Saturday, 28 February 2015
ಬೆಣ್ಣೆ ರೊಟ್ಟಿ, ಬಾಳೆಯಲ್ಲಿ ತಟ್ಟಿ ....
ಅಕ್ಕಿ ರೊಟ್ಟಿಮಾಡುವ ವಿಧಾನ:
ಒಂದು ಕಪ್ ಅಕ್ಕಿಹುಡಿ.
ಒಂದೂವರೆ ಕಪ್ ಕುದಿಯುತ್ತಿರುವ ನೀರು, ಉಪ್ಪು ಬೆರೆಸಿರಬೇಕು.
ಅಕ್ಕಿ ಹುಡಿಗೆ ತುಸು ತುಸುವೇ ಕುದಿ ನೀರನ್ನು ಎರೆಯುತ್ತಾ ಮರದ ಸಟ್ಟುಗದಲ್ಲಿ ಕಲಸುತ್ತಾ ಬನ್ನಿ. ಕೊನೆಯ ಹಂತದಲ್ಲಿ ಕೈಯಲ್ಲೇ ಮುದ್ದೆ ಕಟ್ಟಿ ಇಡುವುದು.
ನಮ್ಮ ಹಳ್ಳೀ ಮಂದಿ ಬಾಳೆಲೆಯಲ್ಲಿ ರೊಟ್ಟಿ ತಟ್ಟುವ ವಾಡಿಕೆ. ಅಗಲ ಗಾತ್ರದ ಬಾಳೆಲೆಯ ಹಿಂಬದಿಗೆ ಎಣ್ಣೆ ಸವರಿ ಇನ್ನೊಂದು ಬಾಳೆಲೆಗೂ ಎಣ್ಣೆ ಸವರಿ ಇಡುವುದು. ಬಾಳೆ ಎಲೆಗಳ ನಡುವೆ ಅಕ್ಕಿ ಹಿಟ್ಟಿನ ಉಂಡೆಯಿಟ್ಟು ಭಾರವಾದ ಮಣೆಯಿಂದ ಒತ್ತುವುದು. ಬಾಳೆ ಎಲೆಗಳನ್ನು ಇಟ್ಟಾಗ ಒಂದು ಎಲೆ ಅಡ್ಡವಾಗಿ, ಇನ್ನೊಂದೆಲೆ ಉದ್ದನಾಗಿ ಇಟ್ಟಲ್ಲಿ ಮಾತ್ರ ವೃತ್ತಾಕಾರದ ರೊಟ್ಟಿ ಬರುವುದು.
ಪಾಲಿಥೀನ್ ಹಾಳೆಗಳಿಂದಲೂ ರೊಟ್ಟಿ ತಟ್ಟಿಕೊಳ್ಳಿ, ಇದೇ ಈಗ ಸುಲಭ ವಿಧಾನ.
ಪಾಲಿಥೀನ್ ಹಾಳೆಗಳಿಂದ ರೊಟ್ಟಿಯನ್ನು ನಾಜೂಕಾಗಿ ಬಿಡಿಸಿ ಬಿಸಿ ತವಾ ಮೇಲೆ ಹಾಕಬೇಕಾಗುತ್ತದೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯಿಲ್ಲ, ಎಲ್ಲ ಸಂದರ್ಭದಲ್ಲೂ ಬಾಳೆ ಎಲೆ ಸಿಗಬೇಕಲ್ಲ....
ರೊಟ್ಟಿ ಮಣೆಗಳೂ ಸಿಗುತ್ತವೆ.
ಎಣ್ಣೆ ಸವರಿದ ತವಾದ ಮೇಲೆ ಎರಡೂ ಬದಿ ಬೇಯಿಸಿ, ರೊಟ್ಟಿ ಮೃದುವಾಗಿ ಉಬ್ಬಿ ಬರುವುದು. ಬೆಣ್ಣೆಯೊಂದಿಗೆ ಸವಿಯಿರಿ. ಬೆಲ್ಲದ ಹುಡಿಯೂ ಸಾಕಾಗುವುದು.
ಬರೆಯುತ್ತಿದ್ದ ಹಾಗೇ ಏನೇನೋ ನೆನಪುಗಳು. ನಮ್ಮ ಚಿಕ್ಕಂದಿನಲ್ಲಿ ನಮ್ಮ ಅಮ್ಮಂದಿರಿಗೆ ನೆನೆದ ಕೂಡಲೇ ಅಕ್ಕಿಹುಡಿಯ ಪೂರೈಕೆ ಆಗ್ತಾ ಇರಲಿಲ್ಲ. ಅಂದಿನ ಕಾಲದ ಜೀನಸಿನಂಗಡಿಗಳಲ್ಲಿ ಅಡುಗೆಗೆ ಸಿದ್ಧಗೊಳಿಸಲ್ಪಟ್ಟ ಪ್ಲಾಸ್ಟಿಕ್ ಪೊಟ್ಟಣಗಳು ಇದ್ದರಲ್ಲವೇ? ಏನಿದ್ದರೂ ಮನೆಯಲ್ಲಿ ದಾಸ್ತಾನು ಇದ್ದಂತಹ ಕುಚ್ಚುಲಕ್ಕಿಯಿಂದಲೇ ಸೊಗಸಾದ ರೊಟ್ಟಿಗಳು ಸಿದ್ಧವಾಗುತ್ತಿತ್ತು.
" ಹೇಗೇ ಮಾಡ್ತಿದ್ರೂ " ಕೇಳದೇ ಇರ್ತೀರಾ.
ಮುಂಜಾನೆಯ ರೊಟ್ಟಿಗೆ ಮುನ್ನಾದಿನ ಸಂಜೆಯ ವೇಳೆಗೆ ಕುಚ್ಚುಲಕ್ಕಿಯನ್ನು ನೆನೆಯಲು ಇಟ್ಟಿರಬೇಕು. ನೀರಿನಲ್ಲಿ ಹಾಕಿದ ಕುಚ್ಚುಲಕ್ಕಿಯನ್ನು ಚೆನ್ನಾಗಿ ತೊಳೆದು, ಅಕ್ಕಿಯಲ್ಲಿ ಕಲ್ಲೂ ಇದ್ದೇ ಇರುತ್ತಿತ್ತು, ಅದನ್ನೂ ಅಕ್ಕಿ ತೊಳೆಯುವ ಹೊತ್ತಿಗೆ ಜಾಲಿಸಿ ತೆಗೆಯದಿದ್ದರೆ ರೊಟ್ಟಿಯಾದೀತೇ ? ಮುಂಜಾವ ಎದ್ದು ಅರೆಯುವ ಕಲ್ಲನ್ನು ಸ್ವಚ್ಛಗೊಳಿಸಿ, ಅಕ್ಕಿಯ ನೀರನ್ನು ಬಸಿದು ಅರೆಯುವ ಕಾಯಕ. ನೀರು ಹಾಕದೇ ನುಣ್ಣಗೆ ಮುದ್ದೆಯಂತೆ ಅರೆಯುವ ಹೊತ್ತಿಗೆ ತೆಂಗಿನ ತುರಿಯೂ ಹಾಕಿ ಅರೆಯದಿದ್ದರೆ ಆದೀತೇ, ತೆಂಗಿನಕಾಯಿ ಮನೆಯ ಅಟ್ಟದಲ್ಲಿ ಇರುವಾಗ ?
ಅಡಿಕೆ ತೋಟದಲ್ಲಿ ಬಾಳೆ ಎಲೆಗಳಿಗೆ ಕೊರತೆಯೇ, ಛೇ ಛೇ, ಇಲ್ಲವೇ ಇಲ್ಲ, ಅದನ್ನೂ ತಂದಿರಿಸಿಕೊಳ್ಳತಕ್ಕದ್ದು. ಬಾಳೆಲೆಗೆ ತೆಂಗಿನೆಣ್ಣೆ ಸವರಿ ಅಕ್ಕಿಹಿಟ್ಟಿನ ಉಂಡೆಯನ್ನು ಎರಡು ಎಲೆಗಳ ನಡುವೆ ಇಟ್ಟು ಹಪ್ಪಳದ ಮಣೆಯಲ್ಲಿ ಒತ್ತಿದರೆ ಸೈ.
ಕಟ್ಟಿಗೆಯ ಒಲೆ ಸಿದ್ಧವಾಗಬೇಕಿದೆ, ಒಲೆಯಲ್ಲಿ ನಿಗಿನಿಗಿಸುವ ಜ್ವಾಲೆ, ರೊಟ್ಟಿ ಕಾವಲಿ ಅಥವಾ ಹಂಚು ಚೆನ್ನಾಗಿ ಎಣ್ಣೆ ಸವರಿಟ್ಟಿರಬೇಕು, ಕಾದ ಕಾವಲಿಯ ಮೇಲೆ ಬಾಳೆ ಎಲೆಸಹಿತವಾಗಿ ರೊಟ್ಟಿ ಬಿದ್ದಿತೇ, ಬಿದ್ದ ರೊಟ್ಟಿಯ ಮೇಲಿನ ಎಲೆ ಬಾಡಿ ಹೋಯಿತೇ, ಎಲೆಯನ್ನು ಆಚೆ ಎಸೆದು ರೊಟ್ಟಿಯನ್ನು ಮಗುಚಿ ಹಾಕಿದರಾಯಿತು. ಬಿಸಿ ಕೆಂಡದ ಮೇಲೆ ಕಾವಲಿಯ ರೊಟ್ಟಿಯನ್ನು ಹೊರಳಿಸಿ ತೆಗೆದು ತಟ್ಟೆಗೇರಿಸುವುದು.
ಬರೆದು ಸಿದ್ಧಪಡಿಸಿ, ಚಿತ್ರಗಳನ್ನೂ ಹೊಂದಿಸಿ ಬ್ಲಾಗ್ ಸಂಪುಟದಲ್ಲಿ ಇಟ್ಕೊಂಡಿದ್ದೆ. ಬೆಳಗಾಗುತ್ತಿದ್ದ ಹಾಗೇ ನಮ್ಮತ್ತಿಗೆ ಸಂಸಾರದೊಂದಿಗೆ ಆಗಮಿಸಿದರು. " ಅದೇನೇನೋ ಬರೆಯುತ್ತೀಯಲ್ಲ, ಈಗ ಹೂಸತು ಏನು ಬರೆದಿದ್ದೀ..."
, " ಅಕ್ಕಿ ರೊಟ್ಟಿ, ಬಾಳೆಯಲ್ಲಿ ತಟ್ಟೀ ಅಂತ ಬರೆದಾಯ್ತು "
ಅತ್ತಿಗೆಯ ಪತಿರಾಯರು ಗೊಳ್ ಅಂತ ನಗೋದೇ.. " ನೀನು ಹಳ್ಳಿಮನೆಯಲ್ಲಿದ್ದುಕೊಂಡು ಬಾಳೆಯಲ್ಲಿ ತಟ್ಟು, ನಾವು ಪೇಟೇ ಮಂದಿ ಬಾಳೆಲೆ ಎಲ್ಲಿಂದ ತರ್ಬೇಕೂ? ಒಂದು ಊಟದ ಬಾಳೆಗೆ 12 ರೂಪಾಯಿ ಕೊಡ್ಬೇಕು ಗೊತ್ತಾ " ಅವರು ಹಳ್ಳಿ ಪೇಟೆ ಅಂತ ಎರಡೂ ಕಡೆ ಮನೆ ಇಟ್ಕೊಂಡಿದ್ದಾರೆ, ನಗದೇ ಇನ್ನೇನು ಮಾಡ್ತಾರೇ, ಇರಲಿ.
ನಾನೂ ಒಂದಾನೊಂದು ಕಾಲದಲ್ಲಿ ಕಾಸರಗೋಡು ನಗರದಲ್ಲೇ ಇದ್ದವಳಲ್ಲವೇ, ಆಗ ನನ್ನಮ್ಮ ಅಗತ್ಯ ಬಿದ್ದಾಗ ಪೇಟೆಯಿಂದ ಬಾಳೆಲೆ ತರಿಸುತ್ತಿದ್ದರು. ಒಮ್ಮೆ ಏನಾಯಿತು, ಮಾಮೂಲಿಯಾಗಿ ಅಂಗಡಿ ಸಾಮಗ್ರಿ ತಂದುಕೊಡುವ ಫಕೀರ ಬಂದಿರಲಿಲ್ಲ. ಬಾಳೆಲೆ ತರಲಿಕ್ಕೆ ನನ್ನ ತಂಗಿಯೇ ಅಂಗಡಿಗೆ ಹೋದಳು, ಆಗ ಪುಟ್ಟು ಹುಡುಗಿ ಅವಳು. ಅಮ್ಮ ತನ್ನ ತಿಜೋರಿಯಿಂದ 65 ಪೈಸೆ ಎಣಿಸಿಕೊಟ್ಟು, " ಒಂದು ಬಾಳೆಲೆಗೆ ಐದು ಪೈಸಾ ಇದ್ದೀತು, 13 ಬಾಳೆಲೆ ತಾ " ಅಂದರು. ತಂಗಿಯೂ ಅಮ್ಮನ ಹುಕುಂ ಪ್ರಕಾರ " ಅರುವತ್ತೈದು ಪೈಸೆಗೆ ಹದಿಮೂರು ಬಾಳೆಲೆ ಕೊಡು " ಅಂದು ಅಂಗಡಿಯಿಂದ ಕೊಂಡೂ ತಂದಳು. " ಛೇ, ಬಾಳೆಲೆಗೆ ಚೌಕಾಸೀ ಕೂಡಾ ಮಾಡಿಲ್ವಾ, ಮೂರು ಪೈಸೆಗಿಂತ ಜಾಸ್ತಿ ಇದ್ದಿರಲಿಕ್ಕಿಲ್ಲ, ಅಂಗ್ಡಿಯೋನು ಲಾಭ ಮಾಡ್ಬಿಟ್ಟ, ಇವಳನ್ನು ಕಳಿಸಿದ್ದೇ ತಪ್ಪಾಯ್ತು...."
Posted via DraftCraft app
Subscribe to:
Post Comments (Atom)
0 comments:
Post a Comment