Pages

Ads 468x60px

Friday, 26 February 2016

ಏನಂತೆ ಮೆಂತೆಯ ಸುದ್ದಿ....




                 
                     
  

" ಕೆಸುವಿನ ಪತ್ರೊಡೆ ಮಾಡೂ..." ಇದು ನಮ್ಮೆಜಮಾನ್ರ ಕೇಳಿಕೆ.   ಅಂಗಳದ ಹಿಂದೆ ಮುಂದೆ ಎಲ್ಲೆಲ್ಲೂ ಮಳೆಗಾಲದಲ್ಲಿ ವೈಭವದಿಂದ ಮೆರೆಯುವ ಕೆಸುವಿನ ಎಲೆಗಳೂ,  ಅದರ ಜೊತೆಜೊತೆಗೇ ತಲೆಯೆತ್ತಿ ನಿಂತಿರುವ ಕರಿಕೆಸುವಿನೆಲೆಗಳು,  ಆದ್ರೂ ಪತ್ರೊಡೆಯ ಸುದ್ದಿಗೆ ನಾನು ಹೋಗಿರಲಿಲ್ಲ.  ಸುಮ್ಸುಮ್ನೇ ಯಾಕೇಂತ ನನ್ನ ತೀರ್ಮಾನವಾಗಿತ್ತು.   ಇಬ್ಬರೇ ಮನೆಯಲ್ಲಿರುವಾಗ ಪತ್ರೊಡೆ ಮಾಡಹೊರಟು ಕೆಸುವಿನೆಲೆ,  ಬಾಳೆ ಎಲೆ, ಅಕ್ಕಿ,  ಮೆಣಸು ಇನ್ನೇನೋ ಮಣ್ಣಾಂಗಟ್ಟಿ ,  ಮುಗಿಯದ ಒದ್ದಾಟ...

ಆದ್ರೆ ಮೊನ್ನೆ ಏನಾಯ್ತೂಂದ್ರೆ ಮುಂಜಾನೆ ತಿಂಡಿ ಹೊತ್ತಿಗೆ ನಾಲ್ಕಾರು ಅತಿಥಿಗಳು ಬರುವವರಿದ್ದರು.   ಇಂತಹ ಸಂದರ್ಭದಲ್ಲಿ ಕೆಸುವಿನ ಪತ್ರೊಡೆ ತಯಾರಾಯ್ತು.  ಅತಿಥಿಗಳಿಗೆ ತಿಂಡಿ ಕಾಫಿಯ ಸಮಾರಾಧನೆ ಆಗುತ್ತಿದ್ದಂತೆ ಪರಿಚಿತರೇ ಆಗಿದ್ದ ನಮ್ಮ ಕುಲಪುರೋಹಿತರೂ ಆದ ಅನಂತ ಭಟ್ಟರಿಗೆ ನನ್ನ ಪ್ರಶ್ನೆಯ ಬಾಣ ಎಸೆದೆ.

" ನಿಮ್ಮ ಮನೇಲಿ ಏನು ತಿಂಡಿ ಇವತ್ತು ?"
ನನ್ನ ಕುತೂಹಲಕ್ಕೆ  "ಮೆಂತೆ ಇಡ್ಲಿ "  ಎಂದರು ಭಟ್ಟರು.
ಪುರೋಹಿತರಾದರೂ ವಯಸ್ಸಿನಲ್ಲಿ ನನಗಿಂತ ತುಂಬ ಚಿಕ್ಕವರಾಗಿದ್ದುದರಿಂದ ಮಾತು ಮುಂದುವರಿಯಿತು.    
" ಹೌದ,  ಮೆಂತೆ ಕಹಿ ಅಲ್ವಾ ?"
" ಹಂಗೇನಿಲ್ಲ,  ಬೆಲ್ಲ,  ತೆಂಗಿನಕಾಯಿ ಹಾಕುತ್ತಲ್ಲ,  ಸಿಹಿಯಾಗಿರುತ್ತೆ "
" ಹಾಗೋ,  ಮೆಂತೆ ಎಷ್ಟು ಹಾಕ್ಬಹುದೂ..."
" ಅದೂ ಮನೆಯಲ್ಲಿ ಕೇಳಿ ಹೇಳ್ತೇ..."

ಸಾಕಷ್ಟು ಪಾಕವಿಧಾನದ ಪುಸ್ತಕಗಳಿರುವಾಗ,  ಮೆಂತೆ ಇಡ್ಲಿಗಾಗಿ ಹುಡುಕಾಟ,  ಹೆಚ್ಚಾಗಿ ನಾನು ನೋಡೋದು ಕಡಂಬಿಲ ಸರಸ್ವತಿ ಬರೆದದ್ದನ್ನು ,   ಮೆಂತೆ ಇಡ್ಲಿ ಅವರು ಬರೆದಂತಿಲ್ಲ.  ಶಾಂತಾದೇವಿ ಮಾಳವಾಡ ಬರೆದಿರುವ ಪುಸ್ತಕ ಬಿಡಿಸಿ ನೋಡಿದಾಗ ನಮ್ಮ ಎಂದಿನ ಇಡ್ಲಿಗೂ ಅವರು ಮೆಂತೆಯ ಕಂಪು ತಂದಿದ್ದಾರೆ.  ಇದು ನನಗೂ ಹೊಸದು,  ಮಾಡಿ ನೋಡೋಣ.

ಮೆಂತೆ ನೆನೆದಷ್ಟೂ ಒಳ್ಳೆಯದು,  2 ಚಮಚ ಮೆಂತೆಯನ್ನು ಮುಂಜಾನೆಯೇ ನೆನೆ ಹಾಕಿರಿ.
ಅರೆಯುವ ಅರ್ಧ ಗಂಟೆ ಮೊದಲು ಒಂದು ಕುಡ್ತೆ ಉದ್ದು ತೊಳೆದು ಇಟ್ಟಿರಿ.
ಬೆಳ್ತಿಗೆ ಅಕ್ಕಿ ಆಗಿದ್ದರೆ 2 ಕುಡ್ತೆ ಅಳೆದು ನೀರೆರೆದು ಬಿಡಿ.
ಕುಚ್ಚುಲಕ್ಕಿ ಇದ್ದಲ್ಲಿ 3 ಕುಡ್ತೆ ಹಾಕಬಹುದಾಗಿದೆ.  ಇಡ್ಲಿಗಳೂ ಹೆಚ್ಚು ಲಭ್ಯ,  ಕುಚ್ಚುಲಕ್ಕಿಯಿಂದ ಮಾಡಿದ  ಇಡ್ಲಿಗೆ ' ಒದಗು ' ಹೆಚ್ಚು ಎಂಬುದು ನಮ್ಮ ರೂಢಿಯ ಮಾತು.

ಸಂಜೆಯಾಗುತ್ತಲೂ ನೆನೆ ನೆನೆದ ಉದ್ದು ಮೆಂತೆಗಳನ್ನು ತೊಳೆ ತೊಳೆದು ಅರೆದು, ಅಕ್ಕಿಯನ್ನು ತರಿತರಿಯಾಗಿ ರುಬ್ಬಿ,  ಹಿಟ್ಟು ಕೂಡಿಸಿ,  ಉಪ್ಪು ಬೆರೆಸಿ ಹುದುಗು ಬರಲು ಇಟ್ಟಾಯ್ತು.   ಚೆನ್ನಾಗಿ ನೆನೆದ ಮೆಂತೆಯಲ್ವೇ, ಇಡ್ಲಿ ಒಂದಿಷ್ಟೂ ಕಹಿ ಬರಲಿಲ್ಲ ಕಣ್ರೀ,  ಮೃದುಮಧುರವಾದ ಇಡ್ಲಿಗಳನ್ನು ಒಂದೆಲಗದ ಚಟ್ಣಿಯೊಂದಿಗೆ ತಿಂದಾಯ್ತು.

ಮೆಂತೆ ಕಹಿಯ ಅನುಭವ ಹಿಂದೊಮ್ಮೆ ಆಗಿತ್ತು.   ಆಗ ಟೀವಿ ಧಾರಾವಾಹಿಗಳೂ,  ಅಡುಗೆ ಕಾರ್ಯಕ್ರಮಗಳೂ ಹೊತ್ತು ಕಳೆಯುವ ವ್ಯಾಪಾರವಾಗಿತ್ತು.   ಒಂದು ದಿನ  ' ಮೆಂತೆ ಕಡಗ ' ಎಂಬ ಆಡುಗೆ ಪ್ರಾತ್ಯಕ್ಷಿಕೆ ಪ್ರಸಾರವಾಯಿತು.   ನಿರೂಪಕಿ,  " ಮೆಂತೆ ಬಹಳ ಒಳ್ಳೆಯದು,  ಬಾಣಂತಿಯರಿಗೆ ಹಾಲು ವೃದ್ಧಿಯಾಗಲು ಹಿಂದಿನ ಕಾಲದವರು ಈ ಥರಹದ ಮೆಂತೆ ತಿನಿಸು ಮಾಡಿ ಇಡ್ತಿದ್ರು "  ಅನ್ನುತ್ತಾ ಮಾಡಿಯೂ ತೋರಿಸಿದಳು.  ನೆನೆ ಹಾಕಿದ ಮೆಂತೆಯನ್ನು ನುಣ್ಣಗೆ ಅರೆದು,  ಕಾದ ಎಣ್ಣೆಗೆ ವೃ್ತತ್ತಾಕಾರದಲ್ಲಿ ಇಳಿಸಿ,  ಕರಿದು ತೆಗೆಯುವುದು.  ಡಬ್ಬದಲ್ಲಿ ವಾರಗಟ್ಟಳೆ ಇಟ್ಟುಕೊಳ್ಳಲೂ ಬಹುದು.   

ಸರಿ ಹೋಯ್ತು,  ಸುಲಭವಾಗಿ ಮಾಡಬಹುದಲ್ಲ ಅಂದ್ಬಿಟ್ಟು ನನ್ನದೂ ಮೆಂತೆ ಕಡಗ ತಯಾರಾಯ್ತು.   " ಆರೋಗ್ಯಕರ ತಿಂಡಿ " ಅನ್ನುತ್ತ ಮಕ್ಕಳ,  ನಮ್ಮೆಜಮಾನ್ರ ಮುಂದಿಟ್ಟೆ.
" ದೇವ್ರೇ... ಕಹಿ ಕಹಿ... ಥೂ ! ಇದೂ ಒಂದು ತಿಂಡಿಯಾ..." ಅನ್ನುತ್ತ ಅರ್ಧಂಬರ್ಧ ತಿಂದು ಎಲ್ಲರೂ ಎದ್ದರು.
ನಮ್ಮ ಚೆನ್ನಪ್ಪನೂ ಸಂಜೆಯ ಚಹಾ ಕುಡಿಯಲು ಕಾದಿದ್ದ.
" ಎಲ್ಲರೂ ಕಹೀ ಅಂದ್ರು,  ನೀನೂ ತಿಂದು ನೋಡು..."
ಅವನು ತಿಂದ,  " ಮೆಂತೆ ಒಳ್ಳೆಯದು ಅಕ್ಕಾ " ಅಂದ.  ಉಳಿದ ಮೆಂತೆಯ ವಡೆಗಳನ್ನು ಅವನಿಗೇ ಕಟ್ಟಿ ಕೊಟ್ಟೆ.


                                                                         ಗೌರತ್ತೆಯ ಮೆಂತೆ ಇಡ್ಲಿ


" ನಮ್ಮ ಪುರೋಹಿತ ಭಟ್ರು ಹೇಳಿದ ಮೆಂತೆ ಇಡ್ಲಿ ಹಳೇ ಕಾಲದ್ದು, ನನ್ನಮ್ಮ ಮಾಡ್ತಿದ್ರು,  ಶರೀರಕ್ಕೂ ತಂಪು ಗೊತ್ತಾ,     ಮೈಕೈ ನೋವಿಗೂ ಒಳ್ಳೆಯದು " ಎನ್ನುತ್ತಾ ಗೌರತ್ತೆ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.

ನಮ್ಮ ಕರಾವಳಿಯಲ್ಲಿ ತೆಂಗಿನಕಾಯಿ,  ಬೆಲ್ಲ ಹಾಕದೆ ಮೆಂತೆಯ ಅಡುಗೆ ಮಾಡುವ ರೂಢಿ ಇಲ್ಲ.   ಒಣಮೆಣಸು ಹಾಗೂ ಒಂದು ಚಮಚ ಮೆಂತೆ ಹುರಿದು ತೆಂಗಿನಕಾಯಿಯೊಂದಿಗೆ ಅರೆದು ಬೆಲ್ಲ, ಹುಳಿ, ಉಪ್ಪು ಹಾಕಿ ಕುದಿಸಿ,  ಸಾರಿನಂತೆ ತೆಳ್ಳಗಿರಲಿ,  ಒಗ್ಗರಣೆ ಬೀಳಲಿ,  ಇದು ಮೆಂತೆ ಕೊದಿಲು ಯಾ ಕೊದ್ದೆಲ್.  ಮುಂಜಾನೆಯ  ಒತ್ತು ಶಾವಿಗೆ,  ಇಡ್ಲಿ,  ಉದ್ದಿನ ದೋಸೆಗೂ ಸಿಹಿಯಾದ ಕೂಟು.

ಈಗ ನಾವು ಮಾಡ ಹೊರಟಿರುವ ಇಡ್ಲಿಗೂ ತೆಂಗಿನತುರಿ ಹಾಗೂ ಬೆಲ್ಲ ಅತ್ಯಾವಶ್ಯಕ.  " ಇಂಗು ತೆಂಗು ಇದ್ರೆ ಮಂಗೂನೂ ಅಡುಗೆ ಮಾಡುತ್ತೆ "  ಅನ್ನೋ ಗಾದೆಮಾತು ನೆನಪಾಯ್ತು.   ಇಲ್ಲಿ  ' ಮಂಗು '  ಪದ ಪದಾರ್ಥ ಬೆಕ್ಕನ್ನು ಉದ್ಧೇಶಿಸಿ ಹೇಳಲಾಗಿದೆ,  ಅದೂ ಅಡುಗೆಮನೆಯಲ್ಲೇ ಸುಳಿದಾಡುತ್ತ ಇರುವ ಹೆಣ್ಣು ಬೆಕ್ಕು ಮಂಗು ಎನಿಸಿಕೊಂಡಿದೆ.   ಇರಲಿ,  ನಾವೀಗ ಗೌರತ್ತೆಯ ಮೆಂತೆ ಇಡ್ಲಿ ಮಾಡೋಣ. 

ಈ ಇಡ್ಲಿಯ ವಿಶೇಷ ಏನಪ್ಪಾಂದ್ರೆ ಉದ್ದು ಹಾಕದ ಮೃದುವಾದ ಇಡ್ಲಿ ತಿನ್ನುವ ಭಾಗ್ಯ ನಮ್ಮದು.

2 ಪಾವು ಅಳತೆ ಬೆಳ್ತಿಗೆ ಅಕ್ಕಿ ನೆನೆ ಹಾಕಿ.
4 ಚಮಚ ಮೆಂತೆ,  ಚೆನ್ನಾಗಿ ನೆನೆಯಲು ಬೆಳಗ್ಗೇನೇ ಮೊಸರಿನಲ್ಲಿ ಹಾಕಿರಿ.
 ಸಂಧ್ಯಾಕಾಲದಲ್ಲಿ ಗಂಧದಂತೆ ಅರೆಯಿರಿ,  ಅರೆಯುವಾಗ ಒಂದು ಕಡಿ ಕಾಯಿತುರಿ ಸೇರಲಿ. 
ಅದೇ ಹಿಟ್ಟಿಗೆ ಅಕ್ಕಿಯನ್ನೂ ತೊಳೆದು ಹಾಕಿ ತರಿತರಿಯಾಗಿ ಅರೆದು ತೆಗೆಯಿರಿ.
ರುಚಿಗೆ ಉಪ್ಪು,  ಸಿಹಿಗೆ ಬೆಲ್ಲ ಹಾಕಿಟ್ಟು,  ಹುದುಗು ಬರಲು ಮುಚ್ಚಿಟ್ಟಿರಿ.
ಮಾರನೇ ದಿನ ಇಡ್ಲಿ ಮಾಡುವುದು,  ಬಾಳೆಲೆಯಲ್ಲಿ ತುಂಬಿಟ್ಟು ಮಾಡಿದ ಇಡ್ಲಿ ಇನ್ನೂ ಸ್ವಾದಿಷ್ಟ.
ತೆಂಗಿನ ಚಟ್ಣಿ,  ಗಟ್ಟಿ ಮೊಸರು ಜೊತೆಗಿರಲಿ,  ಅಂತೂ ನಮ್ಮ ಮುಂಜಾನೆ ಸಿಹಿಸಿಹಿ ಮೆಂತ್ಯದ ಇಡ್ಡಲಿಯೊಂದಿಗೆ ಸಂಪನ್ನವಾಯಿತು.

ಮೆಂತೆ ಚಟ್ಣಿ,  ಮೆಂತೆ ತಂಬುಳಿ,  ಮೆಂತೆ ಗಂಜಿ ಹೀಗೆ ಬರೆದಷ್ಟೂ ಮುಗಿಯುವಂತಿಲ್ಲ,   ಆಧುನಿಕ ಪರಿಭಾಷೆಯಲ್ಲಿ ಮೇಥೀ ರೈಸ್ ಮಾಡಿದ್ರಾಯ್ತು.

ಮೆಂತೆ ತಂಬುಳಿ ಮಾಡಿ ನೋಡೋಣ,
ಒಂದು ಚಮಚ ಮೆಂತೆ ಎರಡು ಒಣಮೆಣಸಿನಕಾಯಿ ಹುರಿಯಿರಿ.
ಒಂದು ಹಿಡಿ ಕಾಯಿತುರಿ ಹಾಗೂ ಸಿಹಿಮಜ್ಜಿಗೆಯೊಂದಿಗೆ ಅರೆಯಿರಿ.
ರುಚಿಗೆ ಉಪ್ಪು ಹಾಗೂ ಸಿಹಿಗೆ ಬೆಲ್ಲ ಹಾಕಿ ಕುದಿಸಿರಿ.
ತಂಬುಳಿ ಸಾರಿನಂತೆ ತೆಳ್ಳಗಿರಬೇಕು,  " ಇದೇನು ಚಟ್ಣಿಯಾ ?" ಎಂದು ಕೇಳುವಂತಿರಬಾರದು.
ಈ ತಂಬುಳಿ ಹಾಲೂಡಿಸುವ ತಾಯಂದಿರಿಗೆ ಪ್ರತಿದಿನವೂ ಕೊಡಲು ಯೋಗ್ಯ,  ಎದೆಹಾಲು ವೃದ್ಧಿಸುವುದು.   ಮಾಮೂಲಿ ತಂಬುಳಿಯನ್ನು ಕುದಿಸಲಿಕ್ಕಿಲ್ಲ,  ಆದರೆ ಬಾಣಂತಿಯ ಆಹಾರವಾಗಿರುವುದರಿಂದ ಕುದಿಸಬೇಕೆಂದು ಬರೆದಿದ್ದೇನೆ.

ಸಾದಾ ಉದ್ದಿನದೋಸೆಗೂ ಮೆಂತೆ ಹಾಕಿದ್ರೇನೇ ರುಚಿ.  ಅದೇನೇ ಸಾಂಬಾರು ತಯಾರಿಸಿದ್ರೂ ಮೆಂತೆ ಕಾಳುಗಳನ್ನೂ ಮಸಾಲೆಯೊಂದಿಗೆ ಹುರಿಯದೆ ಆಗದು.  ಹ್ಞಾ,  ಉಪ್ಪಿನಕಾಯಿಗೂ ಹುರಿದ ಮಸಾಲೆ ಮಾಡುವುದಿದೆ,  ಮೆಂತೆಯನ್ನು ಬಿಡುವಂತಿಲ್ಲ.  ದಕ್ಷಿಣ ಭಾರತೀಯರ ಅಡುಗೆಮನೆಯ ಸಾಂಬಾರ್ ಡಬ್ಬಿಯಲ್ಲಿ ಮೆಂತೆ ಇದ್ದೇ ಇದೆ.

ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ ಉತ್ಥಾನ, 2016, ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟಿತ.


" ನಿಮ್ಮ ಮನೆಯ ಮೆಂತೆ ಇಡ್ಲಿ ಉತ್ಥಾನದಲ್ಲಿ ಬಂದಿದೆ ನೋಡ್ರೀ..." ಅಂದಾಗ ಕುತೂಹಲಿಗಳಾಗಿ ಪತ್ರಿಕೆಯ ಪುಟ ತಿರುವಿ ಹಾಕುತ್ತಿರುವ ಪರಕ್ಕಜೆ ಅನಂತನಾರಾಯಣ ಭಟ್ಟರು.


     

0 comments:

Post a Comment