ಆಗ
ಸುಮ್ಮನೆ ಕೂತಿದ್ದೆ
ಈ
ಟೇಬಲ್ ಮೇಲೆ ಓಡಿ
ಓಽಽಽ
ಹಾರಿ ಹಾರಿ ಬಂದಿದ್ದು
ಹೌದಲ್ಲ,
ಕೈಯಲ್ಲಿ ಹಿಡಿದು
ಗಾಳಿಯಲ್ಲಿ ಊಪಿ
ಹಾರಿ ಬಿಡುತ್ತಿದ್ದಾಗ
ಅದು ಬಾಲ್ಯವಾಗಿತ್ತು|
ಎಲ್ಲಿಂದ ಬಂದಿತೋ
ಅದೆಲ್ಲಿಗೆ ಹಾರಿ ಹೋಯಿತೋ
ಒಂದೂ
ತಿಳಿಯದೇ ಹೋದಾಗ
ಬಾಲ್ಯ ಮುಗಿದಿತ್ತು
ಅಜ್ಜನ ಗಡ್ಡದಂತೆ
ಕೂದಲು ಬೆಳ್ಳಗಾಗಿತ್ತು|
ವನಸ್ಪತಿ ಸಸ್ಯ, ಎಲೆ ಮತ್ತು ಕಾಂಡಗಳನ್ನು ಅಡುಗೆಯಲ್ಲೂ ಬಳಸಬಹುದಾಗಿದೆ. ಎಲೆಯು ತಿರುಳಿನಿಂದ ಕೂಡಿದ್ದು ಸೂಪ್ ತಯಾರಿಕೆಗೆ ಸೂಕ್ತವಾಗಿದೆ. ಕಟುವಾದ ರುಚಿ ಹಾಗೂ ಸುವಾಸನೆಯಿಂದಾಗಿ ನಾನ್ ವೆಜ್ ಅಡುಗೆಗಳಲ್ಲಿ ಈ ಸಸ್ಯ ಬಳಕೆಯಿದೆ, ಅದೂ ಆಫ್ರಿಕಾ ದೇಶದಲ್ಲಿ! ಥಾೖಲ್ಯಾಂಡ್ ದೇಶದಲ್ಲಿ ಬೇರು ಕೂಡಾ ಆಹಾರ ಪದಾರ್ಥವಾಗಿದೆ. ಆಸ್ಟ್ರೇಲಿಯಾದಲ್ಲಿಯೂ ಇದನ್ನೂ ಸಲಾಡ್ ತಯಾರಿಯಲ್ಲಿ ಹಸಿ ಹಾಗೂ ಬೇಯಿಸಿ ಬಳಸಲಾಗುತ್ತದೆ.
ಕಾಡು ಸೇವಂತಿಗೆ ಎಂದೂ ಹೇಳಲಾಗುವ ಈ ಸಸ್ಯ ಔಷಧೀಯ ಗುಣವನ್ನೂ ಹೊಂದಿದೆ. ತಲೆಶೂಲೆ ಹಾಗೂ ಉದರಶೂಲೆಗಳಿಗೆ ಇದರ ಎಲೆಗಳ ಕಷಾಯ ಔಷಧ. ಎಲೆಗಳಿಂದ ತಯಾರಿಸಿದ ಮುಲಾಮು, ಚರ್ಮದ ಮೇಲಿನ ಗಾಯಗಳಿಗೆ ರಾಮಬಾಣವಾಗಿದೆ. ಒಣಗಿಸಿ ಹುಡಿ ಮಾಡಿಟ್ಟು ನಶ್ಯದಂತೆ ಮೂಗಿಗೆಳೆದು ಮೂಗಿನ ರಕ್ತಸ್ರಾವವನ್ನು ನಿಲ್ಲಿಸಬಹುದು.
ಅತಿ ಹಗುರಾದ ಇದರ ಬೀಜಗಳು ಗಾಳಿಯೊಂದಿಗೆ ಚಲಿಸುವ ಶಕ್ತಿ ಪಡೆದಿವೆ, ಸಸ್ಯಶಾಸ್ತ್ರೀಯವಾಗಿ Crassocephalum crepidioides ಎನ್ನಲಾಗುವ ಈ ಗಿಡವನ್ನು Thickhead, Fireweed ಅಂತಲೂ ಹೇಳಲಾಗುತ್ತದೆ.
ನನ್ನ ಗೂಗಲ್ ರಿಸರ್ಚ್ ಮುಂದುವರಿಯುತ್ತಿದ್ದ ಹಾಗೆ ಚೆನ್ನಪ್ಪ " ಚಹಾ ಆಯ್ತೇನಕ್ಕಾ ... " ಅನ್ನುತ್ತಾ ಬಂದ. ಮಣ್ಣಿನ ಮಗನಾದ ಚೆನ್ನಪ್ಪ ಎದುರಿನಲ್ಲೇ ಇರುವಾಗ ಅಂತರ್ಜಾಲದ ಹುಡುಕಾಟ ಅರ್ಥವಿಲ್ಲದ್ದು ಎಂದೂ ಹೊಳೆಯಿತು. ಚಹಾ ಬೆರೆಸಿ ಕೊಟ್ಟು, " ಹೌದಾ ಚೆನ್ನಪ್ಪಾ... ಗಾಳಿಯಲ್ಲಿ ಹಾರುತ್ತಾ ಬರುವುದುಂಟಲ್ಲ, ಅದೇ ಅಜ್ಜನ ಗಡ್ಡ... ಅದು ಯಾವ ಗಿಡದ್ದೂ ?"
" ಗಾಳಿಯೊಟ್ಟಿಗೆ ಬರುವಂತಾದ್ದು ಗಿಡವೂ ಉಂಟು, ಬಳ್ಳಿಯೂ ಉಂಟು... ತುಳುವಿನಲ್ಲಿ ಏನೋ ಒಂದು ಹೆಸ್ರು ಇದೆ... " ಅಂದ ಆತ ಏನೋ ತೊದಲಿದ.
" ನಿನ್ನ ತುಳು ಶಬ್ದ ಗೂಗಲ್ ಗೆ ಅರ್ಥ ಆಗುವಂತದ್ದಲ್ಲ... ಕಾಡುಸೇವಂತಿಗೆ ಕೇಳಿದ್ದೀಯಾ?"
" ಇಲ್ವಲ್ಲ..."
ಮಾರನೇ ದಿನ ಬೆಳಗ್ಗೆ ಬರುವಾಗ ಕೈಯಲ್ಲೊಂದು ಗಿಡದ ಕೊಂಬೆ, ಅದೂ ಹೂವರಳಿದ ಎಕ್ಕದ ಗಿಡ ಕೈಯಲ್ಲಿ ಹಿಡಿದುಕೊಂಡು ಬಂದ ಚೆನ್ನಪ್ಪ.
ನನಗೆ ನಿನ್ನೆ ಹೇಳಿದ ವಿಷಯ ಮರೆತೇ ಹೋಗಿತ್ತು. " ಇದು ಯಾಕೆ ಎಕ್ಕದ ಹೂ ತಂದಿದ್ದೀಯಾ ?"
" ನೀವು ನಿನ್ನೆ ಕೇಳಿದ್ರಲ್ಲ, ಈ ಹೂ ಕಾಯಿ ಆಗುವಾಗ ಈ ಕೋಡು ಉಂಟಲ್ಲ, ಅದರೊಳಗೆ ಅಂಥದ್ದೇ ಅಜ್ಜನ ಗಡ್ಡ ಇರ್ತದೆ. " ಇದು ಅವನ ವಿಶ್ಲೇಷಣೆ.
" ಓ... ಸರಿ, ಈ ಹಸೀ ಕೋಡು ಒಣಗಲಿ ನೋಡುವಾ..."
" ಒಣಗಿದ ಕೋಡು ಇತ್ತು, ಅದು ಕೊಯ್ಯಲಿಕ್ಕೆ ಬರಲಿಲ್ಲ... " ಅನ್ನುತ್ತಾ ತನ್ನ ನಿತ್ಯಕೆಲಸಕ್ಕೆ ಹೊರಟ.
ಸಸ್ಯಲೋಕ ಒಂದು ವಿಸ್ಮಯ ಪ್ರಪಂಚ. ಇಂತಹುದೇ ಸಸ್ಯ ಪ್ರಕಾರ ಸಿಗಬೇಕು ಎಂದಿದ್ದರೆ ಕಾಡುಮೇಡು ಅಲೆಯಲೂ ಸಿದ್ಧರಾಗಿರಬೇಕು ಅಂದುಕೊಳ್ಳುತ್ತ ಬದನೇಕಾಯಿಗಳನ್ನು ಕೊಯ್ದು ತರಲು ಬುಟ್ಟಿ ಹಿಡಿದು ಹೊರಟೆ.
0 comments:
Post a Comment