ಮಳೆಗಾಲ ಅಲ್ವೇ, ಬಾಳೆಗೊನೆ ಹಣ್ಣಾಗಿದೆ. ಹಾಗೇನೇ ತಿಂದು ಮುಗಿಸಲು ಆಗುವುದಿಲ್ಲ, ಇದಂತೂ ಚಿಕ್ಕ ಚಿಕ್ಕ ಹಣ್ಣು, ಸುಲಿದು ತಿನ್ನಲಿಕ್ಕೂ ಉದಾಸೀನ ಬಿಡದು. ಅದಕ್ಕೇನು ಮಾಡೋಣಾಂತೀರಾ ?
ಸಂಜೆಯ ಚಹಾದೊಂದಿಗೆ ಏನೋ ಒಂದು ತಿನ್ನಲು ಬೇಕಲ್ಲ, ಈಗ ಮ್ಯಾಗಿ ನೂಡಲ್ಸ್ ಇತ್ಯಾದಿ ತಿನ್ನೋ ಹಾಗಿಲ್ಲ, ನಾವಂತೂ ಒಮ್ಮೆಯೂ ತಂದವರಲ್ಲ ಬಿಡಿ !
ಅವಲಕ್ಕಿ ಇದೆ, ತೆಂಗಿನತುರಿ ಇದೆ, ಬೆಲ್ಲ ಇದೆ.
7 - 8 ಬಾಳೆಹಣ್ಣು ತೆಳ್ಳಗೆ ಕತ್ತರಿಸಿ.
ಒಂದು ಚಮಚಾ ಎಳ್ಳು ಹುರಿಯುವುದು.
ಅವಲಕ್ಕಿ ಕಲಸಲಿಕ್ಕೂ ಒಂದು ಲೆಕ್ಕಾಚಾರ ಬೇಡ್ವೇ, ಬೇಕಲ್ಲ !
ಒಂದು ಹಿಡಿ ಕಾಯಿತುರಿಗೆ ನಾಲ್ಕು ಹಿಡಿ ಅವಲಕ್ಕಿ, ಈ ಥರ ಅಳತೆ ಇರಲಿ.
ಬೆಲ್ಲವೂ ಅಷ್ಟೇ, ಕಾಯಿತುರಿ ಎಷ್ಟಿದೆಯೋ ಅಷ್ಟು ಇರಲಿ.
ರುಚಿಗೆ ಚಿಟಿಕೆ ಉಪ್ಪು.
ಎಲ್ಲವನ್ನೂ ತಪಲೆಗೆ ಸುರುವಿಕೊಂಡು ಕಲಸುವುದು.
ಹ್ಞಾ, ಒಂದು ಚಮಚ ತಾಜಾ ತುಪ್ಪ ಕೂಡಿಸಿ ಕಲಸಿದಾಗ ಅವಲಕ್ಕಿ ಕಲಸು ಸಿದ್ಧ.
ಸುವಾಸನಾಭರಿತ ಈ ಸಿಹಿ ಅವಲಕ್ಕಿ ನಮ್ಮ ಇಂದಿನ ಸಂಜೆಯ ಸೊಗಸು.
ಒಣ ಹಣ್ಣುಗಳಾದ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿ, ಏಲಕ್ಕಿ ಪುಡಿ ಹಾಕಬಹುದು.
ಈಗ ರಮ್ಜಾನ್ ಮಾಸ ಅಲ್ವೇ, ತಾಜಾ ಖರ್ಜೂರ ಎಲ್ಲೆಡೆ ಲಭ್ಯ, ಬಾಳೆ ಹಣ್ಣಿನ ಬದಲು ಖರ್ಜೂರವೂ ಆದೀತು.
0 comments:
Post a Comment