Pages

Ads 468x60px

Thursday 4 March 2021

ಬದನೆಯ ಸಾರು





 ನೆರೆಯ ಮುಳಿಯದಿಂದ ತಂಗಿಯ ಭಾವ ಹೀಗೇ ಕಾರ್ಯನಿಮಿತ್ತ ಬಂದಿದ್ದಾಗ ಮನೆಯಲ್ಲೇ ಬೆಳೆದ ಹಸಿರು ತರಕಾರಿ ಬದನೆ ಹಾಗೂ ಲಿಲಿಪುಟ್ ಗಾತ್ರದ ಕ್ಯಾಪ್ಸಿಕಂ ತಂದು ಕೊಟ್ಟರು.  ನಾವು ಹಳ್ಳಿಯ ವಾಸಿಗಳೇ ಹೀಗೆ,  ಒಬ್ಬರಿಗೊಬ್ಬರು ಕೊಡುತ್ತ ತರುತ್ತ ಇರಬೇಕು.  ನನಗಂತೂ ಜಾನುವಾರುಗಳೂ ಇಲ್ಲವಾಗಿ ಸಾವಯವ ತರಕಾರಿಗಳ ಬೆಳೆ ಇಲ್ಲವಾಗಿದೆ.  ವಿಶೇಷವಾಗಿ ದೊರೆತ ಬದನೆಗಳಿಂದ ಏನೇನು ಅಡುಗೆ ಆದೀತೆಂದು ತಿಳಿಯೋಣ.

ಬದನೆಯ ಮಜ್ಜಿಗೆಹುಳಿ ಅರ್ಥಾತ್ ಮೇಲಾರ ಇವತ್ತು ಸಿಹಿಮಜ್ಜಿಗೆ ಇಲ್ಲ ಮಾಡಲಿಕ್ಕಾಗದು.  

ಸಾಂಬಾರು,

ತೊಗರಿಬೇಳೆ ಹಾಕಿಯೂ ಹಾಕದೆಯೂ ಆಗುತ್ತೆ,

ಬದನೆ ಪಲ್ಯ

ಪೋಡಿ,  

ಬದನೆಯ ಗೊಜ್ಜು,

ಬದನೆ ಸುಟ್ಟು ತಿನ್ನಲು ಬಲೇ ರುಚಿ ಕಣ್ರೀ...

ಹೀಗೇ ಲೆಕ್ಕಾಚಾರ ಹಾಕ್ತಾ ಇದ್ರೆ ಊಟದ ವೇಳೆ ಬಂದೇ ಬಿಡ್ತು ಅನ್ನಿ ಹೇಗೂ ಸೆಕೆ ಶುರುವಾಯ್ತು ಬದನೆಯ ಸಾರು ಮಾಡಿಬಿಡೋಣ.


ಇದನ್ನೂ ಅಷ್ಟೇ ತೊಗರಿಬೇಳೆ ಹಾಕಿ ಯಾ ಹಾಕದೇ ಮಾಡಬಹುದಾಗಿದೆ.   ಹೇಗೂ ಸೆಕೆ ಸೆಕೆ ಅನ್ನುವ ಸಮಯ ದೇಹಕ್ಕೆ ಹಿತವಾಗುವಂತೆ ಬೇಳೆಕಾಳುಗಳ ಹಂಗಿಲ್ಲದೆ ಸಾರು ಮಾಡಿಕೊಳ್ಳೋಣ.


ಎರಡು ಬದನೆ ಸಾಕು ಹೆಚ್ಚಿಟ್ಟು ನೀರಿನಲ್ಲಿ ಹಾಕಿರಿಸುವುದು ಇದು ಮನೆಯಲ್ಲೇ ಬೆಳೆದ ಬದನೆ ಆಗಿರೋದ್ರಿಂದ ಕನರು ಯಾ ಚೊಗರು ಬಿಟ್ಕೊಳ್ಳಲಿಲ್ಲ.   ಅಂಗಡಿಯಿಂದ ತಂದ ಮಾಲು ವಿಪರೀತ ಬೆಳೆದಿರುತ್ತದೆ ಹೆಚ್ಚಿಟ್ಟ ಬದನೆಗೆ ತುಸು ಸುಣ್ಣದ ನೀರನ್ನು ಹಾಕಿ ಕದಡಿಸಬೇಕಾಗುತ್ತದೆ.

ಇರಲಿ ಬದನೆ ಹೋಳು ಆಯ್ತು.

ಸಾರು ತಯಾರಿಕೆಗೆ ಏನೇನು ಇರಬೇಕು?

ಸಾಂಬಾರು ಮರಿಗೆಯ ಬಾಯಿ ತೆರೆಯಿತು.

ಇಂಗು ನಾಲ್ಕು ಒಣಮೆಣಸುಎರಡು ಚಮಚ ಕೊತ್ತಂಬರಿ ತುಸು ಜೀರಿಗೆ ಹಾಗೂ ಮೆಂತೆ ಎಣ್ಣೆ ಪಸೆಯಲ್ಲಿ ಹುರಿಯಲ್ಪಟ್ಟವು ಇಲ್ಲಿ ನಾನು ಉದ್ದಿನಬೇಳೆ ಹಾಕಿಲ್ಲ ಹಾಕಿದರೆ ಸಾಂಬಾರು ಇಲ್ಲವೇ ಕೊದ್ದೆಲ್ ಆಗಬಹುದಿತ್ತು.

ಇವಿಷ್ಟೇ ಮಸಾಲೆಗಳ ವ್ಯತ್ಯಾಸ ಎಂದು ತಿಳಿಯಿರಿ.

ಕೊನೆಯಲ್ಲಿ ಕರಿಬೇವಿನೆಸಳು ಹಾಕುವಲ್ಲಿಗೆ ಮಸಾಲೆ ಹುರಿಯುವಿಕೆ ಆಯ್ತು.  


ಇವತ್ತಿನ ಅಡುಗೆಗೆ ತೊಗರಿಬೇಳೆ ಹಾಕಿಲ್ಲತೆಂಗಿನತುರಿಯಾದರೂ ಇರಲೇಬೇಕುಅರ್ಧ ಕಡಿ ಕಾಯಿ ತುರಿಯಿರಿ.   ತೆಂಗಿನತುರಿಯನ್ನೂ ಮಸಾಲಾ ಸಾಮಗ್ರಿಗಳೊಂದಿಗೆ ಕೊನೆಯ ಹಂತದಲ್ಲಿ ಬಾಡಿಸಿಕೊಂಡರೆ ಇನ್ನೂ ಉತ್ತಮ

ಮಸಾಲೆ ಅರೆಯಿರಿ ನೀರು ಹಾಕದೇ ಅರೆದರೆ ಸುವಾಸನೆ ಜಾಸ್ತಿ.


ಬದನೆ ಬೇಯಿಸಿ ಆಯಿತೇ ಬೇಗನೇ ಬೇಯುವ ತರಕಾರಿ ಇದು ಕುಕರ್ ಇಲ್ಲದಿದ್ದರೂ ನಡೆಯುತ್ತೆ ಬೇಯುತ್ತಿರುವಾಗಲೇ ರುಚಿಯ ಅಳತೆಗನುಗುಣವಾಗಿ ಉಪ್ಪು ಹುಳಿ ಬೆಲ್ಲ ಹಾಕಿರಿ ಬೆಲ್ಲ ಹಿತವಾಗದವರು ಹಾಕದಿರಿ.


ನಂತರ ಅರೆದ ಮಸಾಲೆಯನ್ನು ಸುರಿದು ಸೌಟಾಡಿಸಿ ರುಚಿಕಟ್ಟಾಗಿದೆಯೋ ಎಂದು ಪರಿಶೀಲಿಸಿ ಅವಶ್ಯವಿದ್ದಂತೆ ಉಪ್ಪು ಖಾರ ಉದುರಿಸಿ.

ಕೊನೆಯಲ್ಲಿ ಕರಿಬೇವು ಬೆಳ್ಳುಳ್ಳಿ ಕೂಡಿದ ಒಗ್ಗರಣೆ ಮರೆಯದಿರಿ.  







0 comments:

Post a Comment