ಫೇಸ್ ಬುಕ್ ನಲ್ಲಿ ಕೃಷಿಕರ ಗುಂಪು ( agriculturist ) ಇದೆ. ಈಗ ಅಡಿಕೆ ಹಣ್ಣಾಗಿ ಕೊಯ್ಲಿನ ಕಾಲ, ಕಳೆದ ವರ್ಷ ಇದೇ ಸಮಯದಲ್ಲಿ ಅಡಿಕೆ ಕೃಷಿಕರ ಬಳಿ ಪ್ರಶ್ನೆಯೊಂದನ್ನು ಎಸೆದಿದ್ದೆ.
" ಬಿದ್ದ ಅಡಿಕೆ ಹೆಕ್ಕಿ ಹೆಕ್ಕೀ ಸೊಂಟನೋವು ಬಂದಿದೆ, ಅಡಿಕೆ ಸಂಗ್ರಹಣೆ ಸುಲಭಸಾಧ್ಯವಾಗಿಸುವ ಉಪಕರಣ ಯಾರ ಬಳಿ ಇದೆ ?" ಇದು ನನ್ನ ಪ್ರಶ್ನೆಯಾಗಿತ್ತು.
ಪ್ರತಿಕ್ರಿಯೆಗಳು ಬಂದುವು, ಸಲಹೆಗಳೂ ಸಿಕ್ಕವು.
" ಗೆರಟೆ ಸೌಟಿನಲ್ಲಿ ಬಗ್ಗದೇ ಹೆಕ್ಕಬಹುದು " ಹೀಗೆ ಹತ್ತು ಹಲವಾರು ಪ್ರಶ್ನೋತ್ತರ ಪ್ರತಿಕ್ರಿಯೆಗಳನ್ನು ಓದಿ ಸ್ಪೂರ್ತಿ ಪಡೆದ ನಮ್ಮೆಜಮಾನ್ರು ತಾವೇ ಅಡಿಕೆ ಹೆಕ್ಕುವ ಯಂತ್ರದ ನಿರ್ಮಾಣಕ್ಕೆ ಮುಂದಾದರು.
ಅಡಿಕೆ ಮರ ಹತ್ತುವ, ತೆಂಗಿನ ಮರದಿಂದ ಕಾಯಿಗಳನ್ನು ಇಳಿಸಬಲ್ಲ ಹಲವು ಯಂತ್ರಗಳನ್ನು ಯೂ-ಟ್ಯೂಬ್ ನಲ್ಲಿ ಕಾಣಬಹುದು. ಆದರೆ ಪ್ರತಿದಿನವೂ ಅಡಿಕೆ ಹಣ್ಣಾಗಿ ಬೀಳುತ್ತ ಇರುವುದಿದೆಯಲ್ಲ, ಆ ಅಡಿಕೆಗಳನ್ನು ಆ ದಿನಕ್ಕೆ ಆ ದಿನವೇ ಹೆಕ್ಕಿ ತರದಿದ್ದರೆ ಆಗದು. ಮರದಲ್ಲಿಯೇ ಹಣ್ಣಾದ ಅಡಿಕೆ ಹಾಗೂ ತಾನಾಗಿಯೇ ಉದುರಿದಂತಹುದು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ. " ಬೀಳುವಷ್ಟೂ ಬೀಳಲಿ, ಒಂದೇ ಬಾರಿ ಕೂಲಿಯಾಳುಗಳ ಕೈಲಿ ತರಿಸೋಣ ". ಈ ವಾದವೂ ಸರಿಯಲ್ಲ. ತೋಟದ ತೇವಾಂಶ, ಗೊಬ್ಬರ, ಕಸಕಡ್ಡಿಗಳೆಡೆಯಲ್ಲಿ ಚೆನ್ನಾಗಿರುವ ಹಣ್ಣಡಿಕೆ ಹಾಳಾಗುವುದೂ, ಅಲ್ಲೇ ಒಣಗಿ ಕಣ್ಣಿಗೆ ಕಾಣಿಸದಾಗಿ ಬೆಲೆಯಿಲ್ಲದ ಅಡಿಕೆ ಆಗಿ ಬಿಡುವ ಸಾಧ್ಯತೆ ಹೆಚ್ಚು. ಹಿಂದಿನಂತೆ ಹತ್ತಾರು ಕೂಲಿಯಾಳುಗಳನ್ನು ಸಾಕಲು ಸಾಧ್ಯವಿಲ್ಲದ ಕಾಲ, ನಮ್ಮದು ಕೇರಳ ರಾಜ್ಯವೂ ಆಗಿರುವುದರಿಂದ ಕಾರ್ಮಿಕರೆಲ್ಲರೂ ಸರ್ಕಾರೀ ನೌಕರರು ಎಂದರೂ ತಪ್ಪಿಲ್ಲ.
ನನ್ನ ಬಳಿ ತರಗೆಲೆಗಳನ್ನು ಒಟ್ಟುಗೂಡಿಸುವ ಒಂದು ಸಲಕರಣೆ ಇದ್ದಿತು. ಅದರ ಬೆರಳುಗಳಂತಹ ರಚನೆಯನ್ನು ವಿಸ್ತರಿಸಿ ಮೊದಲ ಮಾಡೆಲ್ ಸಿದ್ಧವಾಯಿತು. ಅದರ ಸಹಾಯದಿಂದ ಬಗ್ಗದೇ ಒಂದೊಂದೇ ಅಡಿಕೆ ಹೆಕ್ಕಲು ಸಾಧ್ಯವಾಯಿತು. ಪ್ರತಿದಿನವೂ ಸುಧಾರಿತ ಮಾಡೆಲ್ ವಿನ್ಯಾಸವಾದಂತೆ ಈಗಿರುವ ಯಂತ್ರದ ರೂಪ ಬಂದಿತು.
ಕಳೆದ ವರ್ಷದ ಅಡಿಕೆಯೆಲ್ಲವೂ ಈ ಯಾಂತ್ರಿಕ ಶ್ರಮದ ಮೂಲಕವೇ ಮನೆಗೆ ಬಂದಿದೆ. ಕೊನೆಗೆ ಚೆನ್ನಪ್ಪ, " ನಾನೇ ಕೊಯ್ದು ಹಾಕುತ್ತೇನೆ..." ಅಂದ್ರೂ ನಮ್ಮೆಜಮಾನ್ರು ಒಪ್ಪಲಿಲ್ಲ! " ಅವನು ಒಂದೇ ಬಾರಿಗೆ ಕಾಯಿ, ಅರೆಗಾಯಿ, ಸಿಂಗಾರ ಎಲ್ಲ ಎಳೆದು ಹಾಕೋನು... ಆಮೇಲೆ ನಮಗೆ ತೋಟದಲ್ಲಿ ಏನು ಕೆಲ್ಸ...ಅದೇನೂ ಬೇಡ..." ಎಂದು ತೀರ್ಮಾನಕ್ಕೆ ಬಂದಿದ್ದಾರೆ.
ನಮ್ಮೆಜಮಾನ್ರು ಎಚ್. ಟಿ. ಭಟ್, ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜ್ ಪದವೀಧರರು ಹಾಗೂ ಸ್ವತಂತ್ರ ಇಲೆಕ್ಟ್ರಾನಿಕ್ಸ್ ಉದ್ಯಮಿಯಾಗಿ ಗುರುತಿಸಿಕೊಂಡವರಾಗಿದ್ದಾರೆ.
ವೀಡಿಯೋ ನೋಡಿರಿ.
ಟಿಪ್ಪಣಿ: 3/2/2016 ರಂದು ಮುಂದುವರಿದಿದೆ
ಅಡಿಕೆ ಹೆಕ್ಕುವ ಯಂತ್ರದ ಬರಹ ಸಿದ್ಧಪಡಿಸಿ, ನಮ್ಮೆಜಮಾನ್ರು ಹೇಳಿಕೊಟ್ಟಂತೆ ವೀಡಿಯೋ ಛಾಯಾಗ್ರಹಣವನ್ನೂ ಮಾಡಿಟ್ಟು ಬ್ಲಾಗ್ ಗೇರಿಸಿ ಆಗಿತ್ತು.
ಇದೇನೂ ಅಡುಗೆ ಆಧಾರಿತ ಬರಹವಲ್ಲ, ಬಾಯಲ್ಲಿ ನೀರೂರಿಸುವಂತಹ ತಿಂಡಿತಿನಿಸುಗಳ ಚಿತ್ರಗಳೂ ಇದರಲ್ಲಿಲ್ಲ. ಹಾಗಾಗಿ ಯಾರೂ ಕೇಳುವುದಕ್ಕಿಲ್ಲದ ಚಿತ್ರ - ಸುದ್ದಿ ಆದೀತಷ್ಟೇ ಈ ಯಂತ್ರೋಪಕರಣ ಅಂದ್ಕೊಂಡು ಸುಮ್ಮನಿದ್ದೆ.
ಸಂಜೆಯಾಗುತ್ತಲೂ ನನಗೊಂದು ಇ-ಮೇಲ್ ಬಂದಿತು. ನೋಡಿದ್ರೆ ಶ್ರೀಪಡ್ರೆಯವರದು, ಫೇಸ್ ಬುಕ್ ಮಿತ್ರರೂ ಆಗಿರುವ ಶ್ರೀಪಡ್ರೆ, ಕೃಷಿತಜ್ಞ, ಅಡಿಕೆ ಪತ್ರಿಕೆಯ ರೂವಾರಿ ಹಾಗೂ ನಾಡಿನ ಖ್ಯಾತ ಪತ್ರಕರ್ತರೂ ಹೌದು.
" ಓ, ಇವರೆಲ್ಲೋ ಬ್ಲಾಗ್ ಬರಹ ನೋಡಿದ್ದಿರಬೇಕು " ಅಂದುಕೊಳ್ಳುತ್ತಾ ಅವರ ಮಿಂಚಂಚೆಗೆ ಏನೆಂದು ಪ್ರತಿಕ್ರಿಯಿಸಲೀ ಅಂದಿದ್ದಾಗ ದೂರವಾಣಿ ಕರೆ ಮೊಳಗಿತು!
ಅತ್ತ ಕಡೆಯಿಂದ ಪಡ್ರೆಯವರೇ ಮಾತು ಆರಂಭಿಸಿದರು. " ಅಕ್ಕ, ನಿಮ್ಮ ಬ್ಲಾಗ್ ವೀಡಿಯೋ ಎಲ್ಲಾ ವಾಟ್ಸಪ್ ಗ್ರೂಪುಗಳಲ್ಲಿ ತಿರುಗಾಡುತ್ತಾ ಇದೆ, ನನಗೆ ಇದರ ವಿವರ ಇನ್ನಷ್ಟು ಬೇಕಲ್ಲ... ನಿಮ್ಮ ಯಜಮಾನರ ಕಿರುಪರಿಚಯ, ಕ್ಲೋಸ್ ಅಪ್ ಫೊಟೋ ... ಆ ಉಪಕರಣದ್ದು... " ಅನ್ನುತ್ತಾ ಹೋದರು.
" ಇನ್ನೇನು ಅರ್ಧ ಗಂಟೆಯಲ್ಲಿ ಇವರು ಬರಲಿಕ್ಕಾಯಿತು... ಎಲ್ಲ ವಿವರ ಅವರೇ ಕೊಡ್ತಾರೆ ಬಿಡಿ..." ಅಂದ್ಬಿಟ್ಟು ಸುಮ್ಮನಾಗಬೇಕಾಯಿತು.
ಮುಂದೆ ನಮ್ಮವರೂ ಪಡ್ರೆಯವರೂ ಫೋನ್ ಪಟ್ಟಾಂಗ ಮುಂದುವರಿಸಿದರು.
ಕೊನೆಗೆ ಇವರು ಹೇಳಿದ್ದು, " ನೀವು ಬರೆದಿದ್ದನ್ನು ನಾನು ಓದಿದ ನಂತರ ಪತ್ರಿಕೆಯಲ್ಲಿ ಪ್ರಕಟಿಸಿ. "
ನುಡಿದಂತೆ ಅವರೂ ಲೇಖನದ ಪ್ರತಿಯನ್ನು ಕಳುಹಿಸಿ ಕೊಟ್ಟರು.
ಅವರ ಬರವಣಿಗೆಯನ್ನು ಓದಿ ನಮ್ಮೆಜಮಾನ್ರು ಸೋತುಹೋದರು.
" ಛೇ... ಇಷ್ಟು ಚೆನ್ನಾಗಿ ಬರೀತಾರೆ ಅಂತ ಗೊತ್ತಿದ್ದಿದ್ರೆ ಇನ್ನೂ ವಿಷಯ ಹೇಳ್ತಿದ್ದೆ... ಕೇವಲ ನಾನು ಫೋನಿನಲ್ಲಿ ಹೇಳಿದ ಶಬ್ದಗಳನ್ನು ಯಾರಿಗೂ ಪ್ರಶ್ನೆ ಹಾಕಲು ಅವಕಾಶವಿಲ್ಲದ ಹಾಗೆ ಈ ಥರ ಬರೆದಿರಬೇಕಾದ್ರೇ... "
ನನಗೋ ನಗು, " ಮತ್ತೇ ಪತ್ರಕರ್ತರೆಂದರೆ ಸುಮ್ಮನೆಯಾ..."
" ಅಡಿಕೆ ಪತ್ರಿಕೆ " ಹೆಸರೇ ಸೂಚಿಸುವಂತೆ ಕೃಷಿಕರಿಗಾಗಿ ಇರುವ ಮಾಸಪತ್ರಿಕೆ. ಇದು ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ. 2016, ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟಿತವಾಗಿರುವ ಚಿತ್ರಲೇಖನ, ಇದರ PDF ಪ್ರತಿಯನ್ನು ಶ್ರೀಪಡ್ರೆಯವರೇ ನಮ್ಮ ಓದಿಗಾಗಿ ಮಿಂಚಂಚೆಯಲ್ಲಿ ರವಾನಿಸಿದ್ದು ಇಲ್ಲಿದೆ.
ಟಿಪ್ಪಣಿ: ಈ ಯಂತ್ರ ಕೇವಲ ಬಗ್ಗಿ ಹೆಕ್ಕುವ ಕೆಲಸದಲ್ಲಿ ಮಾತ್ರ ಸುಧಾರಣೆ ತಂದಿದ್ದಲ್ಲ, high speed pickup tool ಆಗಿರುತ್ತದೆ.
0 comments:
Post a Comment