Saturday, 20 June 2015
ಅಂಬಟೆ ಚಟ್ಣಿ
ಜೋರು ಮಳೆ ಶುರುವಾಗಿದೆ. ಮಳೆ ಬಿಟ್ಟಿರುವಾಗ ಚಪ್ಪರದಿಂದ ತೊಂಡೆಕಾೖ ಕೊಯ್ದು ಇಟ್ಕೊಳ್ಳೋಣ ಅಂತ ಮನೆಯೊಳಗಿಂದ ಹೊರ ಬಂದಿದ್ದಾಯಿತು, ಕೈಯಲ್ಲೊಂದು ಕತ್ತಿ ಇರಲೇಬೇಕು. ಮನೆಯಿಂದ ಹೊರಗಿಳಿದ ಕೂಡಲೇ ಸಿಗುವುದೇ ಅಡಿಕೆ ತೋಟ, ಒಂದು ಹಾಳೆ ಕಡಿದುಕೊಳ್ಳಬೇಡವೇ, ತೊಂಡೆಕಾೖಗಳನ್ನು ಕೊಯ್ದು ಹಾಕಲಿಕ್ಕೇ...
ಹಾಳೆ ಕಡಿದು, ತೊಂಡೆ ಬುಡಕ್ಕೆ ಬಂದು ಕಣ್ಣ ಹಾಯಿಸಿದಾಗ, ಮಳೆ ಬರುತ್ತಿರುವ ಕಾರಣ ಎರಡ್ಮೂರು ತೊಂಡೆ ಸಿಕ್ಕಿತು. " ಅರೆ! ಇದೇನಿದು, ತೊಂಡೆ ಚಪ್ಪರದ ಬುಡದಲ್ಲಿ ಬಿದ್ದಿದೆ ಅಂಬಟೆಕಾಯಿ!
ಹೌದು, ಅಂಬಟೆ ಮರವೂ ಇಲ್ಲೇ ಇದೆ, ಗಾಳಿ ಬೀಸುವಾಗ ಬಿದ್ದಿರಬೇಕು. ಅಂಬಟೆ ಅಡಿಕೆ ಹಾಳೆಯೊಳಗೆ ಸೇರಿತು. ಮುಂದುವರಿದಾಗ.. ಓಹ್, ಅಂಬಟೆಯ ಪುಟ್ಟ ಗೆಲ್ಲು ಮುರಿದು ಬಿದ್ದಿದೇ, ಅದರಲ್ಲೂ ಅಂಬಟೆಕಾಯಿಗಳು, ಎಲ್ಲವೂ ಎಳೆ ಮಿಡಿಗಾಯಿ. ಸಂಗ್ರಹ ಸಾಕಷ್ಟಾಯಿತು, ನಾಳೆ ಚಟ್ಣಿ ಮಾಡೋಣ.
" ಅರೆ, ಚಟ್ಣಿಯಾ, ಉಪ್ಪಿನ್ಕಾಯಿ ಹಾಕ್ರೀ..."
ಅದನ್ನೂ ಹೇಳ್ಬೇಕೂಂತ ಇದ್ದೆ, ಉಪ್ಪಿನಕಾಯಿ ಹಾಕಿ ಆಗಿದೆಯಲ್ಲ, ಹೋದ ವಾರ ಚೆನ್ನಪ್ಪ ಒಂದು ಬುಟ್ಟಿ ಕೊಯ್ದು ಕೊಟ್ಟಿದ್ದ. ಮಗಳು ತಿನ್ನುತ್ತಾ ಇದ್ದಾಳೆ, ಸಾಲದೂಂತ ಬೆಂಗಳೂರಿಗೂ ಒಯ್ದಿದಾಳೇ, ಅಣ್ಣನಿಗೂ ಚಿಕ್ಕಮ್ಮಂಗೂ ಅಂತ ಎರಡೆರಡು ಜಾಡೀ...
" ಆಯ್ತೂ, ಚಟ್ಣಿ ಹೇಗೆ ಮಾಡಿದ್ರೀ...?"
ಒಂದು ಕಡಿ ತೆಂಗಿನ ತುರಿ.
ನಾಲ್ಕಾರು ಗಾಂಧಾರಿ ಮೆಣಸು.
ಮೂರು ಅಂಬಟೆ.
ರುಚಿಗೆ ಉಪ್ಪು.
ಅಂಬಟೆಗಳನ್ನು ಚಿಕ್ಕದಾಗಿ ಕತ್ತರಿಸಿ, ಉಳಿದ ಸಾಮಗ್ರಿಗಳನ್ನು ಕೂಡಿ ಅರೆಯಿರಿ. ನೀರು ಹಾಕದಿರಿ, ಒಗ್ಗರಣೆ ಮರೆಯದಿರಿ.
" ಹೌದೂ, ಗಾಂಧಾರಿ ಮೆಣಸು ಯಾಕೆ ಹಾಕ್ತೀರಾ... ಖಾರ ಅಲ್ವೇ?"
ನಾನೂ ಮೊನ್ನೆ ಯಾಕೋ ಟೀವಿ ನ್ಯೂಸ್ ಕೇಳ್ತಾ ಕೂತಿದ್ದೇರೀ.. ಬಂತು ಭಯಾನಕ ಸುದ್ದಿ, ದುಬೈಗೆ ರಫ್ತು ಮಾಡಲಾದ ಹಸಿಮೆಣಸು, ಮಿತಿಮೀರಿದ ಕೀಟನಾಶಕದಿಂದ ಕೂಡಿದೆಯೆಂದು, ತಪಾಸಣೆಯಿಂದ ತಿಳಿದು ಬಂದು, ವಾಪಸು ಕಳಿಸಲಾಗಿದೆಯೆಂದು... ಆಗಲೇ ನಿಶ್ಚಯ ಮಾಡಿದ್ದು ನಮ್ಮ ತೋಟದ ಗಾಂಧಾರಿ ಅತ್ಯುತ್ತಮವೆಂದು.
ನೈಸರ್ಗಿಕವಾಗಿ ಹೇರಳ ಬೆಳೆ ನೀಡುವ ಗಾಂಧಾರಿ ಮೆಣಸು ಆರೋಗ್ಯ ರಕ್ಷಕವೆಂದೂ ನಾವು ತಿಳಿದಿದ್ದೇವೆ. ರಕ್ತದೊತ್ತಡ ನಿಯಂತ್ರಣಕ್ಕೂ ದಿನಕ್ಕೊಂದು ಗಾಂಧಾರಿಯನ್ನು ಜಗಿದು ತಿನ್ನುವವರೂ ಇದ್ದಾರೆ. ಕೇರಳದ ತರಕಾರಿ ಮಾರ್ಕೆಟುಗಳಲ್ಲಿ ಗಾಂಧಾರಿ ಮೆಣಸು ಸಿಗುತ್ತದೆ, ಅಂಗಳದಲ್ಲಿ ಜಾಗ ಇಲ್ಲದಿದ್ದರೂ ಮಣ್ಣಿನ ಚಟ್ಟಿಗಳಲ್ಲಿ ನೆಟ್ಟು ಸಲಹುವುದರಲ್ಲಿ ಕೇರಳೀಯರು ಮುಂದಿದ್ದಾರೆ.
Subscribe to:
Post Comments (Atom)
0 comments:
Post a Comment