ತದೇಕಚಿತ್ತದಿಂದ ಲಲಿತಕ್ಕ ಹೂಮಾಲೆ ಕಟ್ಟುತ್ತಿದ್ದರು. ಮಡಿಲಲ್ಲಿ ಅಡಿಕೆ ಸಿಂಗಾರದ ಎಸಳುಗಳು, ಕೈಯಲ್ಲಿ ಬಾಳೆನಾರಿನ ಮೂರು ಎಳೆಗಳು, ವೀಣಾವಾದಕ ತಂತಿಯನ್ನು ಎಳೆಯುವಂತೆ, ಬಾಳೆನಾರುಗಳೂ ಅಡಿಕೆ ಸಿಂಗಾರದ ಎಸಳುಗಳೂ ಒಂದಕ್ಕೂಂದು ಸೆಳೆಯಲ್ಪಟ್ಟು ಹೀಗೊಂದು ಮಾಲೆ ಸಿದ್ಧವಾಯಿತು ದೇವರ ಪೂಜೆಗೆ.
ನನ್ನ ಕೆಮರಾ ಕ್ಲಿಕ್ಕೆಂದಿತು.
" ನಿನ್ನೆ ಕಟ್ಟಿದ ಮಾಲೆ ತುಳಸೀಕಟ್ಟೆಗೆ ಹಾಕಿಟ್ಟಿದ್ದೇನೆ, ಅದನ್ನೂ ಪಟ ತೆಗ್ದು ಇಟ್ಕೋ..." ಎಂದಳು ನಮ್ಮಕ್ಕ. ನಿನ್ನೆ ರಾತ್ರಿ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ ಇದ್ದಿತು. ಇಂದು ಪುನಃ ಶಿವಪೂಜೆಯ ಅಲಂಕಾರಕ್ಕೆಂದು ಸಿಂಗಾರದ ಮಾಲೆ ನೇಯುತ್ತಿದ್ದಾಗ ನನ್ನ ಐಪಾಡ್ ಓಡೋಡಿ ಬಂದಿದ್ದು.
ಶಿವಪೂಜೆಯಲ್ಲಿ ಬಿಳಿ ಹೂಗಳಿಗೆ ಪ್ರಾಶಸ್ತ್ಯವು. ಅದರಲ್ಲೂ ಅಡಿಕೆಮರದ ಹೂವು, ಸಿಂಗಾರ ಎಂದೇ ಜನಪ್ರಿಯವಾಗಿರುವಂಥದ್ದು, ಇದಿಲ್ಲದೆ ಪೂಜೆ ನಡೆಯದು. ಹೆಚ್ಚೇಕೆ, ಮದುಮಗನ ಬಾಸಿಂಗದ ಅಲಂಕಾರವೆಂದರೆ ಅಡಿಕೆಯ ಸಿಂಗಾರ.
ನಮ್ಮಲ್ಲಿ ದೇವತಾರ್ಚನೆಗೆ, ಶುಭಕಾರ್ಯಗಳೇನಿದ್ದರೂ ಅಡಿಕೆ ಇಲ್ಲದೆ ಆಗುವುದಿಲ್ಲ. ಹರಿವಾಣದಲ್ಲಿ ವೀಳ್ಯೆದೆಲೆ ಅಡಿಕೆಯ ನೋಟವೇ ಕಣ್ಗಳಿಗೆ ಹಿತವೆನಿಸುವುದು. ದೇವಕಾರ್ಯಗಳಲ್ಲಿ ಪರಮ ಪವಿತ್ರವೂ ಮಂಗಳವೂ ಎಂದು ನಿರ್ಣಯಿಸಲ್ಪಟ್ಟ ಅಡಿಕೆ, ಆರೋಗ್ಯತಜ್ಞರ ವಿಶ್ಲೇಷಣೆ ಪ್ರಕಾರ ಮಾರಕ, ಯಾಕೋ ತಿಳಿಯದು. ಸುಂದರವೂ, ಶುಭ್ರವರ್ಣದ ಸಿಂಗಾರವೇ ಮುಂದೆ ಅಡಿಕೆಗೊನೆಯಾಗಿ ಮಾರ್ಪಾಡಾದಾಗಲೂ " ಅಡಿಕೆಯ ನೋಟ ಚೆನ್ನ, ತೋಟದ ಬೆಳೆಯು ಚಿನ್ನ " ಎಂದು ಹಾಡಿನ ಸೊಲ್ಲು ಹೊರಹೊಮ್ಮದಿದ್ದೀತೇ?
ಅಡಿಕೆ ಸಿಂಗಾರವೂ ಉನ್ನತವಾದ ಮರದಲ್ಲಿ ಮುಚ್ಚಿದ ಕವಚದೊಳಗೆ ಅವಿತಿರುತ್ತದೆ. ಮುಚ್ಚಿದ ಬಾಗಿಲನ್ನು ತೆರೆದು ಹೂ ಹೊರ ಬಿರಿಯುವ ಪರಿಯನ್ನು ನೋಡಿಯೇ ಆನಂದಿಸಬೇಕಲ್ಲದೆ ಬರೆಯಲು ಬಾರದು.
Areca catechu ಎಂಬ ವೈಜ್ಞಾನಿಕ ಹೆಸರಿನ ಅಡಿಕೆ ಮರ, ಭಾರತ ಮೂಲದ ತಾಳೆ ಜಾತಿಗೆ ಸೇರಿದ ಒಂದು ಸಸ್ಯ ವರ್ಗ. ಆಯುರ್ವೇದ ವಿಜ್ಞಾನವು ಅಡಿಕೆಯ ರಸಸಾರವನ್ನು ರಕ್ತಭೇದಿಗೆ, ಅತಿಸಾರಕ್ಕೆ ಉಪಯೋಗಿಸಬಹುದೆಂದಿದೆ. ಸಂಸ್ಕೃತದಲ್ಲಿ ಇದು ಪೂಗ ಫಲವೆಂದು ಕರೆಯಲ್ಪಡುತ್ತದೆ.
0 comments:
Post a Comment