Friday, 31 October 2014
ಕನ್ನಡಕ್ಕೆ ಕೊಡುಗೆ - iPhone 6
" ಅಮ್ಮಾ, ಐಫೋನ್6 ಬೇಗ ಬರುತ್ತೇ..."
" ಬರೂದೆಲ್ಲ ಬರಲೀ, ಐಪಾಡ್ ಇದೆಯಲ್ಲ, ಅದೇ ಸಾಕೂ ನಂಗೇ..."
" ಅಯ್ಯೋ, ಅದು ಹಳೇದಾಯ್ತು, ಈಗ ನೀನು ಏನ್ಮಾಡ್ಬೇಕೂ ಗೊತ್ತಾ.. "
" ಏನೂ "
" ಐಫೋನ್6 ಬಂದ ಕೊಡಲೇ ಅದನ್ನೇ ಉಪಯೋಗಿಸು "
" ಆಯ್ತಪ್ಪಾ ಆಯ್ತು, ನನ್ನ ಕನ್ನಡ ಅದ್ರಲ್ಲಿ ಹೇಗೋ ಏನು ಕಥೆಯೋ..."
" ಎಲ್ಲ ಆಗುತ್ತೇ, ಇದು ಮಾಮೂಲಿ ಫೋನ್ ಗಿಂತ ದೊಡ್ಡದು ತಿಳೀತಾ... ನಿನ್ನ ಬ್ಲಾಗಿಂಗ್ ಇನ್ನೂ ಚೆನ್ನಾಗಿ ಮಾಡ್ತೀಯ "
" ಹೌದ! ನೋಡುವಾ ಮೊದಲು ಬರಲೀ "
ನಮ್ಮ ಮೆಸೆಂಜರ್ ಸಂಭಾಷಣೆ ನಡೆದು ವಾರವಾಗುವಷ್ಟರಲ್ಲಿ ಐಫೋನ್6 ಮನೆಗೆ ಬಂದೂ ಆಯಿತು.
ಏನೇ ಬರೆಯಬೇಕಿದ್ದರೂ ಸುಂದರವಾದ ಚಿತ್ರಗಳೇ ನನ್ನ ಸ್ಪೂರ್ತಿ. ನಾಲ್ಕಾರು ಹೂಗಳ ಚಿತ್ರಗಳನ್ನು ಕ್ಲಿಕ್ಕಿಸಿ ಅದರ ಸೊಗಸನ್ನು ಸವಿಯುತ್ತಾ ನನಗೆ ಬೇಕಾಗಿದ್ದ ಫೊಟೋ ಎಡಿಟಿಂಗ್ apps ಗಳನ್ನೂ install ಮಾಡಿಟ್ಟು, ಒಂದೆರಡು ಫೊಟೋಗಳನ್ನು ಫೇಸ್ ಬುಕ್ಕಲ್ಲಿ ತೋರಿಸಿ ಸಂಭ್ರಮಿಸಿದ್ದೂ ಆಯಿತು.
ಬೆಳಗಾಗುತ್ಲೂ ನಮ್ಮಜಮಾನ್ರು " ನೋಡೇ ನಿನ್ ಕನ್ನಡ, ಎಲ್ಲಿ ಬೇಕಾದ್ರೂ ಬರೆಯಬಹುದು " ಅನ್ನೋದೇ. ನನಗೋ ಮುಂಜಾನೆಯ ಮನೆಗೆಲಸದ ಒತ್ತಡ. ಒಂದು ಹಂತದ ವಿರಾಮದ ವೇಳೆಯಲ್ಲಿ ಐಫೋನ್ ಹಿಡಿದು ಪರಿಶೀಲಿಸ ಹೊರಟರೆ ......
ಅರೆ ಇದೇನಚ್ಚರಿ
ಕೇಳೇ ನೀಳವೇಣೀ
ಕುಣಿದು ಕುಣಿದು ಬಾರೆ
ನಲಿದೂ ನಲಿದು ಬಾರೆ
ಬಂತೂ ಕನ್ನಡ ಅಕ್ಷರಮಾಲೆ
ಅನ್ನುವಂದದಿ
ಕಮೆಂಟು ಬರೆದೆ
ಕಾಪೀ ಪೇಸ್ಟೂ ಕಿರಿಕಿರಿ ಇಲ್ಲದೆ.
ಫೇಸ್ ಬುಕ್ ಕಮೆಂಟು ಛಾಪಿಸಲು ಕನ್ನಡ ಕೀ ಬೋರ್ಡ್ ಎದುರು ಬಂದು ಕುಣಿಯಿತು.
ಟ್ವೀಟ್ ಹಕ್ಕಿ ಕನ್ನಡದ ಗರಿ ಬಿಡಿಸಿ ಬರೆಯಿತು.
ನೋಟ್ ಪ್ಯಾಡ್ ಬಿಡಿಸಿದೆನಾ, ಇಲ್ಲೂ ಕನ್ನಡ ಡಿಂಢಿಮ.
ಪೊಟೋ ಎಡಿಟಿಂಗ್ ಕಡೆ ತಿರುಗಿದೆನಾ, " ಬಂದೇ ಅಕ್ಕಾ, ಕನ್ನಡದ ಕುಂಚ ಹಿಡಿದು ನಿಂದೇ " ಅಂದಿತು ಕನ್ನಡ ಕೀಲಿ ಮಣೆ.
ಈ ಕೀ ಬೋರ್ಡ್ ನನಗೆ ಹೊಸತಲ್ಲ, ಹಿಂದೆಯೂ ಬಳಸುತ್ತಾ ಇದ್ದ ಐಪಾಡ್ ಕೀ ಬೋರ್ಡ್ ಇದೇ ಆಗಿತ್ತು. ಅದನ್ನು install ಅಂದರೆ ಸ್ಥಾಪಿಸಿಕೊಳ್ಳಲು ಶುಲ್ಕ ಕಟ್ಟಬೇಕಾಗಿತ್ತು. ಇಲ್ಲಿ ಆ ತೊಂದರೆಯಿಲ್ಲ. ಇದು ಸಂಪೂರ್ಣ ಉಚಿತ ಕೊಡುಗೆ. ಇದೊಂದೇ ಕೀ ಬೋರ್ಡ್ ಮಾತ್ರವಲ್ಲ, ಬೇರೆ ಬೇರೆ ವಿನ್ಯಾಸದ ಕನ್ನಡ ಕೀಲಿಮಣೆಗಳು ಸಂಪೂರ್ಣ ಉಚಿತವಾಗಿ apps store ನಲ್ಲಿ ಲಭ್ಯವಿವೆ. ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ... ಎಂದುಲಿಯಿತು ಮನ. ಇದುವರೆಗೆ ಐಪಾಡ್ ಗೆ ಅಲಭ್ಯವಾಗಿದ್ದ ಕನ್ನಡಕ್ಕೆ ಸಂಬಂಧಿಸಿದ ಅದೆಷ್ಟೋ apps ಇಲ್ಲಿ ಉಚಿತವಾಗಿ ಲಭ್ಯವಿವೆ. ಕನ್ನಡದ ಪುಸ್ತಕಗಳನ್ನೂ ಓದಬಹುದು. ಅವಶ್ಯವೆನಿಸಿದಲ್ಲಿ ಇಂಗ್ಲೀಷ್ ಕೂಡಾ ಛಾಪಿಸಿಕೊಳ್ಳಲೂ ಅಡ್ಡಿಯಿಲ್ಲ. ಕನ್ನಡ ಮಾತ್ರವಲ್ಲ ಹತ್ತುಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಈ ಕೀ ಬೋರ್ಡ್.
ಆಸಕ್ತರಿಗೆ ಕನ್ನಡ ಬರಹದ apps ಹೀಗೆ ಪಡೆಯಬಹುದು
http://appshopper.com/utilities/kannada-keyboard
Posted via DraftCraft app
Subscribe to:
Post Comments (Atom)
0 comments:
Post a Comment