Saturday, 25 October 2014
ನಮ್ಮೂರ ಕೋಡುಬಳೆ
ಮಗಳು ಪ್ರೈಮರಿ ಶಾಲೆಯಿಂದ ಹೈಸ್ಕೂಲಿಗೆ ಹೋಗಲು ಅಣಿಯಾಗಿದ್ದಳು. ಅವಳಣ್ಣನ ಹುಕುಂ ಪ್ರಕಾರ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿಗೇ ಸೇರಿಯಾಗಿತ್ತು, ಅದೂ ವಿಟ್ಲದಲ್ಲಿತ್ತು. ಅವಳಣ್ಣ ಕನ್ನಡ ಶಾಲೆಯಲ್ಲಿ ಓದಿ, ಕಾಲೇಜಿಗೆ ಸೇರಿದ ತಕ್ಷಣ ಹೇಳಿದ್ದು, " ಇಂಗ್ಲೀಷಿನಲ್ಲಿ ಹೇಳುವ ಪಾಠಗಳು ಅರ್ಥವಾಗುವುದಿಲ್ಲ ". ನಾವೂ ಕನ್ನಡವನ್ನೇ ಕಲಿತು ಕಾಲೇಜಿಗೆ ಹೋದವರಲ್ವೇ, ಸಮಸ್ಯೆ ಅರ್ಥ ಮಾಡಿಕೊಂಡು ಪಾಠಪ್ರವಚನಗಳನ್ನು ಹೇಳಿಕೊಡಲು ನಾನೇ ಸಿದ್ಧಳಾಗಬೇಕಾಯಿತು. ಯಾವಾಗ ಅಮ್ಮನೇ ಪಾಠ ಹೇಳಿಕೊಡಲು ಬಂದಳೋ, ಅವನ ಹಿಂಜರಿಕೆ ತೊಲಗಿತು.
ತನಗಾದ ಕಷ್ಟ ತಂಗಿಗಾಗಬಾರದು ಎಂದೇ ಅವಳಣ್ಣ ಈ ಥರ ಅಪ್ಪಣೆ ಕೊಡಿಸಿದ್ದು. ಅವಳೇನೋ ಹೈಸ್ಕೂಲ್ ಸೇರಿದಳು. ದಿನ ಬೆಳಗಾದರೆ ಏಳು ಗಂಟೆಯ ಬಸ್ ಹಿಡಿದು ವಿಟ್ಲದ ಶಾಲೆ ತಲಪಬೇಕಿತ್ತು. ಇದುವರೆಗೆ ಹೋಗುತ್ತಿದ್ದ ಮುಳಿಗದ್ದೆಯ ಹೆದ್ದಾರಿ ಶಾಲೆ ಮನೆಯಿಂದ ಕೂಗಳತೆ ದೂರದಲ್ಲಿದ್ದಿತು, ಸಾವಕಾಶದಿಂದ ಒಂಭತ್ತು ಗಂಟೆಯ ನಂತರ ಮನೆ ಬಿಟ್ಟರೂ ಸಾಕಾಗುತ್ತಿತ್ತು.
ಏಳು ಗಂಟೆಗೆ ಹೊರಡಬೇಕಾಗಿದ್ದರೆ ನಾನು ಐದು ಗಂಟೆಗೂ ಮುಂಚಿತವಾಗಿ ಎದ್ದು ತಿಂಡಿ ತಯಾರಿ, ಟಿಫಿನ್ ಬಾಕ್ಸ್, ಸ್ನಾನದ ವ್ಯವಸ್ಥೆ, ಯೂನಿಫಾರ್ಮ್, ಓರಣವಾಗಿ ತಲೆ ಕೂದಲಿನ ಶೃಂಗಾರ.... ಒಂದೇ ಎರಡೇ ? ಈ ಮಾದರಿಯ ಪಡಿಪಾಟಲು ಎಲ್ಲರ ಮನೇಲೂ ಇದ್ದಿದ್ದೇ ಅನ್ನಿ, ಆಯ್ತು ಅಂತಾ ಉಸ್ಸೆಂದು ಕುಳಿತು ಗಂಟೆ ನೋಡಿದ್ರೆ ಇನ್ನೂ ಆರೂ ಮುಕ್ಕಾಲು. ಏನಾಯ್ತೀಗ, ಒಂದು ಹಂತದ ಮನೆಕೆಲಸವೆಲ್ಲ ಇವಳನ್ನು ಸ್ಕೂಲಿಗೆ ಕಳಿಸೋ ಹೊತ್ತಿಗೆ ಮುಕ್ತಾಯ. ಟೀವಿ ನೋಡಲಡ್ಡಿಯಿಲ್ಲ, ಮಗಳು ತಮಿಳುಪ್ರಿಯೆ. ಕಲೈನಾರ್ ಚಾನಲ್ ಏನನ್ನೋ ಬೊಬ್ಬಿರಿಯುತ್ತಿತ್ತು. ನಾನೂ ವಾಹಿನಿ ಬದಲಾಯಿಸದೆ ಹಾಗೇ ಕೂತಿದ್ದೆನಾ...
" ವಣಕ್ಕಂ " ಅನ್ನುತ್ತಾ ಒಬ್ಬ ಮಧ್ಯವಯಸ್ಕ ಮಹಿಳೆ ಬಂದಳು. " ಮಂಗಳ ಉಲಗಂ.... ಇದು ಮಂಗಳ ಉಲಗಂ.... " ಎಂದು ರಾಗ ಪ್ರಾರಂಭವಾಯಿತೇ, ಏನೋ ಕುತೂಹಲ, ಅಡುಗೆ ಮನೆಯೂ ಎದುರಾಯಿತು. ಅಡುಗೆ ಕಾರ್ಯಕ್ರಮ ನೋಡದಿದ್ದರೆ ಹೇಗೆ ? ಅಡುಗೆ ಮಾಡಲು ತಲೆ ಹಣ್ಣಾದ ಇನ್ನೊಬ್ಬ ಮಹಿಳೆ ಬಂದು ನಿಂತರು. ಆಕೆ ತಮಿಳಿನಲ್ಲೇ ವಾಗ್ದಾಳಿ ಮುಂದುವರಿಸಿದರೂ ನಮ್ಮ ದಕ್ಷಿಣ ಕನ್ನಡಿತಿ ಈಕೆ ಎಂದೇ ಮನ ತೀರ್ಪು ಕೊಟ್ಟಿತು.
" ಕೋಡುಬಳೆಯನ್ನು ಮಾಡುವ ವಿಧಾನ ತೋರಿಸಲಿದ್ದೇನೆ " ಅನ್ನುತ್ತಾ, " ಕೋಡುಬಳೆ ಶಬ್ದ ಮೂಲತಃ ಕನ್ನಡದ್ದು ಹಾಗೂ ಇದು ಕರ್ನಾಟಕದ ತಿಂಡಿ " ಅಂದು ಉದ್ದವಾಗಿ ಬತ್ತಿಯಂತೆ ಹೊಸೆದ ಹಿಟ್ಟಿನ ಎರಡು ತುದಿಗಳನ್ನು ಜೋಡಿಸಿ ಬಳೆಯ ಆಕಾರ ನೀಡುವಲ್ಲಿಗೆ " ಇದು ಕೋಡುಬಳೆ " ಅಂದರು.
ಓ, ಕೋಡುಬಳೆಯ ವ್ಯುತ್ಪತ್ತಿ ತಿಳಿದಂಗಾಯ್ತು. ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗ ನಾವೂ ಅನ್ನುವುದಿದೆ, " ಆ ಕೋಡಿಯಿಂದ ಈ ಕೋಡಿವರೆಗೆ ಕಾಮನಬಿಲ್ಲು ಹೊಳೆಯುತ್ತಿತ್ತು ". ನರೇಂದ್ರ ಮೋದಿ ನಮ್ಮೂರಿಗೆ ಬಂದ್ರು ಅಂತಿಟ್ಕೊಳ್ಳಿ, ಇತರರೊಂದಿಗೆ ಈ ಸುದ್ದಿ ಹಂಚಿಕೊಳ್ಳುವಾಗ " ರಸ್ತೆಯಲ್ಲಿ ಏನು ಜನಾ, ಆ ಕೋಡಿಂದ ಈ ಕೋಡಿವರೆಗೆ ವಾಹನಗಳ ಸಾಲು ಸಾಲು ". ಈಗೀಗ ಹಳೇ ಧಾಟಿಯಲ್ಲಿ ಕನ್ನಡ ಮಾತು ಕೇಳುವುದೇ ದುರ್ಲಭ, ಈಗಿನ ಮಕ್ಕಳಂತೂ ಭಾಷೆಯ ಹಂಗಿಲ್ಲದೆ ವ್ಯವಹರಿಸುವವರು.
ಆಕೆ ಕೇವಲ ಐದು ನಿಮಿಷದಲ್ಲಿ ಕೋಡುಬಳೆ ಮಾಡಿಟ್ಟು ಹೋದರು. ನನಗೂ ಪ್ರತಿದಿನದ ವೀಕ್ಷಣೆಗೆ ಪುಟ್ಟ ಕಾರ್ಯಕ್ರಮವೂ ಸಿಕ್ಕಿತು. ಆಗ ನಾನೇನೂ ಇಂಟರ್ನೆಟ್ ಹವ್ಯಾಸಿಯಾಗಿರಲಿಲ್ಲ. ಕಂಪ್ಯೂಟರ್ ಇದ್ದ ಕಡೆ ತಲೆ ಹಾಕ್ತಾನೇ ಇರಲಿಲ್ಲ. ಮಕ್ಕಳು ದಿನವಿಡೀ ವೀಡಿಯೋ ಗೇಮ್ಸ್ ಗಳಲ್ಲೇ ಮಗ್ನರಾಗಿರುತ್ತಿದುದರಿಂದ ಇದೂ ಒಂದು ಮಕ್ಕಳಾಟಿಕೆಯ ಸಾಧನ ಎಂದೇ ನನ್ನ ತೀರ್ಮಾನವಾಗಿತ್ತು.
ಈಗ ನಾವೂ ಸಂಪ್ರದಾಯಬದ್ಧವಾದ ಕೋಡುಬಳೆ ತಯಾರಿಸೋಣ.
ಅಕ್ಕಿ ಹುಡಿ 3 ಕಪ್.
ಹಸಿ ತೆಂಗಿನ ತುರಿ ಒಂದು ಕಪ್, ಒಣಕಲು ಕೊಬ್ಬರಿ ಆಗದು.
ತುಸು ಜೀರಿಗೆ, ಸುವಾಸನೆಗೆ ತಕ್ಕಷ್ಟು.
2-3 ಹಸಿಮೆಣಸು, ಗಾಂಧಾರಿ ಮೆಣಸು ಕೂಡಾ ಆದೀತು.
ರುಚಿಗೆ ಉಪ್ಪು.
ಕರಿಯಲು ತೆಂಗಿನೆಣ್ಣೆ ಯಾ ಅಡುಗೆ ಎಣ್ಣೆ, ತೆಂಗಿನೆಣ್ಣೆ ಅತ್ಯುತ್ತಮ.
ಇನ್ನೇನು ಮಾಡಬೇಕು ?
ತೆಂಗಿನತುರಿ, ಜೀರಿಗೆ, ಮೆಣಸು, ಉಪ್ಪು ಇಷ್ಟನ್ನೂ ನೀರು ಹಾಕದೆ ಅರೆಯಿರಿ, ಅರೆದ ಅರಪ್ಪನ್ನು ಅಕ್ಕಿಹುಡಿಯೊಂದಿಗೆ ಕಲಸಿರಿ. ಅವಶ್ಯವಿದ್ದಷ್ಟೇ ನೀರು ಕೂಡಿಸಿ ಚಪಾತಿ ಹಿಟ್ಟಿನ ಥರ ಮಾಡಿಟ್ಟು ಅರ್ಧ ಘಂಟೆ ಮುಚ್ಚಿಡಿ.
ನೆಲ್ಲಿ ಗಾತ್ರದ ಹಿಟ್ಟನ್ನು ಅಂಗೈಯಲ್ಲಿ ತೆಗೆದು ಬತ್ತಿಯಂತೆ ಹೊಸೆಯಿರಿ. ಅಂಗೈಯಿಂದ ತುಂಡಾಗಿ ಬೀಳದಿದ್ದಲ್ಲಿ ಕಲಸಿದ ಪ್ರಮಾಣ ಸರಿಯಾಗಿದೆ ಎಂದೇ ತಿಳಿಯಿರಿ. ತುಂಡಾಗುತ್ತಿದೆಯಾದಲ್ಲಿ ಸ್ವಲ್ಪ ಅಕ್ಕಿಹುಡಿ ಸೇರಿಸಿ ಪುನಃ ಕಲಸಿ, ಗೋಧಿಹುಡಿ ಒಂದೆರಡು ಚಮಚ ಸೇರಿಸಿದರೂ ಆದೀತು.
ಉರುಟಾಗಿ ಬಳೆಗಳಂತೆ ಜೋಡಿಸಿ ಇಟ್ಕೊಂಡಿರಾ, ಈಗ ಬಾಣಲೆ ಒಲೆಗೇರಿಸಿ.
ಎಣ್ಣೆ ಬಿಸಿಯಾಯಿತೇ, ಮಾಡಿಟ್ಟ ಕೋಡುಬಳೆಗಳು ಎಣ್ಣೆಗಿಳಿಯಲಿ.
ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ, ಹೊಂಬಣ್ಣ ಬಂದಾಗ ತೆಗೆಯಿರಿ.
ಬಿಸಿಯಾರಿತೇ, ತಟ್ಟೆಯಲ್ಲಿ ಹಾಕಿಟ್ಟು ಬಿಸಿ ಚಹಾದೊಂದಿಗೆ ತಿನ್ನಿ.
ಉಳಿದುದನ್ನು ಜಾಡಿಯಲ್ಲಿ ತುಂಬಿಸಿ, ನಾಳೆ ತಿನ್ನಬಹುದು.
ಸಾಧ್ಯವಿದ್ದರೆ ವಾರಕ್ಕಾಗುವಷ್ಟು ಮಾಡಿಟ್ಕೊಳ್ಳಿ, ಕೆಡುವುದಿಲ್ಲ.
Posted via DraftCraft app
Subscribe to:
Post Comments (Atom)
0 comments:
Post a Comment