Pages

Ads 468x60px

Saturday 21 February 2015

ಅಲಂಕಾರಿಕ ಹೂಬಳ್ಳಿ, ಕರಿಕಣ್ಣಿಯಿವಳು...











ತೇವಾಂಶ ಹಾಗೂ ಹೊಯಿಗೆ ಮಿಶ್ರಿತ ಮಣ್ಣು ಈ ಬಳ್ಳಿ ಸಸ್ಯಕ್ಕೆ ಅವಶ್ಯಕ, ಆಗ್ಗಿದಾಂಗ್ಗೆ ಕತ್ತರಿಯಾಡಿಸುತ್ತಿದ್ದಲ್ಲಿ ಹೆಚ್ಚು ಕವಲುಗಳು
ಬಂದು ಹೂಗಳೂ ಧಾರಾಳವಾಗಿ ತುಂಬಿ ಬರುವುದು. ಆಫ್ರಿಕಾ ಮೂಲದ ಸಸ್ಯ, ಕಿತ್ತಳೆ ಬಣ್ಣದ ಹೂ ಎಸಳುಗಳು, ನಡುವೆ ಕಪ್ಪು ತಿಲಕದಂತಹ ವೃತ್ತದಿಂದ ಹೂ ಆಕರ್ಷಕ. ಎಲೆಗಳ ವಿನ್ಯಾಸವೂ ಸೂಗಸು. ಮಲಯಾಳಂನಲ್ಲಿ ಕರಿಕಣ್ಣಿ ಎಂದು ಹೆಸರು ಬಂದಿದ್ದರೆ ಕನ್ನಡಿಗರು ನಾಗನಕಣ್ಣು ಅಂದಿದ್ದಾರೆ. ವೈಜ್ಞಾನಿಕ ನಾಮಧೇಯ Thunbergia alata ಎಂದಾಗಿರುತ್ತದೆ. ಈ
ಹೂವಿನಲ್ಲೂ ಬಣ್ಣ ವೈವಿಧ್ಯಗಳಿವೆ. ಕಿತ್ತಳೆ ಬಣ್ಣ ಮಾತ್ರವಲ್ಲ ಬಿಳಿ, ಹಳದಿ ಹಾಗೂ ನಸುವರ್ಣಗಳಲ್ಲಿ ಈ ಹೂ ಲಭ್ಯ. ಈಗ
ಸಸ್ಯವಿಜ್ಞಾನವು ಎಂತಹ ಬಣ್ಣದ ಹೂವನ್ನು ಬೇಕಾದರೂ ಸೃಷ್ಟಿಸುತ್ತದೆ, ಇದೇನೂ ವಿಚಿತ್ರವಲ್ಲ ಬಿಡಿ. ಅದೂ ಅಲ್ಲದೆ ಹೂಗಳಲ್ಲಿ ಬಣ್ಣ ವೈವಿಧ್ಯ ತರಲು ಅಂದರೆ ಫೋಟೋ ಇಮೇಜ್ ಗಳಲ್ಲಿ ಹೊಸ ಕಲೆಯ ಸೃಷ್ಟಿ ಈಗ ಬಹು ಸುಲಭ, ಇಂತಹ ಹೊಸ
ಕಲಾಸೃಷ್ಟಿಯ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಒಂದು ಕಾಲದಲ್ಲಿ ವಿಧವಿಧವಾದ ಹೂ ಗಿಡಗಳನ್ನು ತಂದು ನೆಡುವ ಹವ್ಯಾಸ, ಯಾವುದೇ ಮನೆಗೆ ಹೋಗಲಿ, ಹೂ ಗಿಡಗಳನ್ನುಅವಲೋಕಿಸದೇ ಹಿಂದಿರುಗಲಿಕ್ಕಿಲ್ಲ. ಒಂದು ಮಳೆಗಾಲದಲ್ಲಿ ನಮ್ಮ ಆಸುಪಾಸಿನ ಒಂದು ಮನೆಗೆ ಹೋಗಿದ್ದೆ, ಅಲ್ಲೇನೋ ಪೂಜಾ ಕಾರ್ಯಕ್ರಮ ಇದ್ದಿತು. ಮಳೆಗಾಲ ಅಲ್ವೇ, ಅಂಗಳ ತುಂಬ ಹಸಿಹಸಿರು, ಹಸಿರಿನೆಡೆಯಿಂದ ಇಣುಕುತ್ತಿದ್ದ ಈ ಹೂಗಳು...

ಏನು ಚೆಂದಾ ಅಂತೀರಾ, ಮನೆಯಾಕೆಯನ್ನು ವಿಚಾರಿಸಿದೊಡನೆ " ಅದು ಬಿಸ್ಕೇಟ್ ಹೂವು " ಅಂದಳು, ಅಂಗಳದಲ್ಲಿ ಹರಡಿದ್ದ
ಒಂದು ಬಳ್ಳಿಯನ್ನು ಕಿತ್ತು ಕೊಟ್ಟಳು. ಬೀಜದಿಂದಲೇ ಬೇಕಾದಷ್ಟು ಸಸ್ಯಾಂಕುರಗಳಾಗುತ್ತವೆ ಎಂದು ಆ ಕೂಡಲೇ ತಿಳಿಯಿತು.
ಯಾವ ಕಾಲದಲ್ಲೂ ಹೂಗಳಿಂದ ತುಂಬಿರುವ ಈ ಲತೆಯನ್ನು ಕುಂಡಗಳಲ್ಲೂ ನೆಟ್ಟುಕೊಳ್ಳಬಹುದು. ಸಿಕ್ಕಾಪಟ್ಟೆ ಹಬ್ಬಿ ಹರಡಿ ಇನ್ನಿತರ ಸಸ್ಯಗಳಿಗೆ ಮಾರಕವಾಗುವಂತಹುದಲ್ಲ. ಇನ್ನಿತರ ಪೊದರುಗಳೊಂದಿಗೆ ಹೊಂದಿಕೊಂಡು ಬದುಕುವಂತಹುದು, ಬೇರೆ ತೆರನಾದ ಹೂಬಳ್ಳಿಗಳ ಸಂಪರ್ಕವೂ ಆದೀತು, ತಾನೂ ಇರುತ್ತದೆ, ಹಸಿರೇ ಉಸಿರಾಗಿ ಕೈತೋಟದ ಸೊಗಸನ್ನು ಹೆಚ್ಚಿಸುತ್ತದೆ. ಒಂದು ತೆರನಾದ ಪರಿಸರಸ್ನೇಹೀ ಲತೆ ಇದು. ನಮ್ಮ ಮನೆಯ ಕೈದೋಟದಲ್ಲಿ ಶಂಖಪುಷ್ಪ, ನಕ್ಷತ್ರಬಳ್ಳಿ, ಮಲ್ಲಿಗೆಯ ಪೊದೆಯೊಂದಿಗೆ ಕರಿಕಣ್ಣಿಯೂ ಜೊತೆಯಾಗಿ ಬದುಕು ಸಾಗಿಸುತ್ತಲಿವೆ. ನಕ್ಷತ್ರಬಳ್ಳಿ ಬೇಸಿಗೆಯಲ್ಲಿ ಕಾಣಿಸದು. ಮಲ್ಲಿಗೆಯಲ್ಲಿ ಹೂವರಳಲು ಯಾವ ತೊಡಕೂ ಇರದು.

ಆಫ್ರಿಕಾ ಮೂಲದ ಸಸ್ಯವಾದುದರಿಂದ ಅಲ್ಲಿನ ಪಾರಂಪರಿಕ ಔಷಧಿಯಾಗಿಯೂ ಈ ಲತೆ ಬಳಕೆಯಲ್ಲಿದೆ. ಚರ್ಮ ವ್ಯಾಧಿಗಳು, ಚರ್ಮದ ಸೋಂಕು ರೋಗ, ಬೆನ್ನುಹುರಿಯ ನೋವು, ಗಂಟುಬೇನೆ, ಕಣ್ಣುರಿ, ಮೂಲವ್ಯಾಧಿ, ಗುದನಾಳದ ಯಾ ಕರುಳಿನ ಕ್ಯಾನ್ಸರ್ ಇವೇ ಮೊದಲಾದ ರೋಗ ನಿವಾರಕವಾಗಿ ಕರಿಕಣ್ಣಿ ಬಳ್ಳಿಯನ್ನು ಬಳಸುತ್ತಾರಂತೆ. ಈ ಬಳ್ಳಿಯ ಸಂಪರ್ಕದಿಂದ ಮೈ ಚರ್ಮದ ನವೆ ಯಾ ತುರಿಕೆ ಬಾಧಿಸುವ ಸಾಧ್ಯತೆ ಇದೆ, ಎಲ್ಲರಿಗೂ ಅಲ್ಲ. ಸರ್ವಋತುಗಳಲ್ಲೂ ಹಸಿರು ಹಸಿರಾಗಿರುವ ಕರಿಕಣ್ಣಿ ಆಫ್ರಿಕಾದಲ್ಲಿ ಜಾನುವಾರುಗಳ ಮೇವು ಕೂಡಾ ಹೌದು. ಆಫ್ರಿಕಾ ದೇಶದಲ್ಲಿ ಇದರ ಎಲೆಗಳು ಇನ್ನಿತರ ಸೊಪ್ಪುಗಳಂತೆ ಅಡುಗೆಯಲ್ಲೂ ಬಳಕೆಯಿದೆ. ನಮ್ಮೂರಿನಲ್ಲಿ ಯಾರಾದರೂ ಅಡುಗೆ ಪ್ರಯೋಗ ಮಾಡಿರುತ್ತಾರೇನೋ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ!






Posted via DraftCraft app

0 comments:

Post a Comment