Pages

Ads 468x60px

Monday 20 November 2017

ತಂಪಿನ ಪೇಯ




ಮಳೆಗಾಲದಲ್ಲಿ ಟಿಸಿಲೊಡೆಯುವ ಚಿಗುರು ಕುಡಿಗಳನ್ನು ಧಾರಾಕಾರ ಮಳೆ ಬೀಳುತ್ತಿರುವ ಕಾಲದಲ್ಲಿ ಹುಡುಕುತ್ತ ತೋಟ ಗುಡ್ಡ ತಿರುಗಾಟ ಸಾಧ್ಯವಾಗುವುದಿಲ್ಲ. ಏನಿದ್ದರೂ ಬಿಸಿಲು ಬರಬೇಕು. ನಾನು ಕಾಯುತ್ತಿದ್ದ ಬಿಸಿಲು ನಿನ್ನೆ ಬಂದಿತು. ಸಂಜೆಯಾಗುತ್ತಲೂ ಚಪ್ಪಲಿ ಮೆಟ್ಟಿ ಹೊರಟೆ. ಮನೆಯಿಂದ ಮುಂದಕ್ಕೆ ಡಾಮರು ರಸ್ತೆವರೆಗೆ ನಡೆದಾಡಿ ಬರೋಣ ಅಂದ್ಕೊಂಡಿದ್ದೆ. ಹೇಮಕ್ಕನ ಮನೆ ಗೇಟಿನವರೆಗೆ ತಲಪಿದಾಗ, ಹೇಮಕ್ಕ ಖುದ್ದು ಎದುರಾಗಿ ಗೇಟಿನ ಬಾಗಿಲು ತೆರೆದರು.

“ ನೋಡೀ ಇಲ್ಲಿ… ನಿಮ್ಮ ಕಂಪೌಂಡ್ ಪಕ್ಕದಲ್ಲಿ ತಗತೇ ಗಿಡ!  ಹೇಗೆ ಚಿಗುರಿಕೊಂಡಿದೆ… “
“ ಹೌದಲ್ಲವೇ, ನಿಮಗೆ ಬೇಕಿದ್ದರೆ ಚಿವುಟಿಕೊಳ್ಳಿ.”
“ ನೀವೂ ತಂಬುಳಿ ಮಾಡಿರಲ್ಲ… “
“ ಅಯ್ಯೋ, ತಂಬುಳಿ ಮಾಡಿದ್ರೆ ನಾನೊಬ್ಳೇ ತಿನ್ಬೇಕು...”
“ ಒಳ್ಳೆಯದಲ್ವಾ, ಮಳೆಗಾಲದಲ್ಲಿ ಒಂದ್ಸಾರಿಯಾದ್ರೂ ತಿನ್ನಬೇಕಂತೆ… “
ನಾನು ಒಂದು ಹಿಡಿ ಕುಡಿ ಚಿಗುರುಗಳನ್ನು ಕಿತ್ತು , “ಕತ್ತಲೂ ಆಯ್ತು... “ ಅನ್ನುತ್ತ ಮನೆಗೆ ಬಂದೆ.

ಮಾರನೇ ದಿನ ನನ್ನದೂ ತಂಬುಳಿಯ ಅಡುಗೆ.
ಹೇಗೆ ಮಾಡಿದ್ದೂ?
 ಕುಡಿ ಚಿಗುರುಗಳನ್ನು ತುಪ್ಪದಲ್ಲಿ ಹುರಿದು,
ಅರ್ಧ ಕಡಿ ತೆಂಗಿನತುರಿ,
ತುಸು ಜೀರಿಗೆ,
ನಾಲ್ಕಾರು ಕಾಳುಮೆಣಸು,
ರುಚಿಗೆ ಉಪ್ಪು,
ನುಣ್ಣಗೆ ಅರೆದು,
ಸಿಹಿ ಮಜ್ಜಿಗೆ ಎರೆದು,
ತೆಳ್ಳಗಾಗಲು ಇನ್ನಷ್ಟು ನೀರು ಎರೆದು,
ತಗತೆಯ ತಂಪು ಹುಳಿ ಸಿದ್ಧ.

ಹೇಮಕ್ಕ ಅಂದಂತೆ ತಂಬುಳಿ ಮುಗಿಯದೆ ಹೋಯಿತು. ರಾತ್ರಿ ಉಣ್ಣಬೇಕಾದರೆ ಕುದಿಸಬೇಕು. “ ಯಾರಿಗೆ ಬೇಕು ಈ ರಗಳೆ… “ ಅಂದ್ಬಿಟ್ಟು, ಟೇಬಲ್ ಮೇಲೆ ನನ್ನನ್ನೇ ಮಿಕಿ ಮಿಕಿ ನೋಡುತ್ತಿದ್ದ ತಂಪು ಹುಳಿಯು, ಜಾಲರಿಯಲ್ಲಿ ಶೋಧಿಸಲ್ಪಟ್ಟು ತಂಪು ಪೇಯವಾಗಿ ಪರಿವರ್ತನೆ ಹೊಂದಿತು.  

ಆಹ!  
ತೆಂಗಿನಕಾಯಿ ಹಾಲು,
ಸಿಹಿಮಜ್ಜಿಗೆ,
 ಚಿಗುರೆಲೆಗಳ ಸಾರ,  
ಮಸಾಲೆಗಳ ಖಾರ,
ಎಲ್ಲವೂ ಸೇರಿ,
ಸ್ವಾದಿಷ್ಟ ಪಾನೀಯ ದೊರೆಯಿತು.

“ ನಾಳೆ ಯಾವ ತಂಬುಳಿ ಮಾಡ್ತೀರಾ? “
“ ಕೊತ್ತಂಬರಿ ಸೊಪ್ಪು ಬಂದಿದೆ ಕಣ್ರೀ…. ಅದನ್ನೂ ತಂಬುಳಿ ಮಾಡ್ಬಿಟ್ಟು, ಹೀಗೇ ಗಟಗಟ ಕುಡಿಯೋದು… “





0 comments:

Post a Comment