" ಅಮ್ಮಾ ನಂದು ರಿಸಲ್ಟ್ ಬಂತು, ಡಿಸ್ಟಿಂಕ್ಷನ್ ಬಂದಿದೇ..." ಅಂದ್ಬಿಟ್ಟು ಕಂಪ್ಯೂಟರಲ್ಲಿ ಮುಖ ಹುದುಗಿಸಿದ ಮಗಳು.
" ಹಂಗಿದ್ರೆ ಫೇಸ್ ಬುಕ್ಕಲ್ಲಿ ಹಾಕ್ಬಿಡೂ, ನಾನು ಲೈಕ್ ಕುಟ್ತೇನೇ.."
" ನಿನ್ನ ಫೇಸ್ ಬುಕ್ಕೂ ಏನೂ ಬ್ಯಾಡ, ಸುಮ್ನಿರು "
" ಆಯ್ತೂ, ಪಾಯಸ ಮಾಡಿ ಕುಡಿಯೋಣ " ಅನ್ನುತ್ತಾ ಅಡುಗೆಮನೆಗೆ ನನ್ನ ಪಾದ ಎಳೆಯಿತು. ಪಾಯಸ ಮಾಡಲು ಬೇಕಾದ ಶಾವಿಗೆ, ಗೋಡಂಬಿ, ದ್ರಾಕ್ಷಿ ಎಲ್ಲ ಇದ್ದರೂ ಮುಖ್ಯವಾಗಿ ಅವಿ್ಳಗೇ ಪಾಯಸ ಇಷ್ಟವಿಲ್ಲ. ಒಂದು ಚಿಕ್ಕ ತಟ್ಟೆಯಲ್ಲಿ ತಿನ್ನೋ ಸಂಭ್ರಮಕ್ಕೆ ನಾನ್ಯಾಕೆ ಒದ್ದಾಡಲಿ.... ನಾಳೆ ಮುಂಜಾನೆಯ ತಿಂಡಿಯನ್ನೇ ವಿಶೇಷವಾಗಿಸೋಣ.
" ಎಣ್ಣೆತಿಂಡಿ, ಅದೂ ಮುಂಜಾನೆ ಹೊತ್ತು... ನಿನ್ನಪ್ಪ ತಿಂತಾರೇನೇ ?"
" ಕೇಳಿ ನೋಡು, ಅಪ್ಪಂಗೆ ಆಗೋದಾದ್ರೆ ಆದೀತು..."
ಅವರೂ ಕಂಪ್ಯೂಟರು್ರ ಹಿಡಿದು ಕೂತಿರುವಾಗ ನಾವೂ ಮತಾಡ್ಸೋ ಹಾಗಿಲ್ಲ. " ಏನೋ ಒಂದು ಮಾಡು " ಎಂಬ ಉತ್ತರ ಗ್ಯಾರಂಟಿ.
ಎಣ್ಣೆ ಇದೆ, ಅದೂ ನಮ್ಮ ತೋಟದ್ದೇ ತೆಂಗಿನಕಾಯಿಗಳದ್ದು, ಶುದ್ಧವಾದ ತೆಂಗಿನೆಣ್ಣೆ ಮಾಡ್ಸಿ ಇಟ್ಕೊಂಡಿದ್ದೆವು. ಈ ಬಾರಿ ಮಳೆಗಾಲ ಒಂದು ತಿಂಗಳು ಮೊದಲೇ ಶುರುವಾದದ್ದೂ ನಮ್ಮ ಲೆಕ್ಕಾಚಾರವೆಲ್ಲ ತಾರುಮಾರಾಗಿ ಹಲಸಿನ ಹಪ್ಪಳಗಿಪ್ಪಳ ಏನೂ ಇಲ್ಲವಾದುದರಿಂದ ತೆಂಗಿನೆಣ್ಣೆ " ಯಾರೂ ಕೇಳೋರಿಲ್ಲ " ಅನ್ನುತ್ತಿತ್ತು.
" ಬಾಳೆಹಣ್ಣು ಉಂಟಲ್ಲ..."
" ಬಾಳೆಹಣ್ಣು ಹಾಕದೇ ಯಾವ ತಿಂಡಿಯೂ ಆಗಲ್ವ..?" ಮಗಳ ಕೋಕಿಲವಾಣಿ.
"ಹ್ಞು, ಆಯ್ತು "
2 ಲೋಟ ಗೋಧಿಹುಡಿ ಅಳೆದಿಟ್ಟಾಯಿತು, ಮೈದಾ ನನ್ಮಗಳಿಗೆ ಆಗದು. ಆಗದಿದ್ದರೆ ಒಳ್ಳೆಯದೆನ್ನಿ ! ಆಲ್ ಪರ್ಪಸ್ ಫ್ಲೋರ್ ಎಂದು ಖ್ಯಾತಿ ಪಡೆದಿರುವ ಮೈದಾಹಿಟ್ಟಿನಲ್ಲಿ ಯಾವುದೇ ಜೀವ ಪೋಷಕ ಸತ್ವಗಳಿಲ್ಲ.
ಅರ್ಧ ಲೋಟ ಸಿಹಿ ಮೊಸರು + ಅರ್ಧ ಲೋಟ ನೀರು.
ರುಚಿಗೆ ಉಪ್ಪು.
ಸಿಹಿಗೆ ಸಕ್ಕರೆ.
ಖಾರಕ್ಕೆ ಮೆಣಸಿನಹುಡಿ ಯಾ ಮಸಾಲೆಯುಕ್ತ ಮೆಣಸಿನಹುಡಿ.
ಸುವಾಸನೆಗೆ ಎಳ್ಳು, ಜೀರಿಗೆ.
ಎಲ್ಲವನ್ನೂ ತಪಲೆಗೆ ಸುರಿದು, ಗೋಧಿಹುಡಿಯನ್ನೂ ಬೆರೆಸಿ ಕಲಸಿಟ್ಟು, ಚಪಾತಿಗೆ ನಾದುವಂತೆ ನಾದಿಟ್ಟು, ಮುಚ್ಚಿಟ್ಟು... ಇನ್ನೇನಿದ್ದರೂ ನಾಳೆ ಮುಂಜಾನೆಗೇ.
ಕೂಡಲಿಕ್ಕೆ ಒಂದು ಕೂಟು ಆಗಲೇಬೇಕಲ್ಲ, ಡಬ್ಬದಲ್ಲಿದ್ದ ಯಾವುದೋ ಒಂದು ಬಗೆಯ ಕಾಳುಗಳನ್ನು ನೆನೆ ಹಾಕಿದ್ದೂ ಆಯ್ತು. ಇನ್ನೀಗ ವಿಶ್ರಾಂತಿಯ ಸಮಯ.
ಬೆಳಗಾಗೆದ್ದು ಕುಕ್ಕರಿನಲ್ಲಿ ಕಾಳುಗಳನ್ನು ಬೇಯಿಸಿದ್ದಾಯಿತು.
" ಹೌದೂ, ಬಾಳೆಹಣ್ಣು ಹಾಕ್ದೇ ಬನ್ಸ್ ಚೆನ್ನಾಗಿರುತ್ತ ?"
ನಾವು ಮನೆಯಲ್ಲಿ ಮಾಡುವ ಬನ್ಸ್ ಬಾಳೆಹಣ್ಣು ಹಾಕಿಯೇ ಮಾಡ್ತೀವಿ. ಇದೀಗ ಹೋಟಲ್ ತಿಂಡಿತಿನಿಸು ತಯಾರಕರು ಬಾಳೆಹಣ್ಣು ಹಾಕ್ತಾರೇಂತ ತಿಳ್ಕೊಂಡಿದ್ದೀರಾ ? ಏನೂ ಇಲ್ಲ, ಸುಮ್ನೇ ಹಿಟ್ಟು ಕಲಸಿಟ್ಟು ಬೇಕಿಂಗ್ ಪೌಡರೋ, ಸೋಡಾ ಹುಡಿಯೋ, ಯೀಸ್ಟೋ ಅಥವಾ ಅಜಿನೋಮೋಟೋ ಅಂತಾರಲ್ಲ, ಹೀಗೇನೋ ಹಾಕ್ತಾರಷ್ಟೇ.
" ಹಾಗಿದ್ರೆ ಇದಕ್ಕೂ ಬೇಕಿಂಗ್ ಪೌಡರು ಬಿತ್ತಾ ?"
" ಛೇ ಇಲ್ಲಾಪ್ಪ, ಅದನ್ನೆಲ್ಲ ನಾನು ತರಿಸೂದಕ್ಕಿಲ್ಲ, ಒಂದು ಸೌಟು ಮೊಸರು ಹಾಕಿದ್ದೇನಲ್ಲ, ಅದೇ ಸಾಕು.. "
ಒಮ್ಮೆ ಏನಾಗಿತ್ತೂಂದ್ರೆ, ಟೀವಿ ಅಡುಗೆ ಕಾರ್ಯಕ್ರಮಗಳಲ್ಲಿ ಯೀಸ್ಟ್ ಬಳಸುವುದನ್ನು ನೋಡೀ ನೋಡೀ ನಾನೂ ಯೀಸ್ಟ್ ತರಿಸಿಟ್ಕೊಂಡಿದ್ದೆ. ಕುಂಬ್ಳೆಯಿಂದ ತಂಗಿ ಅಂದಳು, " ಯಾಕೇ ಸುಮ್ಮನೆ, ಹಾಳಾಗುತ್ತೆ.."
ಹಾಗೇ ಆಯ್ತು, ಏಳೆಂಟು ಕಾಳುಗಳನ್ನು ಒಂದು ಬಾರಿ ಉಪಯೋಗಿಸಿ ತೆಗೆದಿರಿಸಿದ್ದೆ. ಇನ್ನೊಂದ್ಸಾರಿ ಯಾವಾಗಲೋ ತೆಗೆದು ನೋಡಿದಾಗ ಏನೋ ಕೆಟ್ಟ ವಾಸನೆ...
ಆದರೂ ಚಪಲ ಬಿಡಬೇಕಲ್ಲ, ಅಂಗಡಿ ಸಾಮಾನು ಪಟ್ಟಿ ಬರೆಯುವಾಗ ಯೀಸ್ಟ್ ಎಂದೂ ಬರೆದಿದ್ದೆ. ಬಂದ ಪ್ಯಾಕ್ ಬಿಡಿಸಿ ನೋಡಿದಾಗ ಉಪ್ಪಿನ ಹರಳಿನಂತಹ ಹುಡಿ ಕಾಣಿಸಿತು. ಕನ್ನಡಕ ಏರಿಸಿ ಪ್ಯಾಕ್ ಮೇಲೆ ಬರೆದಿದ್ದನ್ನು ಓದಿದಾಗ ' ಅಜಿನೋಮೋಟೋ ' ಎಂದಿತ್ತು. ಆಗ ಗೂಗಲ್ ಸರ್ಚ್ ಮಾಡಿ ನೋಡಲಿಕ್ಕೆ ಅಂತರ್ಜಾಲದ ಗಂಧಗಾಳಿ ಕೂಡಾ ಇರಲಿಲ್ಲ ಕಣ್ರೀ, ಯಥಾಪ್ರಕಾರ ತಂಗಿಯ ಮರೆ ಹೋಗಬೇಕಾಯಿತು. " ಅಯ್ಯೋ, ಅದನ್ನೆಲ್ಲ ಹಾಕಿ ಅಡಿಗೆ ಮಾಡ್ಬೇಡಾ, ಚೈನೀಸ್ ತಿಂಡಿಗಳಿಗೆ ಹಾಕ್ತಾರಂತೆ... ಬಿಸಾಡು ಅದನ್ನು !" ಅಂತಂದು ಬಿಟ್ಟಳು.
ಆಯ್ತು, ಅವಳಂದ ಹಾಗೆ ಮೂಲೆಗೆ ಒತ್ತರಿಸಲ್ಪಟ್ಟ ಅಜಿನೋಮೋಟೋ ಒಂದು ದಿನ ಹೊರಹೋಯಿತು.
" ನಾನು ಬರೆದಿದ್ದು ಯೀಸ್ಟ್ ಅಂತ, ಅಂಗ್ಡಿಯೋನು ಕೊಟ್ಟಿದ್ದು ಅಜಿನೋಮೋಟೋ... ಯಾಕೇಂತ ಕೇಳ್ರೀ..."
ನಮ್ಮೆಜಮಾನ್ರು ಜೀನಸಿನ ಜಗ್ಗಣ್ಣನನ್ನು ವಿಚಾರಿಸಿದಾಗ, ಅವ್ನು " ಎಲ್ರೂ ತೆಕ್ಕೊಂಡು ಹೋಗ್ತಾರೇ... ನಂಗೇನು ಗೊತ್ತು !" ಅಂದ್ಬಿಟ್ಟ.
ಈಗ ನಾವು ಬಾಳೆಹಣ್ಣೂ ಹಾಕದ, ಬೇಕಿಂಗ್ ಪೌಡರೂ್ರ ಇಲ್ಲದ ಬನ್ಸ್ ಮಾಡಲಿದ್ದೇವೆ. ಕಾಳುಗಳನ್ನೂ ಬೇಯಿಸಿದ್ದೂ ಆಗಿದೆ, ತೆಂಗಿನತುರಿ ಇಲ್ಲದೆ ನಮ್ಮ ಮಸಾಲೆ ಆಗುವುದೇ ಇಲ್ಲ, ತೆಂಗಿನತುರಿಯೊಂದಿಗೆ ಹುರಿದ ಒಣಮೆಣಸು, ಕಾಳುಮೆಣಸು, ಜೀರಿಗೆ, ಕೊತ್ತಂಬ್ರಿ, ಇಂಗು, ಕರಿಬೇವು ಇತ್ಯಾದಿಗಳನ್ನೂ ಅರೆಯಿರಿ, ಆಸಕ್ತರು ಹುರಿದ ನೀರುಳ್ಳಿ ಬೆಳ್ಳುಳ್ಳಿ ಕೂಡಿಸಿ ಅರೆಯಿರಿ. ಬೇಯಿಸಿದ ಕಾಳುಗಳಿಗೆ ಕೂಡಿಸಿ, ಕುದಿಸಿ, ಒಗ್ಗರಣೆ ಆಯ್ತೇ, ರುಚಿಗೆ ಉಪ್ಪು, ಹುಳಿ, ಬೆಲ್ಲ ಹಾಕ್ರೀ..., ಮತ್ತೆ ಮರೆಯದಿರಿ.
ಈಗ ಬಾಣಲೆಯಲ್ಲಿ ತೆಂಗಿನೆಣ್ಣೆ ಎರೆದು ಬಿಸಿಯಾಗಲು ಬಿಡಿ.
ಹಿಟ್ಟಿನಿಂದ ಲಿಂಬೆ ಗಾತ್ರದ ಉಂಡೆ ಮಾಡಿ, ಗೋಧಿ ಹುಡಿಯಲ್ಲಿ ಹೊರಳಿಸಿ, ತುಸು ಲಟ್ಟಿಸಿ. ತೆಳ್ಳಗೆ ಲಟ್ಟಿಸುವ ಅಗತ್ಯವಿಲ್ಲ.
ಒಂದೊಂದಾಗಿ ಎಣ್ಣೆಗೆ ಇಳಿಸಿ ಕರಿಯಿರಿ.
ಬಲೂನ್ ಥರ ಉಬ್ಬಿದ ಬನ್ಸು ತಟ್ಟೆಯಲ್ಲಿಟ್ಟು ತಿನ್ನಲು ಮಗಳು ಓಡುನಡಿಗೆಯಲ್ಲಿ ಬಂದಳು.
ಟಿಪ್ಪಣಿ: ಸದಬಿರುಚಿಯ ಮಾಸಪತ್ರಿಕೆ ಉತ್ಥಾನ, ಡಿಸೆಂಬರ್ 2015 ರ ಸಂಚಿಕೆಯಲ್ಲಿ ಪ್ರಕಟಿತ.
0 comments:
Post a Comment