯಿ ಮಜ್ಜಿಗೆ ಹುಳಿ
ಈ ದಿನ ಯಾಕೋ ಏನೋ ಚೆನ್ನಪ್ಪ ಕೆಲಸಕ್ಕೆ ಬಂದಿಲ್ಲ, ಮಧ್ಯಾಹ್ನದೂಟಕ್ಕೆ ನಾವಿಬ್ಬರೇ, ಅತಿ ಸರಳವಾದ ಒಂದು ಮೇಲಾರ ಹಾಗೂ ಟೊಮ್ಯಾಟೋ ಸಾರು ಸಾಕು.
" ಮೇಲಾರ ಅಂದ್ರೇನೂ..."
" ಮಜ್ಜಿಗೆಹುಳಿ ಅಂತೀವಲ್ಲ, ಅದೇ ನಮ್ಮೂರಿನ ಆಡುಭಾಷೆಯಲ್ಲಿ ಮೇಲಾರ. ಬಹುಶಃ ಮೇಲೋಗರ ಎಂಬ ಪದವೇ ಮೇಲಾರದ ಹುಟ್ಟು.
ಅಡುಗೆಮನೆಯ ತರಕಾರಿ ಸಂಪತ್ತು ಏನಿದೆ? ಹಾಗಲಕಾಯಿ ಇದ್ದಿತ್ತು. ಆದೀತು, ಹೇಗೂ ಚೆನ್ನಪ್ಪನಿಲ್ಲ, ಖಾರದ ಕೂಟು ಆಗ್ಬೇಕಿಲ್ಲ.
ಒಂದು ಹಾಗಲಕಾಯಿ ಸಾಕು. ವೃತ್ತಾಕಾರದಲ್ಲಿ ಹಾಗಲದ ಹೋಳುಗಳನ್ನು ಮಾಡಿಟ್ಟಿರಿ. ಬೀಜಗಳನ್ನು ತೆಗೆಯುತ್ತಾ ಕತ್ತರಿಸಿಕೊಳ್ಳಿ.
ಒಂದು ಲೋಟ ನೀರು ಹಾಗೂ ಉಪ್ಪು ಹಾಕಿಟ್ಟು ಹಾಗಲ ಹೋಳುಗಳನ್ನು ಬೇಯಿಸಿ, ಹಾಗಲ ಬೇಗನೆ ಬೇಯುವ ವಸ್ತು, ಕುಕರ್ ಬೇಡ. ಬೆಂದಿತೇ, ನೀರು ಬಸಿಯಿರಿ, ಹಾಗಲದ ಕಹಿ ನೀರು ಹೋಯಿತೆಂದು ತಿಳಿಯಿರಿ.
ಒಂದು ಕಡಿ ತೆಂಗಿನ ತುರಿ, ಹಸಿ ತೆಂಗಿನಕಾಯಿ ಉತ್ತಮ.
2 ಹಸಿಮೆಣಸು.
ಒಂದು ಲೋಟ ದಪ್ಪ ಮಜ್ಜಿಗೆ.
ಮಜ್ಜಿಗೆಯೊಂದಿಗೆ ತೆಂಗಿನಕಾಯಿ, ಹಸಿಮೆಣಸು ಅರೆಯಿರಿ. ಮಜ್ಜಿಗೆಹುಳಿಯೆಂಬ ವ್ಯಂಜನ ಸಾರಿನಂತೆ ತೆಳ್ಳಗಾಗಕೂಡದು. ಆದುದರಿಂದಲೇ ತೆಂಗಿನಕಾಯಿ ಅರೆಯುವಾಗ ನೀರಿನ ಬದಲು ಮಜ್ಜಿಗೆ ಎರೆದರೆ ಉತ್ತಮ. ಈಗ ಯಂತ್ರಗಳ ಯುಗ ಅಲ್ವೇ, ಹಾಗೇ ಸುಮ್ಮನೆ ತೆಂಗಿನಕಾಯಿ ಅರೆದರೆ ನಮ್ಮ ಮಿಕ್ಸಿ ಬೆಣ್ಣೆಯಂತೆ ಅರೆದು ಕೊಡುವುದೂ ಇಲ್ಲ.
ಅರೆದ ಅರಪ್ಪನ್ನು ಹಾಗಲದ ಹೋಳುಗಳಿಗೆ ಕೂಡಿರಿ.
ರುಚಿಗೆ ಉಪ್ಪು, ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿರಿ.
ಸೌಟಿನಲ್ಲಿ ಕಲಕಿ, ನೀರು ಸಾಲದಿದ್ದರೆ ಅರ್ಧ ಲೋಟ ನೀರು ಎರೆಯಿರಿ.
ಮಂದ ಉರಿಯಲ್ಲಿ ಕುದಿಸಿ, ಹಾಲು ಕುದಿಸುವಾಗ ಹೇಗೆ ಕೆನೆ ಮೇಲೆದ್ದು ಬರುವುದೋ, ಅದೇ ಥರ ತೆಂಗು, ಮಜ್ಜಿಗೆಗಳ ಮಿಶ್ರಣ ಮೇಲೆದ್ದು ಬರುವಾಗ ಉರಿ ನಂದಿಸಿ.
ಕರಿಬೇವು, ಒಣಮೆಣಸು, ಸಾಸಿವೆ ಕೂಡಿದ ಒಗ್ಗರಣೆ ಬೀಳುವಲ್ಲಿಗೆ ಹಾಗಲಕಾಯಿ ಮಜ್ಜಿಗೆ ಹುಳಿ ಸಿದ್ಧವಾಗಿದೆ.
ಸೂಚನೆ: ಸೌತೆ, ತೊಂಡೆ, ಕುಂಬಳದಂತಹ ತರಕಾರಿಗಳು ಮಜ್ಜಿಗೆಹುಳಿಯೆಂಬ ಪದಾರ್ಥ ತಯಾರಿಯಲ್ಲಿ ಹೆಸರು ಪಡೆದವುಗಳು.
0 comments:
Post a Comment